ಕೆಪಿಎಸ್ಸಿ: 107 ಅಧಿಕಾರಿಗಳ ಸ್ಥಾನಪಲ್ಲಟ

By Kannadaprabha NewsFirst Published Dec 1, 2019, 8:07 AM IST
Highlights

1998ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನ​ರ್ಸ್ ಹುದ್ದೆಗಳ ನೇಮಕಾತಿ ಸಂಬಂಧ ಹೈಕೋರ್ಟ್‌ ನೀಡಿದ್ದ ಆದೇಶವನ್ನು ರಾಜ್ಯ ಸರ್ಕಾರವು ಕೊನೆಗೂ ಪಾಲನೆ ಮಾಡಿದೆ.

ಬೆಂಗಳೂರು [ಡಿ.01]:  ಕಳೆದ 1998ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನ​ರ್ಸ್ ಹುದ್ದೆಗಳ ನೇಮಕಾತಿ ಸಂಬಂಧ ಹೈಕೋರ್ಟ್‌ ನೀಡಿದ್ದ ಆದೇಶವನ್ನು ರಾಜ್ಯ ಸರ್ಕಾರವು ಕೊನೆಗೂ ಪಾಲನೆ ಮಾಡಿದ್ದು, ಹೊಸ ಪರಿಷ್ಕೃತ ಆಯ್ಕೆ ಪಟ್ಟಿಯನ್ನು ಯಥಾವತ್ತಾಗಿ ಜಾರಿಗೊಳಿಸುವ ಸಂಬಂಧ ಅನಧಿಕೃತ ಟಿಪ್ಪಣಿಯನ್ನು ಸಂಬಂಧಪಟ್ಟಇಲಾಖೆಗಳಿಗೆ ರವಾನಿಸಿದೆ. ಪರಿಣಾಮ ಆ ವರ್ಷದ ಬ್ಯಾಚ್‌ನಲ್ಲಿ ನೇಮಕಗೊಂಡಿದ್ದ 107 ಅಧಿಕಾರಿಗಳ ಸ್ಥಾನ ಬದಲಿಸಲು ವೇದಿಕೆ ಸಿದ್ಧವಾದಂತಾಗಿದೆ.

ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 107 ಅಧಿಕಾರಿಗಳ ಸ್ಥಾನಪಲ್ಲಟಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಶನಿವಾರ ಅನಧಿಕೃತ ಟಿಪ್ಪಣಿ ಹೊರಡಿಸಿದೆ. 1998ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನ​ರ್‍ಸ್ ಅಂತಿಮ ಪರಿಷ್ಕೃತ ಆಯ್ಕೆ ಪಟ್ಟಿಅನುಸಾರ 173 ಅಧಿಕಾರಿಗಳ ಹುದ್ದೆ ಬದಲಾವಣೆಯಾಗಿರುತ್ತದೆ. ಇದರಲ್ಲಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯಿಂದ (ಕೆಎಟಿ) 25, ಕೇಂದ್ರ ಆಡಳಿತಾತ್ಮಕ ಮಂಡಳಿಯಿಂದ (ಸಿಎಟಿ) 11 ಅಧಿಕಾರಿಗಳು ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ತಂದಿದ್ದಾರೆ. ಇನ್ನು 30 ಅಧಿಕಾರಿಗಳ ಹುದ್ದೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಉಳಿದಂತೆ ಯಾವುದೇ ತಡೆಯಾಜ್ಞೆ ಮಾಹಿತಿಯು ಸರ್ಕಾರದಲ್ಲಿ ಸ್ವೀಕೃತವಾಗದ ವಿವಿಧ ಇಲಾಖೆಗಳ 107 ಅಧಿಕಾರಿಗಳ ಸ್ಥಾನಪಲ್ಲಟ ಮಾಡಲಾಗಿದೆ ಎಂದು ಟಿಪ್ಪಣಿಯಲ್ಲಿ ಹೇಳಲಾಗಿದೆ.

107 ಅಧಿಕಾರಿಗಳಲ್ಲಿ ಯಾರಾದರೂ ತಡೆಯಾಜ್ಞೆ ತಂದಿದ್ದಲ್ಲಿ ಸರ್ಕಾರದ ಹಂತದಲ್ಲಿ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಆದರೆ, ಸಂಬಂಧಪಟ್ಟಇಲಾಖೆಗಳು ಪರಿಶೀಲಿಸಿ ಕ್ರಮ ವಹಿಸಬೇಕು. ಅಲ್ಲದೇ, ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿದ್ದರೆ, ಮರಣ ಹೊಂದಿದ್ದರೆ, ವಜಾಗೊಂಡಿದ್ದರೆ, ರಾಜೀನಾಮೆ ಮತ್ತು ಕಡ್ಡಾಯ ನಿವೃತ್ತಿ ಹೊಂದಿದ್ದರೆ ಅದರ ಮಾಹಿತಿಯನ್ನು ಆಯಾ ನೇಮಕಾತಿ ಪ್ರಾಧಿಕಾರಿಗಳು ದೃಢೀಕರಿಸಿಕೊಳ್ಳಬೇಕು ಮತ್ತು ಈ ಮಾಹಿತಿಯನ್ನು ಸರ್ಕಾರಕ್ಕೆ ರವಾನಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಟಿಪ್ಪಣಿಯಲ್ಲಿ ಸ್ಪಷ್ಟಪಡಿಸಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಮಾಹಿತಿಯನ್ನು ಆರ್ಥಿಕ, ಯುವಜನ ಸೇವಾ, ನಗರಾಭಿವೃದ್ಧಿ, ಸಹಕಾರ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲನೆ ಮತ್ತು ಜೀವನೋಪಾಯ, ಸಮಾಜ ಕಲ್ಯಾಣ, ಕಾರ್ಮಿಕ ಮತ್ತು ಕಂದಾಯ ಇಲಾಖೆಗೆ ರವಾನಿಸಲಾಗಿದೆ.

36 ಮಂದಿ ಕೆಎಎಸ್‌ ಅಧಿಕಾರಿಗಳನ್ನು ಹುದ್ದೆಯಿಂದ ವಜಾಗೊಳಿಸಬೇಕು ಹಾಗೂ ಕೆಎಎಸ್‌ನಿಂದ ಮುಂಬಡ್ತಿ ಪಡೆದಿದ್ದ ಹಾಲಿ 11 ಐಎಎಸ್‌ ಅಧಿಕಾರಿಗಳಿಗೆ ಹಿಂಬಡ್ತಿ ನೀಡಬೇಕು ಎಂದು ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ ಆದೇಶ ನೀಡಿದ್ದವು. ಆದರೆ, ಸರ್ಕಾರ ಹೊರಡಿಸಿರುವ ಟಿಪ್ಪಣಿಯಲ್ಲಿ ಈ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. ಹೀಗಾಗಿ ಈ ಸಂಬಂಧ ಮತ್ತಷ್ಟುದಿನ ನ್ಯಾಯಾಲಯದಲ್ಲಿ ಹೋರಾಟಗಳು ನಡೆಯಲಿವೆ ಎಂದು ಉದ್ಯೋಗವಂಚಿತರು ಹೇಳಿದ್ದಾರೆ.

1998ನೇ ಸಾಲಿನ ಕೆಪಿಎಸ್‌ಸಿ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್‌ ಅಕ್ರಮವಾಗಿ ನೇಮಕವಾಗಿರುವವರನ್ನು ಆಯ್ಕೆ ಪಟ್ಟಿಯಿಂದ ಹೊರಗಿಟ್ಟು, ಹೊಸ ಆಯ್ಕೆ ಪಟ್ಟಿಯಂತೆ ನೇಮಕಾತಿ ಮಾಡಲು ಸೂಚನೆ ನೀಡಿತ್ತು. ಇದನ್ನು ಸುಪ್ರೀಂಕೋರ್ಟ್‌ ಸಹ ಎತ್ತಿ ಹಿಡಿದಿತ್ತು. ತೀರ್ಪು ಜಾರಿ ಮಾಡಲು ಹಿಂದಿನ ಕಾಂಗ್ರೆಸ್‌ ಮತ್ತು ಮೈತ್ರಿ ಸರ್ಕಾರ ಹಿಂದೇಟು ಹಾಕಿದ್ದವು. ಹೀಗಾಗಿ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು. ಇದರಿಂದ ತಪ್ಪಿಸಿಕೊಳ್ಳಲು ಸರ್ಕಾರ ನ್ಯಾಯಾಲಯದ ಆದೇಶ ಪಾಲನೆ ಮಾಡಿದೆ.

ಏನಿದು ಸ್ಥಾನಪಲ್ಲಟ ಕಸರತ್ತು?

1998ನೇ ಬ್ಯಾಚ್‌ನ ಕೆಎಎಸ್‌ ಅಧಿಕಾರಿಗಳ ಆಯ್ಕೆಯಲ್ಲಿ ಕೆಪಿಎಸ್‌ಸಿ ಸದಸ್ಯರು ಭ್ರಷ್ಟಾಚಾರ ನಡೆಸಿದ ಪರಿಣಾಮ ಅನರ್ಹ 36 ಮಂದಿ ನೇಮಕಗೊಂಡಿದ್ದರು. ಅದನ್ನು ಪ್ರಶ್ನಿಸಿ ಅವಕಾಶವಂಚಿತರು ಕೋರ್ಟ್‌ಗೆ ಹೋಗಿದ್ದರು. ಅವರಿಗೆ ಈಗಾಗಲೇ ಹೈಕೋರ್ಟ್‌ ಹಾಗೂ ಸುಪ್ರೀಂಕೋರ್ಟ್‌ನಲ್ಲೂ ಜಯ ಲಭಿಸಿದೆ. ಈ ವೇಳೆ ಕೋರ್ಟ್‌ಗಳು ರಾಜ್ಯ ಸರ್ಕಾರಕ್ಕೆ ಅನರ್ಹ 36 ಮಂದಿಯನ್ನು ವಜಾಗೊಳಿಸಿ, ಅರ್ಹ 36 ಮಂದಿಗೆ ನೇಮಕಾತಿ ಪತ್ರ ನೀಡುವಂತೆ ಸೂಚಿಸಿವೆ. ಅದನ್ನು ಜಾರಿಗೊಳಿಸುವ ಪೂರ್ವದಲ್ಲಿ ಆ ಸಾಲಿನಲ್ಲಿ ನೇಮಕಗೊಂಡ ಇನ್ನಿತರ 173 ಅಭ್ಯರ್ಥಿಗಳ ಸ್ಥಾನಗಳೂ ಬದಲಾಗುತ್ತವೆ. ಅದರ ಪ್ರಕ್ರಿಯೆ ಈಗ ಆರಂಭವಾಗಿದೆ.

click me!