'ಏನ್ರೀ ಸರ್ಕಾರ ಇದು?.. ದಿಡುಪೆ ಫಾಲ್ಸ್‌ ಬಂದ ಪ್ರವಾಸಿಗರು ಡಿಜಿಟಲ್ ಶುಲ್ಕ ಕೇಳಿದ್ದಕ್ಕೆ ದಂಡ; ಹೈಕೋರ್ಟ್ ಗರಂ

Kannadaprabha News   | Kannada Prabha
Published : Sep 26, 2026, 08:54 AM IST
Karnataka HC On Belthangady Didupe Falls case

ಸಾರಾಂಶ

ಬೆಳ್ತಂಗಡಿಯ ದಿಡುಪೆ ಜಲಪಾತದಲ್ಲಿ ಪ್ರವೇಶ ಶುಲ್ಕಕ್ಕೆ ಡಿಜಿಟಲ್ ಬಿಲ್ ಕೇಳಿದ ಪ್ರವಾಸಿಗರ ಮೇಲೆ ಸುಳ್ಳು ಎಫ್‌ಐಆರ್. ಪ್ರಕರಣಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ.. ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿರುವ ನ್ಯಾಯಾಲಯ, ನವೆಂಬರ್ 6ರಂದು ಖುದ್ದು ಹಾಜರಾಗುವಂತೆ ಅರಣ್ಯಾಧಿಕಾರಿ ಹಾಗೂ ತನಿಖಾಧಿಕಾರಿಗೆ ಸೂಚಿಸಿದೆ.

ಬೆಂಗಳೂರು (ಸೆ.26): ಬೆಳ್ತಂಗಡಿ(Belthangady) ತಾಲೂಕಿನ ದಿಡುಪೆ ಜಲಪಾತ(Didupe Waterfalls)ಕ್ಕೆ ಭೇಟಿಗೆ ಪಾವತಿಸಿದ ಪ್ರವೇಶ ಶುಲ್ಕಕ್ಕೆ ಡಿಜಿಟಲ್‌ ಬಿಲ್‌ ಕೇಳಿದ್ದ ಪ್ರವಾಸಿಗರಿಗೆ ದಂಡ ಪಾವತಿ ರಸೀದಿ ನೀಡಿದ್ದಲ್ಲದೆ, ಹಲ್ಲೆ ಮತ್ತು 50,000 ನಗದು ಕಿತ್ತುಕೊಂಡ ಆರೋಪದ ಮೇಲೆ ಎಫ್‌ಐಆರ್‌ ದಾಖಲಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, ಪ್ರಕರಣದ ಕುರಿತ ವಿವರಣೆ ನೀಡಲು ನ.6ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಮಂಗಳೂರು ವಲಯ ಅರಣ್ಯಾಧಿಕಾರಿಗೆ ಸೂಚಿಸಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಚಿಕ್ಕಮಗಳೂರಿನ ಎಸ್‌.ಪ್ರತಾಪ್‌ ಸೇರಿ ಐವರು ಯುವಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ಪೀಠ ಈ ಆದೇಶ ಮಾಡಿದೆ.

ಬೆಳ್ತಂಗಡಿ ಠಾಣೆ ತನಿಖಾಧಿಕಾರಿ ಕೂಡ ಖುದ್ದು ಹಾಜರಾತಿಗೆ ಸೂಚನೆ:

ಅಲ್ಲದೆ ಘಟನೆ ಕುರಿತು ಸಾಕ್ಷ್ಯ ಹೇಳಲು ಸ್ಥಳದಲ್ಲಿ ಸ್ವತಂತ್ರ ಸಾಕ್ಷಿ ಇಲ್ಲವಾಗಿದ್ದು, ಅರ್ಜಿದಾರರನ್ನು ಮಂಪರು ಪರೀಕ್ಷೆ ನಡೆಸಲು ಸೂಚಿಸಿರುವ ಬೆಳ್ತಂಗಡಿ ಠಾಣೆ ತನಿಖಾಧಿಕಾರಿ ಸಹ ಅರ್ಜಿಯ ಮುಂದಿನ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಸೂಚಿಸಿರುವ ಪೀಠ, ಅರ್ಜಿದಾರರ ವಿರುದ್ಧದ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿದೆ.

ಪ್ರಕರಣದಲ್ಲಿ ಪ್ರವೇಶ ಶುಲ್ಕ ಪಾವತಿಸಿರುವುದಕ್ಕೆ ಡಿಜಿಟಲ್‌ ಮತ್ತು ಕೈಬರಹ ನೀಡಲು ಅರ್ಜಿದಾರರು ಕೇಳಿದ್ದಕ್ಕೆ ಬಿಲ್ಲಿಂಗ್‌ ಮಷಿನ್‌ ಹಾಳಾಗಿದೆ. ಕೈ ಬರಹ ಬಿಲ್ ಇಲ್ಲ ಎಂದು ದಂಡ ಪಾವತಿ ರಸೀದಿ ನೀಡಿದ ಮತ್ತು ಬಿಲ್ಲಿಂಗ್‌ ಕೌಂಟರ್‌ನಲ್ಲಿ ಅರಣ್ಯ ವಾಚರ್‌ ಹಣ ಸ್ವಿಕರಿಸುತ್ತಿರುವುದಕ್ಕೆ ನ್ಯಾಯಮೂರ್ತಿಗಳು ಇದೇ ವೇಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರವಾಸಿಗರು ಪ್ರೇಕ್ಷಣೀಯ ಸ್ಥಳಕ್ಕೆ ಬಂದ್ರೆ ದಂಡ ಹಾಕ್ತೀರಾ?

ಸರ್ಕಾರಿ ಅಭಿಯೋಜಕರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಡಿಜಿಟಲ್‌ ಬಿಲ್‌ ಕೇಳಿದರೆ ಬಿಲ್ಲಿಂಗ್‌ ಯಂತ್ರ ಕೆಟ್ಟಿದೆ ಅಂತೀರಿ. ಹೋಗಲಿ ಮ್ಯಾನ್ಯುಯಲ್‌ ಬಿಲ್‌ ಕೇಳಿದರೆ ದಂಡ ಪಾವತಿ ರಸೀದಿ ಕೊಡ್ತೀರಾ? ಪ್ರವಾಸಿಗರು ಪ್ರೇಕ್ಷಣೀಯ ಸ್ಥಳಕ್ಕೆ ಬಂದರೆ ದಂಡ ವಿಧಿಸುತ್ತೀರಾ? ಬಿಲ್ಲಿಂಗ್‌ ಕೌಂಟರ್‌ ಅಲ್ಲಿ ಅರಣ್ಯ ವಾಚರ್‌ ಕೆಲಸ ಮಾಡುತ್ತಾರಾ? ಏನ್ರಿ ಇದೆಲ್ಲ ಎಂದು ಕಟುವಾಗಿ ಪ್ರಶ್ನಿಸಿದರು.

ದಿನಕ್ಕೆ ನೂರಾರು ಪ್ರವಾಸಿಗರು ಜಲಪಾತ ನೋಡಲು ಬರುವವರಿಂದ ಸಂಗ್ರಹಿಸಿದ ಶುಲ್ಕಕ್ಕೆ ಎಲ್ಲಿದೆ ಲೆಕ್ಕ? ದುಡ್ಡು ಸರ್ಕಾರಕ್ಕೆ ಹೋಗುತ್ತಿದೆಯೇ ಎನ್ನುವುದೇ ಅನುಮಾನ. ಡಿಜಿಟಲ್‌ ಬಿಲ್‌ ಕೇಳಿದ್ದಕ್ಕೆ ಅರ್ಜಿದಾರರ ಮೇಲೆಯೇ ದೂರು ದಾಖಲಿಸುವುದೇ? ಏನ್ರಿ ಸರ್ಕಾರ ಇದು? ಪೊಲೀಸರೂ ದೌರ್ಜನ್ಯ ನಡೆಸುತ್ತಿದ್ದಾರೆ. ಇವರು ಬ್ರಿಟಿಷ್‌ ಪಳೆಯುಳಿಕೆಯಾಗಿದ್ದಾರೆ. ಪ್ರವಾಸೋದ್ಯಮ ಸಚಿವರಿಗೆ ಖುದ್ದು ವಿಚಾರಣೆಗೆ ಹಾಜರಾಗಲು ಸೂಚಿಸುತ್ತೇನೆ. ಅರಣ್ಯ ಇಲಾಖೆ ಕಾರ್ಯದರ್ಶಿ ಪ್ರಕರಣದ ಕುರಿತು ವಿಚಾರಣೆಗೆ ಬಂದು ಉತ್ತರ ಹೇಳಬೇಕು ಎಂದು ಮೌಖಿಕವಾಗಿ ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡರು.

ಪ್ರಕರಣದ ಹಿನ್ನೆಲೆ ಏನು?

ಅರ್ಜಿದಾರರು ಮತ್ತವರ 15 ಮಂದಿ ಸ್ನೇಹಿತರು 2026ರ ಜು.19ರಂದು ಬೆಳ್ತಂಗಡಿ ತಾಲೂಕಿನ ಮಲವಂತಿಗೆ ದಿಡುಪೆ ಜಲಪಾತಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪ್ರವೇಶ ಶುಲ್ಕ ಒಬ್ಬೊಬ್ಬರಿಗೆ ತಲಾ 200 ರು.ನಂತೆ ಒಟ್ಟು ಮೂರು ಸಾವಿರ ರು. ಪ್ರವೇಶ ಶುಲ್ಕ ಪಾವತಿಸಿದ್ದರು. ಅರ್ಜಿದಾರರು ಕೇಳಿದರೂ ಸಿಬ್ಬಂದಿ ಭರತೇಶ್‌ ಡಿಜಿಟಲ್‌ ಬಿಲ್‌ ಕೊಟ್ಟಿರಲಿಲ್ಲ. ಆಗ ಅರ್ಜಿದಾರರು ಮತ್ತು ಭರತೇಶ್‌ ನಡುವೆ ವಾಗ್ವಾದ ನಡೆದಿದೆ. ನಂತರ ಅರಣ್ಯ ವಾಚರ್‌ ಗೋಪಾಲ್‌, ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಅರ್ಜಿದಾರರು ಭರತೇಶ್‌ ಮೇಲೆ ಹಲ್ಲೆ ನಡೆಸಿ ಅವರ ಕೈಯಿಂದ 50,500 ಹಣವಿದ್ದ ಬ್ಯಾಗ್‌ ಕಿತ್ತುಕೊಂಡು ಹೋದ ಆರೋಪದ ಮೇಲೆ ದೂರು ನೀಡಿದ್ದರು. ಇದರಿಂದ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿರುವ ಅರ್ಜಿದಾರರು, ಘಟನೆ ನಡೆದಾಗ ವಿಡಿಯೋ ಚಿತ್ರೀಕರಿಸಲಾಗಿದೆ. ತಾವು ಹಲ್ಲೆ ನಡೆಸಿಲ್ಲ ಮತ್ತು ಹಣದ ಬ್ಯಾಗ್‌ ಕಿತ್ತುಕೊಂಡಿಲ್ಲ ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಲಬುರಗಿ ಜಿಐ ತೊಗರಿ ಬೇಳೆ ಮೊದಲ ಬಾರಿ ವಿದೇಶಕ್ಕೆ ರಫ್ತು! ಮಾಲ್ಡೀವ್ಸ್‌ಗೆ 1 ಮೆಟ್ರಿಕ್ ಟನ್
Karnataka News Live Updates Sep 26th: 'ಏನ್ರೀ ಸರ್ಕಾರ ಇದು?.. ದಿಡುಪೆ ಫಾಲ್ಸ್‌ ಬಂದ ಪ್ರವಾಸಿಗರು ಡಿಜಿಟಲ್ ಶುಲ್ಕ ಕೇಳಿದ್ದಕ್ಕೆ ದಂಡ; ಹೈಕೋರ್ಟ್ ಗರಂ