ಜಿಲ್ಲೆಗೆ ಕಳೆದ ಬಜೆಟ್‌ನಲ್ಲಿ ದಕ್ಕಿದ್ದು, ಈ ಬಾರಿಯ ಬಜೆಟ್‌ನಲ್ಲಿ ಕೈಬಿಡಲಾಗಿದೆ. ಇನ್ನು ಅದೇ ಹಳೆ ಯೋಜನೆಗಳನ್ನು ಮತ್ತೆ ಘೋಷಣೆ ಮಾಡಲಾಗಿದೆ. ಜಾನಪದ ಲೋಕ ನಿರ್ಮಾಣ ಕುರಿತು ಪ್ರಸ್ತಾಪ ಮಾಡಿದ್ದೊಂದೇ ಹೊಸ ಘೋಷಣೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ (ಜು.8) : ಜಿಲ್ಲೆಗೆ ಕಳೆದ ಬಜೆಟ್‌ನಲ್ಲಿ ದಕ್ಕಿದ್ದು, ಈ ಬಾರಿಯ ಬಜೆಟ್‌ನಲ್ಲಿ ಕೈಬಿಡಲಾಗಿದೆ. ಇನ್ನು ಅದೇ ಹಳೆ ಯೋಜನೆಗಳನ್ನು ಮತ್ತೆ ಘೋಷಣೆ ಮಾಡಲಾಗಿದೆ. ಜಾನಪದ ಲೋಕ ನಿರ್ಮಾಣ ಕುರಿತು ಪ್ರಸ್ತಾಪ ಮಾಡಿದ್ದೊಂದೇ ಹೊಸ ಘೋಷಣೆ.
ಇದು ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಕೊಪ್ಪಳಕ್ಕಾದ ಲಾಭ-ನಷ್ಟದ ಲೆಕ್ಕಾಚಾರದ ಹೀಗಿದೆ.
Karnataka budget 2023: ಉತ್ತರ ಕರ್ನಾಟಕಕ್ಕೆ ಮತ್ತೊಮ್ಮೆ ನಿರಾಸೆ, ಹೇಳಿಕೊಳ್ಳುವಂಥ ಯೋಜನೆ ಇಲ್ಲ
ಜನಪದ ಲೋಕ ನಿರ್ಮಾಣ:
ರಾಮನಗರÜ ಜನಪದ ಲೋಕ ಮಾದರಿಯಲ್ಲಿಯೇ ಕೊಪ್ಪಳದಲ್ಲಿ ನೂತನ ಜನಪದ ಲೋಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅಸ್ತು ಎಂದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರ ಕನಸಿನ ಈ ಯೋಜನೆ ಸಹಜವಾಗಿಯೇ ಕೊಪ್ಪಳ ಜಿಲ್ಲೆಯಲ್ಲಿ ತಲೆ ಎತ್ತಲಿದೆ. ಆದರೆ, ಇದಕ್ಕಾಗಿ ಅನುದಾನ ಮೀಸಲು ಇಟ್ಟಿಲ್ಲ ಎನ್ನುವುದೇ ಬೇಸರದ ಸಂಗತಿ. ಇದು ಈ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಗೆ ಘೋಷಣೆಯಾಗಿರುವ ಏಕೈಕ ನೂತನ ಯೋಜನೆ.
ಕೆರೆ ತುಂಬಿಸುವ ಯೋಜನೆ ಘೋಷಣೆ ಮಾಡಲಾಗಿದೆ. ಆದರೆ, ಇದು ಈ ಹಿಂದಿನ ಬಜೆಟ್‌ನಲ್ಲಿ ಘೋಷಣೆಯಾಗಿ ಜಾರಿಯಾಗುತ್ತಿರುವ ಯೋಜನೆ. ನಾಲ್ಕಾರು ಜಿಲ್ಲೆಗಳಲ್ಲಿ ಕೆರೆ ತುಂಬಿಸುವ ಯೋಜನೆ ಘೋಷಣೆ ಮಾಡಲಾಗಿದ್ದು, ಅದರಲ್ಲಿ ಕೊಪ್ಪಳ ಜಿಲ್ಲೆಯೂ ಒಂದು ಎನ್ನುವುದು ವಿಶೇಷ.
450 ಹಾಸಿಗೆಯ ಆಸ್ಪತ್ರೆ ನಿರ್ಮಾಣದ ಘೋಷಣೆಯಾಗಿದೆ. ಆದರೆ, ಈಗಾಗಲೇ ಕೊಪ್ಪಳ ಬಳಿ ಕಿಮ್ಸ್ ಅಡಿಯಲ್ಲಿ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು, ಈಗ ಘೋಷಣೆಯಾಗಿರುವ 450 ಹಾಸಿಗೆಯ ಆಸ್ಪತ್ರೆ ಪ್ರತ್ಯೇಕ ಆಸ್ಪತ್ರೆಯೇ ಎನ್ನುವ ಬಗ್ಗೆ ನಿಖರ ಮಾಹಿತಿ ಇಲ್ಲ.
ನವಲಿ ಸಮಾಂತರ ಜಲಾಶಯ:
ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬುತ್ತಿರುವುದರಿಂದ ನೀರು ಸಂಗ್ರಹ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಇದಕ್ಕೆ ಪರಿಹಾರವಾಗಿ ನವಲಿ ಸಮಾಂತರ ಜಲಾಶಯ ನಿರ್ಮಾಣಕ್ಕೆ ಈ ಹಿಂದಿನ ಸರ್ಕಾರವೇ ಅಸ್ತು ಎಂದು ಸುಮಾರು .1 ಸಾವಿರ ಕೋಟಿ ಘೋಷಣೆ ಮಾಡಿತ್ತು. ಆದರೆ, ಅದನ್ನು ಡಿಪಿಆರ್ ಮಾಡುವ ಕಾರ್ಯವೂ ಆಗಿದ್ದು ಅಷ್ಟಕಷ್ಟೇ. ಉಳಿದಂತೆ ಯಾವ ಪ್ರಗತಿಯೂ ಕಾಣಲೇ ಇಲ್ಲ. ಈಗ ಪುನಃ ಈ ಕುರಿತು ಪ್ರಸ್ತಾಪ ಮಾಡಲಾಗಿದೆ. ಆಂಧ್ರ, ತೆಲಂಗಾಣ ಸರ್ಕಾರಗಳೊಂದಿಗೆ ಚರ್ಚಿಸಿ ಯೋಜನೆ ಅನುಷ್ಠಾನ ಮಾಡುವ ಕುರಿತು ಪ್ರಸ್ತಾಪ ಮಾಡಲಾಗಿದೆ.
ದಕ್ಕಿದ್ದು ಕೈ ಜಾರಿತೆ !:
ಕಳೆದ ಬಾರಿ ಬಿಜೆಪಿ ಸರ್ಕಾರ ಮಂಡನೆ ಮಾಡಿದ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಒಂದಷ್ಟುಯೋಜನೆಗಳ ಕುರಿತು ಪ್ರಸಕ್ತ ಕಾಂಗ್ರೆಸ್ ಸರ್ಕಾರ ಮಂಡನೆ ಮಾಡಿರುವ ಬಜೆಟ್‌ನಲ್ಲಿ ಕೈ ಬಿಟ್ಟಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.
ಕೊಪ್ಪಳ ಜಿಲ್ಲೆಗೆ ಮಂಜೂರಾಗಿದ್ದ ವಿಮಾನ ನಿಲ್ದಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಇನ್ನೇನು ಪ್ರಾರಂಭವಾಗಬೇಕಾಗಿದೆ. ಆದರೆ, ಈ ಕುರಿತು ಪ್ರಸಕ್ತ ಬಜೆಟ್‌ನಲ್ಲಿ ಪ್ರಸ್ತಾಪವೇ ಇಲ್ಲವಾದ್ದರಿಂದ ವಿಮಾನ ನಿಲ್ದಾಣ ನಿರ್ಮಾಣ ಕೈಬಿಡಲಾಯಿತೇ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
10-12 ವರ್ಷಗಳ ಹಿಂದೆಯೇ ಲೋಕಾರ್ಪಣೆಗೊಂಡಿರುವ ಸಿಂಗಟಾಲೂರು ಏತನೀರಾವರಿ ಯೋಜನೆಯಲ್ಲಿ ಕೊಪ್ಪಳ ಜಿಲ್ಲೆಗೆ ಇದುವರೆಗೂ ಹನಿ ನೀರು ದಕ್ಕಿಲ್ಲ. ಇದನ್ನು ಕಳೆದ ಸರ್ಕಾರ ಮಧ್ಯಪ್ರದೇಶ ಮಾದರಿಯಲ್ಲಿ ಜಾರಿ ಮಾಡುವುದಾಗಿ ಹೇಳಿದ್ದು, ಈ ಬಾರಿ ಬಜೆಟ್‌ನಲ್ಲಿ ಪ್ರಸ್ತಾಪವೇ ಮಾಡಿಲ್ಲ. ಹಾಗಾದರೆ ಸಿಂಗಟಾಲೂರು ಏತ ನೀರಾವರಿ ಯೋಜನೆ ಜಾರಿ ಏನಾಗುತ್ತದೆ ಎನ್ನುವುದೇ ಈಗಿರುವ ಪ್ರಶ್ನೆ.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಇರುವ ಪ್ರವಾಸಿ ತಾಣಗಳ ಅಭಿವೃದ್ಧಿ ಮಾಡುವ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪ ಮಾಡಲಾಗಿದೆ. ಆದರೆ, ಅದರಲ್ಲಿ ಕೊಪ್ಪಳ ಜಿಲ್ಲೆಯ ಯಾವ ಪ್ರವಾಸಿ ತಾಣಗಳ ಪ್ರಸ್ತಾಪ ಇಲ್ಲ. ವಿಶ್ವದ ಗಮನ ಸೆಳೆಯುತ್ತಿರುವ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಯ ಪ್ರಸ್ತಾಪ ಮಾಡಿಲ್ಲ, ಈ ಹಿಂದೆ ಬಜೆಟ್‌ನಲ್ಲಿ ಘೋಷಣೆ ಮಾಡಿದ ನೂರು ಕೋಟಿ ಯೋಜನೆ ಮಂದುವರೆಸುವ ಕುರಿತು ಪ್ರಸ್ತಾಪ ಮಾಡಿಲ್ಲ.
ಪ್ರೇಕ್ಷಣೀಯ ಸ್ಥಳ ಭಿವೃದ್ಧಿ?
ಇದಲ್ಲದೆ ಇಟಗಿ ಮಹಾದೇವ ದೇವಾಲಯ, ಹುಲಿಗೆಮ್ಮ ದೇವಸ್ಥಾನ, ಕನಕಗಿರಿಯ ಕನಕಾಚಲಪತಿ ದೇವಸ್ಥಾನ, ಆನೆಗೊಂದಿ, ಅಂಜನಾದ್ರಿ, ಪಂಪಾ ಸರೋವರ ಸೇರಿದಂತೆ ಯಾವೊಂದು ಸ್ಥಳಗಳ ಅಭಿವೃದ್ಧಿಯ ಕುರಿತು ಪ್ರಸ್ತಾಪ ಮಾಡದೇ ಇರುವುದು ಜಿಲ್ಲೆಯ ಜನರ ಕೆಂಗಣ್ಣಿಗೆ ಗುರಿಯಾಗಿದೆ.
Karnataka monsoon: ಮುಂಗಾರು ಬಿತ್ತೋಣವೇ, ಹಿಂಗಾರಿಗೆ ಹಾರೋಣವೇ? ಗೊಂದಲದಲ್ಲಿ ರೈತರು!
ಇನ್ನು ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಕೊಪ್ಪಳದಲ್ಲಿ ಪ್ರಾರಂಭಿಸುವ ಕುರಿತು ಸಾರ್ವಜನಿಕರು ಅಭಿಯಾನ ಪ್ರಾರಂಭಿಸಿದ್ದರು. ಅದ್ಯಾವುದು ಸಹ ಪ್ರಸ್ತಾಪವಾಗಿಲ್ಲ, ಹೀಗೆ ಪ್ರಸಕ್ತ ಸರ್ಕಾರ ಮಂಡನೆ ಮಾಡಿರುವ ಬಜೆಟ್ ಅತ್ಯಂತ ನಿರಾಶದಾಯಕವಾಗಿರುವುದು ಜಿಲ್ಲೆಯ ಜನರ ಪಾಲಿಗೆ ಬೇಸರ ಮೂಡಿಸಿದೆ.