ಕಾವೇರಿ ನೀರಿನ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಜನಹಿತವನ್ನು ಮರೆತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ತಮಿಳುನಾಡಿನ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ.
ಬೆಂಗಳೂರು (ಸೆ.27): ರಾಜ್ಯದಲ್ಲಿ ರೈತರು ಹಾಗೂ ವಿವಿಧ ಕನ್ನಡಪರ ಸಂಘಟನೆಗಳಿಂದ ಕಾವೇರಿ ನೀರಿಗಾಗಿ ಹೋರಾಟ ಮಾಡಲಾಗತ್ತಿದೆ. ಇತ್ತೀಚೆಗೆ ಮೈತ್ರಿ ಮಾಡಿಕೊಂಡ ಜೆಡಿಎಸ್- ಬಿಜೆಪಿ ನಾಯಕರು ಇದೇ ಮೊದಲ ಬಾರಿಗೆ ಜಂಟಿಯಾಗಿ ವಿಧಾನಸೌಧದ ಮುಂದೆ ಕಾವೇರಿ ನೀರಿಗಾಗಿ ಹೋರಾಟವನ್ನು ಆರಂಭಿಸಿದ್ದಾರೆ. ಈ ವೇಳೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ ಅವರು, ಕಾಂಗ್ರೆಸ್ ಸರ್ಕಾರ ಜನಹಿತವನ್ನು ಮರೆತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ತಮಿಳುನಾಡಿನ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಕುರಿತು ಮಾಧ್ಯಮಗಳ ಮುಂದೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ ಅವರು, ಮುಂದಿನ ದಿನಗಳಲ್ಲಿ ರೈತರ ಹಿತ ಕಾಯಲು ಬಿಜೆಪಿ ಜೆಡಿಎಸ್ ಒಂದಾಗಿ ಹೋರಾಟ ಮಾಡಲಿದ್ದೇವೆ. ಈ ಸರ್ಕಾರ ಜನಹಿತವನ್ನು ಮರೆತಿದೆ. ತಮಿಳುನಾಡಿನ ಏಜೆಂಟ್ ರೀತಿ ಡಿ.ಕೆ.ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ವರ್ತಿಸುತ್ತಿದ್ದಾರೆ. ನಾವು ಹೋರಾಟ ಮಾಡುವವರಿದ್ದೇವೆ. ನಮ್ಮ ಹೋರಾಟವನ್ನು ಲಘುವಾಗಿ ಪರಿಗಣಿಸಬೇಡಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೋರಾಟ ಮಾಡಲಿದ್ದೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ವಿಧಾನಸೌಧದ ಮುಂದೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ಸಮಸ್ಯೆ ಉದ್ಭವಕ್ಕೆ ರಾಜ್ಯ ಸರ್ಕಾರದ ಬೇಜವಾಬ್ದಾರಿಯೇ ಕಾರಣ: ಸಚಿವೆ ಶೋಭಾ ಕರಂದ್ಲಾಜೆ
ತಮಿಳುನಾಡಿನ ಜೊತೆ ಒಳ್ಳೆಯ ಸಂಬಂಧ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಜೊತೆ ಮಾತಾಡಿ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಬೇಕು. ಇನ್ನು ಕಾವೇರಿ ನೀರು ನಿಯಂತ್ರಣಾ ಸಮಿತಿಯ ಸಭೆ ನಡೆಯುತ್ತಿರುವಾಗ ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಮಂತ್ರಿಯೂ ಆಗಿರುವ ಡಿ.ಕೆ.ಶಿವಕುಮಾರ್ ನಮ್ಮಲ್ಲಿ ಹೆಚ್ಚುವರಿ ನೀರು ಇದೆ ಎಂದು ಮಾತಾಡೋದು ಎಷ್ಟರ ಮಟ್ಟಿಗೆ ಸರಿ..? ಇಂತಹ ಮಾತು ಬಿಟ್ಟು ಸುಪ್ರೀಂಕೋರ್ಟ್ ಮೇಲ್ಮನವಿ ಸಲ್ಲಿಸಬೇಕಿತ್ತು. ಇದನ್ನು ನಾನು ಖಂಡಿಸುತ್ತೇನೆ ಎಂದು ಕಿಡಿಕಾರಿದರು.
ನಂತರ ಪ್ರತಿಭಟನೆ ಕುರಿತು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು, ಇದು ರಾಜಕೀಯಕ್ಕಾಗಿ ಹೋರಾಟ ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಎಂದು ಹೇಳುತ್ತಿದ್ದಾರೆ. ನಾವು ಒತ್ತಡ ಹಾಕಿದ ಮೇಲೆ ಅವರು ಸರ್ವಪಕ್ಷ ಸಭೆ ಕರೆದಿದ್ದರು. ಆದರೆ, ಈ ವೇಳೆ ನಾವು ಕೊಟ್ಟ ಸಲಹೆಯನ್ನೂ ಅವರು ಪಾಲಿಸಲಿಲ್ಲ. ತಮಿಳುನಾಡು ಸರ್ಕಾರದವರು ಕೋರ್ಟ್ ಗೆ ಹೋಗಿದ್ದರು. ನಮ್ಮವರು ಏನು ಮಾಡಲಿಲ್ಲ. ಕೋರ್ಟ್ ಮುಂದೆ ಹೋಗಬೇಕಾದಾಗ ಹೋಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಡಿಎಂಕೆಯ ಬಿ ಟೀಂ: ಮಾಜಿ ಸಿಎಂ ಕುಮಾರಸ್ವಾಮಿ
ರಾಜ್ಯದ ನೀರಾವರಿ ಮಂತ್ರಿಗೆ ಬೆಂಗಳೂರಿನಲ್ಲಿ ವ್ಯವಹಾರ ಮಾಡೋಕೆ ಸಮಯ ಇಲ್ಲ. ಅವರು ಜನರ ರಕ್ಷಣೆ ಹೇಗೆ ಮಾಡ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೇಲೆ ವಾಗ್ದಾಳಿ ಮಾಡಿದರು. ನಮಗೆ 10,000 ಕ್ಯುಸೆಕ್ ನೀರು ಒಳಹರಿವು ಬರ್ತಿದೆ ಎನ್ನುತ್ತಾರೆ. 3,000 ಕ್ಯೂಸೆಕ್ ನೀರನ್ನು ಸಂತೋಷದಿಂದ ಬಿಡ್ತೇವೆ ಎನ್ನುತ್ತಾರೆ. ಇದು ಜವಬ್ದಾರಿ ಮಂತ್ರಿ ಮಾತಾಡೋದಾ? ಇಂತವರನ್ನು ನೀರಾವರಿ ಸಚಿವರನ್ನಾಗಿ ಮಾಡಲಾಗಿದೆ. ಇನ್ನು ಕಾವೇರಿ ನೀರಿನ ವಿಚಾರವಾಗಿ ಪ್ರಧಾನಿ ಮಧ್ಯಪ್ರವೇಶ ಮಾಡೋಕೆ ಆಗಲ್ಲ. ಇದಕ್ಕಾಗಿ ಕಮಿಟಿ ರಚನೆ ಆಗಿದೆ. ಸರ್ವೆ ಮಾಡಬೇಕಿದೆ. ನಮ್ಮವರು ಉಡಾಫೆ ಮಾಡ್ತಿದ್ದಾರೆ. ತಮಿಳುನಾಡು ಎಲ್ಲಾ ಅಧಿಕಾರಿಗಳು ದೆಹಲಿಗೆ ಹೋಗಿ ಕೇಸ್‌ನಲ್ಲಿ ಭಾಗಿ ಆಗ್ತಾರೆ. ನಮ್ಮವರು ಏನು ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.