ಸಾರಿಗೆ ನೌಕರರ ಮೇಲೆ ಮತ್ತಷ್ಟು ಕಠಿಣ ಕ್ರಮ!

By Suvarna NewsFirst Published Apr 11, 2021, 7:21 AM IST
Highlights

ಸಾರಿಗೆ ನೌಕರರ ಮೇಲೆ ಮತ್ತಷ್ಟು ಕಠಿಣ ಕ್ರಮ| ಮತ್ತೆ 118 ಸಿಬ್ಬಂದಿ ವಜಾ, 84 ಮಂದಿ ಎತ್ತಂಗಡಿ| 55 ವರ್ಷ ಮೀರಿದವರು ಫಿಟ್ನೆಸ್‌ ಪತ್ರ ನೀಡಬೇಕು

ಬೆಂಗಳೂರು(ಏ.11): ಮುಷ್ಕರ ನಿರತ ಸಾರಿಗೆ ನೌಕರರ ವಿರುದ್ಧ ಇನ್ನಷ್ಟುಬಿಗಿ ಕ್ರಮ ಕೈಗೊಂಡಿರುವ ಸರ್ಕಾರ, ನೂರಾರು ನೌಕರರ ವಜಾ, ವರ್ಗಾವಣೆ ನಿರ್ಧಾರದ ಜತೆಗೆ 52 ವರ್ಷ ಮೀರಿದ ನೌಕರರು ಏ. 12ರೊಳಗೆ ದೇಹದಾಢ್ರ್ಯ ಪ್ರಮಾಣ ಪತ್ರ ಸಲ್ಲಿಸದೆ ಇದ್ದರೆ ಕಾಯಂ ನಿವೃತ್ತಿ ಮಾಡುವ ಎಚ್ಚರಿಕೆ ನೀಡಿದೆ.

ಮುಷ್ಕರದಲ್ಲಿ ಭಾಗಿಯಾಗಿರುವ ನೌಕರರ ವಿರುದ್ಧ ಈಗಾಗಲೇ ಹಲವಾರು ಕ್ರಮಗಳನ್ನು ಜಾರಿ ಮಾಡಿರುವ ಸರ್ಕಾರ ಶನಿವಾರ ಮುಷ್ಕರದ ನೇತೃತ್ವ ವಹಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಸೇರಿದಂತೆ ಹಲವು ಮುಖಂಡರನ್ನು ವಶಕ್ಕೆ ತೆಗೆದುಕೊಂಡಿದೆ. ಜತೆಗೆ, 118 ನೌಕರರ ವಜಾ, 84 ನೌಕರರ ವರ್ಗಾವಣೆ ಮತ್ತು 52 ವರ್ಷ ಮೀರಿದ 1772 ಮಂದಿ ಮಂದಿ ನೌಕರರು ಏ. 12ರೊಳಗೆ ದೇಹದಾಢ್ರ್ಯ ಪ್ರಮಾಣ ಪತ್ರ ಸಲ್ಲಿಸದಿದ್ದರೆ ಕಾಯಂ ನಿವೃತ್ತಿಯ ಎಚ್ಚರಿಕೆ ನೀಡಿದೆ.

ಬೆಳಗಾವಿಯಲ್ಲಿ ರೈತ ಮುಖಂಡರ ಸಭೆ ಕರೆದಿದ್ದ ಕೋಡಿಹಳ್ಳಿ ಚಂದ್ರಶೇಖರ್‌ ಪ್ರಚೋದನಕಾರಿ ಭಾಷಣ ಮಾಡಬಹುದೆಂಬ ಕಾರಣಕ್ಕೆ ಪೊಲೀಸರು ಖಾಸಗಿ ಹೋಟೆಲ್‌ನಲ್ಲಿದ್ದ ಅವರನ್ನು ವಶಕ್ಕೆ ಪಡೆದಿದ್ದಾರೆ.

ಮುಂದುವರೆದ ವಜಾ, ವರ್ಗಾವಣೆ ಕ್ರಮ:

ನೇಮಕಾತಿ ನಿಯಮ ಉಲ್ಲಂಘಿಸಿ ಕಳೆದ ನಾಲ್ಕು ದಿನಗಳಿಂದ ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ಬೆಂಬಲಿಸಿದ್ದ ಆರೋಪದಡಿ 60 ಮಂದಿ ತರಬೇತಿ ನಿರತ ನೌಕರರು ಹಾಗೂ 58 ಮಂದಿ ಪ್ರೊಬೇಷನರಿ ನೌಕರರು ಸೇರಿ 118 ಮಂದಿಯನ್ನು ಬಿಎಂಟಿಸಿ ಶನಿವಾರ ಸೇವೆಯಿಂದ ವಜಾಗೊಳಿಸಿದೆ. ಈ ಮೂಲಕ ಕಳೆದ ಮೂರು ದಿನಗಳಲ್ಲಿ ನಿಗಮದ ಒಟ್ಟು 334 ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಬಿಎಂಟಿಸಿ ಇದುವರೆಗೆ 1484 ಮಂದಿ ತರಬೇತಿ ನಿರತ ನೌಕರರು ಹಾಗೂ 1,293 ಮಂದಿ ಪ್ರೊಬೇಷನರಿ ನೌಕರರಿಗೆ ನೋಟಿಸ್‌ ನೀಡಿ ಕೂಡಲೇ ಕರ್ತವ್ಯಕ್ಕೆ ಹಾಜರಾಗದಿದ್ದರೆ ಸೇವೆಯಿಂದ ವಜಾಗೊಳಿಸುವ ಎಚ್ಚರಿಕೆ ನೀಡಿದೆ.

ಅಲ್ಲದೆ, 55 ವರ್ಷ ಮೇಲ್ಪಟ್ಟನೌಕರರು ನಿಗದಿತ ವೈದ್ಯಕೀಯ ಹಾಗೂ ದೇಹದಾಢ್ರ್ಯತೆ ಪ್ರಮಾಣ ಪತ್ರ ಸಲ್ಲಿಸಿದಲ್ಲಿ ಮಾತ್ರ ಸೇವಾ ಅವಧಿ ವಿಸ್ತರಿಸಲು ಇರುವ ನಿಯಮ ಬಳಸಿಕೊಂಡು 1772 ಮಂದಿಗೆ ನೋಟಿಸ್‌ ನೀಡಿದೆ. ಈ ನೌಕರರು ಏ.12ರೊಳಗೆ ವೈದ್ಯಕೀಯ ಹಾಗೂ ದೇಹದಾಢ್ರ್ಯ ಪ್ರಮಾಣ ಪತ್ರ ಸಲ್ಲಿಸದಿದ್ದರೆ ಸೇವೆಯಿಂದ ಕಾಯಂ ಆಗಿ ನಿವೃತ್ತಿಗೊಳಿಸುವುದಾಗಿ ತಿಳಿಸಿದೆ. ಮತ್ತೊಂದೆಡೆ ಕೆಎಸ್‌ಆರ್‌ಟಿಸಿಯು ಮುಷ್ಕರದಲ್ಲಿ ಪಾಲ್ಗೊಳ್ಳಲು ಪ್ರಚೋದನೆ, ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಬೆದರಿಕೆ, ಬಸ್‌ ಕಾರ್ಯಾಚರಣೆಗೆ ಅಡ್ಡಿ ಸೇರಿದಂತೆ ವಿವಿಧ ಕಾರಣ ನೀಡಿ 73 ಚಾಲಕರು, 11 ಮಂದಿ ತಾಂತ್ರಿಕ ಸಿಬ್ಬಂದಿ ಹಾಗೂ ನಾಲ್ವರು ಸಂಚಾರ ಮೇಲ್ವಿಚಾರಕರು ಸೇರಿ ಒಟ್ಟು 84 ಮಂದಿ ನೌಕರರನ್ನು ಶನಿವಾರ ಶಿಕ್ಷೆಯ ರೂಪದಲ್ಲಿ ಬೇರೆ ವಿಭಾಗಗಳಿಗೆ ವರ್ಗಾವಣೆ ಮಾಡಿದೆ.

1626 ಬಸ್‌ಗಳ ಕಾರ್ಯಾಚರಣೆ:

ಮುಷ್ಕರದ ನಡುವೆಯೂ ಕರ್ತವ್ಯಕ್ಕೆ ಹಾಜರಾದ ಒಂದಷ್ಟುಸಿಬ್ಬಂದಿಯಿಂದ ಶನಿವಾರ 1626 ಬಸ್ಸುಗಳು ಕಾರ್ಯಾಚರಣೆ ನಡೆಸಿದ್ದು ಬಿಟ್ಟರೆ ಉಳಿದ 20,500 ಬಸ್ಸುಗಳು ಶನಿವಾರವೂ ರಸ್ತೆಗಿಳಿಯಲಿಲ್ಲ. ಇದರಿಂದ ಸಮರ್ಪಕ ಬಸ್ಸುಗಳ ವ್ಯವಸ್ಥೆ ಇಲ್ಲದೆ ಶನಿವಾರವೂ ಪ್ರಯಾಣಿಕರು ಪರದಾಡುವಂತಾಯಿತು.

ಯುಗಾದಿ ಪ್ರಯಾಣಿಕರ ಹೆಚ್ಚಳ:

ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಜನರು ತಮ್ಮ ಊರುಗಳತ್ತ ಹೊರಡುತ್ತಿರುವುದರಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಶನಿವಾರ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ ನಿಲ್ದಾಣಗಳತ್ತ ಸಾಗಿ ಬಂದರು. ಭಾನುವಾರ ಮತ್ತು ಸೋಮವಾರ ಪ್ರಯಾಣಿಕರ ಸಂಖ್ಯೆ ಇನ್ನಷ್ಟುಹೆಚ್ಚಳವಾಗಲಿದೆ.

ಸಾರಿಗೆ ನೌಕರರ ಮುಷ್ಕರದಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ತಡೆಯಲು ಸರ್ಕಾರ ರಾಜ್ಯಾದ್ಯಂತ ಖಾಸಗಿ ಬಸ್ಸುಗಳೂ ಸೇರಿದಂತೆ 10 ಸಾವಿರ ಖಾಸಗಿ ವಾಹನಗಳಿಗೆ ರಹದಾರಿ ವಿನಾಯಿತಿ ನೀಡಿ ಕಳೆದ ಬುಧವಾರದಿಂದಲೇ ಕಾರ್ಯಾಚರಣೆ ನಡೆಸುತ್ತಿದೆ. ಇವುಗಳ ಜತೆಗೆ ಪ್ರವಾಸೋದ್ಯಮ ಇಲಾಖೆಯ ಒಂದಷ್ಟುಬಸ್ಸುಗಳನ್ನೂ ಶುಕ್ರವಾರದಿಂದ ಪ್ರಯಾಣಿಕರ ಅನುಕೂಲಕ್ಕೆ ನೀಡಿದೆ. ವಿವಿಧ ನಿಗಮಗಳ ಸೀಮಿತ ಬಸ್ಸುಗಳೂ ಸಂಚರಿಸಲಾರಂಭಿಸಿವೆ. ಇಷ್ಟಾದರೂ ಶನಿವಾರ ಮಧ್ಯಾಹ್ನ 2 ಗಂಟೆವರೆಗೆ ಮೆಜೆಸ್ಟಿಕ್‌, ಸ್ಯಾಟಲೈಟ್‌, ಶಾಂತಿನಗರ, ಯಶವಂತಪುರ ಸೇರಿದಂತೆ ವಿವಿಧ ಬಸ್‌ನಿಲ್ದಾಣಗಳಲ್ಲಿ ಪ್ರಯಾಣಿಕರು ಬಸ್ಸುಗಳಿಗಾಗಿ ಪರದಾಡುತ್ತಿದ್ದುದು ಕಂಡುಬಂತು.

ಶನಿವಾರ ಸಂಜೆವರೆಗೆ 1600 ರಾಜ್ಯ ಸಾರಿಗೆ ಬಸ್ಸುಗಳ ಕಾರ್ಯಾಚರಣೆ ನಡೆಸಲು ಮಾತ್ರ ಸಾಧ್ಯವಾಗಿದೆ. ಇನ್ನು, ಖಾಸಗಿ ಬಸ್ಸುಗಳು ಎಲ್ಲ ಮಾರ್ಗಗಳಿಗೂ ಸಿಗುತ್ತಿಲ್ಲ ಜತೆಗೆ ಸೀಟು ಭರ್ತಿಯಾಗುವವರೆಗೂ ಹೊರಡುವುದಿಲ್ಲ ಎಂಬುದು ಪ್ರಯಾಣಿಕರ ಪ್ರಮುಖ ಆರೋಪ. ಸಾರಿಗೆ ಬಸ್ಸುಗಳಾಗಿದ್ದರೆ ನಿಗದಿತ ಸಮಯಕ್ಕೆ ಹೊರಡುತ್ತಿದ್ದವು. ಸಮಯಕ್ಕೆ ಸರಿಯಾಗಿ ಊರು ಸೇರಬಹುದಿತ್ತು ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದರು.

click me!