ಜಾತ್ರೆ, ಚಳವಳಿಗೆ 2 ವಾರ ನಿಷೇಧ: ತಜ್ಞರ ಸಭೆ ಬಳಿಕ ರಾಜ್ಯ ಸರ್ಕಾರ ಆದೇಶ!

Published : Mar 30, 2021, 07:24 AM IST
ಜಾತ್ರೆ, ಚಳವಳಿಗೆ 2 ವಾರ ನಿಷೇಧ: ತಜ್ಞರ ಸಭೆ ಬಳಿಕ ರಾಜ್ಯ ಸರ್ಕಾರ ಆದೇಶ!

ಸಾರಾಂಶ

ಜಾತ್ರೆ, ಚಳವಳಿಗೆ 2 ವಾರ ನಿಷೇಧ| ಕಲ್ಯಾಣ ಮಂಟಪ 6 ತಿಂಗಳು ಬಂದ್‌ ಎಚ್ಚರಿಕೆ| ಚಿತ್ರಮಂದಿರಗಳಿಗೆ ಯಾವುದೇ ನಿರ್ಬಂಧ ಇಲ್ಲ| ಅಪಾರ್ಟ್‌ಮೆಂಟ್‌ಗಳಲ್ಲಿ ಪಾರ್ಟಿಗಳಿಗೆ ನಿಷೇಧ| ಮಾಸ್ಕ್‌ ಧರಿಸದಿದ್ರೆ ಇಂದಿನಿಂದಲೇ ದಂಡ ಹೇರಿಕೆ| ಕೋವಿಡ್‌ ತಜ್ಞರ ಸಭೆ ಬಳಿಕ ರಾಜ್ಯ ಸರ್ಕಾರ ಆದೇಶ

ಬೆಂಗಳೂರು(ಮಾ.30): ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್‌ ಸೋಂಕು ನಿಯಂತ್ರಿಸಲು ಮುಂದಿನ 15 ದಿನಗಳ ಕಾಲ ರಾಜ್ಯಾದ್ಯಂತ ಯಾವುದೇ ಪ್ರತಿಭಟನೆ, ಮುಷ್ಕರ, ರಾರ‍ಯಲಿ, ಅಪಾರ್ಟ್‌ಮೆಂಟ್‌ಗಳಲ್ಲಿ ಪಾರ್ಟಿ ಮತ್ತಿತರ ಕಾರ್ಯಕ್ರಮಗಳನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಲಾಕ್‌ಡೌನ್‌ ಹಾಗೂ ರಾತ್ರಿ ಕಫä್ರ್ಯ ಜಾರಿ ಮಾಡದಿರಲು ನಿರ್ಧರಿಸಿದೆ.

ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಲು ಮತ್ತಷ್ಟುಬಿಗಿ ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕು. ಮಂಗಳವಾರದಿಂದ ಎಲ್ಲೆಡೆ ದಂಡ ವಿಧಿಸುವ ಪ್ರಕ್ರಿಯೆಯನ್ನು ತೀವ್ರಗೊಳಿಸಬೇಕು ಎಂದು ಸರ್ಕಾರ ತೀರ್ಮಾನಿಸಿದೆ.

ಹೆಚ್ಚುತ್ತಿರುವ ಕೋವಿಡ್‌ ಸೋಂಕು ನಿಯಂತ್ರಣ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ತಜ್ಞರು, ವಿವಿಧ ಇಲಾಖೆಗಳ ಸಚಿವರು ಹಾಗೂ ಉನ್ನತ ಅಧಿಕಾರಿಗಳೊಂದಿಗೆ ನಡೆಸಿದ ಮಹತ್ವದ ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಣೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌, ರಾತ್ರಿ ಕಫä್ರ್ಯ ಜಾರಿ ಮಾಡುವುದಿಲ್ಲ. ಶಾಲೆ, ಕಾಲೇಜುಗಳನ್ನು ಬಂದ್‌ ಮಾಡುವಂತಹ ಯೋಚನೆಯೂ ಸದ್ಯಕ್ಕಿಲ್ಲ. ಚಿತ್ರಮಂದಿರಗಳಿಗೂ ಸದ್ಯಕ್ಕೆ ಯಾವುದೇ ನಿರ್ಬಂಧವಿಲ್ಲ. ಆದರೆ, ಕಲ್ಯಾಣ ಮಂಟಪಗಳಲ್ಲಿ ನಿಯಮ ಉಲ್ಲಂಘನೆಯಾದರೆ ಮಾಲಿಕರೇ ಹೊಣೆ. ಅಂತಹ ಕಲ್ಯಾಣ ಮಂಟಪಗಳನ್ನು ಆರು ತಿಂಗಳು ಬಂದ್‌ ಮಾಡಲಾಗುವುದು. ತಜ್ಞರ ವರದಿ ಪ್ರಕಾರ ಕೊಳಗೇರಿಗಳಲ್ಲಿ ಕೋವಿಡ್‌ ಸೋಂಕು ಬಹಳ ವಿರಳ. ಅಪಾರ್ಟ್‌ಮೆಂಟ್‌ ಹಾಗೂ ಇತರೆಡೆ ವಿಪರೀತವಾಗಿದೆ. ಹಾಗಾಗಿ ಅಪಾರ್ಟ್‌ಮೆಂಟ್‌ಗಳಲ್ಲಿ ಪಾರ್ಟಿಗಳನ್ನು ನಿಷೇಧಿಸಲಾಗುವುದು. ಮುಂದಿನ 15 ದಿನಗಳ ಕಾಲ ರಾಜ್ಯಾದ್ಯಂತ ಪ್ರತಿಭಟನೆ, ಧರಣಿ, ರಾರ‍ಯಲಿಗಳಿಗೆ ಅವಕಾಶ ನೀಡದಿರಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಯಾವುದೇ ಕಾರ್ಯಕ್ರಮಗಳಾಗಲಿ 400, 500 ಸಂಖ್ಯೆಯಲ್ಲಿ ಜನರು ಸೇರುವಂತಿಲ್ಲ. ಪ್ರತಿಯೊಬ್ಬರೂ ತಪ್ಪದೆ ಮಾಸ್ಕ್‌ ಧರಿಸಬೇಕು. ಎಲ್ಲೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸಲು ಮತ್ತಷ್ಟುಬಿಗಿ ಕ್ರಮಗಳನ್ನು ಕೈಗೊಳ್ಳಲು ಹಾಗೂ ದಂಡ ವಿಧಿಸುವ ಪ್ರಕ್ರಿಯೆಯನ್ನು ಮಂಗಳವಾರದಿಂದಲೇ ಎಲ್ಲೆಡೆ ತೀವ್ರಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೋವಿಡ್‌ ಪರೀಕ್ಷೆ, ಸಂಪರ್ಕಿತರ ಪತ್ತೆ, ಚಿಕಿತ್ಸಾ ಕ್ರಮಗಳನ್ನು ಮತ್ತಷ್ಟುಬಲಗೊಳಿಸಲಾಗುವುದು ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ನಿತ್ಯ 40 ಸಾವಿರ ಸಂಖ್ಯೆಯಲ್ಲಿ ಸೋಂಕು ದೃಢಪಡುತ್ತಿದೆ. ಕರ್ನಾಟಕದಲ್ಲಿ ಪ್ರತಿ ದಿನ 3000 ಪ್ರಕರಣಗಳು ಬರುತ್ತಿವೆ. ಇದರಲ್ಲಿ ಬೆಂಗಳೂರಲ್ಲೇ 2 ಸಾವಿರ, ಮೈಸೂರು, ಕಲಬುರಗಿ, ಉಡುಪಿ ದಕ್ಷಿಣ ಕನ್ನಡದಲ್ಲಿ ನಿತ್ಯ 100ಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. 20ರಿಂದ 40 ವರ್ಷದವರಲ್ಲಿ ಹೆಚ್ಚು ಸೋಂಕು ಕಂಡುಬರುತ್ತಿದೆ. ಸಾವಿನ ಪ್ರಮಾಣ ಕಡಿಮೆ ಇದ್ದರೂ ಮೃತಪಡುವವರು 60 ವರ್ಷ ಮೇಲ್ಪಟ್ಟವರೇ ಹೆಚ್ಚಾಗಿದ್ದಾರೆ. ಹಾಗಾಗಿ ಎಲ್ಲ ಅರ್ಹ ನಾಗರಿಕರೂ ತಕ್ಷಣ ಲಸಿಕೆ ಹಾಕಿಸಿಕೊಳ್ಳಬೇಕು. ಸಂಪರ್ಕಿತರ ಪತ್ತೆಗೆ ಕಂದಾಯ, ಶಿಕ್ಷಣ ಇಲಾಖೆ ಸಿಬ್ಬಂದಿಯನ್ನೂ ಬಳಸಿಕೊಳ್ಳಲಾಗುತ್ತಿದೆ. ಹಾಗಾಗಿ ಶಿಕ್ಷಕರಿಗೂ ಆದ್ಯತೆ ಮೇಲೆ ಕೋವಿಡ್‌ ಲಸಿಕೆ ಹಾಕಲು ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ವಿವರಿಸಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೂಡ ಸರ್ಕಾರಕ್ಕೆ ಪತ್ರ ಬರೆದು ಕೋವಿಡ್‌ 2ನೇ ಅಲೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ವೈಜ್ಞಾನಿಕ ನಿರ್ಧಾರ ಕೈಗೊಳ್ಳಬೇಕು. ಜನರನ್ನು ಭೀತಿಗೆ ಒಳಪಡಿಸದೆ ಆರ್ಥಿಕ ಚಟುವಟಿಕೆ ನಿರ್ಬಂಧಿಸದೆ ಸಣ್ಣ ರೋಗ ಲಕ್ಷಣ ಕಂಡುಬಂದರೂ ಬೇರೆಯವರೊಂದಿಗೆ ಸೇರದೆ ಸಾರ್ವಜನಿಕರು ಕೋವಿಡ್‌ ಪರೀಕ್ಷೆಗೊಳಪಡುವಂತೆ ತಿಳಿವಳಿಕೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ. ಅವರ ಸಲಹೆಯನ್ನೂ ಸಭೆಯಲ್ಲಿ ಚರ್ಚಿಸಿ ಪರಿಗಣಿಸಲಾಗಿದೆ. ಕೋವಿಡ್‌ ನಿರ್ವಹಣೆಗೆ ಅನುದಾನದ ಯಾವುದೇ ಕೊರತೆ ಇಲ್ಲ. ಈಗಾಗಲೇ 150 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಅಗತ್ಯಬಿದ್ದಲ್ಲಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ಸಭೆಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌, ಕಂದಾಯ ಸಚಿವ ಆರ್‌.ಅಶೋಕ್‌, ಅಬಕಾರಿ ಸಚಿವ ಗೋಪಾಲಯ್ಯ ಹಾಗೂ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

ನಾಗರಿಕರೇ ಎಚ್ಚರ

- ಪ್ರತಿಭಟನೆ, ಮುಷ್ಕರ, ರಾರ‍ಯಲಿಗಳಿಗೆ 15 ದಿನ ನಿಷೇಧ

- 20ರಿಂದ 40 ವರ್ಷದಲ್ಲಿ ಸೋಂಕು ಪ್ರಮಾಣ ಹೆಚ್ಚಾಗಿದೆ

- ಮೃತಪಡುವವರಲ್ಲಿ 60 ಮೀರಿದವರೇ ಹೆಚ್ಚಿದ್ದಾರೆ

- ಎಲ್ಲ ಅರ್ಹ ನಾಗರಿಕರೂ ತಕ್ಷಣ ಲಸಿಕೆ ಹಾಕಿಸಿಕೊಳ್ಳಬೇಕು

- ಲಾಕ್‌ಡೌನ್‌, ರಾತ್ರಿ ಕಫä್ರ್ಯ ಜಾರಿ ಮಾಡಲ್ಲ

- ಶಾಲಾ- ಕಾಲೇಜು ಬಂದ್‌ ಯೋಚನೆಯೂ ಇಲ್ಲ: ಸಿಎಂ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಧರ್ಮಸ್ಥಳ ವಿರುದ್ಧ ಷಡ್ಯಂತ್ರದ ಬಗ್ಗೆ ಅಂದೇ ಹೇಳಿದ್ದೆ : ಡಿ.ಕೆ.ಶಿವಕುಮಾರ್‌
ಶಾಲಾ-ಕಾಲೇಜು ಹುಡುಗಿಯರಿಗೂ ಋತುಚಕ್ರ ರಜೆ?: ಸಂಪುಟ ಸಭೆಯಲ್ಲಿ ಕಾಯ್ದೆಗೆ ಅನುಮೋದನೆ ಸಾಧ್ಯತೆ