
ಬೆಂಗಳೂರು (ನ.20): ಕೃಷಿ ಉತ್ಪನ್ನಗಳ ಸಂಸ್ಕೃರಣೆ ಮತ್ತು ಮೌಲ್ಯವರ್ಧನೆ ಮೂಲಕ ಕೃಷಿ ಆದಾಯ ಹೆಚ್ಚಳಕ್ಕೆ ಒತ್ತು ನೀಡಲು 75 ಕೋಟಿ ರು. ವೆಚ್ಚದಲ್ಲಿ ‘ಮುಖ್ಯಮಂತ್ರಿ ಕೃಷಿ ವಿಸ್ತಾರ’ ಯೋಜನೆ ಜಾರಿಗೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿಎಂ ಡಾ.ಜಿ. ಪರಮೇಶ್ವರ್, ಕೃಷಿ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆಗೆ ಒತ್ತು ನೀಡಲು ಸರ್ಕಾರದ ಚಿಂತನೆ ನಡೆಸಿದೆ. ಕೃಷಿ ತಂತ್ರಜ್ಞಾನಗಳ ಮಾರುಕಟ್ಟೆ ಸಂಪರ್ಕ ಬಲಪಡಿಸಲು ಯೋಜನೆ ರೂಪಿಸಲಾಗಿದೆ. 10 ಸಾವಿರ ರೈತ ಕುಟುಂಬಗಳಿಗೆ ಅನುಕೂಲ ಆಗಲಿದ್ದು, 3 ವರ್ಷದಲ್ಲಿ 75 ಕೋಟಿ ರು. ವೆಚ್ಚ ಮಾಡಲಾಗುವುದು. ಪ್ರಸಕ್ತ ಸಾಲಿನಲ್ಲಿ 30 ಕೋಟಿ ರು. ಖರ್ಚು ಮಾಡುತ್ತೇವೆ. ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ಉಪ ಉತ್ಪನ್ನಗಳ ತಯಾರಿಕೆ, ಪರ್ಯಾಯ ಕೃಷಿ ಉದ್ಯಮಗಳ ಸ್ಥಾಪನೆ ಹಾಗೂ ಕೃಷಿ ತ್ಯಾಜ್ಯಗಳ ಸದ್ಬಳಕೆಗೆ ಉತ್ತೇಜನ ನೀಡುವುದು ಇದರ ಉದ್ದೇಶ ಎಂದರು.
- ಹಾಸನ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನಾ ವೆಚ್ಚವನ್ನು 193.65 ಕೋಟಿ ರು.ಗಳಿಂದ 542.96 ಕೋಟಿ ರು.ಗೆ ಪರಿಷ್ಕರಿಸಿ ಹೆಚ್ಚುವರಿ 349.31 ಕೋಟಿ ರು. ಅನುದಾನ ಬಳಕೆ ಹಾಗೂ ಹೆಚ್ಚುವರಿ ಜಮೀನು ಸ್ವಾಧೀನಕ್ಕೆ ಸಂಪುಟ ಅನುಮೋದನೆ.
- ಅಲ್ಪಸಂಖ್ಯಾತ ತಾಂತ್ರಿಕ ಹಾಗೂ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ 25 ಕೋಟಿ ರು. ವೆಚ್ಚದಲ್ಲಿ ಉತ್ತಮ ಗುಣಮಟ್ಟದ 5,000 ಲ್ಯಾಪ್‌ಟಾಪ್ ಖರೀದಿಸಿ ನೀಡಲು ತೀರ್ಮಾನ. 1 ರಿಂದ 10 ರವರೆಗೆ ಗ್ರಾಮೀಣ ವ್ಯಾಸಂಗ ಕಡ್ಡಾಯ.
- ಕರ್ನಾಟಕ ಎಲೆಕ್ಟ್ರಿಕ್ ಬಸ್ಸು ಪ್ರೋ ಗ್ರಾಂ ಅಡಿ 1,700 ಕೋಟಿ ರು. ವೆಚ್ಚದಲ್ಲಿ 2,000 ಬಸ್ಸು ಖರೀದಿಗೆ ತೀರ್ಮಾನ. 1,000 ಬಸ್ಸು ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಸಾರಿಗೆ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 500 ಬಸ್ಸು.
- 1.39 ಲಕ್ಷ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರಿಗೆ ಸಮವಸ್ತ್ರ ಒದಗಿಸಲು 27.97 ಕೋಟಿ ರು.ಗೆ ಅನುಮೋದನೆ.
ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದ ಬಿ.ವಿ. ಗೀತಾ ಅವರನ್ನು ಭ್ರಷ್ಟಾಚಾರ ಮತ್ತು ಅಧಿಕಾರ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲು ಹಾಗೂ ಮುಂದಿನ ವಿಚಾರಣೆ ನಡೆಸಲು ರಾಜ್ಯಪಾಲರಿಗೆ ಶಿಫಾರಸು ಮಾಡಲು ಸಚಿವ ಸಂಪುಟ ತೀರ್ಮಾನಿಸಿದೆ. ಕೆಪಿಎಸ್ಸಿ ಹಗರಣದಲ್ಲಿ ಬಿ.ವಿ. ಗೀತಾ ಅವರ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಅಮಾನತುಗೊಳಿಸಲು ಶಿಫಾರಸು ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ