ಈ ವರ್ಷದಿಂದಲೇ 7ನೇ ಕ್ಲಾಸ್ ಪಬ್ಲಿಕ್ ಪರೀಕ್ಷೆ ನಿಶ್ಚಿತ: ಸುರೇಶ್| ಹೇಗೆ ಪರೀಕ್ಷೆ ನಡೆಸಬೇಕೆಂದು ಇಂದು ನಿರ್ಧಾರ
ಬೆಂಗಳೂರು[ಜ.04]: ಕೆಲವೊಂದು ನಿಯಮಗಳನ್ನು ಸಡಿಲಿಸಿ ಪ್ರಸ್ತುತ ಸಾಲಿನಿಂದಲೇ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆ ಯಾವ ರೀತಿಯಲ್ಲಿರುತ್ತದೆ ಎಂಬ ರೂಪರೇಷೆಗಳನ್ನು ಶನಿವಾರ ಸಭೆ ನಡೆಸಿ ತಿಳಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.
ನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಾಯೋಗಿಕವಾಗಿ ಈ ವರ್ಷ ಪರೀಕ್ಷೆ ನಡೆಸಲಾಗುತ್ತದೆ ಎಂದು ಹೇಳಲಾಗಿದೆ. ಪರೀಕ್ಷಾ ವಿಧಾನದ ಬಗ್ಗೆ ಶನಿವಾರದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಸದ್ಯ ಅನುತ್ತೀರ್ಣ ಮಾಡುವ ನಿಯಮಗಳು ಕೂಡ ಇಲ್ಲ. ಹೀಗಾಗಿ, ರಾಜ್ಯಮಟ್ಟದಲ್ಲಿಯೇ ಪರೀಕ್ಷೆ ನಡೆಯಲಿದೆ. ನಿಯಮಗಳನ್ನು ಮಾತ್ರ ತಿಳಿಸಲಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲಿ ಆತಂಕಗೊಳ್ಳುವುದು ಬೇಡ. ಆರಾಮಾಗಿ ಪರೀಕ್ಷೆ ಎದುರಿಸಬಹುದು ಎಂದು ತಿಳಿಸಿದರು.
ಟಿಪ್ಪು ಪಠ್ಯ ಸರ್ಕಾರದ ನಿರ್ಧಾರ:
ಪಠ್ಯದಲ್ಲಿ ಟಿಪ್ಪು ಸುಲ್ತಾನ್ ಕುರಿತ ಪಠ್ಯ ಉಳಿಸಿಕೊಳ್ಳಬೇಕೇ ಅಥವಾ ಬೇಡವೇ ಎಂಬುದನ್ನು ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಿದೆ. ಸದ್ಯದಲ್ಲಿಯೇ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.