
ಬೆಂಗಳೂರು (ಏ.29) : ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರ ಅಧಿಕಾರ ವಿಸ್ತರಣೆಯೇ ಅಥವಾ ಹೊಸ ಸಾರಥಿ ಆಯ್ಕೆಯೇ ಎಂಬ ಸಂಗತಿ ಮಂಗಳವಾರ ಅಂತಿಮಗೊಳ್ಳಲಿದ್ದು, ಇಲಾಖೆಯಲ್ಲಿ ಭಾರೀ ಕುತೂಹಲ ಕೆರಳಿಸಿದೆ.
ಈ ಸಂಬಂಧ ಸೋಮವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆ ನಡೆಯಬೇಕಿತ್ತು. ಆದರೆ ಪೂರ್ವ ನಿಗದಿತ ಬೆಳಗಾವಿ ಜಿಲ್ಲೆ ಕಾರ್ಯಕ್ರಮ ತಡವಾದ ಕಾರಣಕ್ಕೆ ಮುಖ್ಯಮಂತ್ರಿ ಅವರ ಸಭೆ ಮಂಗಳವಾರಕ್ಕೆ ಮುಂದೂಡಿಯಾಗಿದ್ದು, ಸಂಜೆಯೊಳಗೆ ಡಿಜಿ-ಐಜಿಪಿ ಆಯ್ಕೆ ವಿಚಾರದಲ್ಲಿ ಸರ್ಕಾರ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ಹಾಲಿ ಡಿಜಿ-ಐಜಿಪಿ ಅಲೋಕ್ ಮೋಹನ್ ಅವರು ಏ.30ರಂದು ನಿವೃತ್ತಿಯಾಗಲಿದ್ದು, ನಾಲ್ಕು ತಿಂಗಳು ಅಧಿಕಾರ ವಿಸ್ತರಣೆ ಮಾಡುವಂತೆ ಸರ್ಕಾರವನ್ನು ಅವರು ಕೋರಿದ್ದಾರೆ. ಈ ನಡುವೆ ಹೊಸ ಡಿಜಿ-ಐಜಿಪಿ ಆಯ್ಕೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು ತೋರಿದ್ದಾರೆ. ಹೀಗಾಗಿ ಡಿಜಿಪಿ ರೇಸ್‌ನಲ್ಲಿ ಸೇವಾ ಹಿರಿತನ ಮೇರೆಗೆ ಹಾಲಿ ಸಿಐಡಿ ಡಿಜಿಪಿ ಡಾ.ಎಂ.ಎ.ಸಲೀಂ ಹಾಗೂ ಅಗ್ನಿಶಾಮಕ ದಳದ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಹೆಸರು ಕೇಳಿ ಬಂದಿದೆ.
ಇದನ್ನೂ ಓದಿ: ತುಷಾರ್ ಗಿರಿನಾಥ್ ವರ್ಗಾವಣೆ, ಬಿಬಿಎಂಪಿಗೆ ಹೊಸ ಮುಖ್ಯ ಆಯುಕ್ತರು ಯಾರು?
ಸಿಎಂ ಮೇಲೆ ಒತ್ತಡ ತಂತ್ರ: ರಾಜ್ಯದಲ್ಲಿ ಡಿಜಿಪಿ-ಐಜಿ ಅವರ ಕಾಲಾವಧಿ ಕನಿಷ್ಟ ಎರಡು ವರ್ಷಗಳ ಸೇವಾವಧಿ ಇರಬೇಕು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ. ಮೊದಲು 4 ತಿಂಗಳು ಪ್ರಭಾರಿಯಾಗಿದ್ದ ಅಲೋಕ್ ಮೋಹನ್ ಅವರು, ನಂತರ ಕಾಯಂ ಡಿಜಿಪಿಯಾದರು. ನ್ಯಾಯಾಲಯದ ಆದೇಶದಂತೆ ತಮಗೆ ಅಧಿಕಾರಾವಧಿ ವಿಸ್ತರಿಸುವಂತೆ ಮುಖ್ಯಮಂತ್ರಿ ಅವರಿಗೆ ಕೋರಿದ್ದಾರೆ. ಆದರೆ ಅಲೋಕ್ ಅವರ ಕೋರಿಕೆಗೆ ಮುಖ್ಯಮಂತ್ರಿ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.
ಡಿಜಿಪಿ ಹುದ್ದೆಗೆ ಸಲೀಂ ಹಾಗೂ ಪ್ರಶಾಂತ್ ಕುಮಾರ್ ಠಾಕೂರ್ ಯತ್ನಿಸಿದ್ದಾರೆ. ತಮ್ಮ ಪರಿಚಿತರ ಮೂಲಕ ಕೂಡ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಪಹಲ್ಗಾಂ ದಾಳಿಗೆ ಕೇಂದ್ರ ಸರ್ಕಾರದ ವೈಫಲ್ಯ ಕಾರಣ: ಸಿದ್ದರಾಮಯ್ಯ ವಾಗ್ದಾಳಿ!
ಕನ್ನಡಿಗ ಸಲೀಂ ಪದವಿ?:
ಕನ್ನಡ ಭಾಷೆ ಮತ್ತು ಸಂಸ್ಕೃತಿ ಅಸ್ಮಿತೆ ಬಗ್ಗೆ ಗಟ್ಟಿದನಿಯಲ್ಲಿ ಮಾತನಾಡುವ ಸಿದ್ದರಾಮಯ್ಯ ಅವರಿಗೆ ಕನ್ನಡಿಗ ಸಲೀಂ ಅವರನ್ನು ಡಿಜಿಪಿ ಹುದ್ದೆಗೆ ಆಯ್ಕೆ ಮಾಡುವಂತೆ ಕೆಲವರು ಒತ್ತಾಯಿಸಿದ್ದಾರೆ. ಅಲ್ಲದೆ, ಅಲ್ಪಸಂಖ್ಯಾತ ಸಮುದಾಯದ ಹಿರಿಯ ಅಧಿಕಾರಿ ಆಗಿದ್ದಾರೆ. ಸಲೀಂ ಅವರು ಬೆಂಗಳೂರಿನ ಚಿಕ್ಕಬಾಣವಾರದವರು. ಹೀಗಾಗಿ ಸ್ಥಳೀಯರಿಗೆ ಅವಕಾಶ ನೀಡುವಂತೆ ಅಲ್ಪಸಂಖ್ಯಾತ ಸಮುದಾಯದ ಮಂತ್ರಿ ಮತ್ತು ಶಾಸಕರು ಸೇರಿ ಕೆಲವರು ಒತ್ತಾಯಿಸಿದ್ದಾರೆ. ಇನ್ನೊಂದೆಡೆ ಪ್ರಶಾಂತ್ ಕುಮಾರ್ ಅವರು, ತಮ್ಮ ದೆಹಲಿ ಸಂಪರ್ಕ ಬಳಸಿ ಹುದ್ದೆಗೆ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ