43 ಕ್ರಿಮಿನಲ್‌ ಕೇಸ್‌ ಹಿಂಪಡೆದ ಸರ್ಕಾರದ ಆದೇಶ ರದ್ದು: ಹೈಕೋರ್ಟ್‌ ಹೇಳಿದ್ದೇನು?

Kannadaprabha News   | Kannada Prabha
Published : May 30, 2025, 04:42 AM IST
Karnataka High Court

ಸಾರಾಂಶ

ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ ಪ್ರತ್ಯೇಕ 43 ಕ್ರಿಮಿನಲ್‌ ಪ್ರಕರಣಗಳನ್ನು ಹಿಂಪಡೆದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಬೆಂಗಳೂರು (ಮೇ.30): ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿಗಳು ಸೇರಿ ಹಾಲಿ ಕೇಂದ್ರ ಮತ್ತು ರಾಜ್ಯ ಸಚಿವರು, ಮಾಜಿ ಸಚಿವರು, ಹಾಲಿ ಮತ್ತು ಮಾಜಿ ಶಾಸಕರು, ಕನ್ನಡಪರ ಹೋರಾಟಗಾರರು, ರೈತ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳಿಗೆ ಸಂಬಂಧಿಸಿ 2008ರಿಂದ 2023ರವರೆಗೆ ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ ಪ್ರತ್ಯೇಕ 43 ಕ್ರಿಮಿನಲ್‌ ಪ್ರಕರಣಗಳನ್ನು ಹಿಂಪಡೆದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ. ಈ ಕುರಿತು ರಾಜ್ಯ ಸರ್ಕಾರ 2024ರ ಅ.10ರಂದು ಹೊರಡಿಸಿದ ಆದೇಶ ರದ್ದು ಕೋರಿ ಬೆಂಗಳೂರಿನ ವಕೀಲ ಗಿರೀಶ್‌ ಭಾರದ್ವಾಜ್‌ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ಕ್ರಿಮಿನಲ್‌ ಪ್ರಕರಣಗಳನ್ನು ಹಿಂಪಡೆಯಬೇಕಾದರೆ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್‌ 321ರ ಅನ್ವಯ ಆಯಾ ನ್ಯಾಯಾಲಯದ ಸಾರ್ವಜನಿಕ ಅಭಿಯೋಜಕರ ಒಪ್ಪಿಗೆ ಪಡೆಯಬೇಕು. ಆದರೆ, ಪ್ರಕರಣದಲ್ಲಿ ಸರ್ಕಾರ 43 ಕ್ರಿಮಿನಲ್‌ ಪ್ರಕರಣಗಳನ್ನು ಹಿಂಪಡೆಯುವ ಮುನ್ನ ಸಂಬಂಧಪಟ್ಟ ಸರ್ಕಾರಿ ಅಭಿಯೋಜಕರ ಒಪ್ಪಿಗೆ ಮತ್ತು ನ್ಯಾಯಾಲಯದ ಒಪ್ಪಿಗೆ ಪಡೆದುಕೊಂಡಿಲ್ಲ. ಇದು ಸರ್ಕಾರಿ ಅಭಿಯೋಜಕರು ಚಲಾಯಿಸಬೇಕಾದ ವಿವೇಚನಾಧಿಕಾರದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಸರ್ಕಾರಿ ಅಭಿಯೋಜಕರು ತಮ್ಮ ವಿವೇಚನೆ ಬಳಸುವ ಅವಕಾಶ ಕಸಿದುಕೊಳ್ಳುತ್ತದೆ ಎಂದು ಪೀಠ ಹೇಳಿದೆ.

ಪ್ರಕರಣ ಹಿಂಪಡೆಯುವುದು ಸರ್ಕಾರಿ ಅಭಿಯೋಜಕರ ಮತ್ತು ಮತ್ತು ನ್ಯಾಯಾಲಯಕ್ಕೆ ಬಿಟ್ಟ ವಿಷಯ. ಈ ನಿಯಮದಲ್ಲಿನ ಯಾವುದೇ ಉಲ್ಲಂಘನೆ ಸಹ ಈ ನೆಲದ ಕಾನೂನಿನ ಉಲ್ಲಂಘನೆ ಎಂದರ್ಥ. ರಾಜಕೀಯ ಅಂಶಗಳ ಆಧಾರದಲ್ಲಿ ಪ್ರಕರಣ ಹಿಂತೆಗೆದುಕೊಳ್ಳವುದು ಅಧಿಕಾರದ ದುರುಪಯೋಗದಲ್ಲೇ ಅತ್ಯಂತ ಕೆಟ್ಟ ಸ್ವರೂಪದ್ದಾಗಿದೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಪೀಠ ಹೇಳಿದೆ.

ಹಿಂಪಡೆದವರ ಪ್ರಕರಣ: ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ, ನರಗುಂದದ ಬಿ.ಆರ್‌.ಯಾವಗಲ್‌, ಹಿರೇಕೆರೂರು ಶಾಸಕ ಯು.ಬಿ.ಬಣಕಾರ್‌, ಮಾಜಿ ಸಚಿವ ಕೆ.ಜಿ.ಬೋಪಯ್ಯ, ಕೆ.ಜಿ.ಕಾಂಗ್ರೆಸ್‌ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ, ಮಾಜಿ ಶಾಸಕರಾದ ದಾವಣಗೆರೆಯ ಎಸ್‌.ಎ.ರವೀಂದ್ರನಾಥ್‌, ಬೆಳಗಾವಿಯ ಸಂಜಯ್‌ ಪಾಟೀಲ್, ಬಾಗಲಕೋಟೆಯ ಡಾ.ವೀರಣ್ಣ ಚರಂತಿಮಠ. ಹೊನ್ನಾಳಿ ಎಂ.ಪಿ.ರೇಣುಕಾಚಾರ್ಯ, ಬೆಳಗಾವಿಯ ಅನಿಲ ಬೆನಕೆ, ಡಾ.ಎಸ್‌.ಸಿದ್ದಯ್ಯ.

ಬೆಂಗಳೂರು ಗಾಮಾಂತರ ಜಿಲ್ಲೆಯ ಬಿ.ಶಿವಣ್ಣ, ಭದ್ರಾವತಿಯ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್‌.ಆರ್‌.ಬಸವರಾಜಪ್ಪ, ತುಮಕೂರಿನ ಯುವ ಕಾಂಗ್ರೆಸ್‌ ಅಧ್ಯಕ್ಷ ಶಶಿ ಹುಲಿಕುಂಟೆ, ಕಲಬುರಗಿ ಜಿಲ್ಲೆಯ ದರ್ಗಾ ಹಜರತ್‌ ಮಲಿಕುಲ್‌ ಮಶಾಲ್‌ಕಹ್‌ ಮಕ್ದೂಮ್‌ ಲಾಡಿ ಅನ್ಸಾರಿ (ಸುನ್ನಿ) ಅಧ್ಯಕ್ಷರು ಮತ್ತು ಕಾರ್ಯದರ್ಶಿ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘ, ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್‌ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಎಂ.ಎಸ್‌.ಅಂಗಡಿ, ಮೈಸೂರಿನ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್‌ ಭಾಸ್ಕರ್‌, ಭೀಮ್‌ ಆರ್ಮಿ ಜಿಲ್ಲಾ ಸಮಿತಿ ಅಧ್ಯಕ್ಷ ರಾಘು ಚಾಕ್ರಿ.

ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಚಿಕ್ಕಬಳ್ಳಾಪುರದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ, ಹುಬ್ಬಳ್ಳಿಯ ಅಂಜುಮಾನ ಇ-ಇಸ್ಲಾಂ ಅಡಿ ರಚಿಸಲಾಗಿದ್ದ ಪರಿಹಾರ ಸಮಿತಿ ಸದಸ್ಯರು, ರಾಯಚೂರಿನ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಎಸ್‌.ಪ್ರಸಾದ್‌, ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪರವಾಗಿ ಚುಕ್ಕಿ ನಂಜುಂಡಸ್ವಾಮಿ ಅವರು ಶಿವಮೊಗ್ಗ, ಹಾವೇರಿ, ಬಾಗಲಕೋಟೆ, ಉತ್ತರ ಕನ್ನಡದ ರೈತರ ವಿರುದ್ಧದ ಪ್ರಕರಣ ಹಿಂಪಡೆಯಲು ರಾಜ್ಯ ಸರ್ಕಾರ ಆದೇಶಿಸಿತ್ತು.

ಸಿಆರ್‌ಪಿಸಿ ಸೆಕ್ಷನ್ 321 ಅಡಿ ಕ್ರಿಮಿನಲ್‌ ಪ್ರಕರಣವನ್ನು ಹಿಂತೆಗೆದುಕೊಳ್ಳುವುದು ಕೇವಲ ಪಬ್ಲಿಕ್ ಪ್ರಾಸಿಕ್ಯೂಟರ್‌ನ ವಿವೇಚನೆಯ ಅನ್ವಯದ ಆಧಾರದಲ್ಲಿ ಅಲ್ಲ, ಬದಲಿಗೆ ಅಪರಾಧದ ಗಂಭೀರತೆ, ಪ್ರಕರಣ ಸಂಗತಿಗಳನ್ನು ಆಧರಿಸಿಯೂ ಹಿಂತೆಗೆದುಕೊಳ್ಳಬೇಕಾಗುತ್ತದೆ. ಸರ್ಕಾರ ಈ ವಿಚಾರದಲ್ಲಿ ಕಟ್ಟಪ್ಪಣೆ ಹೊರಡಿಸಲು ಸಾಧ್ಯವಿಲ್ಲ. ಪ್ರಕರಣ ಹಿಂತೆಗೆದುಕೊಳ್ಳುವ ಬಗ್ಗೆ ಸರ್ಕಾರಿ ಅಭಿಯೋಜಕರ ಸ್ವಾತಂತ್ರ್ಯ ಮತ್ತು ಸ್ವತಂತ್ರ ನಿರ್ಧಾರದ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ. ಅರ್ಜಿದಾರರು ಹೇಳಿರುವಂತೆ ಪ್ರಕರಣಗಳನ್ನು ಹಿಂಪಡೆಯಲು ಅಂಜುಮಾನ್‌ ಇ-ಇಸ್ಲಾಂ ಸಂಘಟನೆ ಮತ್ತು ಉಪ ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.

ಸರ್ಕಾರದ ಸಚಿವರು ಮತ್ತು ಅಧಿಕಾರಿಗಳು ಭಾಗವಹಿಸಿದ್ದ ಸಚಿವ ಸಂಪುಟ ಸಭೆಯಲ್ಲಿ 43 ಪ್ರಕರಣಗಳನ್ನು ಹಿಂಪಡೆಯಲು ನಿರ್ಧಾರವಾಗಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಆದ್ದರಿಂದ ಇದು ರಾಜಕೀಯವಾಗಿ ತೆಗೆದುಕೊಂಡ ನಿರ್ಧಾರ ಎಂದು ಹೇಳಬಹುದು. ಯಾವುದೇ ಕಾರಣಕ್ಕೂ ಸರ್ಕಾರಿ ಅಭಿಯೋಜಕರ ವಿವೇಚನಾಧಿಕಾರ ಕಸಿದುಕೊಳ್ಳುವುದಿಲ್ಲ. ಸರ್ಕಾರದ ಆದೇಶ ಸರ್ಕಾರಿ ಅಭಿಯೋಜಕರ ವಿವೇಚನಾಧಿಕಾರದ ವ್ಯಾಪ್ತಿಯಲ್ಲಿ ಮಧ್ಯಪ್ರವೇಶಿಸಿ ಪ್ರಕರಣಗಳನ್ನು ಹಿಂಪಡೆಯಲು ಕ್ರಮ ಕೈಗೊಳ್ಳುವಂತೆ ಹೇಳುತ್ತದೆ. ಆದರೆ, ಸಾರ್ವಜನಿಕ ಹಿತಾಸಕ್ತಿ ಮತ್ತು ಕಾನೂನಿನ ನಿಯಮದ ಮಾನದಂಡಗಳು ಅದಕ್ಕೆ ದಾರಿ ಮಾಡಿಕೊಡುವುದಿಲ್ಲ. ಸೆಕ್ಷನ್ 321ರ ಅಡಿಯ ಅಧಿಕಾರಗಳನ್ನು ಆ ರೀತಿಯಲ್ಲಿ ಚಲಾಯಿಸಲು ಅನುಮತಿಸಬಾರದು ಎಂದು ಹೇಳಿರುವ ಪೀಠ ಸರ್ಕಾರದ ಆದೇಶ ರದ್ದುಪಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Justice for Bongo: ಮಗು ಹುಟ್ಟಿದ್ದಕ್ಕೆ ಸಾಕಿ ಸಲುಹಿದ ಶ್ವಾನ ಕೊಂದ್ರಾ ಪಾಪಿಗಳು? ಸಿಲಿಕಾನ್ ಸಿಟಿಯಲ್ಲಿ 'ಬೋಂಗೋ' ಸಾವಿನ ರೋಚಕ ಕಹಾನಿ!
ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ