ಹೊಸ ಹುದ್ದೆ ಸೃಷ್ಟಿಗೆ ವಿತ್ತ ಇಲಾಖೆ ಒಪ್ಪಿಗೆ ಕಡ್ಡಾಯ| ಹುದ್ದೆ ಹೆಚ್ಚಳಕ್ಕೂ ಅನ್ವಯ: ಸರ್ಕಾರ ಷರತ್ತು
ಬೆಂಗಳೂರು[ಜ.06]: ರಾಜ್ಯ ಸರ್ಕಾರದ ಯಾವುದೇ ಇಲಾಖೆಯಲ್ಲಿ ಹೊಸದಾಗಿ ಹುದ್ದೆಗಳ ಸೃಜನೆ ಹಾಗೂ ಹುದ್ದೆಗಳ ಸಂಖ್ಯೆ ಹೆಚ್ಚಳ ಮಾಡಬೇಕಿದ್ದರೆ ಕಡ್ಡಾಯವಾಗಿ ಆರ್ಥಿಕ ಇಲಾಖೆ ಅನುಮೋದನೆ ಪಡೆಯಬೇಕು. ಇಲಾಖೆ ಅನುಮೋದನೆ ಪಡೆಯದೆ ಸೃಜಿಸುವ ಯಾವುದೇ ಹುದ್ದೆಗಳಿಗೂ ಆರ್ಥಿಕ ಇಲಾಖೆ ಅನುದಾನ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿದೆ.
ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಆರ್ಥಿಕ ಇಲಾಖೆಯು, ಇನ್ನು ಮುಂದೆ ಯಾವುದೇ ಇಲಾಖೆ, ನಿಗಮ-ಮಂಡಳಿ, ಸ್ವಾಯತ್ತ ಸಂಸ್ಥೆ, ಪ್ರಾಧಿಕಾರಗಳು ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಹುದ್ದೆಗಳ ಸೃಜನೆ ಬಗ್ಗೆ ತಮ್ಮ ಹಂತದಲ್ಲಿಯೇ ಅಂತಿಮ ತೀರ್ಮಾನ ತೆಗೆದುಕೊಳ್ಳಬಾರದು. ಆರ್ಥಿಕ ಇಲಾಖೆಯೊಡನೆ ಸಮಾಲೋಚಿಸಿ ಇಲಾಖೆಯ ಅನುಮತಿ ಪಡೆದ ನಂತರವೇ ಯೋಜನೆ ಅನುಷ್ಠಾನದ ಕುರಿತು ಆದೇಶ ಹೊರಡಿಸಬೇಕು. ಒಂದು ವೇಳೆ ಈ ಸೂಚನೆಗಳನ್ನು ಉಲ್ಲಂಘಿಸಿ ಹೊರಡಿಸುವ ಯಾವುದೇ ಆದೇಶಗಳನ್ನು ಆರ್ಥಿಕ ಇಲಾಖೆ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಈ ಸಂಬಂಧ ಅನುದಾನವನ್ನೂ ನೀಡುವುದಿಲ್ಲ ಎಂದು ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್ ಸ್ಪಷ್ಟವಾಗಿ ತಿಳಿಸಿದ್ದಾರೆ.
undefined
ಕೆಲವು ಇಲಾಖೆಗಳಲ್ಲಿ ಹುದ್ದೆಗಳ ಸೃಜನೆ ಅಗತ್ಯವಿರುವ ಯೋಜನೆಗಳನ್ನು ಆರ್ಥಿಕ ಇಲಾಖೆಯ ಅನುಮತಿ ಪಡೆಯದೆ ಆಯಾ ಇಲಾಖೆಗಳಲ್ಲೇ ಜಾರಿಗೆ ಆದೇಶ ಮಾಡಲಾಗಿದೆ. ಉದಾ: ನರ್ಸಿಂಗ್ ಕಾಲೇಜುಗಳ ಸ್ಥಾಪನೆ, ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಅವಕಾಶ ಹೆಚ್ಚಿಸುವಂತಹ ಯೋಜನೆಗಳಿಗೆ ಹೆಚ್ಚುವರಿ ಹುದ್ದೆಗಳ ಸೃಜನೆ ಅಗತ್ಯವಿರುತ್ತದೆ. ಇಂತಹ ಯೋಜನೆಗಳನ್ನು ಆಡಳಿತ ಇಲಾಖೆಯ ಹಂತದಲ್ಲೇ ತೀರ್ಮಾನಿಸಿ ಆದೇಶಗಳನ್ನು ಹೊರಡಿಸಲಾಗಿದೆ. ಬಳಿಕ ಹುದ್ದೆಗಳ ಸೃಜನೆಗೆ ಆರ್ಥಿಕ ಇಲಾಖೆಯನ್ನು ಸಂಪರ್ಕಿಸುತ್ತಿರುವುದು ಗಮನಕ್ಕೆ ಬಂದಿದೆ.
ಈ ರೀತಿಯ ನಡೆ ನಿಯಮಗಳ ಸ್ಪಷ್ಟ ಉಲ್ಲಂಘನೆ. ಇಂತಹ ಕ್ರಮದಿಂದ ಹೆಚ್ಚಿನ ಆರ್ಥಿಕ ಹೊರೆ ಉಂಟಾಗುವುದಲ್ಲದೆ ಆರ್ಥಿಕ ಶಿಸ್ತು ಹಾಳಾಗುತ್ತಿದೆ. ಅನಾವಶ್ಯಕ ಆಡಳಿತ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ಇನ್ನು ಮುಂದೆ ಯಾವುದೇ ಇಲಾಖೆಗಳು ಹುದ್ದೆಗಳ ಸೃಜನೆ ಬಗ್ಗೆ ತಮ್ಮ ಹಂತದಲ್ಲಿಯೇ ಅಂತಿಮ ತೀರ್ಮಾನ ತೆಗೆದುಕೊಳ್ಳುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.