* ಕೋರ್ಟ್‌ಗೂ ಪ್ರಮಾಣಪತ್ರ ಸಲ್ಲಿಸಲು ಸೂಚನೆ
* ಹೊರ ರಾಜ್ಯಗಳಿಂದ ಅಕ್ಸಿಜನ್ ತರಿಸಿಕೊಂಡ ರಾಜ್ಯ ಸರ್ಕಾರದ ಆಂಕಿ-ಅಂಶ ಗಮನಿಸಿದ ನ್ಯಾಯಪೀಠ
* ವಿಚಾರಣೆ ಜೂ.3ಕ್ಕೆ ಮುಂದೂಡಿದ ನ್ಯಾಯಪೀಠ
ಬೆಂಗಳೂರು(ಮೇ.28): ಹೊರ ರಾಜ್ಯಗಳಿಂದ ಹಂಚಿಕೆಯಾಗಿರುವ ಆಮ್ಲಜನಕ ತರಿಸಿಕೊಳ್ಳಲು ಅಡಚಣೆಗಳೇನಾದರೂ ಇದ್ದರೆ ತಕ್ಷಣ ಕೇಂದ್ರ ಸರ್ಕಾರದ ಗಮನಕ್ಕೆ ತರುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರಿದ್ದ ವಿಭಾಗೀಯಪೀಠ ಗುರುವಾರ ಈ ಸೂಚನೆ ನೀಡಿದೆ.
ವಿಚಾರಣೆ ವೇಳೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ ನರಗುಂದ, ಕೇಂದ್ರ ಸರ್ಕಾರ ರಾಜ್ಯದ ಅಕ್ಸಿಜನ್ ಕೋಟಾವನ್ನು 1,200 ಮೆ.ಟನ್‌ಗೆ ಹೆಚ್ಚಿಸಿದೆ. ಇದರಲ್ಲಿ 370 ಮೆ.ಟನ್ ಅಕ್ಸಿಜನ್ ಹೊರ ರಾಜ್ಯಗಳಿಂದ ತರಿಸಿಕೊಳ್ಳಬೇಕಿದೆ ಎಂದು ಮಾಹಿತಿ ನೀಡಿದರು. ಹೊರ ರಾಜ್ಯಗಳಿಂದ ಆಮ್ಲಜನಕ ತರಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಏನಾದರೂ ಸಮಸ್ಯೆ ಅಥವಾ ಅಡಚಣೆಗಳಿದ್ದರೆ ಅದನ್ನು ತಕ್ಷಣ ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು ಹಾಗೂ ಈ ಕುರಿತು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿತು.
ಮರಣ ಪತ್ರವಿಲ್ಲದೆ ಅಂತ್ಯಕ್ರಿಯೆ: ವಿವರಣೆ ಕೇಳಿದ ಹೈಕೋರ್ಟ್
ಹೊರ ರಾಜ್ಯಗಳಿಂದ ಅಕ್ಸಿಜನ್ ತರಿಸಿಕೊಂಡ ರಾಜ್ಯ ಸರ್ಕಾರದ ಆಂಕಿ-ಅಂಶಗಳನ್ನು ಗಮನಿಸಿದ ನ್ಯಾಯಪೀಠ, ಮೇ 10ರಿಂದ 24ರವರೆಗೆ ಬಹುತೇಕ ದಿನಗಳಲ್ಲಿ ಹೊರ ರಾಜ್ಯಗಳಿಂದ ಹಂಚಿಕೆಯಾಗಿದ್ದ ಆಮ್ಲಜನಕವನ್ನು ಪೂರ್ಣ ಪ್ರಮಾಣದಲ್ಲಿ ರಾಜ್ಯ ಸರ್ಕಾರ ತರಿಸಿಕೊಂಡಿಲ್ಲ. ಈವರೆಗೆ ಕೇವಲ 297 ಮೆ.ಟನ್ ಆಮ್ಲಜನಕ ಮಾತ್ರ ಹೊರ ರಾಜ್ಯಗಳಿಂದ ತರಿಸಿಕೊಳ್ಳಲಾಗಿದೆ. ಆದ್ದರಿಂದ ಹೊರ ರಾಜ್ಯಗಳಿಂದ ಆಮ್ಲಜನಕ ತರಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಏನಾದರೂ ಸಮಸ್ಯೆ ಅಥವಾ ಅಡಚಣೆಗಳಿದ್ದರೆ ಅದನ್ನು ತಕ್ಷಣ ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು ಹಾಗೂ ಈ ಕುರಿತು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿತು. ಜೊತೆಗೆ, ರಾಜ್ಯ ಸರ್ಕಾರ ಮುಂದಿಡುವ ಸಮಸ್ಯೆ, ಅಡಚಣೆಗಳನ್ನು ಅದ್ಯತೆಯ ಮೇಲೆ ಪರಿಗಣಿಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಇದೇ ವೇಳೆ ಕೇಂದ್ರ ಸರ್ಕಾರಕ್ಕೆ ನ್ಯಾಯಪೀಠ ಸೂಚಿಸಿತು.
ಸುಪ್ರೀಂಕೋರ್ಟ್ ನಿರ್ದೇಶನದಂತೆ ಪ್ರತಿ ಜಿಲ್ಲೆಯಲ್ಲಿ ಆಕ್ಸಿಜನ್ ಬಫರ್ ದಾಸ್ತಾನು ವ್ಯವಸ್ಥೆ ಮಾಡುವುದು, ಆಕ್ಸಿಜನ್ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸುವುದು ಹಾಗೂ ಆಮ್ಲಜನಕ ಉತ್ಪಾದನೆ ಇಲ್ಲದ ಕಂದಾಯ ವಿಭಾಗಗಳಿಗೆ ಸಂಬಂಧಪಟ್ಟ ಪ್ರಾದೇಶಿಕ ಆಯುಕ್ತರು ಬೇರೆ ಕಂದಾಯ ವಿಭಾಗಗಳಿಂದ ಆಮ್ಲಜನಕ ತರಿಸಿಕೊಳ್ಳುವ ಬಗ್ಗೆ ವಿವರಣೆ ನೀಡುವಂತೆ ಸರ್ಕಾರಕ್ಕೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಜೂ.3ಕ್ಕೆ ಮುಂದೂಡಿತು.