ನ.1ರಿಂದ 1 ವರ್ಷ ‘ಕರ್ನಾಟಕ ಹಬ್ಬ’: ಸಚಿವ ಶಿವರಾಜ ತಂಗಡಗಿ

By Kannadaprabha News  |  First Published Oct 28, 2023, 3:40 AM IST

ಮೈಸೂರು ರಾಜ್ಯ ಕರ್ನಾಟಕ ಆಗಿ ನಾಮಕರಣಗೊಂಡು 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ನ.1ರಿಂದ 2024ರ ಅ.31ರವರೆಗೆ ‘ಕರ್ನಾಟಕ ಸಂಭ್ರಮ-50’ ಹೆಸರಿನಲ್ಲಿ ವರ್ಷ ಪೂರ್ತಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲು ಸರ್ಕಾರ ನಿರ್ಧರಿಸಿದೆ. 


ಬೆಂಗಳೂರು (ಅ.28): ಮೈಸೂರು ರಾಜ್ಯ ಕರ್ನಾಟಕ ಆಗಿ ನಾಮಕರಣಗೊಂಡು 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ನ.1ರಿಂದ 2024ರ ಅ.31ರವರೆಗೆ ‘ಕರ್ನಾಟಕ ಸಂಭ್ರಮ-50’ ಹೆಸರಿನಲ್ಲಿ ವರ್ಷ ಪೂರ್ತಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲು ಸರ್ಕಾರ ನಿರ್ಧರಿಸಿದೆ. ನ.1ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ಸಾಲುಸಾಲು ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. 1973ರ ನ.1ರಂದು ಮೈಸೂರು ರಾಜ್ಯ ಕರ್ನಾಟಕ ಆಗಿ ಬದಲಾಯಿತು. ಈ ಹಿನ್ನೆಲೆಯಲ್ಲಿ ವರ್ಷಪೂರ್ತಿ ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಮನ-ಮನೆಗಳಿಗೆ ‘ಕರ್ನಾಟಕ ಸಂಭ್ರಮ-50’ ತಲುಪಿಸಲು ನಿರ್ಧರಿಸಿದ್ದು, ನ.2ರಿಂದ ಮುಂದಿನ ವರ್ಷದ ಅ.31ರವರೆಗೆ ಕನ್ನಡ ರಾಜ್ಯೋತ್ಸವ ರಥಯಾತ್ರೆ 31 ಜಿಲ್ಲೆಗಳಲ್ಲೂ ನಡೆಯಲಿದೆ.

ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು, ನ.1 ರಂದು ಬೆಳಗ್ಗೆ ಶಿಕ್ಷಣ ಇಲಾಖೆಯಿಂದ ನಡೆಯುವ ಪ್ರಮುಖ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಧ್ವಜಾರೋಹಣ ಮಾಡಲಿದ್ದಾರೆ. ಪ್ರತಿ ಜಿಲ್ಲೆಗಳಲ್ಲೂ ಜಿಲ್ಲಾ ಉಸ್ತುವಾರಿ ಸಚಿವರಿಂದ ರಾಷ್ಟ್ರ ಧ್ವಜಾರೋಹಣ ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರಿಂದ ಧ್ವಜಾರೋಹಣ, ಜತೆಗೆ ಶಾಲಾ-ಕಾಲೇಜುಗಳಲ್ಲೂ ಆಚರಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

Tap to resize

Latest Videos

ಹುಲಿ ಉಗುರು ನಕಲಿ, ಅಸಲಿ ಎಂದು ನಮಗೆ ಗೊತ್ತಾಗಲ್ಲ: ಮಧು ಬಂಗಾರಪ್ಪ

ರಂಗೋಲಿ ಹಾಕಿ, ಗಾಳಿಪಟ ಹಾರಿಸಿ: ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಧಿಕೃತ ಆಚರಣೆ ಶುರುವಾಗಲಿದೆ. ನ.1ರಂದು ಸಂಜೆ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ನಡೆಯಲಿದೆ. ಇದೇ ವೇಳೆ ನ.1 ರಂದು ಸಂಜೆ 5 ಗಂಟೆಗೆ ಸಾರ್ವಜನಿಕರು ಆಯಾ ಊರುಗಳಲ್ಲಿ ಕೆಂಪು-ಹಳದಿ ಬಣ್ಣದ ಗಾಳಿಪಟ ಬಾನೆತ್ತರಕ್ಕೆ ಹಾರಿಸಬೇಕು. ಸಂಜೆ 7 ಗಂಟೆಗೆ ಮನೆಗಳ ಮುಂದೆ ಕನ್ನಡ ಜ್ಯೋತಿ ಬೆಳಗಿಸಿ ವಿಶೇಷವಾಗಿ ಆಚರಿಸಬೇಕು. ಜತೆಗೆ ನ.1ರಂದು ಬೆಳಗ್ಗೆ ಎಲ್ಲರ ಮನೆಗಳ ಮುಂದೆ ಮಹಿಳೆಯರು ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿಗಳನ್ನು ಬಿಡಿಸಿ ‘ಕರ್ನಾಟಕ ಸಂಭ್ರಮ-50: ಉಸಿರಾಯಿತು ಕರ್ನಾಟಕ ಹೆಸರಾಗಲಿ ಕನ್ನಡ’ ಎನ್ನುವ ಘೋಷ ವಾಕ್ಯವನ್ನು ಬರೆಯಬೇಕು ಎಂದು ಕರೆ ನೀಡಿದರು. ನವೆಂಬರ್ 1ರ ಬೆಳಗ್ಗೆ 9 ಗಂಟೆಗೆ ಎಲ್ಲಾ ರೆಡಿಯೋಗಳಲ್ಲಿ ನಾಡಗೀತೆ ಮೊಳಗಲಿದೆ. ರಾಷ್ಟ್ರಗೀತೆಗೆ ಗೌರವ ಸಮರ್ಪಿಸುವ ಹಾಗೆ ಎಲ್ಲರೂ ಎದ್ದು ನಿಂತು ನಾಡಗೀತೆಗೆ ಗೌರವ ಸಮರ್ಪಣೆ ಮಾಡಬೇಕು ಎಂದು ಕರೆ ನೀಡಿದರು.

ನ.2ರಂದು ಹಂಪಿಯಲ್ಲಿ ಚಾಲನೆ: ಡಿ.ದೇವರಾಜ ಅರಸು ಸಿಎಂ ಆಗಿದ್ದ ಸಂದರ್ಭದಲ್ಲಿ ‘ಕರ್ನಾಟಕ’ ಎಂದು ಪುನರ್ ನಾಮಕರಣ ಮಾಡಿದರು. ಈ ಸಂದರ್ಭದಲ್ಲಿ ಅವರು ಹಂಪಿಯಿಂದ ಆರಂಭಿಸಿ ಗದಗವರೆಗೆ ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದೇ ರೀತಿ ಪುನರಾವರ್ತನೆಯಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ. ಹಂಪಿಯ ಎದುರು ಬಸವಣ್ಣ ವೇದಿಕೆ ಮುಂಬದಿ ರಥಯಾತ್ರೆಗೆ ನ.2ರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಅದಕ್ಕೂ ಮುನ್ನ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಗಂಗಾ ಜಲಾಭಿಷೇಕ, ಭುವನೇಶ್ವರಿ ದೇವಿಗೆ ಪಂಚಾಮೃತ ಅಭಿಷೇಕ, ರಥಬೀದಿಯಲ್ಲಿ ಜಾನಪದ ಕಲಾತಂಡಗಳ ಮೆರವಣಿಗೆ ನಡೆಯಲಿದ್ದು, ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿಯಾಗಲಿದೆ.

ಬಳಿಕ ಮರು ದಿನ (ನ.3) ಗದಗದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಸುವರ್ಣ ಸಂಭ್ರಮ ನೆನಪಿರಲು 50 ಕನ್ನಡ ಪುಸ್ತಕಗಳ ಬಿಡುಗಡೆ, 50 ಮಹಿಳೆಯರಿಗೆ ಸನ್ಮಾನ, ನಾಡು-ನುಡಿ, ಪರಂಪರೆ, ಕಲೆ, ಸಂಸ್ಕೃತಿ, ವೈವಿಧ್ಯತೆಗಳನ್ನು ಬಿಂಬಿಸಲು ವರ್ಷದುದ್ದಕ್ಕೂ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಹೇಳಿದರು. 31 ಜಿಲ್ಲೆಗಳಲ್ಲಿ ಹಲ್ಮಿಡಿ‌ ಶಾಸನದ‌ ಪ್ರತಿಕೃತಿಗಳನ್ನು ಸ್ಥಾಪನೆ ಮಾಡಲಾಗುವುದು. ಸರ್ಕಾರದ ಲೆಟರ್ ಹೆಡ್‌ನಲ್ಲಿ ಕರ್ನಾಟಕ ಸಂಭ್ರಮ -50 ಎಂಬ ಲೋಗೋ ವರ್ಷಪೂರ್ತಿ ಬಳಕೆ ಮಾಡಲು ಸೂಚಿಸಲಾಗಿದೆ. ಜಿಲ್ಲಾ ಮಟ್ಟದ ಪ್ರತಿ ಕಾರ್ಯಕ್ರಮದ ವೇದಿಕೆಯಲ್ಲೂ ಈ ಲೋಗೋ ಬಳಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಅಂಚೆ ಇಲಾಖೆಯಿಂದ ವಿಶೇಷ ಅಂಚೆ ಚೀಟಿ ಬಿಡುಗಡೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಹೊರನಾಡು ಕನ್ನಡಿಗರು ಹಾಗೂ ಅನಿವಾಸಿ ಕನ್ನಡಿಗರು ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು. ಈ ಸಂಬಂಧ 50ಕ್ಕೂ ಹೆಚ್ಚು ದೇಶದಲ್ಲಿನ ಅನಿವಾಸಿ ಕನ್ನಡಿಗರ ಜತೆ ಶೀಘ್ರದಲ್ಲೇ ವರ್ಚುವಲ್ ಸಭೆ ನಡೆಸಲು ನಿರ್ಧಾರ ಮಾಡಲಾಗಿದೆ. ಈ ಮೂಲಕ ಇದು ಸರ್ಕಾರದ ಹಬ್ಬವಲ್ಲ,‌ ಕರ್ನಾಟಕದ ಪ್ರತಿಯೊಂದು ಮನೆ- ಮನಗಳ ಹಬ್ಬವಾಗಬೇಕು ಎಂಬುದು ನಮ್ಮ ಉದ್ದೇಶ ಎಂದರು. ಐಟಿ- ಬಿಟಿ ಕಂಪನಿಗಳ ಉದ್ಯೋಗಿಗಳು ಕೂಡ ಕರ್ನಾಟಕ ಸಂಭ್ರಮದ ಭಾಗವಾಗಲಿದ್ದು, ಅವರೊಂದಿಗೂ ಚರ್ಚೆ ನಡೆಸಲಾಗಿದೆ. ಅವರ ಕಚೇರಿಗಳಲ್ಲಿ ಕನ್ನಡದ ಕಂಪು ಕುರಿತು ಕಾರ್ಯಕ್ರಮ ಆಯೋಜನೆ ಮಾಡಲಿದ್ದಾರೆ ಎಂದರು.

ಕನ್ನಡಾಂಬೆಗೆ ಗೀತನಮನ: ನವೆಂಬರ್ 1ರ ರಾಜ್ಯೋತ್ಸವ ‌ಕಾರ್ಯಕ್ರಮದಲ್ಲಿ ನಾಡಗೀತೆ, ರಾಷ್ಟ್ರಗೀತೆ ಜತೆಗೆ ನಾಡಿನ‌ ಹೆಸರಾಂತ ಕವಿಗಳ 5 ಕನ್ನಡ ಗೀತೆಗಳ ಮೂಲಕ ಗೀತ ನಮನ ಸಲ್ಲಿಸಲಾಗುವುದು. ಹುಯಿಲಗೋಳ ನಾರಾಯಣ ರಾವ್‌ ಅವರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ರಾಷ್ಟ್ರಕವಿ ಕುವೆಂಪು ಅವರ ‘ಎಲ್ಲಾದರೂ ಇರು ಎಂತಾದರೂ ಇರು’, ದ.ರಾ. ಬೇಂದ್ರೆ ಅವರ ‘ಒಂದೇ ಒಂದೇ ಕರ್ನಾಟಕ ಒಂದೇ’, ಸಿದ್ದಯ್ಯ ಪುರಾಣಿಕ್‌ ಅವರ ‘ಹೊತ್ತಿತೋ ಹೊತ್ತಿತು ಕನ್ನಡದ ದೀಪ’, ಚನ್ನವೀರ ಕಣವಿ ಅವರ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಗೀತೆಗಳ ಗಾಯನಕ್ಕೆ ಕರೆ ನೀಡಲಾಗಿದೆ ಎಂದು ಸಚಿವ ತಂಗಡಗಿ ತಿಳಿಸಿದರು.

ಕೆಎಂಎಫ್‌ನಿಂದ ಕರ್ನಾಟಕ ಪಾಕ್‌!: ಮೈಸೂರು ಪಾಕ್‌ ಮಾದರಿಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಹಿನ್ನೆಲೆಯಲ್ಲಿ ಕೆಎಂಎಫ್‌ ಸಹಯೋಗದಲ್ಲಿ ‘ಕರ್ನಾಟಕ ಪಾಕ’ ಎಂಬ ಸಿಹಿ ತಿನಿಸನ್ನು ಬಿಡುಗಡೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

3 ಶಾಶ್ವತ ಕಾರ್ಯ: ಬೆಂಗಳೂರಿನಲ್ಲಿ ಭುವನೇಶ್ವರಿ ಪ್ರತಿಮೆ ನಿರ್ಮಾಣ ಮಾಡಲಾಗುವುದು. ಮೈಸೂರಿನಲ್ಲಿ ಮಾಜಿ ಮಾಜಿ ಮುಖ್ಯಮಂತ್ರಿ ‌ದೇವರಾಜ ಅರಸು ಪ್ರತಿಮೆ‌ ನಿರ್ಮಾಣ ಮಾಡಲಾಗುವುದು. ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದಲ್ಲಿರುವ ರಾಜ್ಯದ ‌ಏಕೈಕ ಭುವನೇಶ್ವರಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲಾಗುವುದು ಎಂದೂ ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ಏನೇನು ಕಾರ್ಯಕ್ರಮ?
- ರಾಷ್ಟ್ರ ಧ್ವಜಾರೋಹಣ ಮೂಲಕ ನ.1ರಂದು ಕಾರ್ಯಕ್ರಮಗಳಿಗೆ ಸಿದ್ದರಾಮಯ್ಯ ಚಾಲನೆ
- ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು, ವಿಧಾನಸಭೆ ಕ್ಷೇತ್ರಗಳಲ್ಲಿ ಶಾಸಕರಿಂದ ಧ್ವಜಾರೋಹಣ
- ನ.2ರಿಂದ ಮುಂದಿನ ವರ್ಷ ಅ.31ರವರೆಗೆ ಎಲ್ಲ ಜಿಲ್ಲೆಗಳಲ್ಲಿ ಕನ್ನಡ ರಾಜ್ಯೋತ್ಸವ ರಥಯಾತ್ರೆ
- ಹಂಪಿಯಲ್ಲಿ ರಥಯಾತ್ರೆಗೆ ಸಿದ್ದು ಚಾಲನೆ. ಹಂಪಿ ರಥ ಬೀದಿಯಲ್ಲಿ ಕಲಾತಂಡಗಳ ಮೆರವಣಿಗೆ
- ನ.3ರಂದು ಗದಗಿನಲ್ಲಿ 50 ಕನ್ನಡ ಪುಸ್ತಕ ಬಿಡುಗಡೆ. 50 ಮಹಿಳೆಯರಿಗೆ ಸನ್ಮಾನ ಸಮಾರಂಭ

ರಾಮನಗರದ ಕುರಿತು ಎಚ್‌ಡಿಕೆಗೆ ಪರಿಜ್ಞಾನ ಇಲ್ಲ: ಡಿ.ಕೆ.ಶಿವಕುಮಾರ್‌

ನೀವೂ ಪಾಲ್ಗೊಳ್ಳಿ
- ನ.1ರಂದು ಸಂಜೆ 5 ಗಂಟೆಗೆ ನಿಮ್ಮೂರಿನಲ್ಲೇ ಕೆಂಪು- ಹಳದಿ ಬಣ್ಣದ ಗಾಳಿಪಟ ಹಾರಿಸಿ
- ಸಂಜೆ 7 ಗಂಟೆಗೆ ಕನ್ನಡ ಜ್ಯೋತಿ ಬೆಳಗಿಸಿ. ಮನೆ ಮುಂದೆ ಕೆಂಪು- ಹಳದಿ ರಂಗೋಲಿ ಬಿಡಿಸಿ
- ರಂಗೋಲಿಯಲ್ಲಿ ‘ಕರ್ನಾಟಕ ಸಂಭ್ರಮ-50: ಉಸಿರಾಯಿತು ಕರ್ನಾಟಕ ಹೆಸರಾಗಲಿ ಕನ್ನಡ’ ಎಂದು ಬರೆಯಿರಿ
- ನ.1ರಂದು ಬೆಳಗ್ಗೆ 9ಕ್ಕೆ ರೇಡಿಯೋದಲ್ಲಿ ನಾಡಗೀತೆ ಮೊಳಗಲಿದೆ. ಆಗ ಎದ್ದು ನಿಂತು ಗೌರವಿಸಿ

click me!