
ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ತೀವ್ರ ಅಸಮಾಧಾನ ಹೊರ ಹಾಕಿದೆ. ಹಲವು ಇಲಾಖೆಗಳಲ್ಲಿನ ಕಮಿಷನ್ ದರ ಹಿಂದಿನ ಸರ್ಕಾರಕ್ಕಿಂತ ದುಪ್ಪಟ್ಟಾಗಿದೆ ಎಂದು ಅಸೋಸಿಯೇಷನ್ ಗಂಭೀರ ಆರೋಪ ಮಾಡಿದೆ. ಅಸೋಸಿಯೇಷನ್ ತನ್ನ ಪತ್ರದಲ್ಲಿ, ನಿಮ್ಮ ಸರ್ಕಾರದಿಂದ ನಮಗೆ ಯಾವುದೇ ಪ್ರಯೋಜನವಾಗಿಲ್ಲ. ಗುತ್ತಿಗೆದಾರರಿಗೆ ಸರಕಾರದಿಂದ 33 ಸಾವಿರ ಕೋಟಿ ರೂ. ಬಾಕಿ ಉಳಿದಿದೆ. ಕಳೆದ ಎರಡು ವರ್ಷಗಳಿಂದ ಬಾಕಿ ಹಣ ಬಿಡುಗಡೆ ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಅನೇಕ ಸುತ್ತಿನ ಸಭೆಗಳು ನಡೆದಿವೆ. ಪ್ರತಿಯೊಂದು ಸಭೆಯಲ್ಲೂ ನಮ್ಮನ್ನು ಸಮಾಧಾನಪಡಿಸಿ, ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಲಾಗಿದೆ. ನಾವು ನಿಮಗೆ ಗೌರವ ಕೊಟ್ಟು, ನಿಮ್ಮ ಭರವಸೆಯಿಂದ ತಾಳ್ಮೆಯಿಂದ ಕಾಯುತ್ತಿದ್ದೇವೆ. ಆದರೆ, ಇದುವರೆಗೆ ಯಾವುದೇ ಸ್ಪಷ್ಟ ಫಲಿತಾಂಶ ಕಾಣಲಿಲ್ಲ” ಎಂದು ತಿಳಿಸಿದೆ.
ಪತ್ರದಲ್ಲಿ ಗುತ್ತಿಗೆದಾರರು ಸ್ಪಷ್ಟವಾಗಿ ಉಲ್ಲೇಖಿಸಿರುವಂತೆ, ಕೆಲ ಪ್ರಮುಖ ಇಲಾಖೆಗಳಲ್ಲಿನ ಕಮಿಷನ್ ದರ ಹಿಂದಿನ ಸರ್ಕಾರದ ಅವಧಿಗಿಂತ ಇಂದಿನ ಸರ್ಕಾರದಲ್ಲಿ ಹೆಚ್ಚಾಗಿದೆ. ಅಸೋಸಿಯೇಷನ್ ಈ ಪರಿಸ್ಥಿತಿಯನ್ನು ತೀವ್ರವಾಗಿ ಖಂಡಿಸಿ, ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಗುತ್ತಿಗೆದಾರರು ಇನ್ನೂ ವಿವರಿಸಿರುವಂತೆ, ಬಾಕಿ ಹಣ ಬಿಡುಗಡೆ ಆಗದೆ ಅನೇಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವರು ತಮ್ಮ ಕಾರ್ಯಗಳನ್ನು ನಿಲ್ಲಿಸಲು ಮುಂದಾಗಿದ್ದಾರೆ. ಸರ್ಕಾರದ ಬಾಕಿ ಹಣ ಪಾವತಿಯಾಗದೇ, ಬ್ಯಾಂಕುಗಳ ಸಾಲದ ಒತ್ತಡ, ಉದ್ಯೋಗಿಗಳ ವೇತನ ಸಮಸ್ಯೆ, ಸಾಮಗ್ರಿಗಳ ಪೂರೈಕೆ ತೊಂದರೆ ಇವೆಲ್ಲವೂ ಗುತ್ತಿಗೆದಾರರನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ.
ಅಸೋಸಿಯೇಷನ್ ಪತ್ರದಲ್ಲಿ ಮತ್ತಷ್ಟು ಅಸಮಾಧಾನ ವ್ಯಕ್ತಪಡಿಸಿ, ನಾವು ಯಾವ ಸರ್ಕಾರದ ವಿರುದ್ಧ ಶತ್ರುತ್ವವಿಲ್ಲ. ಆದರೆ, ನಮ್ಮ ಬದುಕು, ನಮ್ಮ ಉದ್ಯಮ, ನಮ್ಮ ಕುಟುಂಬಗಳು ಇದರ ಮೇಲೆ ಅವಲಂಬಿತವಾಗಿವೆ. ನಿಮ್ಮ ಸರ್ಕಾರದಿಂದಲೂ ಯಾವುದೇ ಧನಾತ್ಮಕ ಸ್ಪಂದನೆ ದೊರೆಯದೇ ಇರುವುದರಿಂದ ನಿರಾಶೆ ಹೆಚ್ಚಾಗಿದೆ ಎಂದು ಕಹಿ ಮನಸ್ಸು ಹಂಚಿಕೊಂಡಿದೆ.
ಗುತ್ತಿಗೆದಾರರು ತಮ್ಮ ಪತ್ರದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಸರ್ಕಾರವು ತಕ್ಷಣ ಕ್ರಮ ಕೈಗೊಂಡು ಬಾಕಿ ಹಣ ಬಿಡುಗಡೆ ಮಾಡದಿದ್ದಲ್ಲಿ, ಹಾಗೂ ಕಮಿಷನ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ, ಗುತ್ತಿಗೆದಾರರು ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಕೈಗೊಳ್ಳಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಸೂಚಿಸಿದ್ದಾರೆ.
1) ಕಾಮಗಾರಿಗಳ ಕೈಗೊಳ್ಳುವ 8 ಇಲಾಖೆಗಳಿಂದ ರಾಜ್ಯ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆ ಆಗಿಲ್ಲ
2) 2017-18, 2018-19, 2019-20& 2020-21 ಜಿ.ಎಸ್.ಟಿ.ಯ ಹೆಚ್ಚುವರಿ ಮೊತ್ತವನ್ನು ಗುತ್ತಿಗೆದಾರರಿಗೆ ಪಾವತಿಸುವ ಬಗ್ಗೆ
3. ಖನಿಜ ಮತ್ತು ಭೂ ವಿಜ್ಞಾನ ಇಲಾಖೆಯವರು ಗುತ್ತಿಗೆದಾರರ ಕಾಮಗಾರಿ ಬಿಲ್ಲುಗಳನ್ನು ಪಾವತಿಸುವ ಸಮಯದಲ್ಲಿ, ಎಂ.ಡಿ.ಪಿ.ಸಲ್ಲಿಸದ ಸಂದರ್ಭದಲ್ಲಿ 5 ಪಟ್ಟು ರಾಜಧನ (ರಾಯಲ್ಟಿ) ದಂಡವನ್ನು ವಿಧಿಸುತ್ತಿದ್ದಾರೆ.
4. ಮಾನ್ಯರೇ, ನಿರ್ಮಿತಿ ಕೇಂದ್ರ ಕೆ.ಆರ್.ಐ.ಡಿ.ಎಲ್. (Land Army) ಹಾಗೂ ಇತರೇ ಸಂಸ್ಥೆಗಳು ಜನಪ್ರತಿನಿಧಿಗಳ ಅನುಯಾಯಿಗಳಿಗೆ ಹಾಗೂ ಕಾರ್ಯಕರ್ತರಿಗೆ ನೀಡುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿರುತ್ತಾರೆ.
5. ಪೌರಾಡಳಿತ, ನಗರಾಭಿವೃದ್ಧಿ ಮತ್ತು ನಗರ ಯೋಜನೆ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯಅಧಿಕಾರಿಗಳು ತಮ್ಮ ಆದೇಶವನ್ನು ಮೀರಿ ಟೆಂಡರ್‌ಗಳನ್ನು ಪ್ಯಾಕೇಜ್ ರೂಪದಲ್ಲಿ ಪರಿವರ್ತಿಸಿದ್ದಾರೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ