
ಬೆಂಗಳೂರು (ಆ.29): ಶ್ರೀ ಕಣ್ವ ಸೌಹಾರ್ದ ಸೊಸೈಟಿ ಬಹುಕೋಟಿ ಠೇವಣಿ ವಂಚನೆ ಪ್ರಕರಣ ಬೆಳಕಿಗೆ ಬಂದು ಆರು ವರ್ಷಗಳಾದರೂ ಕಳೆದುಕೊಂಡ ಹಣವನ್ನು ವಾಪಸ್ ಪಡೆಯಲು ಬರೀ ಕಚೇರಿಗೆ ಅಲೆಯುವಂತಾಗಿದೆ ಎಂದು ಸಂತ್ರಸ್ತರು ನೋವು ತೋಡಿಕೊಂಡಿದ್ದಾರೆ.
2019ರ ಆಗಸ್ಟ್ ತಿಂಗಳಲ್ಲಿ ವಂಚನೆ ಪ್ರಕರಣ ಬಯಲಾಗಿತ್ತು. ಸುಮಾರು 6,200ಕ್ಕೂ ಹೆಚ್ಚು ಠೇವಣಿದಾರರಿಗೆ 400 ಕೋಟಿ ರು.ಗೂ ಹೆಚ್ಚು ಹಣವನ್ನು ವಂಚಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿದ್ದ ಸಿಐಡಿ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ) ಕಣ್ವ ಸೊಸೈಟಿಯ ಮುಖ್ಯಸ್ಥ ನಂಜುಂಡಯ್ಯ ಅವರನ್ನು ಬಂಧಿಸಿ ಸ್ಥಿರಾಸ್ತಿ ಮತ್ತು ಚರಾಸ್ತಿ ಜಪ್ತಿ ಮಾಡಿದ್ದಾರೆ. ಇವುಗಳ ಮೌಲ್ಯ ಸುಮಾರು 500 ಕೋಟಿ ರು.ಗೂ ಹೆಚ್ಚು ಇದೆ. ಈ ಆಸ್ತಿಗಳನ್ನು ಹರಾಜು ಹಾಕಿ ಸಂತ್ರಸ್ಥರಿಗೆ ಹಣವನ್ನು ಮರಳಿಸಲು ಸರ್ಕಾರ ಸಕ್ಷಮ ಪ್ರಾಧಿಕಾರವನ್ನು ರಚಿಸಿದೆ. ಆದರೆ, ಪ್ರಾಧಿಕಾರದ ಕಾರ್ಯವೈಖರಿ ಅತ್ಯಂತ ನಿಧಾನಗತಿಯಲ್ಲಿದೆ ಎಂದು ಎಂದು ಶ್ರೀ ಕಣ್ವ ಸಹಕಾರ ಠೇವಣಿದಾರರ ಸಂಘದ ಅಧ್ಯಕ್ಷ ಎನ್. ನಾರಾಯಣಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರೌಡಿಶೀಟರ್‌ನ ಮಾನವ ಹಕ್ಕು ಅಧಿಕಾರಿಯೆಂದು ಪರಿಚಯ; ಮಟ್ಟಣ್ಣನವರ್ ವಿರುದ್ಧ ಕೇಸ್ ದಾಖಲಿಸುವಂತೆ ಆಯೋಗ ಸೂಚನೆ!
ಹರಾಜಿನಿಂದ ಕನಿಷ್ಠ 50 ಕೋಟಿ ರು. ಜಮಾಗೊಂಡರೆ ನ್ಯಾಯಾಲಯದ ಅನುಮತಿ ಪಡೆದು ಮೊದಲ ಕಂತಿನಲ್ಲಿ ಪ್ರೋರೇಟಾ ಪ್ರಕಾರ ಸಂತ್ರಸ್ಥರಿಗೆ ಹಂಚಿಕೆ ಮಾಡುವುದಾಗಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದರು. ಆದರೆ, ಈವರೆಗೆ ಹರಾಜು ಹಾಕಿರುವ ಆಸ್ತಿಗಳಿಂದ ಸುಮಾರು 35 ಕೋಟಿ ರು. ಮಾತ್ರ ಜಮಾ ಆಗಿದೆ. ಉಳಿದ ಆಸ್ತಿಗಳನ್ನು ಖರೀದಿಸಲು ಸಾರ್ವಜನಿಕರು ಮುಂದೆ ಬರುತಿಲ್ಲ. ಒಂದು ಆಸ್ತಿಗೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಬಿ. ಮುಕ್ಕಣ್ಣ ತಿಳಿಸಿದ್ದಾರೆ.
ಅಧಿಕ ಬಡ್ಡಿ ಭರವಸೆ ನೀಡಿ ವಂಚನೆ:
ಠೇವಣಿಯ ಮೇಲೆ ವಾರ್ಷಿಕ ಶೇ.12ರಷ್ಟು ಬಡ್ಡಿ ಕೊಡುವುದಾಗಿ ಭರವಸೆ ನೀಡಿದ್ದ ಕಾರಣ ನಿವೃತ್ತ ಸರ್ಕಾರಿ ನೌಕರರು ಸೇರಿದಂತೆ ಸಾವಿರಾರು ಜನರು ಲಕ್ಷ ರುಪಾಯಿಯಿಂದ ಕೋಟಿ ರೂ.ವರೆಗೆ ಸೊಸೈಟಿಯಲ್ಲಿ ಠೇವಣಿ ಇಟ್ಟಿದ್ದರು. ಆದರೆ, ನಿಗದಿತ ಅವಧಿಯಲ್ಲಿ ಬಡ್ಡಿ, ಠೇವಣಿ ಮರಳಿಸದ ಕಾರಣ 2019ರಲ್ಲಿ ಆಗಸ್ಟ್‌ನಲ್ಲಿ ಕಣ್ವ ಸಂಸ್ಥೆಯ ಮುಖ್ಯಸ್ಥ ನಂಜುಂಡಯ್ಯ ಸೇರಿದಂತೆ ಇನ್ನಿತರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
300 ಠೇವಣಿದಾರರು ನಿಧನ!
ಸುಮಾರು 6,200ಕ್ಕೂ ಹೆಚ್ಚು ಹೂಡಿಕೆದಾರರ ಪೈಕಿ ಬಹುತೇಕರು ನಿವೃತ್ತರೇ ಆಗಿದ್ದಾರೆ. ಕಳೆದ 6 ವರ್ಷಗಳಲ್ಲಿ 300 ಜನ ನಿಧನರಾಗಿದ್ದಾರೆ. ನ್ಯಾಯ ಕೋರಿ ಮುಖ್ಯಮಂತ್ರಿ, ಪ್ರಧಾನಮಂತ್ರಿ ಕಚೇರಿಯವರೆಗೂ ದೂರು ನೀಡಲಾಗಿದೆ ಎಂದು ಶ್ರೀ ಕಣ್ವ ಸಹಕಾರ ಠೇವಣಿದಾರರ ಸಂಘದ ಅಧ್ಯಕ್ಷ ಎನ್. ನಾರಾಯಣಗೌಡ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ