ರಾಜಕೀಯ ಲಾಭಕ್ಕಾಗಿ ದಸರಾ ಹಬ್ಬದ ಸಂಪ್ರದಾಯವನ್ನು ಬದಲಾಯಿಸಬೇಡಿ: ಕರವೇ ನಾರಾಯಣಗೌಡ

Published : Sep 03, 2025, 08:56 AM IST
TA Narayana Gowda

ಸಾರಾಂಶ

ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರ ಹೆಸರನ್ನು ರಾಜ್ಯ ಸರ್ಕಾರ ಘೋಷಿಸಿದ ಬಗ್ಗೆ ಪ್ರತಿಕ್ರಿಯಿಸಿ, ಭುವನೇಶ್ವರಿಯನ್ನು ದೇವಿಯಾಗಿ ಪೂಜಿಸುವ ಪದ್ಧತಿ ಇಂದಿನದಲ್ಲ.

ಹಾಸನ (ಸೆ.03): ಏಳು ಕೋಟಿ ಕನ್ನಡಿಗರು ಭುವನೇಶ್ವರಿಯನ್ನು ನಾಡದೇವತೆ ಎಂದು ಒಪ್ಪಿಕೊಂಡಿದ್ದಾರೆ. ಯಾರೋ ಒಬ್ಬರು ಒಪ್ಪಿಕೊಳ್ಳದಿದ್ದರೆ ಅದನ್ನು ನಾನು ಪರಿಗಣನೆ ಮಾಡುವುದಿಲ್ಲ. ಇಂದು ಭುವನೇಶ್ವರಿಯನ್ನು ಒಪ್ಪದವರು, ನಾಳೆ ಚಾಮುಂಡೇಶ್ವರಿಯನ್ನೂ ಒಪ್ಪದಿರುವ ಆತಂಕವಿದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ.

ನಗರದಲ್ಲಿ ಹಮ್ಮಿಕೊಂಡಿದ್ದ ಕರವೇ ಜಿಲ್ಲಾ ಕಾರ್ಯಕಾರಿಣಿ ಸಭೆಗೂ ಮೊದಲು ಮಾಧ್ಯಮದೊಂದಿಗೆ ಅವರು ಮಾತನಾಡಿದರು. ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರ ಹೆಸರನ್ನು ರಾಜ್ಯ ಸರ್ಕಾರ ಘೋಷಿಸಿದ ಬಗ್ಗೆ ಪ್ರತಿಕ್ರಿಯಿಸಿ, ಭುವನೇಶ್ವರಿಯನ್ನು ದೇವಿಯಾಗಿ ಪೂಜಿಸುವ ಪದ್ಧತಿ ಇಂದಿನದಲ್ಲ. ಬನವಾಸಿ ರಾಜಮನೆತನದ ಕಾಲದಿಂದಲೇ ಭುವನೇಶ್ವರಿಯು ಕನ್ನಡಿಗರ ನಂಬಿಕೆಯ ಕೇಂದ್ರವಾಗಿದ್ದಾಳೆ. ಇಂದು ಭುವನೇಶ್ವರಿಯನ್ನು ಒಪ್ಪದವರು ನಾಳೆ ಚಾಮುಂಡೇಶ್ವರಿ ಬಗ್ಗೆಯೂ ಇದೇ ರೀತಿಯಲ್ಲಿ ಮಾತನಾಡಬಹುದು ಬಾನು ಮುಷ್ತಾಕ್‌ ಬಗ್ಗೆ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು.

ಕನ್ನಡ ತಾಯಿ ಭುವನೇಶ್ವರಿಯ ಬಗ್ಗೆ ಕೆಲವರು ಲಘುವಾಗಿ ಮಾತನಾಡುವುದು ಬೇಸರದ ಸಂಗತಿ. ಮೈಸೂರು ದಸರಾ, ಮಹಾರಾಜರ ಪರಂಪರೆಯ ಹಬ್ಬ. ಚಾಮುಂಡೇಶ್ವರಿ ಆ ಹಬ್ಬದ ಆರಾಧ್ಯ ದೇವತೆ. ಭುವನೇಶ್ವರಿ ಅಥವಾ ಚಾಮುಂಡೇಶ್ವರಿ ಕುರಿತಂತೆ ತೀರಾ ಅಸಮರ್ಪಕವಾಗಿ ಮಾತನಾಡಿದರೆ ಅದು ಕನ್ನಡಿಗರ ಭಾವನೆಗೆ ಧಕ್ಕೆ ತರುತ್ತದೆ ಎಂದು ಎಚ್ಚರಿಕೆ ನೀಡಿದರು.

‘ನೀವು ದಸರಾ ಉದ್ಘಾಟನೆ ಮಾಡುವುದಕ್ಕೆ ನಮಗೆ ಭಿನ್ನಾಭಿಪ್ರಾಯವಿಲ್ಲ. ಆದರೆ, ನಿಮ್ಮ ಕೆಲ ಹೇಳಿಕೆಗಳು ಕನ್ನಡಿಗರಿಗೆ ಅವಮಾನ ತರುವಂತಿವೆ. ಏಳು ಕೋಟಿ ಕನ್ನಡಿಗರ ಭಾವನೆಗೆ ಧಕ್ಕೆ ತರುವುದು ಸೂಕ್ತವಲ್ಲ. ಅಂತಹ ಹೇಳಿಕೆಗಳಿಂದ ದೂರ ಉಳಿದು, ದಸರಾ ಉದ್ಘಾಟನೆ ಮಾಡಿದರೆ ತಪ್ಪಿಲ್ಲ. ಹೀಗಾಗಿ, ಸಂಪ್ರದಾಯ ಮತ್ತು ಕನ್ನಡ ತಾಯಿಯ ಬಗ್ಗೆ ಗೌರವ ಕಾಪಾಡಿ’ ಎಂದು ಮುಷ್ತಾಕ್‌ಗೆ ನಾರಾಯಣಗೌಡ ಮನವಿ ಮಾಡಿದರು.

ದಸರಾ ಉದ್ಘಾಟನೆಗೆ ಯಾರಾದರೂ ಹೋಗಲಿ, ನಾನು ಅವರಿಗೆ ಕುಂಕುಮ, ಬಳೆ ಹಾಕಿಕೊಂಡೇ ಹೋಗಬೇಕು ಎಂದು ಹೇಳುವುದಿಲ್ಲ. ಯಾವ ಧರ್ಮದವರೇ ಆಗಲಿ, ಮತ್ತೊಂದು ಧರ್ಮದವರ ಸಂಪ್ರದಾಯವನ್ನು ಗೌರವಿಸಿ ಅರ್ಥ ಮಾಡಿಕೊಂಡಾಗ ಅವರಿಗೆ ಗೌರವ ಹೆಚ್ಚುತ್ತದೆ. ದಸರಾ ಆಚರಣೆ ಈ ಹಿಂದಿನಿಂದ ಯಾವ ಸಂಪ್ರದಾಯದಂತೆ ನಡೆದುಕೊಂಡು ಬಂದಿದೆಯೋ ಅದೇ ರೀತಿ ಉದ್ಘಾಟನೆ ಮಾಡುವುದರಲ್ಲಿ ನಮಗೆ ಅಭ್ಯಂತರವಿಲ್ಲ. ಇಷ್ಟು ವರ್ಷಗಳಿಂದ ಬಂದಿರುವ ಪದ್ಧತಿಯನ್ನು ಪಾಲಿಸಲೇಬೇಕು. ರಾಜಕೀಯ ಲಾಭಕ್ಕಾಗಿ ಬಾಯಿಗೆ ಬಂದಂತೆ ಹೇಳಿಕೆ ಕೊಡುವುದು ಸರಿಯಲ್ಲ ಎಂದರು.

ದಸರಾ, ಹಿಂದೂಗಳ ಆರಾಧನೆಯ ಹಬ್ಬ. ಇಂದಿನವರೆಗೂ ಈ ಹಬ್ಬವನ್ನು ಹಿಂದೂ ಸಂಪ್ರದಾಯದ ಪ್ರಕಾರವೇ ಆಚರಿಸಲಾಗಿದೆ. ಮುಂದೆಯೂ ಅದೇ ಸಂಪ್ರದಾಯ ಇರಬೇಕು. ರಾಜಕೀಯ ಲಾಭಕ್ಕಾಗಿ ಅಥವಾ ಸ್ವಂತ ಆಲೋಚನೆಗಾಗಿ, ‘ನಾನು ಹೀಗೆ ದಸರಾ ಉದ್ಘಾಟನೆ ಮಾಡುತ್ತೇನೆ’ ಎಂದು ಹೇಳುವುದು ಸರಿಯಲ್ಲ ಎಂದರು.

ರಾಜಕಾರಣಿಗಳ ನಿಲುವು ದೇಶದ ನಿಲುವಲ್ಲ, ಭಾಷೆಯ ನಿಲುವಲ್ಲ, ಧರ್ಮದ ನಿಲುವೂ ಅಲ್ಲ. ಅದು ಕೇವಲ ರಾಜಕೀಯ ತೆವಲು ಮಾತ್ರ. ಚಾಮುಂಡೇಶ್ವರಿ ಹಿಂದೂಗಳ ಸ್ವತ್ತಲ್ಲ ಎನ್ನುವ ಡಿ.ಕೆ.ಶಿವಕುಮಾರ್‌ ಅವರು ಬಸವ, ಶರಣರ ತತ್ವ ಸಿದ್ಧಾಂತ ಪಾಲಿಸುತ್ತಿದ್ದರೆ ಇನ್ನು ಮುಂದೆ ದೇವಸ್ಥಾನಗಳಿಗೆ ಹೋಗಬಾರದು. ತಮ್ಮ ಧಾರ್ಮಿಕ ಚಿಂತನೆಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳಬೇಕು.
- ನಾರಾಯಣ ಗೌಡ, ಕರವೇ ಅಧ್ಯಕ್ಷ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್