* ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆ
* ರಾಜ್ಯೋತ್ಸವ ಹತ್ತಿರ ಬಂದಂತೇ ಪುಟಿದೇಳುವ ಕನ್ನಡಾಭಿಮಾನ
* ಕನ್ನಡ ನಾಡಿನಲ್ಲೇ ಕನ್ನಡದ ಬಳಕೆ ಕಡಿಮೆ
* ಕನ್ನಡದ ಉಳಿವಿಗೆ ಕನ್ನಡಿಗರ ಪ್ರಬಲ ಇಚ್ಛಾಶಕ್ತಿ ಹಾಗೂ ಸಾಮೂಹಿಕ ಪ್ರಯತ್ನದ ಅಗತ್ಯ
* ಕನ್ನಡ ಬೆಳೆಸಲು ಕನ್ನಡಿಗರೇನು ಮಾಡಬಹುದು?
ಕನ್ನಡ ರಾಜ್ಯೋತ್ಸವವನ್ನು (Kannada Rajyotsava) ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆಗಳು ನಡೆದಿವೆ. ರಾಜ್ಯೋತ್ಸವ ಹತ್ತಿರ ಬಂದಂತೇ ಪುಟಿದೇಳುವ ಕನ್ನಡಾಭಿಮಾನ ದಿನಗಳೆದಂತೆ ಮಂಕಾಗಿಬಿಡುತ್ತದೆ. ಇಂಗ್ಲಿಷ್ (English), ಹಿಂದಿ (Hindi) ಇನ್ನಿತರ ಭಾಷೆಗಳ ಭರಾಟೆಯಲ್ಲಿ ಕನ್ನಡ ನಾಡಿನಲ್ಲೇ ಕನ್ನಡದ ಬಳಕೆ ಕಡಿಮೆಯಾಗುತ್ತಿದೆ. ಕನ್ನಡದ ಉಳಿವು ಹಾಗೂ ಅಭಿವೃದ್ಧಿ ಕೇವಲ ಸರ್ಕಾರದ ಯೋಜನೆಗಳಿಂದ ಸಾಧ್ಯವಾಗುವುದಿಲ್ಲ. ಇದಕ್ಕೆ ಕನ್ನಡಿಗರ ಪ್ರಬಲ ಇಚ್ಛಾಶಕ್ತಿ ಹಾಗೂ ಸಾಮೂಹಿಕ ಪ್ರಯತ್ನದ ಅಗತ್ಯವಿದೆ. ಕನ್ನಡ ಭಾಷೆಯ ಅಭಿವೃದ್ಧಿಯಲ್ಲಿ ಜನಸಾಮಾನ್ಯರು ಹೇಗೆ ಕೈಜೋಡಿಸಬಹುದು?
1. ಎಲ್ಲೆಡೆ ಕನ್ನಡವನ್ನೇ ಬಳಸುವುದು
ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಕನ್ನಡಿಗರಾದ ನಾವು ಕನ್ನಡವನ್ನು ನಮ್ಮ ಜೀವನದ ಭಾಗವಾಗಿಸಿಕೊಳ್ಳಬೇಕು. ದೈನಂದಿನ ವ್ಯವಹಾರದಲ್ಲಿ ಕನ್ನಡವನ್ನೇ ಬಳಸಬೇಕು. ಕನ್ನಡ ಕಲಿಕೆ ಮತ್ತು ಕನ್ನಡದ ಬಳಕೆಯಿಂದಲೂ ಜೀವನದಲ್ಲಿ ಯಶಸ್ಸನ್ನು ಕಾಣಬಹುದು, ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಬಹುದು ಎಂಬ ಅರಿವು ನಮ್ಮಲ್ಲಿ ಮೂಡಬೇಕು. ಇಂಗ್ಲಿಷ್ ಶ್ರೇಷ್ಠ ಎಂಬ ಭ್ರಮೆಯಿಂದ ಹೊರಬಂದು ಕನ್ನಡವನ್ನು ವಿಶ್ವಾಸದಿಂದ ಮಾತನಾಡಬೇಕು. ಬ್ಯಾಂಕ್‌ಗಳಲ್ಲಿ, ಎಟಿಎಮ್‌ಗಳಲ್ಲಿ, ಪತ್ರ ವ್ಯವಹಾರದಲ್ಲಿ ಕೂಡಾ ಕನ್ನಡ ಬಳಸಬೇಕು.
2. ಪರಭಾಷಿಕರೊಂದಿಗೆ ಕನ್ನಡ ಬಳಕೆ
ಹೊರಭಾಷಿಗರೊಂದಿಗೆ ವ್ಯವಹರಿಸುವಾಗ ಕನ್ನಡಿಗರು ಹೊರಗಿನವರ ಭಾಷೆಯಲ್ಲೇ ಮಾತನಾಡುವುದು ಸಾಮಾನ್ಯ. ಯಾರೇ ಆಗಿರಲಿ, ಕರ್ನಾಟಕಕ್ಕೆ ಬಂದವರ ಜೊತೆ ಕನ್ನಡಿಗರಾದ ನಾವು ಕನ್ನಡದಲ್ಲೇ ವ್ಯವಹರಿಸಬೇಕು. ಹೊರಭಾಷಿಗರನ್ನು ಕನ್ನಡ ಕಲಿಯಲು ಪ್ರೋತ್ಸಾಹಿಸಬೇಕು. ನಾವೆಲ್ಲರೂ ಕನ್ನಡವನ್ನೇ ದೈನಂದಿನ ಜೀವನದಲ್ಲಿ ಕಡ್ಡಾಯವಾಗಿ ಬಳಸಿದರೆ ಅವರಿಗೂ ಕನ್ನಡದ ಕಲಿಕೆ ಅನಿವಾರ್ಯವಾಗುತ್ತದೆ.
3. ಮಕ್ಕಳಿಗೆ ಕಡ್ಡಾಯ ಕನ್ನಡ ಶಿಕ್ಷಣ
ಸಾಧ್ಯವಾದಷ್ಟುಮಕ್ಕಳಿಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಕೊಡಿಸಲು ಮುಂದಾಗಬೇಕು. ಅದಾಗದಿದ್ದಲ್ಲಿ ಮಕ್ಕಳಿಗೆ ಕನಿಷ್ಠ ಪಕ್ಷ ಕನ್ನಡ ವಿಷಯದ ಕಲಿಕೆ ಕಡ್ಡಾಯವಾಗಿರುವಂತಹ ಶಾಲೆಗಳಿಗೇ ಕಳುಹಿಸಬೇಕು. ಶಾಲೆಗಳಲ್ಲೇ ಕನ್ನಡ ಕಲಿಕೆಯನ್ನು ಕಡೆಗಣಿಸಿದಾಗ ಮಕ್ಕಳಲ್ಲಿ ನಾಡಭಾಷೆಯ ಬಗ್ಗೆ ಉದಾಸೀನ ಮೂಡುವುದು ಸಹಜ. ಆದ್ದರಿಂದ ಕನ್ನಡ ವಿಷಯ ಕಡ್ಡಾಯವಾಗಿರುವ ಶಾಲೆಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು, ಬೋಧನಾ ಸಿಬ್ಬಂದಿ ಕೂಡಾ ಕನ್ನಡದಲ್ಲೇ ಮಕ್ಕಳೊಂದಿಗೆ ವ್ಯವಹರಿಸಬೇಕು.
4. ಕನ್ನಡ ಪುಸ್ತಕವನ್ನು ಓದುವ ಹವ್ಯಾಸ
ದಿನ ಕಳೆದಂತೆ ಕನ್ನಡ ಸಾಹಿತ್ಯವನ್ನು ಓದುವ ಹವ್ಯಾಸ ಯುವಜನತೆಯಲ್ಲಿ ಕಡಿಮೆಯಾಗುತ್ತಿದೆ. ಇದು ಬದಲಾಗಬೇಕು. ಕನ್ನಡ ದಿನಪತ್ರಿಕೆಗಳು, ಮಾಸಿಕಗಳು, ಕಾದಂಬರಿ ಹಾಗೂ ಸಾಹಿತ್ಯಕ ಕೃತಿಗಳನ್ನು ಕೊಂಡು ಓದುವುದರಿಂದ ಕನ್ನಡ ಸಾಹಿತಿಗಳಿಗೆ ಪ್ರೋತ್ಸಾಹವೂ ಸಿಗುವುದರೊಂದಿಗೆ ನಮ್ಮ ಶಬ್ದಭಂಡಾರ, ಭಾಷೆ ಸುಧಾರಿಸುತ್ತದೆ. ಆನ್ಲೈನ್‌ನಲ್ಲಿ ಓದುವಾಗಲೂ ಕನ್ನಡ ಆವೃತ್ತಿಗೆ ಹೆಚ್ಚಿನ ಆದ್ಯತೆ ಕೊಡಬೇಕು.
5. ಕನ್ನಡದಲ್ಲೇ ಹೊಸ ಪದಗಳ ಸೃಷ್ಟಿ
ಕನ್ನಡ ಭಾಷೆಯ ಮೇಲೆ ಇನ್ನಿತರ ಭಾಷೆಗಳ ಪ್ರಭಾವ ಕೊಂಚ ಹೆಚ್ಚಾಗಿಯೇ ಇದೆ ಎನ್ನಬಹುದು. ಮೊಬೈಲ್, ಚಾರ್ಜರ್, ಬ್ಲೂಟೂತ್, ವೈ-ಫೈ ಹೀಗೆ ವಿಜ್ಞಾನ, ತಂತ್ರಜ್ಞಾನಕ್ಕೆ ಸಂಬಂಧಿಸಿದ ಎಲ್ಲ ಪದಗಳಿಗೆ ಕನ್ನಡ ಪದಗಳನ್ನು ರಚಿಸಿ ಬಳಸಿದಾಗ ಭಾಷೆಯು ಇನ್ನಷ್ಟುಶ್ರೀಮಂತವಾಗುತ್ತದೆ. ದಿನನಿತ್ಯದ ಸಂವಹನದಲ್ಲಿ ಕನ್ನಡೀಕರಣ ಹೊಂದಿದ ಪದಗಳಿಗಿಂತ ಹೆಚ್ಚೆಚ್ಚು ಕನ್ನಡ ಪದಗಳನ್ನೇ ಬಳಸುವಂತಾಗಬೇಕು.
6. ಕನ್ನಡದಲ್ಲಿ ಸೇವೆಗೆ ಒತ್ತಾಯ
ಸಾರ್ವಜನಿಕ ಸ್ಥಳಗಳಲ್ಲಿ ಇಂಗ್ಲಿಷ್ ಲಿಪಿಯಲ್ಲಿರುವ ಫಲಕಗಳ ಬದಲು ಕನ್ನಡ ಫಲಕಗಳಿಗಾಗಿ ಸಾರ್ವಜನಿಕರು ಒತ್ತಾಯಿಸಬೇಕು. ಫಲಕಗಳಲ್ಲಿ ಎಲ್ಲ ಸೂಚನೆಗಳು ಅನುಕ್ರಮವಾಗಿ ಕನ್ನಡ ನಂತರ ಇಂಗ್ಲಿಷ್, ಹಿಂದಿಗಳಲ್ಲಿ ಇರಬೇಕು. ಬ್ಯಾಂಕ್, ಕಚೇರಿಗಳಲ್ಲಿ ನಾವು ಕನ್ನಡ ಭಾಷೆಯಲ್ಲೇ ವ್ಯವಹರಿಸಬೇಕು. ಅಧಿಕಾರಿ, ಸಿಬ್ಬಂದಿಗಳನ್ನು ಕೂಡಾ ಜನರೊಂದಿಗೆ ಕನ್ನಡದಲ್ಲೇ ವ್ಯವಹರಿಸಲು ಒತ್ತಾಯಿಸಬೇಕು.
7. ಅಂತರ್ಜಾಲದಲ್ಲಿ ಕನ್ನಡ ಬಳಕೆ
ಆಧುನಿಕ ಮಾಹಿತಿ ಮತ್ತು ತಂತ್ರಜ್ಞಾನ ಹಾಗೂ ಅಂತರ್ಜಾಲದ ನೆರವಿನಿಂದ ಕನ್ನಡ ಬಳಕೆಯ ವೇಗ ಮತ್ತು ವ್ಯಾಪ್ತಿ ಹೆಚ್ಚಿದೆ. ಇದು ಇನ್ನಷ್ಟುಬೆಳೆಯಬೇಕು. ಅದು ಸಾಧ್ಯವಾಗಬೇಕು ಅಂದರೆ ಕನ್ನಡಿಗರು ಇಂಟರ್ನೆಟ್‌ನಲ್ಲಿ ಹೆಚ್ಚೆಚ್ಚು ಕನ್ನಡ ಬಳಸಬೇಕು. ಭಾಷಾ ಸಾಹಿತ್ಯವನ್ನು ಡಿಜಿಟಲೀಕರಣಗೊಳಿಸಿದಾಗ ಕನ್ನಡದಲ್ಲೇ ಬೇಕಾದ ಮಾಹಿತಿ ತಕ್ಷಣ ದೊರೆಯುತ್ತದೆ. ಆಗ ಇಂಗ್ಲೀಷಿನ ಮೇಲಿನ ಅವಲಂಬನೆ ಸಹಜವಾಗಿ ಕಡಿಮೆಯಾಗುತ್ತದೆ.
8. ಕನ್ನಡದ ಹೊಸ ತಂತ್ರಾಂಶಗಳ ಬಳಕೆ
ಕನ್ನಡ ತಂತ್ರಾಂಶಗಳ ವ್ಯಾಪಕ ಪ್ರಚಾರ, ಕನ್ನಡ ವೆಬ್ ತಾಣಗಳ ಬಳಕೆಯತ್ತ ನಾವೆಲ್ಲ ಕೈಜೋಡಿಸಬೇಕಾಗಿದೆ. ಈಗಾಗಲೇ ಲಭ್ಯವಿರುವ ಆ್ಯಪ್‌ಗಳಲ್ಲೂ ನಾವು ಕನ್ನಡದಲ್ಲೇ ವ್ಯವಹರಿಸಬೇಕು. ಸಂದೇಶಗಳು, ಇ-ಮೇಲ್‌ಗಳನ್ನು ಕನ್ನಡದಲ್ಲೇ ಕಳುಹಿಸುವುದು. ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೆ ಹಾಗೂ ಪ್ರಸರಣಕ್ಕಾಗಿ ಕನ್ನಡವನ್ನು ಬಳಸುವುದು. ಆಗ ತಂತ್ರಜ್ಞಾನ ಕಂಪನಿಗಳಿಗೆ ಕನ್ನಡದ ಮಾರುಕಟ್ಟೆಯ ವ್ಯಾಪ್ತಿ ಅರಿವಾಗುತ್ತದೆ.
9. ಹೊರನಾಡಿಗೂ ಕನ್ನಡ ಕೊಂಡೊಯ್ಯಿರಿ
ಕನ್ನಡಿಗರು ಉದ್ಯೋಗ, ಶಿಕ್ಷಣಕ್ಕಾಗಿ ಹೊರ ರಾಜ್ಯ, ಹೊರ ದೇಶಗಳಲ್ಲಿ ನೆಲೆಸಿದ್ದಾರೆ. ಜಗತ್ತಿನ ಮೂಲೆಮೂಲೆಯಲ್ಲೂ ಕನ್ನಡವನ್ನು ಪಸರಿಸಲು ಇದೊಂದು ಉತ್ತಮ ಅವಕಾಶ. ಎಲ್ಲಾದರೂ ಇರು ಎಂತಾದರೂ ಎಂದೆಂದಿಗೂ ನೀ ಕನ್ನಡವಾಗಿರು ಎಂದಂತೇ ಎಲ್ಲೇ ಹೋದರೂ ತಮ್ಮೊಂದಿಗೆ ಕನ್ನಡ ಭಾಷೆ ಸಂಸ್ಕೃತಿಯನ್ನು ಕೊಂಡೊಯ್ದು, ಅಲ್ಲೂ ಅದನ್ನು ಉಳಿಸಿ ಬೆಳೆಸುವತ್ತ ಕನ್ನಡಿಗರೆಲ್ಲ ಶ್ರಮಿಸಬೇಕು.
10. ಕನ್ನಡದ ಬಗ್ಗೆ ಪ್ರೀತಿ, ಗೌರವ
ಕನ್ನಡ ನಾಡಿನಲ್ಲಿಯೂ ಇಂಗ್ಲಿಷ್ ಮಾತನಾಡುವವರೇ ಬುದ್ಧಿವಂತರು, ಕನ್ನಡದಲ್ಲಿ ವ್ಯವಹರಿಸುವವರು ಗಮಾರರು ಎಂಬ ಭಾವನೆಯಿದೆ. ಇದು ಮೊದಲು ಬದಲಾಗಬೇಕು. ಮಾತೃಭಾಷೆಯ ಬಗ್ಗೆ ಪ್ರೀತಿ, ಗೌರವ ಮೂಡಬೇಕು. ಮನೆಯಲ್ಲಿ, ಕುಟುಂಬದವರೊಂದಿಗೆ ಕನ್ನಡದಲ್ಲೇ ಮಾತನಾಡಬೇಕು. ನಾಡಿನಲ್ಲಿ ಕಾರ್ಯ ನಿರ್ವಹಿಸುವ ಬಹುರಾಷ್ಟ್ರೀಯ ಕಂಪನಿಗಳು, ಸಂಸ್ಥೆಗಳು ಸಹ ಕನ್ನಡಕ್ಕೆ, ಕನ್ನಡಿಗರಿಗೆ ಪ್ರಾಧಾನ್ಯತೆ ನೀಡುವಂತೆ ಒತ್ತಾಯಿಸಬೇಕು. ಶಾಲೆಗಳು, ಸಂಘ-ಸಂಸ್ಥೆಗಳು, ಕಚೇರಿಗಳಷ್ಟೇ ಅಲ್ಲದೇ ಕನ್ನಡಿಗರ ಮನೆ-ಮನದಲ್ಲಿ ಕನ್ನಡ ನಾದ ಮೊಳಗಿದಾಗ ಭಾಷೆ ಬೆಳೆಯುತ್ತದೆ.