ಭಿಕ್ಷುಕರ ಸೆಸ್‌ ಸಂಗ್ರಹವಾಗ್ತಿದ್ರೂ ನಿಲ್ಲದ ಭಿಕ್ಷಾಟನೆ: ಹೈಕೋರ್ಟ್ ಗರಂ

Published : Oct 28, 2025, 06:38 AM IST
Karnataka High Court

ಸಾರಾಂಶ

ಸ್ಥಳೀಯ ಸಂಸ್ಥೆಗಳಿಂದ ಸುಮಾರು 7,093 ಕೋಟಿ ರು. ಭಿಕ್ಷುಕರ ಸೆಸ್‌ ಸಂಗ್ರಹ ಮಾಡಿದ್ದರೂ ರಸ್ತೆಗಳಲ್ಲಿ ಮಕ್ಕಳ ಭಿಕ್ಷಾಟನೆ ಮುಂದುವರಿದಿದೆ. ಇದರಿಂದ ಎಲ್ಲವೂ ಸರಿಯಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಬೆಂಗಳೂರು (ಅ.28): ರಾಜ್ಯ ಸರ್ಕಾರ ಕಳೆದ ನಾಲ್ಕು ವರ್ಷಗಳಿಂದ ಸ್ಥಳೀಯ ಸಂಸ್ಥೆಗಳಿಂದ ಸುಮಾರು 7,093 ಕೋಟಿ ರು. ಭಿಕ್ಷುಕರ ಸೆಸ್‌ ಸಂಗ್ರಹ ಮಾಡಿದ್ದರೂ ರಸ್ತೆಗಳಲ್ಲಿ ಮಕ್ಕಳ ಭಿಕ್ಷಾಟನೆ ಮುಂದುವರಿದಿದೆ. ಇದರಿಂದ ಎಲ್ಲವೂ ಸರಿಯಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಸರ್ಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ಗುರುತಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಲೆಟ್ಜ್‌ ಕಿಟ್‌ ಫೌಂಢಷನ್‌ ಸಲ್ಲಿಸಿದ್ದ ಪಿಐಎಲ್‌ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ, ಸ್ಥಳೀಯ ಸಂಸ್ಥೆಗಳು ಸಂಗ್ರಹ ಮಾಡಿರುವ ಭಿಕ್ಷುಕರ ಸೆಸ್‌ ಅನ್ನು ಅವುಗಳಿಂದ ವಸೂಲಿ ಮಾಡಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಪುತ್ತಿಗೆ ಆರ್‌.ರಮೇಶ್‌, ಸರ್ಕಾರ ನೀಡಿರುವ ಮಾಹಿತಿಯಂತೆ 2021-22ರಿಂದ 2024-25ರವರೆಗೆ ಸರ್ಕಾರ ಒಟ್ಟು 7,093 ಕೋಟಿ ಸೆಸ್‌ ಸಂಗ್ರಹ ಮಾಡಿದೆ. ಅದರಲ್ಲಿ 3,453 ಕೋಟಿ ರು. ಖರ್ಚು ಮಾಡಲಾಗಿದೆ. ಇನ್ನೂ ಸ್ಥಳೀಯ ಸಂಸ್ಥೆಗಳು 3,639 ಕೋಟಿ ರು. ವರ್ಗಾಯಿಸಬೇಕಿದೆ. ಸಾವಿರಾರು ಕೋಟಿ ರು. ಖರ್ಚಾದರೂ ಇನ್ನೂ ಸಹ ಮಕ್ಕಳ ಭಿಕ್ಷಾಟನೆ ನಿಂತಿಲ್ಲ ಎಂದು ತಿಳಿಸಿದರು. ಸರ್ಕಾರಿ ವಕೀಲರು ಹಾಜರಾಗಿ, ರಾಜ್ಯದಲ್ಲಿ ಭಿಕ್ಷಾಟನೆ ನಿರ್ಮೂಲನೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದರು. ಹಾಗೆಯೇ, ಸ್ಥಳೀಯ ಸಂಸ್ಥೆಗಳು ಸಂಗ್ರಹ ಮಾಡಿರುವ ಸೆಸ್‌ ಹಣವನ್ನು ಸರ್ಕಾರಕ್ಕೆ ವರ್ಗಾಯಿಸುತ್ತಿಲ್ಲ.

ಅರ್ಜಿ ವಿಚಾರಣೆ

ಆ ಕುರಿತು ಸ್ಥಳೀಯ ಸಂಸ್ಥೆಗಳಿಗೆ ಜ್ಞಾಪನಾ ಪತ್ರ ಕಳುಹಿಸಲಾಗುತ್ತಿದೆ ಎಂದು ವಿವರಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಈವರೆಗೆ ಎಷ್ಟು ಸೆಸ್‌ ಸಂಗ್ರಹಿಸಲಾಗಿದೆ? ಎಷ್ಟು ಖರ್ಚು ಮಾಡಲಾಗಿದೆ ಹಾಗೂ ಬಾಕಿಯಿರುವ ಹಣವೆಷ್ಟು ಎಂಬ ಬಗ್ಗೆ ಅಂಕಿ-ಅಂಶವನ್ನು ಸರ್ಕಾರ ನೀಡಬೇಕು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಹ ಸೆಸ್‌ ಸಂಗ್ರಹ ಕುರಿತು ಎಲ್ಲ ಅಂಕಿ-ಅಂಶ ಸಂಗ್ರಹಿಸಬೇಕು. ಆ ಮಾಹಿತಿ ಸಂಗ್ರಹಿಸಲು ಪ್ರಾಧಿಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಸೂಚಿಸಿ ಅರ್ಜಿ ವಿಚಾರಣೆಯನ್ನು ಎಂಟು ವಾರ ಕಾಲ ಮುಂದೂಡಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌