
ನಾಗರಾಜ ಎಸ್.ಬಡದಾಳ್
ದಾವಣಗೆರೆ (ಏ.7): ಕಾಂಗ್ರೆಸ್‌ನ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ದಾವಣಗೆರೆ ದಕ್ಷಿಣ ಕ್ಷೇತ್ರ ಇದೀಗ ಉಪ ಚುನಾವಣೆ ಹೊಸ್ತಿಲಲ್ಲಿದೆ. ಪಕ್ಷದ ಭದ್ರಕೋಟೆಯಾಗಿರುವ ಈ ಕ್ಷೇತ್ರವನ್ನು ಶಾಮನೂರು ಅನುಪಸ್ಥಿತಿಯಲ್ಲಿ ಉಳಿಸಿಕೊಳ್ಳಲು ಕಾಂಗ್ರೆಸ್ ದಂಡ ನಾಯಕರೇ ಠಿಕಾಣಿ ಹೂಡಿದ್ದರೆ, ಗಗನಕುಸುಮವಾಗಿ ಬಿಟ್ಟಿದ್ದ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಬಿಜೆಪಿ ಅತಿರಥ, ಮಹಾರಥರು ಇಲ್ಲಿ ಬೀಡು ಬಿಟ್ಟಿದ್ದಾರೆ. ಒಟ್ಟಾರೆ ದಕ್ಷಿಣದ ಉಪ ಸಮರ ಕದನ ಕುತೂಹಲ ಕೆರಳಿಸಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರವನ್ನು ಶಾಮನೂರು ಅವರು ಕಾಂಗ್ರೆಸ್‌ನ ಅಭೇದ್ಯ ಕೋಟೆಯಾಗಿ ಪರಿವರ್ತಿಸಿದ್ದರು. ಅವರ ನಿಧನ ಹಿನ್ನೆಲೆಯಲ್ಲಿ ತೆರವಾಗಿರುವ ಈ ಕ್ಷೇತ್ರಕ್ಕೆ ಏ.9ರಂದು ಉಪ ಚುನಾವಣೆ ನಡೆಯುತ್ತಿದೆ. ಕ್ಷೇತ್ರದಲ್ಲಿ ಸದ್ಯ ಮುಸ್ಲಿಮರು ತಮ್ಮ ಸಮುದಾಯಕ್ಕೆ ಟಿಕೆಟ್ ಕೊಟ್ಟಿಲ್ಲವೆಂದು ಮುನಿಸಿಕೊಂಡಿದ್ದು, ಅಲ್ಪಸಂಖ್ಯಾತರ ಮನವೊಲಿಕೆಗೆ ಮುಸ್ಲಿಂ ಮುಖಂಡರಾದ ಸಲೀಂ ಅಹ್ಮದ್, ರಿಜ್ವಾನ್ ಅರ್ಷದ್, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಜೊತೆಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಮೈದಾನಕ್ಕೆ ಇಳಿದಿದ್ದಾರೆ.
ನಮ್ಮ ಸಮುದಾಯಕ್ಕೆ ಟಿಕೆಟ್ ಸಿಗದ ಕಾರಣ ಸಡ್ಡು ಹೊಡೆದು, ಮೈದಾನಕ್ಕಿಳಿದಿದ್ದೇನೆಂದು ಬಂಡಾಯದ ಕೂಗೆಬ್ಬಿಸಿದ್ದ ಸಾದಿಕ್ ಪೈಲ್ವಾನ್ ಬೆಂಗಳೂರಿನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಭೇಟಿ ನಂತರ ಸಮರ್ಥ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಅಂತಿಮ ಕಣದಲ್ಲಿ 25 ಅಭ್ಯರ್ಥಿಗಳಿದ್ದು, ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಬೆಂಬಲಿತ ಅಭ್ಯರ್ಥಿ ಖಾದರ್ ಆದಿಲ್ ಬಾಷಾ, ಎಸ್‌ಡಿಪಿಐನ ಅಫ್ಸರ್ ಕೊಡ್ಲಿಪೇಟೆ ಸೇರಿ 14 ಮುಸ್ಲಿಂ ಅಭ್ಯರ್ಥಿಗಳು ಕಾಂಗ್ರೆಸ್ ನಿದ್ದೆಗೆಡಿಸಿದ್ದಾರೆ.
ಕ್ಷೇತ್ರ ಪುನರ್ವಿಂಗಡಣೆಯಿಂದ 2008ರಲ್ಲಿ ರಚನೆಯಾದ ದಾವಣಗೆರೆ ದಕ್ಷಿಣವನ್ನು ಕಾಂಗ್ರೆಸ್‌ನ ಭದ್ರಕೋಟೆಯಾಗಿ 2008, 2013, 2018 ಹಾಗೂ 2023 ಹೀಗೆ 4 ಚುನಾವಣೆಯಲ್ಲೂ ಶಾಮನೂರು ಕಾಪಾಡಿಕೊಂಡಿದ್ದರು. 3 ಸಲ ಬಿಜೆಪಿ, 1 ಸಲ ಜೆಡಿಎಸ್‌ನಿಂದ ಸ್ಪರ್ಧೆ ಎದುರಾದರೂ ಅಂತಿಮವಾಗಿ ಗೆದ್ದು ಬೀಗಿದ್ದರು. ಮೊದಲ ಸಲ ದಾವಣಗೆರೆ ದಕ್ಷಿಣ ಕ್ಷೇತ್ರ ಶಾಮನೂರು ಇಲ್ಲದ ಉಪ ಚುನಾವಣೆಗೆ ಸಜ್ಜಾಗಿದೆ. ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ದಲಿತ, ಲಿಂಗಾಯತ, ಕುರುಬ, ಮರಾಠ, ನಾಯಕ, ಉಪ್ಪಾರ ಹೀಗೆ ಪ್ರಮುಖ ಸಮುದಾಯಗಳ ಮತಗಳ ಬಾಹುಳ್ಯದ ಕ್ಷೇತ್ರವಿದು.
ಸದ್ಯಕ್ಕೆ ಇಲ್ಲಿ ಮುಸ್ಲಿಮರು, ವೀರಶೈವ ಲಿಂಗಾಯತ ಮತಗಳೇ ನಿರ್ಣಾಯಕ. ಅವಿಭಜಿತ ದಾವಣಗೆರೆ ಕ್ಷೇತ್ರದಲ್ಲಿ 1994 ಮತ್ತು 2004ರ ಚುನಾವಣೆಯಲ್ಲಿ ಗೆದ್ದಿದ್ದ ಶಾಮನೂರು ಕ್ಷೇತ್ರ ಪುನರ್‌ವಿಂಗಡಣೆ ನಂತರ ದಕ್ಷಿಣ ಆಯ್ಕೆ ಮಾಡಿಕೊಂಡು, ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ಅವರಿಗೆ ಉತ್ತರ ಕ್ಷೇತ್ರ ಬಿಟ್ಟುಕೊಟ್ಟಿದ್ದರು.
ಟಿಕೆಟ್ ವಂಚಿತ ಅಲ್ಪಸಂಖ್ಯಾತರ ಮನದಲ್ಲಿ ಏನಿದೆ ಎಂಬುದೇ ಈಗ ಪ್ರಶ್ನೆ. ಕಾಂಗ್ರೆಸ್ ನಾಯಕರು 2-3 ಸಲ ಸಾದಿಕ್ ಪೈಲ್ವಾನ್ ಅವರ ಮನೆಗೆ ಹೋಗಿ, ಮನವೊಲಿಸುವಲ್ಲಿ ಸಫಲರಾಗಿದ್ದರು. ಏ.2ರಂದು ರಾತ್ರಿ ಸಹ ಅಲ್ಪಸಂಖ್ಯಾತರು ಹೆಚ್ಚಾಗಿರುವ ಇಲ್ಲಿನ ಅಕ್ತರ್ ರಜಾ ವೃತ್ತದಲ್ಲಿ ಸಾರ್ವಜನಿಕ ಸಭೆ ಮಾಡಿ, ಕಾಂಗ್ರೆಸ್ ಅಭ್ಯರ್ಥಿ ಸಮರ್ಥಗೆ ಮತ ನೀಡಿ, ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ.
ಮತ್ತೊಂದು ಕಡೆ ಪರಿಶಿಷ್ಟ ಪಂಗಡದ ಯುವ ಮುಖಂಡ ಶ್ರೀನಿವಾಸ ಟಿ.ದಾಸಕರಿಯಪ್ಪಯನ್ನು ಬಿಜೆಪಿ ಕಣಕ್ಕಿಳಿಸಿ, ಮನೆಯೊಂದು ಮೂರು ಬಾಗಿಲಾಗಿದ್ದ ಜಿಲ್ಲಾ ನಾಯಕರಿಗೆ ದಕ್ಷಿಣ ಕ್ಷೇತ್ರ ಗೆಲ್ಲುವ ಟಾಸ್ಕ್ ನೀಡಿದೆ. ಯಶವಂತರಾವ್ ಜಾಧವ್, ಬಿ.ಜಿ.ಅಜಯಕುಮಾರ್, ಎಂ.ಪಿ.ಕೃಷ್ಣಮೂರ್ತಿ ಪವಾರ್, ದೇವರಮನಿ ಶಿವಕುಮಾರ್, ರಾಜನಹಳ್ಳಿ ಶಿವಕುಮಾರ್, ಎಚ್.ಸಿ.ಜಯಮ್ಮ, ಬಿ.ಎಂ.ಸತೀಶ್ ಸೇರಿ 8 ಆಕಾಂಕ್ಷಿಗಳು ತಮ್ಮಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ತಾವೇ ಅಭ್ಯರ್ಥಿಗಳಂತೆ ಕೆಲಸ ಮಾಡುವ ಮಾತು ಕೊಟ್ಟಂತೆ ನಡೆದುಕೊಳ್ಳುತ್ತಿದ್ದಾರೆ. ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಶಾಸಕ ಬಿ.ಪಿ.ಹರೀಶ್, ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ ಬಣಗಳೂ ವೈಮನಸ್ಸು ಮರೆತು, ಶ್ರೀನಿವಾಸ ದಾಸಕರಿಯಪ್ಪ ಪರ ಒಂದಾಗಿವೆ.
ಕಳೆದ ಚುನಾವಣೆಗೆ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ಜಿಲ್ಲಾ ಬಿಜೆಪಿ ನಾಯಕರ ಆಂತರಿಕ ಕಲಹ ಲೋಕಸಭೆ ಚುನಾವಣೆಯಲ್ಲಿ ಸ್ಫೋಟಗೊಂಡಿತ್ತು. ಬಿಜೆಪಿ ಭದ್ರಕೋಟೆಯಾಗಿದ್ದ ದಾವಣಗೆರೆ ಕ್ಷೇತ್ರ ಕಾಂಗ್ರೆಸ್ ಪಾಲಾಗಿದ್ದಕ್ಕೆ ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪ ಮಾಡುತ್ತಾ ಪಕ್ಷದ ಪರಿಸ್ಥಿತಿ ಅಧೋಗತಿಗೆ ಕಾರಣವಾಗಿದ್ದರು.
ಆದರೆ, ಉಪ ಚುನಾವಣೆ ಘೋಷಣೆಯಾಗಿ ಅಭ್ಯರ್ಥಿ ಅಂತಿಮಗೊಂಡ ನಂತರ ಇಡೀ ಬಿಜೆಪಿ ನಾಯಕರ ವರ್ತನೆಯೇ ಬದಲಾಗಿದೆ. ಎಲ್ಲಿ ನೋಡಿದರೂ ಜೊತೆಗೂಡಿ ಪ್ರಚಾರ ಕೈಗೊಂಡಿರುವುದೂ ಕಾಂಗ್ರೆಸ್ಸಿಗೆ ಬಿಸಿ ತುಪ್ಪವಾಗಿದೆ. ಅಚ್ಚರಿಯ, ಅನಿರೀಕ್ಷಿತ, ಜಾಣ್ಮೆಯ ನಡೆ ಪ್ರದರ್ಶಿಸಿದ ಬಿಜೆಪಿ ಹೈಕಮಾಂಡ್, ಎಸ್ಟಿ ಸಮುದಾಯದ ಶ್ರೀನಿವಾಸಗೆ ಟಿಕೆಟ್ ನೀಡಿ ದಕ್ಷಿಣ ಕ್ಷೇತ್ರವನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳುವಂಥ ಕಠಿಣ ಟಾಸ್ಕ್ ವಹಿಸಿದೆ.
ಇನ್ನು ದೋಸ್ತಿ ಪಕ್ಷಕ್ಕೆ ಜೆಡಿಎಸ್ ಸಹ ಬೆನ್ನಿಗೆ ನಿಂತು ಪ್ರಚಾರ ಕೈಗೊಂಡಿದೆ. ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಮತ್ತು ತಂಡ ಶ್ರೀನಿವಾಸ ಪರ ಪ್ರಚಾರ ನಡೆಸಿ, ಶತಾಯಗತಾಯ ದಕ್ಷಿಣವನ್ನು ಎನ್‌ಡಿಎ ವಶಕ್ಕೆ ಪಡೆಯಲು ಹರಸಾಹಸ ಮಾಡುತ್ತಿದ್ದಾರೆ.
ದಾವಣಗೆರೆ ಕ್ಷೇತ್ರ ಪರಿಚಯ
ದಾವಣಗರೆ ಮತ್ತು ಮಾಯಕೊಂಡ ಕ್ಷೇತ್ರಗಳನ್ನು ಜಿಪಂ ಕ್ಷೇತ್ರ ಹಾಗೂ ದಾವಣಗೆರೆ ಹಳೆ ಭಾಗವನ್ನು ಒಳಗೊಂಡಂತೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು 2008ರಂದು ರಚನೆ ಮಾಡಲಾಗಿದೆ.
ಕ್ಷೇತ್ರದ ಒಟ್ಟು ಮತದಾರರು:
ಒಟ್ಟು ಮತದಾರರು 2,31,683
ಪುರುಷ 1,13,654
ಮಹಿಳೆಯರು 1,17,986
ಇತರೆ 43
ನಿರ್ಣಾಯಕ ಜಾತಿ ಮುಸ್ಲಿಂ, ಲಿಂಗಾಯತರು
2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ 27,787 ಮತಗಳಿಂದ ಗೆಲುವು ಸಾಧಿಸಿದ್ದರು.
ಕ್ಷೇತ್ರದ ಜಾತಿವಾರು ಅಂಕಿ-ಅಂಶ:
ದಾವಣಗೆರೆ ದಕ್ಷಿಣದಲ್ಲಿ ಸುಮಾರು 63 ಸಾವಿರ ಮುಸ್ಲಿಮರು, 42 ಸಾವಿರ ಲಿಂಗಾಯತರು, 21 ಸಾವಿರ ಕುರುಬರು, 18 ಸಾವಿರ ಪರಿಶಿಷ್ಟ ಪಂಗಡ, 20 ಸಾವಿರ ಪರಿಶಿಷ್ಟ ಜಾತಿ, 17 ಸಾವಿರ ಮರಾಠರು, 9 ಸಾವಿರ ಜೈನರು, 9 ಸಾವಿರ ಉಪ್ಪಾರರು ಸೇರಿ ಸುಮಾರು 30 ಸಾವಿರ ಇತರೆ ಸಣ್ಣಪುಟ್ಟ ಸಮುದಾಯಗಳಿವೆ.
1.ಕಾಂಗ್ರೆಸ್ಸಿಗಂತು ದಕ್ಷಿಣ ಪ್ರತಿಷ್ಠೆ
ದಿ.ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ಸಿನ ಅಭೇದ್ಯ ಕೋಟೆಯಾಗಿ ದಾವಣಗೆರೆ ದಕ್ಷಿಣ ಕ್ಷೇತ್ರ ಕಾಪಾಡಿಕೊಂಡು ಬಂದಿದ್ದರು. ಸಮರ್ಥ ಎಂ.ಶಾಮನೂರುಗೆ ಕಾಂಗ್ರೆಸ್ ಹೈಕಮಾಂಡ್ ಕಣಕ್ಕಿಳಿಸಿದೆ. ದಕ್ಷಿಣದಲ್ಲಿ ಗೆಲುವು ಸಾಧಿಸುವುದೇ ಕಾಂಗ್ರೆಸ್ಸಿನ ಏಕಮೇವ ಗುರಿ.
2.ಶತಾಯಗತಾಯ ಗೆಲ್ಲಲು ಬಿಜೆಪಿ ಕಸರತ್ತು
ಬಿಜೆಪಿಗೆ ದಕ್ಷಿಣದ ಮೇಲೆ ಪಾರುಪತ್ಯ ತಡೆಗೆ ತಡೆಗೋಡೆ ಆಗಿದ್ದವರು ಶಾಮನೂರು. ಈಗ ಕಾಂಗ್ರೆಸ್ಸಿನ ಕಟ್ಟಾಳು ಇಲ್ಲದ ಉಪ ಚುನಾವಣೆ ಬಿಜೆಪಿಯಲ್ಲಿ ನಿರೀಕ್ಷೆ ಗರಿಗೆದರಿದೆ. ಟಿಕೆಟ್ ವಂಚಿತ ಅಲ್ಪಸಂಖ್ಯಾತರ ಮುನಿಸು, ಅಂತಿಮ ಕಣದಲ್ಲಿ 14 ಮುಸ್ಲಿಂ ಅಭ್ಯರ್ಥಿಗಳಿರುವುದು, ಎನ್‌ಡಿಎ ಮಿತ್ರ ಪಕ್ಷ ಜೆಡಿಎಸ್ ಇಲ್ಲಿ ಬೆನ್ನಿಗೆ ನಿಂತಿರುವುದು, ಬಿಜೆಪಿ ಅಭ್ಯರ್ಥಿಯಾಗಿ ಪರಿಶಿಷ್ಟ ಪಂಗಡದ ಅಚ್ಚರಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಕಣದಲ್ಲಿರುವುದು ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ.
ಅಭ್ಯರ್ಥಿಗಳ ಹಿನ್ನೆಲೆ
ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಎಂ.ಶಾಮನೂರು
ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ. ಸಚಿವ ಎಸ್ಸೆಸ್ ಮಲ್ಲಿಕಾರ್ಜುನ, ಸಂಸದೆ ಡಾ। ಪ್ರಭಾ ದಂಪತಿ ಹಿರಿಯ ಪುತ್ರ. ವಿದೇಶದಲ್ಲಿ ಪದವಿ ಪಡೆದು ಬಂದು, ತನ್ನ ಅಜ್ಜನ ಇಚ್ಛೆಯಂತೆ ದಾವಣಗೆರೆಯಲ್ಲಿ ವ್ಯಾಪಾರ, ವಹಿವಾಟು, ಕೈಗಾರಿಕೆ ನೋಡಿಕೊಳ್ಳುತ್ತಾ, ಸಮಾಜಮುಖಿಯಾಗಿ ಬೆರೆಯುತ್ತಾ ಬಂದ ಅನುಭವ.
ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ
ಜನತಾ ಪರಿವಾರದ ಹಿರಿಯ ಮುಖಂಡ, ದೂಡಾ ಮಾಜಿ ಅಧ್ಯಕ್ಷ ದಿ.ಟಿ.ದಾಸಕರಿಯಪ್ಪ, ರಂಗಮ್ಮ ದಂಪತಿಯ ಕಿರಿಯ ಪುತ್ರ. ದೂಡಾ ಅಧ್ಯಕ್ಷರಾಗಿದ್ದ ದಾಸಕರಿಯಪ್ಪ ಜೆಡಿಎಸ್ ನಾಯಕರಾಗಿದ್ದು, ಶಾಸಕನಾಗುವ ಕನಸು ಈಡೇರಲಿಲ್ಲ. ಒಂದೂವರೆ ವರ್ಷದ ಹಿಂದಷ್ಟೇ ದಾಸಕರಿಯಪ್ಪ ನಿಧನರಾಗಿದ್ದಾರೆ. ಹಿರಿಯ ಮಗ ಗಣೇಶ ದಾಸಕರಿಯಪ್ಪ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ, ಕಿರಿಯ ಮಗ ಶ್ರೀನಿವಾಸ ದಾಸಕರಿಯಪ್ಪ ಈಗ ದಾವಣಗೆರೆ ದಕ್ಷಿಣದ ಬಿಜೆಪಿ ಅಭ್ಯರ್ಥಿ. ಎಂಜಿನಿಯರಿಂಗ್ ಪದವೀಧರ ಶ್ರೀನಿವಾಸ ಯುವ ಉದ್ಯಮಿಯೂ ಹೌದು. ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ