ಜಾತಿ ಜನಗಣತಿ: 58% ಮುಸ್ಲಿಮರು ನಗರವಾಸಿ, ಹಳ್ಳಿಯಲ್ಲಿ ಎಸ್ಟಿ, ಒಕ್ಕಲಿಗರೆಲ್ಲಿ?

Published : Apr 16, 2025, 05:47 AM ISTUpdated : Apr 16, 2025, 05:51 AM IST
ಜಾತಿ ಜನಗಣತಿ: 58% ಮುಸ್ಲಿಮರು ನಗರವಾಸಿ, ಹಳ್ಳಿಯಲ್ಲಿ ಎಸ್ಟಿ, ಒಕ್ಕಲಿಗರೆಲ್ಲಿ?

ಸಾರಾಂಶ

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿ ಆಧಾರಿತ ಜನಗಣತಿ) ವರದಿಯಲ್ಲಿರುವಂತೆ, ಮುಸ್ಲಿಂ ಸಮುದಾಯ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದೆ. ಇದೇ ವೇಳೆ ಪರಿಶಿಷ್ಟರು, ಒಕ್ಕಲಿಗರು, ಲಿಂಗಾಯತರು ಹಾಗೂ ಕುರುಬರ ಸಂಖ್ಯೆ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲೇ ಹೆಚ್ಚು ಎಂಬ ಅಂಶ ಬೆಳಕಿಗೆ ಬಂದಿದೆ.

ಬೆಂಗಳೂರು (ಏ.16): ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿ ಆಧಾರಿತ ಜನಗಣತಿ) ವರದಿಯಲ್ಲಿರುವಂತೆ, ಮುಸ್ಲಿಂ ಸಮುದಾಯ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದೆ. ಇದೇ ವೇಳೆ ಪರಿಶಿಷ್ಟರು, ಒಕ್ಕಲಿಗರು, ಲಿಂಗಾಯತರು ಹಾಗೂ ಕುರುಬರ ಸಂಖ್ಯೆ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲೇ ಹೆಚ್ಚು ಎಂಬ ಅಂಶ ಬೆಳಕಿಗೆ ಬಂದಿದೆ.

ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ದಾಖಲಿಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಜಾತಿ ಆಧಾರಿತ ಜನಗಣತಿ ಸಿದ್ಧಪಡಿಸಿದೆ. ವರದಿಯಲ್ಲಿ ಯಾವ ಸಮುದಾಯದ ಜನರು ಯಾವ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನೂ ತಿಳಿಸಿದೆ. ರಾಜ್ಯದಲ್ಲಿ ಒಟ್ಟು 76.99 ಲಕ್ಷ ಮುಸಲ್ಮಾನರು ರಾಜ್ಯದಲ್ಲಿದ್ದಾರೆ. ಅದರಲ್ಲಿ 44.63 ಲಕ್ಷ ಜನರು (58%) ನಗರ ಪ್ರದೇಶದಲ್ಲಿ ವಾಸವಿದ್ದು, ಉಳಿದ 32.36 ಲಕ್ಷ ಜನರು (42%) ಗ್ರಾಮೀಣ ಭಾಗದಲ್ಲಿ ನೆಲೆಸಿದ್ದಾರೆ ಎಂದು ತಿಳಿಸಲಾಗಿದೆ. ಅಲ್ಲದೆ, ಒಟ್ಟು ಮುಸ್ಲಿಂ ಸಮುದಾಯವದರು 15.37 ಲಕ್ಷ ಮನೆಗಳಲ್ಲಿ ನೆಲೆಸಿದ್ದು, ನಗರ ಪ್ರದೇಶದಲ್ಲಿಯೇ 9.11 ಲಕ್ಷ ಮನೆಗಳಲ್ಲಿ ಅವರು ವಾಸವಿದ್ದಾರೆ ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಜಾತಿ ಗಣತಿ ವರದಿ ದಂಗಲ್: ತಮ್ಮ ಜಾತಿ ಪರ ವಾದ ಮಂಡನೆಗೆ ಸಚಿವರ ಸಿದ್ಧತೆ!

ಲಿಂಗಾಯತರಿಗಿಂತ ಒಕ್ಕಲಿಗರು ನಗರದಲ್ಲಿ ಹೆಚ್ಚು:

ಜಾತಿ ಆಧಾರಿತ ಜನಗಣತಿಯಲ್ಲಿರುವಂತೆ ರಾಜ್ಯದಲ್ಲಿ 66.35 ಲಕ್ಷ ಲಿಂಗಾಯತ ಸಮುದಾಯದವರು, 61.68 ಲಕ್ಷ ಒಕ್ಕಲಿಗ ಸಮುದಾಯದವರಿದ್ದಾರೆ. ಅದರಲ್ಲಿ 16.61 ಲಕ್ಷ ಲಿಂಗಾಯತ ಸಮುದಾಯದವರು (25%) ನಗರ ಪ್ರದೇಶದಲ್ಲಿ ವಾಸವಿದ್ದರೆ, 16.95 ಲಕ್ಷ ಒಕ್ಕಲಿಗ ಸಮುದಾಯದವರು (27%) ನಗರ ಪ್ರದೇಶದಲ್ಲಿ ವಾಸವಿದ್ದಾರೆ. ಉಳಿದಂತೆ ಗ್ರಾಮೀಣ ಭಾಗದಲ್ಲಿ 49.73 ಲಕ್ಷ (75) ಲಿಂಗಾಯತರು ಮತ್ತು 44.73 ಲಕ್ಷ (73%) ಒಕ್ಕಲಿಗರು ನೆಲೆಸಿದ್ದಾರೆ. ಕುರುಬ ಸಮುದಾಯದ ಒಟ್ಟು ಜನಸಂಖ್ಯೆ 43.72 ಲಕ್ಷ ಎಂದು ಗುರುತಿಸಲಾಗಿದ್ದು, ಅದರಲ್ಲಿ 36 ಲಕ್ಷ (82%) ಗ್ರಾಮೀಣ ಭಾಗದಲ್ಲಿ ಮತ್ತು 7.72 ಲಕ್ಷ (18%) ನಗರ ಪ್ರದೇಶದಲ್ಲಿ ನೆಲೆಸಿರುವುದಾಗಿ ಹೇಳಲಾಗಿದೆ.

ಎಸ್ಸಿ/ಎಸ್ಟಿ ಜನರು ಹಳ್ಳಿಗಳಲ್ಲೇ ಅಧಿಕ

ಜಾತಿ ಗಣತಿಯಲ್ಲಿರುವಂತೆ ಪರಿಶಿಷ್ಟ ಜಾತಿ/ಪಂಗಡ (ಎಸ್ಸಿ/ಎಸ್ಟಿ) ಸಮುದಾಯದವರು ಉಳಿದೆಲ್ಲರಿಗಿಂತ ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದಾರೆ. ಒಟ್ಟಾರೆ 1.17 ಕೋಟಿ ಎಸ್ಸಿ/ಎಸ್ಟಿ ಸಮುದಾಯದವರು ಗ್ರಾಮೀಣ ಭಾಗದಲ್ಲಿದ್ದು, ಅದರಲ್ಲಿ ಎಸ್ಸಿ ಸಮುದಾಯದವರು 80.82 ಲಕ್ಷ ಮತ್ತು ಎಸ್ಟಿ ಸಮುದಾಯದ 36.21 ಲಕ್ಷ ಮಂದಿ ಗ್ರಾಮೀಣ ಭಾಗದಲ್ಲಿ ನೆಲೆಸಿದ್ದಾರೆ. ಹಾಗೆಯೇ, ನಗರ ಪ್ರದೇಶದಲ್ಲಿ 28.47 ಲಕ್ಷ ಎಸ್ಸಿ ಸಮುದಾಯದವರು ಮತ್ತು 6.60 ಲಕ್ಷ ಎಸ್ಟಿ ಸಮುದಾಯದವರು ಸೇರಿ ಒಟ್ಟು 35.07 ಲಕ್ಷ ಮಂದಿ ವಾಸಿಸುತ್ತಿದ್ದಾರೆ.

3.94 ಕೋಟಿ ಮಂದಿ ಗ್ರಾಮಗಳಲ್ಲಿ ವಾಸ

ಜಾತಿ ಆಧಾರಿತ ಜನಗಣತಿ ಪ್ರಕಾರ ಒಟ್ಟಾರೆ 5.98 ಕೋಟಿ ಮಂದಿ ರಾಜ್ಯದಲ್ಲಿದ್ದು, ಅದರಲ್ಲಿ 3.94 ಕೋಟಿ ಜನರು (65%) ಗ್ರಾಮೀಣ ಭಾಗದಲ್ಲಿ ವಾಸವಿದ್ದಾರೆ. ಉಳಿದಂತೆ 2.04 ಕೋಟಿ ಮಂದಿ ನಗರ ಪ್ರದೇಶದಲ್ಲಿ ನೆಲೆಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಅಲ್ಲದೆ, 5.98 ಕೋಟಿ ಜನರು ಒಟ್ಟು 1.35 ಕೋಟಿ ಮನೆಗಳಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಜಾತಿ ಗಣತಿ ವರದಿಗೆ ಹೆಬ್ಬಾಳ್ಕರ್ ಆಕ್ಷೇಪ ಬೆನ್ನಲ್ಲೇ ಇಂದು ಒಕ್ಕಲಿಗರ ಸಭೆ ಕರೆದ ಡಿಕೆಶಿ!

ಎಸ್ಸಿಎಸ್ಪಿ/ಟಿಎಸ್‌ಪಿ ಅನುದಾನ ಹೆಚ್ಚಳ?

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ರಾಜ್ಯದಲ್ಲಿ 5.98 ಕೋಟಿ ಒಟ್ಟು ಜನಸಂಖ್ಯೆಯಿದ್ದರೆ, ಅದರಲ್ಲಿ 1.51 ಕೋಟಿ ಜನರು ಎಸ್ಸಿ/ಎಸ್ಟಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅಲ್ಲದೆ ಒಟ್ಟು ಜನಸಂಖ್ಯೆಯಲ್ಲಿ ಎಸ್ಸಿಗಳ ಸಂಖ್ಯೆ ಶೇ. 18.27 ಮತ್ತು ಎಸ್ಟಿಗಳ ಸಂಖ್ಯೆ ಶೇ. 7.16ರಷ್ಟಿದೆ. ಒಟ್ಟು ಎಸ್ಸಿ/ಎಸ್ಟಿ ಸಮುದಾಯದವರ ಸಂಖ್ಯೆ ಶೇ. 25.43ರಷ್ಟಿದೆ.
ಅಲ್ಲದೆ, ಸದ್ಯ ಜನಸಂಖ್ಯೆ ಆಧಾರದಲ್ಲಿ ಎಸ್ಸಿಎಸ್ಪಿ/ಟಿಎಸ್‌ಪಿ ಕಾಯ್ದೆ ಅಡಿಯಲ್ಲಿ ರಾಜ್ಯ ಬಜೆಟ್‌ನ ಶೇ. 24.1ರಷ್ಟು ಮೊತ್ತವನ್ನು ಎಸ್ಸಿ/ಎಸ್ಟಿ ಸಮುದಾಯಕ್ಕಾಗಿ ನಿಗದಿ ಮಾಡಲಾಗುತ್ತಿದೆ. ಆದರೆ, ಜಾತಿ ಆಧಾರಿತ ಜನಗಣತಿಯಲ್ಲಿ ಎಸ್ಸಿ/ಎಸ್ಟಿ ಸಮುದಾಯದವರ ಸಂಖ್ಯೆಯಲ್ಲಿ ಏರಿಕೆಯಾದ ಕಾರಣ ರಾಜ್ಯ ಬಜೆಟ್‌ನಲ್ಲಿ ಶೇ. 25.43ರಷ್ಟು ಮೊತ್ತವನ್ನು ಎಸ್ಸಿಎಸ್ಪಿ/ಟಿಎಸ್‌ಪಿ ಅನುದಾನ ಕಾಯ್ದಿರಿಸಬೇಕಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್