ಹೊಸ ದಿಗಂತ ಪತ್ರಿಕೆಯ ವರದಿಗಾರ ಸಂತೋಷ್ ತಮ್ಮಯ್ಯನನ್ನು ಬಂಧಿಸಲಾಗಿದೆ. ಇವರು ಉಘೇ ವೀರಭೂಮಿಗೆ ಎಂಬ ತಮ್ಮ ಕಾಲಂನಲ್ಲಿ ’ಹೊರುತ್ತೇವೆ ಮೊಕದ್ದಮೆ ಉತ್ತರ ಸಿಗುವ ತನಕ’ ಎಂಬ ಲೇಖನವೊಂದನ್ನು ಪ್ರಕಟಿಸಿದ್ದರು. ಈ ಲೇಖನದಲ್ಲಿ ಟಿಪ್ಪು ಜಯಂತಿ ವಿರುದ್ಧವಾಗಿ ಬರೆದಿದ್ದು, ಆಚರಣೆ ಮಾಡುವುದು ಯಾಕೆ ಸರಿಯಲ್ಲ ಎಂದು ವಿಮರ್ಶಿಸಿದ್ದರು. ಸದ್ಯ ಈ ಲೇಖನ ಸಂತೋಷ್ ಬಂಧನಕ್ಕೆ ಕಾರಣವಾಗಿದೆ.
ಬೆಂಗಳೂರು: ಟಿಪ್ಪು ಜಯಂತಿ ಸದಾ ವಿವಾದಗಳಿಂದಲೇ ಸುದ್ದಿಯಾದ ಆಚರಣೆ. ಜನರ ಒಂದು ಪಂಗಡ ಟಿಪ್ಪು ಜಯಂತಿ ಆಚರಣೆಯನ್ನು ಬೆಂಬಲಿಸಿದರೆ ಮತ್ತೊಂದು ಪಂಗಡ ಈ ಆಚರಣೆ ಆಗಬಾರದು ಎಂದು ಹೋರಾಟವನ್ನೂ ನಡೆಸಿದೆ. ಇಂತಹ ವಿವಾದಾತ್ಮಕ ಆಚರಣೆಯ ಕಿಚ್ಚಿಗೆ ಪ್ರಾಣ ಕಳೆದುಕೊಂಡವರೂ ಇದ್ದಾರೆ. ಇದೀಗ ಟಿಪ್ಪು ಜಯಂತಿ ಕುರಿತಾಗಿ ಲೇಖನ ಪ್ರಕಟಿಸಿದ ಸಂಬಂಧ ಪತ್ರಕರ್ತನೋರ್ವನನ್ನು ಬಂಧಿಸಲಾಗಿದೆ.
ಹೊಸ ದಿಗಂತ ಪತ್ರಿಕೆಯ ಸಂತೋಷ್ ತಮ್ಮಯ್ಯನನ್ನು ಬಂಧನಕ್ಕೆ ಒಳಗಾದವರು. ಪತ್ರಕರ್ತ, ಅಂಕಣಕಾರ ಹಾಗೂ ವಿಚಾರವಾದಿ ಸಂತೋಷ್ ತಮ್ಮಯ್ಯ ತಮ್ಮ 'ಉಘೇ ವೀರಭೂಮಿಗೆ' ಎಂಬ ಅಂಕಣದಲ್ಲಿ ’ಹೊರುತ್ತೇವೆ ಮೊಕದ್ದಮೆ ಉತ್ತರ ಸಿಗುವ ತನಕ’ ಎಂಬ ಲೇಖನವೊಂದನ್ನು ಪ್ರಕಟಿಸಿದ್ದರು. ಈ ಲೇಖನದಲ್ಲಿ ಟಿಪ್ಪು ಜಯಂತಿ ವಿರುದ್ಧವಾಗಿ ಬರೆದಿದ್ದು, ಜಯಂತಿ ಆಚರಣೆ ಮಾಡುವುದು ಯಾಕೆ ಸರಿಯಲ್ಲ ಎಂದು ವಿಮರ್ಶಿಸಿದ್ದರು. ಅಲ್ಲದೇ ನವೆಂಬರ್ 5ರಂದು ಗೋಣಿಕೊಪ್ಪದ ಕಾರ್ಯಕ್ರಮದಲ್ಲಿ ನಡೆದಿದ್ದ ಟಿಪ್ಪು ಕರಾಳ ಮುಖಗಳ ಅನಾವರಣ ಕಾರ್ಯಕ್ರಮದಲ್ಲಿ ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂಬ ಆರೋಪವೂ ಇವರ ವಿರುದ್ಧ ಇದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದಾಪುರದ ಕೆ.ಎ. ಅಸ್ಕರ್ ಎಂಬವರು ದೂರು ನೀಡಿದ್ದು, ಸಂತೋಷ್ ತಮ್ಮಯ್ಯ, ಬಾಚರಣಿಯಂಡ ಪಿ.ಅಪ್ಪಣ್ಣ, ಅಡ್ಡಂಡ ಕಾರ್ಯಪ್ಪ, ಸುಧಾಕರ್ ಹೊಸಳ್ಳಿ, ರಾಬರ್ಟ್ ರೊಜಾರಿಯೋರವರ ವಿರುದ್ಧ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿ ಸಂತೋಷ್ ತಮ್ಮಯ್ಯ ಅವರನ್ನು ಮಧುಗಿರಿ ತಾಲೂಕಿನ ಹಳ್ಳಿಯೊಂದರ ಅವರ ಪತ್ನಿ ಮನೆಯಲ್ಲಿದ್ದ ಸಂತೋಷ್ ಅವರನ್ನು ಗೋಣಿಕೊಪ್ಪಲು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಉಳಿದ ನಾಲ್ವರು ವಿಚಾರವಾದಿಗಳನ್ನು ಬಂಧಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಇತ್ತ ಸಂತೋಷ್ ತಮ್ಮಯ್ಯ ಬಂಧನ ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವೊಂದು ಆರಂಭವಾಗಿದೆ. #IamwithSanthoshThammaiah ಎಂಬ ಹ್ಯಾಷ್ ಟ್ಯಾಗ್ನಲ್ಲಿ ಈ ಟ್ವಿಟರ್ ಅಭಿಯಾನ ನಡೆಯುತ್ತಿದ್ದು, ಬಹುತೇಕ ಮಂದಿ ಬೆಂಬಲ ಸೂಚಿಸಿದ್ದಾರೆ.