
ತುಮಕೂರು (ಫೆ.17) : ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕುರಿತು ಫೆ.20ರೊಳಗೆ ಉತ್ತರ ಸಿಗಲಿದೆ. ಈ ಬಗ್ಗೆ ನಾನು ಹಿಂದೆಯೇ ಹೇಳಿದ್ದೇನೆ. ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆ ದೆಹಲಿಯಲ್ಲಿ ನಡೆಯುತ್ತಿದ್ದು, ಜಿಲ್ಲಾಧ್ಯಕ್ಷರ ನೇಮಕಾತಿ ಆದ ಮೇಲೆ ರಾಜ್ಯಾಧ್ಯಕ್ಷರ ವಿಚಾರ ಗೊತ್ತಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ತುಮಕೂರು ಸಮೀಪದ ಬೆಳ್ಳಾವಿ ಕಾರದ ಮಠದಲ್ಲಿ ಶ್ರೀಗಳ ಗದ್ದುಗೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗುವುದಕ್ಕೂ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಯಾವಾಗ ಬೇಕಾದರೂ ಕೇಂದ್ರದ ವರಿಷ್ಠರು ರಾಜ್ಯಕ್ಕೆ ಬರಬಹುದು. ಎಲ್ಲಾ ಶಾಸಕರ ಜೊತೆ ಚರ್ಚಿಸಿ, ರಾಜ್ಯಾಧ್ಯಕ್ಷರ ಬಗ್ಗೆ ಅವರು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ನೋಟಿಸ್ ಕೊಡುವುದಕ್ಕೆ ವಿಜಯೇಂದ್ರಗೆ ತಾಕತ್ ಇಲ್ಲ ಎಂಬ ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ವಿಜಯೇಂದ್ರ, ರಾಜಣ್ಣನವರು ನಮ್ಮ ಪಕ್ಷದವರಾ? ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಯತ್ನಾಳ್‌ಗೆ ಈಗಾಗಲೇ ಕೇಂದ್ರ ಶಿಸ್ತು ಸಮಿತಿ ನೋಟಿಸ್ ನೀಡಿದ್ದು, ಉತ್ತರಿಸಲು 72 ಗಂಟೆಗಳ ಗಡುವು ಕೂಡ ಇತ್ತು. ನಮ್ಮ ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ: ನೋಟಿಸ್ ಬಂದಿಲ್ಲ, ಬಂದರೂ ಉತ್ತರ ಕೊಡೋಲ್ಲ, ಇವಕ್ಕೆಲ್ಲ ಹೆದರುವ ಮಗ ನಾನಲ್ಲ ಎಂದ ಯತ್ನಾಳ್!
ಬಳಿಕ, ಕಾರ್ಯಕ್ರಮದಲ್ಲಿ ಮಾತನಾಡಿ, ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ಮಠದ ಅಭಿವೃದ್ಧಿಗಾಗಿ ಈ ಕ್ಷೇತ್ರಕ್ಕೆ ಅನುದಾನವನ್ನು ಕೊಟ್ಟಿದ್ದರು. ಯಡಿಯೂರಪ್ಪನವರಿಗೆ ತೊಂದರೆಯಾದಾಗಲೆಲ್ಲ ಈ ನಾಡಿನ ಮಠ-ಮಾನ್ಯಗಳು ಅವರಿಗೆ ಜೊತೆಯಾಗಿ ನಿಂತಿವೆ ಎಂದರು.
ರಾಜಕೀಯದಲ್ಲಿ ನನ್ನ ಗುರಿ ಸ್ಪಷ್ಟವಾಗಿದೆ. ನನ್ನ ರಾಜಕೀಯ ಗುರು ಯಡಿಯೂರಪ್ಪನವರು. ಯಡಿಯೂರಪ್ಪನವರಿಂದ ರಾಜಕೀಯ ಕಲಿತವನು ನಾನು. ಯಡಿಯೂರಪ್ಪನವರು ಏನೇ ಸವಾಲುಗಳು ಬಂದರೂ ಹೊರಗಡೆ ತೋರಿಸುತ್ತಿರಲಿಲ್ಲ. ಮೊದಲ ಬಾರಿ ಶಿಕಾರಿಪುರದ ಜನರ ಆಶೀರ್ವಾದದಿಂದ ಶಾಸಕನಾಗಿದ್ದೇನೆ. ನಾನು ಕಳೆದ ಒಂದು ವರ್ಷದಲ್ಲಿ ಅನೇಕ ಪಾಠಗಳನ್ನು ಕಲಿತಿದ್ದೇನೆ. ನಾನು ರಾಜಕಾರಣದಲ್ಲಿ ಈಗ ತಾನೇ ಬೆಳೆಯುತ್ತಿರುವವನು. ಹೀಗಾಗಿ, ಎಡವುವುದು ಸಹಜ ಎಂದು ವೇದಿಕೆ ಮೇಲಿದ್ದ ಹರಗುರು ಚರಮೂರ್ತಿಗಳಿಗೆ ಕೈ ಮುಗಿದರು.
ಇದನ್ನೂ ಓದಿ: ಬಿವೈ ವಿಜಯೇಂದ್ರ ಪರ ಬ್ಯಾಟ್ ಬೀಸಿದ ಶಾಸಕ ಸುರೇಶ್ ಗೌಡ | Tumakuru Rural MLA Suresh Hits Back Yatnal |
ನಮ್ಮ ದೇಶಕ್ಕೆ ಹಿಂದೆ ಅಮೆರಿಕ ಸೇರಿ ಮುಂದುವರಿದ ದೇಶಗಳು ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿರಲಿಲ್ಲ. ಬೇರೆ ದೇಶಗಳಲ್ಲಿ ಭಾರತೀಯರನ್ನು ಭಿಕ್ಷುಕರಂತೆ ಕಾಣುತ್ತಿದ್ದರು. ಆದರೆ, ಇಂದು ಭಾರತೀಯರು ಯಾವುದೇ ದೇಶಕ್ಕೆ ಹೋದರೂ ತಲೆ ಎತ್ತಿ ನಡೆಯುವಂತೆ ಆಗಿದೆ. ವಿದೇಶಗಳಲ್ಲಿ ಪ್ರತಿಯೊಬ್ಬರಿಗೂ ಗೌರವ ಸಿಗುತ್ತಿರುವುದಕ್ಕೆ ಕಾರಣ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು. ಇದೀಗ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಆಗಿದೆ ಎಂದರು.
ಆಧುನಿಕ ಜಗತ್ತು 19ನೇ ಶತಮಾನವನ್ನು ರಷ್ಯಾದ ಶತಮಾನವೆಂದು, 20ನೇಯದ್ದನ್ನು ಅಮೆರಿಕದ ಶತಮಾನ ಎನ್ನುತ್ತಿತ್ತು. ಇದೀಗ 21ನೇ ಶತಮಾನವನ್ನು ಭಾರತದ ಶತಮಾನ ಎನ್ನುವಂತಾಗಿದೆ ಎಂದು ಹೇಳಿದರು.
ಈಗಷ್ಟೇ ಬೆಳೆಯುತ್ತಿದ್ದೇನೆ, ಎಡವುವುದು ಸಹಜ
ನಾನು ರಾಜಕಾರಣದಲ್ಲಿ ಈಗ ತಾನೇ ಬೆಳೆಯುತ್ತಿರುವವನು. ಹೀಗಾಗಿ, ಎಡವುವುದು ಸಹಜ. ರಾಜಕೀಯದಲ್ಲಿ ನನ್ನ ಗುರಿ ಸ್ಪಷ್ಟವಾಗಿದೆ. ನನ್ನ ರಾಜಕೀಯ ಗುರು ಯಡಿಯೂರಪ್ಪನವರು. ಯಡಿಯೂರಪ್ಪನವರಿಂದ ರಾಜಕೀಯ ಕಲಿತವನು ನಾನು.
- ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ