
ಎಸ್.ಗಿರೀಶ್‌ಬಾಬು
ಬೆಂಗಳೂರು (ಮೇ.27) : ರಾಜ್ಯ ಕಾಂಗ್ರೆಸ್‌ನಲ್ಲೊಂದು ಸೋಜಿಗದ ಬೆಳವಣಿಗೆ ಆರಂಭವಾಗಿದೆ. ಅದು- ಸರ್ಕಾರಕ್ಕೆ ಎರಡೂವರೆ ವರ್ಷವಾಗುವವರೆಗೂ (ನವೆಂಬರ್‌ವರೆಗೂ) ಯಾವುದೇ ರೀತಿಯ ಬೇಡಿಕೆಯೊಂದಿಗೆ ನಮ್ಮ ಬಳಿ ಬರಬೇಡಿ ಎಂದು ಕಾಂಗ್ರೆಸ್ ಹೈಕಮಾಂಡ್ ಸಚಿವ ಸ್ಥಾನವೂ ಸೇರಿದಂತೆ ಪ್ರಮುಖ ಹುದ್ದೆಗಳ ಆಕಾಂಕ್ಷಿಗಳಿಗೆ ಕಟ್ಟಾಜ್ಞೆ ನೀಡಿದೆ.
ಮಜಾ ಎಂದರೆ, ಈ ಕಟ್ಟಾಜ್ಞೆ ಕಿವಿಗೆ ಬೀಳುತ್ತಿದ್ದಂತೆಯೇ ಈ ಹುದ್ದೆಗಳ ಆಕಾಂಕ್ಷಿಗಳು ತೆರೆಮರೆಯ ಚಟುವಟಿಕೆ ತೀವ್ರಗೊಳಿಸಿದ್ದು, ‘ಗಾಡ್ ಫಾದರ್’ಗಳ ಬೆನ್ನು ಹತ್ತತೊಡಗಿದ್ದಾರೆ. ಹೀಗಾಗಿಯೇ ಸಂಪುಟ ಪುನಾರಚನೆ, ಹಿರಿಯರು ಸಚಿವ ಸ್ಥಾನ ಬಿಟ್ಟುಕೊಡಬೇಕು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ ಎಂಬ ಹೇಳಿಕೆಗಳು ಮತ್ತೆ ಕೇಳಿ ಬರತೊಡಗಿವೆ.
ಈ ರೀತಿಯ ಬೆಳವಣಿಗೆಗೆ ಮುಖ್ಯ ಕಾರಣ- ಎರಡೂವರೆ ವರ್ಷದ ಗಡುವು ಮುಗಿದ ನಂತರ ಪ್ರಮುಖ ಬೆಳವಣಿಗೆಗಳು ನಡೆಯಬಹುದು ಎಂಬ ನಿರೀಕ್ಷೆ. ಒಂದು ಮೂಲದ ಪ್ರಕಾರ, ಎರಡೂವರೆ ವರ್ಷದ ನಂತರ ದೊಡ್ಡ ಮಟ್ಟದ ಸಚಿವ ಸಂಪುಟ ಪುನಾರಚನೆಯಾಗಲಿದೆ. ಹಿರಿಯ ಸಚಿವರು (ವಯಸ್ಸಿನಲ್ಲಿ ಹಿರಿಯರು) ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರಭಾವಿ ಸಚಿವರು ಹುದ್ದೆ ತೆರವು ಮಾಡಬೇಕಾಗುತ್ತದೆ. ಈ ಸ್ಥಾನಕ್ಕೆ ಯುವ ಹಾಗೂ ಸಚಿವ ಸ್ಥಾನ ವಂಚಿತರಿಗೆ ಅವಕಾಶ ದೊರೆಯಲಿದೆ.
ಈ ಸುಳಿವಿನ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ನೇರವಾಗಿ ಹೈಕಮಾಂಡ್ ಸಂಪರ್ಕಿಸುತ್ತಿಲ್ಲವಾದರೂ ತಮ್ಮ-ತಮ್ಮ ಗಾಡ್ ಫಾದರ್‌ಗಳ ಬೆನ್ನು ಬೀಳತೊಡಗಿದ್ದಾರೆ. ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುವ ವೇಳೆಗೆ ಅಂದರೆ ನವೆಂಬರ್ ವೇಳೆಗೆ ಬದಲಾವಣೆಯಾಗುವಾಗ ತಮಗೆ ಹುದ್ದೆ ದೊರಕಿಸಿಕೊಡುವಂತೆ ಗಾಡ್ ಫಾದರ್‌ಗಳಿಗೆ ಗಂಟು ಬಿದ್ದಿದ್ದಾರೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ.
ಅರಸು ದಾಖಲೆ ಮುರಿವ ಕನಸು!:
ದೇವರಾಜ ಅರಸು ಅವರು ಕರ್ನಾಟಕದಲ್ಲಿ ಅತಿ ಸುದೀರ್ಘ ಅವಧಿಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ದಾಖಲೆ ಹೊಂದಿದ್ದಾರೆ. ಅರಸು ಅವರು ಏಳು ವರ್ಷ 11 ತಿಂಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಆ ದಾಖಲೆಯನ್ನು ದಾಟಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತುತ ಅವಧಿಯಲ್ಲಿ ಅವಕಾಶವಿದೆ. ಅಂದರೆ, ಸಿದ್ದರಾಮಯ್ಯ ಅವರು 2026ರ ಏಪ್ರಿಲ್ 19 ನಂತರವೂ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆದರೆ ಆಗ ದೇವರಾಜ ಅರಸು ಅವರ ದಾಖಲೆ ಮುರಿಯುತ್ತಾರೆ.
ಇಂತಹದೊಂದು ದಾಖಲೆ ತಮ್ಮ ಹೆಸರಿನಲ್ಲಿ ದಾಖಲಾಗಬೇಕು ಎಂಬ ಆಕಾಂಕ್ಷೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಆಪ್ತರಿಗೆ ಇದೆ ಎನ್ನಲಾಗುತ್ತಿದೆ. ಹೀಗಾಗಿಯೇ ಅವರ ಆಪ್ತ ಬಣದ ಪ್ರಮುಖ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ 5 ವರ್ಷವೂ ಮುಖ್ಯಮಂತ್ರಿಯಾಗಿರುತ್ತಾರೆ ಎಂಬ ಹೇಳಿಕೆ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ.
ಈ ಹೇಳಿಕೆಯ ಹಿಂದಿನ ಮರ್ಮವನ್ನು ಸಚಿವ ಸ್ಥಾನ ಹಾಗೂ ಪ್ರಮುಖ ಹುದ್ದೆಗಳ ಆಕಾಂಕ್ಷಿಗಳು 2 ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಅದು- ಸಚಿವ ಸಂಪುಟ ಪುನಾರಚನೆಯು ಒಂದೋ ಎರಡೂವರೆ ವರ್ಷದ ನಂತರ ನಡೆಯಬಹುದು ಅಥವಾ ದೇವರಾಜ ಅರಸು ದಾಖಲೆ ಮುರಿದ ನಂತರ ಸಂಪುಟ ವಿಸ್ತರಣೆಯಾಗುತ್ತದೆ ಎಂಬುದು.
ಇದು ಬಹುತೇಕ ಖಚಿತ ಎಂದು ಭಾವಿಸಿರುವ ಆಕಾಂಕ್ಷಿಗಳು ಗಾಡ್ ಫಾದರ್‌ಗಳ ಬೆನ್ನು ಹತ್ತತೊಡಗಿದ್ದಾರೆ. ಈ ಮೂಲಗಳ ಪ್ರಕಾರ, ಸಂಪುಟ ಪುನಾರಚನೆ ವೇಳೆ 10ಕ್ಕಿಂತ ಹೆಚ್ಚು ಸಚಿವರ ಸ್ಥಾನ ಪಲ್ಲಟ ಮಾತ್ರವಲ್ಲ, ಮೂರರಿಂದ ನಾಲ್ಕು ಡಿಸಿಎಂ ಹುದ್ದೆ ರಚನೆಯೂ ಆಗುತ್ತದೆ. ಹೀಗಾಗಿಯೇ ತೆರೆಮರೆಯ ಸರ್ಕಸ್ ಭರ್ಜರಿಯಾಗಿ ನಡೆದಿದ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ