ಪ್ರೀತಿಸಿದವರನೊಂದಿಗೆ ಮದುವೆಗೆ ಅಸ್ತು, ಪೋಷಕರ ತ್ಯಾಗದ ಬಗ್ಗೆ ಹೈಕೋರ್ಟ್ ಪಾಠ!

Published : Jun 15, 2022, 12:13 PM ISTUpdated : Jun 15, 2022, 12:16 PM IST
ಪ್ರೀತಿಸಿದವರನೊಂದಿಗೆ ಮದುವೆಗೆ ಅಸ್ತು, ಪೋಷಕರ ತ್ಯಾಗದ ಬಗ್ಗೆ ಹೈಕೋರ್ಟ್ ಪಾಠ!

ಸಾರಾಂಶ

* ಹೆತ್ತವರಿಗಿಂತ ದೊಡ್ಡ ದೇವರಿಲ್ಲ. ಸಹಾನುಭೂತಿಗಿಂತ ದೊಡ್ಡ ಧರ್ಮವಿಲ್ಲ * 19 ವರ್ಷದ ವಿದ್ಯಾರ್ಥಿನಿ ಕಾಲೇಜಿನ ವ್ಯಾನ್ ಚಾಲಕನನ್ನು ಪ್ರೇಮವಿವಾಹವಾದ ಪ್ರಕರಣ * ಮಗಳನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಕೋರಿ ತಂದೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ * ಪ್ರೇಮ ವಿವಾಹ ಪ್ರಶ್ನಿಸಿದ್ದ ಯುವತಿ ತಂದೆ ಅರ್ಜಿ ವಜಾ

ಬೆಂಗಳೂರು(ಜೂ.15): ಹೆತ್ತವರಿಗಿಂತ ದೊಡ್ಡ ದೇವರಿಲ್ಲ. ಸಹಾನುಭೂತಿಗಿಂತ ದೊಡ್ಡ ಧರ್ಮವಿಲ್ಲ. ಜನ್ಮ ನೀಡಿ ಬೆಳೆಸಿದ ತಂದೆ-ತಾಯಿಯ ಋಣ ತೀರಿಸಲು ಅಸಾಧ್ಯ. ಪ್ರೌಢಾವಸ್ಥೆಗೆ ಬಂದ ಕೂಡಲೇ ತಾವು ಸ್ವತಂತ್ರರು ಎಂದೇಳಿ ಬಯಸಿದ ಸಂಗಾತಿಯನ್ನು ಪ್ರೇಮ ವಿವಾಹವಾಗುವ ಮುನ್ನ ತಮಗಾಗಿ ಪೋಷಕರು ಮಾಡಿದ ತ್ಯಾಗವನ್ನು ಮಕ್ಕಳು ಒಮ್ಮೆ ನೆನೆಯಬೇಕು. ಮಕ್ಕಳು ಹೆತ್ತವರು ಇಷ್ಟವಾಗುವ ಕೆಲಸ ಮಾಡಬೇಕು ಹೊರತು ಅವರ ನೋವಿಗೆ ಕಾರಣವಾಗಬಾರದು.

ಹಾಸ್ಟಲ್‌ನಲ್ಲಿದ್ದುಕೊಂಡು ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ 19 ವರ್ಷದ ವಿದ್ಯಾರ್ಥಿನಿ ಕಾಲೇಜಿನ ವ್ಯಾನ್ ಚಾಲಕನನ್ನು ಪ್ರೇಮವಿವಾಹವಾದ ಪ್ರಕರಣದಲ್ಲಿ ಮಗಳನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಕೋರಿ ತಂದೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ತಂದೆ-ತಾಯಿಯ ತ್ಯಾಗ ಹಾಗೂ ಋಣದ ಬಗ್ಗೆ ನುಡಿದ ಮಾತುಗಳಿವು.

ಆದರೆ, ಪ್ರಕರಣದಲ್ಲಿ ವಿದ್ಯಾರ್ಥಿನಿಗೆ 19 ವರ್ಷವಾಗಿದ್ದು, ವಯಸ್ಕರು ತಾವು ಬಯಸಿದ ವ್ಯಕ್ತಿಯೊಂದಿಗೆ ಜೀವಿಸುವ ಹಕ್ಕನ್ನು ಸಂವಿಧಾನವೇ ಕಲ್ಪಿಸಿರುವುದರಿಂದ ಮತ್ತು ಪತಿಯೊಂದಿಗೆ ಜೀವಿಸುವುದಾಗಿ ವಿದ್ಯಾರ್ಥಿನಿ ಪಟ್ಟು ಹಿಡಿದ ಕಾರಣ ತಂದೆಯ ಅರ್ಜಿ ಹೈಕೋರ್ಟ್ ವಜಾಗೊಳಿಸಿತು. ಗಂಡನ ಜೊತೆಗೆ ತೆರಳಲು ವಿದ್ಯಾರ್ಥಿನಿಗೆ ಅನುಮತಿ ನೀಡಿತು.

ಮಳವಳ್ಳಿ ತಾಲೂಕಿನ ನಿವಾಸಿ ನಾಗರಾಜು ಅವರ ಪುತ್ರಿ ಶೃತಿ (ಹೆಸರು ಬದಲಿಸಲಾಗಿದೆ) ಮಂಡ್ಯದ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದರು. ಹಾಸ್ಟೆಲ್‌ನಲ್ಲಿ ತಂಗಿದ್ದ ಆಕೆ ಕಾಲೇಜಿನ ವ್ಯಾನ್ ಚಾಲಕನನ್ನು ಪ್ರೀತಿಸಿ ಪೋಷಕರಿಗೆ ತಿಳಿಯದಂತೆ ಮದುವೆಯಾಗಿದ್ದರು. ಇದರಿಂದ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ ನಾಗರಾಜ್ ಅವರು, ಮಗಳಿಗೆ ಸ್ವತಂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವಿಲ್ಲ. ಆಕೆಯನ್ನು ಪುಸಲಾಯಿಸಿ ವ್ಯಾನ್ ಚಾಲಕ ಮದುವೆಯಾಗಿದ್ದಾನೆ. ಆತನ ಅಕ್ರಮ ಬಂಧನದಲ್ಲಿರುವ ಮಗಳನ್ನು ತಮ್ಮ ವಶಕ್ಕೆ ಒಪ್ಪಿಸಿ ಆದೇಶಿಸುವಂತೆ ಕೋರಿದ್ದರು. ಕೋರ್ಟ್ ನಿರ್ದೇಶನದಂತೆ ಶೃತಿ ಮತ್ತು ಆಕೆಯ ಪತಿ ಕೋರ್ಟ್‌ಗೆ ಹಾಜರಾಗಿದ್ದರು.

ವಿಚಾರಣೆ ವೇಳೆ ಶೃತಿಯು ತಾನು ವಯಸ್ಕಳಾಗಿದ್ದು, ಪ್ರೀತಿಸಿ ಮದುವೆಯಾಗಿದ್ದೇನೆ. ಪತಿಯೊಂದಿಗೆ ಜೀವಿಸಲು ಬಯಸಿದ್ದೇನೆ ಎಂದು ಹೇಳಿಕೆ ದಾಖಲಿಸಿದಳು. ಪತಿ ಸಹ ಶೃತಿಯನ್ನು ಎಂಜಿನಿಯರ್ ಪದವಿ ಓದಿಸುತ್ತೇನೆ. ತನ್ನ ಜೀವನ ಇರುವವರೆಗೂ ಆಕೆ ಕಣ್ಣೀರು ಹಾಕದಂತೆ ನೋಡಿಕೊಳ್ಳುತ್ತೇನೆ ಕೋರ್ಟ್‌ಗೆ ಭರವಸೆ ನೀಡಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಲಯ ಪ್ರಕರಣದಲ್ಲಿ ಅಕ್ರಮ ಬಂಧನ ಇಲ್ಲವಾಗಿದ್ದು ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು.

ಮಕ್ಕಳು ದೇಶದ ಸಂಪತ್ತು ಎನ್ನುವ ವಿಚಾರವನ್ನು ಹೆತ್ತವರು ಅರ್ಥೈಸಿಕೊಳ್ಳಬೇಕು. ತಂದೆ-ತಾಯಿ ಇಲ್ಲದಿದ್ದರೆ ತಾವು ಈ ಭೂಮಿಗೆ ಬರುತ್ತಿರಲೇ ಇಲ್ಲ. ಜೀವನ ಎನ್ನುವುದು ಪ್ರತಿಕ್ರಿಯೆ-ಪ್ರತಿಬಿಂಬ ಮತ್ತು ಪ್ರತಿಧ್ವನಿ ಎನ್ನುವುದನ್ನು ಮಕ್ಕಳು ಅರ್ಥ ಮಾಡಿಕೊಳ್ಳಬೇಕು. ಮಕ್ಕಳು ಇಂದು ಹೆತ್ತವರಿಗೆ ಏನು ನೀಡುತ್ತಾರೆ, ಅದನ್ನೇ ಮುಂದೆ ಅವರ ಮಕ್ಕಳಿಂದ ಪಡೆದುಕೊಳ್ಳುತ್ತಾರೆ. ಹೆತ್ತವರಿಗಿಂತ ದೊಡ್ಡ ಧರ್ಮವಿಲ್ಲ. ಸಹಾನುಭೂತಿಗಿಂತ ದೊಡ್ಡ ಧರ್ಮವಿಲ್ಲ. ಕೋಪಕ್ಕಿಂತ ಶತೃ ಇಲ್ಲ. ಖ್ಯಾತಿ-ಗೌರವಕ್ಕಿಂತ ದೊಡ್ಡ ಆಸ್ತಿ ಇಲ್ಲ. ಕುಖ್ಯಾತಿಯೇ ಮರಣ. ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಿದ ತಂದೆ-ತಾಯಿಯ ಋಣವನ್ನು ನೂರು ವರ್ಷವಾದರೂ ತೀರಿಸಲು ಅಸಾಧ್ಯ ಎಂಬುದಾಗಿ ಮನುಸ್ಮತಿ ಹೇಳುತ್ತದೆ. ಆದ್ದರಿಂದ ತಂದೆ-ತಾಯಿ, ಗುರು-ಹಿರಿಯರಿಗೆ ಇಷ್ಟವಾದ ಕೆಲಸಗಳನ್ನೇ ಮಕ್ಕಳು ಮಾಡಬೇಕು. ಪ್ರೀತಿ ಹೃದಯದಿಂದ ಹೃದಯಕ್ಕಿರಬೇಕು ಹೊರತು ಬಾಹ್ಯ ಆಕರ್ಷಣೆಗೆ ಸೀಮಿತವಾಗಬಾರದು ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!