
ಬೆಂಗಳೂರು[ಜ.30]: ಗಡಿ ಭಾಗದ ಕನ್ನಡಿಗರ ಮೇಲೆ ಗಂಭೀರ ಪರಿಣಾಮ ಬೀರುವಂತಹ ಆಂಗ್ಲಮಾಧ್ಯಮ ಶಾಲೆ ನೀತಿಯನ್ನು ಅಳವಡಿಸಿಕೊಂಡಿರುವ ನಿರ್ಧಾರವನ್ನು ಕೈಬಿಡುವಂತೆ ಸೀಮಾಂಧ್ರದ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ಅವರಿಗೆ ರಾಜ್ಯ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಜಗನ್ಮೋಹನ್ ರೆಡ್ಡಿ ಅವರಿಗೆ ಪತ್ರವೊಂದನ್ನು ಬರೆದಿರುವ ಸುರೇಶ್ ಕುಮಾರ್, ಸೀಮಾಂಧ್ರದ ಎಲ್ಲ ಶಾಲೆಗಳನ್ನು ಆಂಗ್ಲ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ವಿದ್ಯಾರ್ಥಿಗಳು ತೆಲುಗು ಅಥವಾ ಉರ್ದು ಭಾಷೆಯನ್ನು ಕಲಿಯಬೇಕೆಂದು ಫರ್ಮಾನು ಹೊರಡಿಸಿದೆ. ಈ ನಿರ್ಧಾರ ಗಡಿನಾಡ ಕನ್ನಡಿಗರ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಕೂಡಲೇ ಈ ನಿರ್ಣಯವನ್ನು ಕೈಬಿಡಬೇಕು ಎಂದು ಕೋರಿದ್ದಾರೆ.
ಸರ್ಕಾರಿ ಶಾಲೆಗಳೆಲ್ಲಾ ಆಂಗ್ಲ ಮಾಧ್ಯಮಕ್ಕೆ, ಆಂಧ್ರದಲ್ಲಿ 79 ಕನ್ನಡ ಶಾಲೆಗಳು ಬಂದ್?
ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳು ವಿಜಯನಗರ ಅರಸರಾದ ಕೃಷ್ಣದೇವರಾಯನ ಕಾಲಕ್ಕೂ ಮೊದಲಿನಿಂದಲೂ ಐತಿಹಾಸಿಕವಾದ ಸಹೋದರ ಸಂಬಂಧ ಹೊಂದಿವೆ. ಭಾಷೆ ಸೇರಿದಂತೆ ಪ್ರತಿ ವಿಷಯದಲ್ಲಿಯೂ ಪರಸ್ಪರ ಸೌಹಾರ್ದತೆ ಹೊಂದಿರುವುದು ಅಭಿಮಾನದ ಸಂಗತಿಯಾಗಿದೆ. ಆದರೆ, ಇತ್ತೀಚೆಗೆ ಸೀಮಾಂಧ್ರದಲ್ಲಿರುವ ಎಲ್ಲಾ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪರಿವರ್ತಿಸಲಾಗುತ್ತದೆ. ಪ್ರತಿ ವಿದ್ಯಾರ್ಥಿಯು ತೆಲುಗು ಅಥವಾ ಉರ್ದು ಭಾಷೆಯನ್ನು ಕಲಿಯಬೇಕೆಂದು ಕೈಗೊಂಡಿರುವ ನಿರ್ಧಾರ ಎರಡೂ ರಾಜ್ಯಗಳ ನಡುವಿನ ಸೌಹಾರ್ದತೆಗೆ ಧಕ್ಕೆಯಾಗಿದೆ. ಆಂಧ್ರಪ್ರದೇಶದ ಗಡಿಯಲ್ಲಿ ವಾಸಿಸುತ್ತಿರುವ ಕನ್ನಡಿಗರ ಮನೋಸ್ಥೈರ್ಯದ ಮೇಲೆ ಇದು ತೀವ್ರ ಪರಿಣಾಮ ಬೀರಲಿದೆ. ಬೇರೆಲ್ಲ ಸಂಘರ್ಷಗಳಿಗಿಂತಲೂ ಸಾಂಸ್ಕೃತಿಕ ಸಂಘರ್ಷ ತೀವ್ರ ನೋವಿನ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.
ಇದೇ ರೀತಿ ಕರ್ನಾಟಕ ರಾಜ್ಯದಲ್ಲಿಯೂ ಹತ್ತಾರು ತೆಲುಗು ಮಾಧ್ಯಮ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಆಂಧ್ರಪ್ರದೇಶ ಸರ್ಕಾರದ ನಿರ್ಧಾರದಿಂದ ಸಂಬಂಧಪಟ್ಟಶಾಲೆಗಳಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವವರ ಜೀವನ ಅಪಾಯಕ್ಕೆ ಸಿಲುಕುವ ಸಾಧ್ಯತೆಗಳಿವೆ. ಅಲ್ಲದೆ, ಕರ್ನಾಟಕದಿಂದ ಹೊರಗೆ ವಾಸಿಸುತ್ತಿದ್ದಾರೆಂಬ ಒಂದೇ ಕಾರಣಕ್ಕಾಗಿ ಕನ್ನಡಿಗರು ತಮ್ಮ ಮಾತೃಭಾಷೆ ಕಲಿಕೆಯಿಂದಲೂ ವಂಚಿತರಾಗಲಿದ್ದಾರೆ. ಕನ್ನಡವನ್ನು ಭಾಷೆಯಾಗಿ ಅಥವಾ ಮಾಧ್ಯಮವಾಗಿ ಕಲಿಸುವ ಅಲ್ಪಸಂಖ್ಯಾಂತ ಭಾಷಾ ಶಾಲೆಗಳನ್ನು ಮುಂದುವರಿಸುವ ಮೂಲಕ ಸೀಮಾಂಧ್ರದಲ್ಲಿ ಕನ್ನಡಿಗರ ಹಿತಾಸಕ್ತಿ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ