Murder case: ಕಲಬುರಗಿ ಹಂತಕ ಸಾಯಿಬಣ್ಣ ಗಲ್ಲು ಶಿಕ್ಷೆಯಿಂದ ಪಾರು!

Published : Aug 29, 2023, 07:58 PM ISTUpdated : Aug 29, 2023, 07:59 PM IST
Murder case: ಕಲಬುರಗಿ ಹಂತಕ ಸಾಯಿಬಣ್ಣ ಗಲ್ಲು ಶಿಕ್ಷೆಯಿಂದ ಪಾರು!

ಸಾರಾಂಶ

ಇಬ್ಬರು ಪತ್ನಿಯರು ಹಾಗೂ ಪುತ್ರಿಯನ್ನು ಅಮಾನುಷವಾಗಿ ಹತ್ಯೆಗೈದ ಪ್ರಕರಣದಲ್ಲಿ ಗಲ್ಲು ಶಿಕ್ಷೆ ಗುರಿಯಾಗಿ ಕಳೆದ 30 ವರ್ಷಗಳಿಂದ ಸೆರೆಮನೆ ವಾಸ ಅನುಭವಿಸುತ್ತಿರುವ ಕಲಬುರಗಿ ಜಿಲ್ಲೆಯ ಅಪರಾಧಿ ಸಾಯಿಬಣ್ಣಗೆ ಹೈಕೋರ್ಟ್ ಜೀವದಾನ ನೀಡಿದೆ.

ಬೆಂಗಳೂರು (ಆ.29): ಇಬ್ಬರು ಪತ್ನಿಯರು ಹಾಗೂ ಪುತ್ರಿಯನ್ನು ಅಮಾನುಷವಾಗಿ ಹತ್ಯೆಗೈದ ಪ್ರಕರಣದಲ್ಲಿ ಗಲ್ಲು ಶಿಕ್ಷೆ ಗುರಿಯಾಗಿ ಕಳೆದ 30 ವರ್ಷಗಳಿಂದ ಸೆರೆಮನೆ ವಾಸ ಅನುಭವಿಸುತ್ತಿರುವ ಕಲಬುರಗಿ ಜಿಲ್ಲೆಯ ಅಪರಾಧಿ ಸಾಯಿಬಣ್ಣಗೆ ಹೈಕೋರ್ಟ್ ಜೀವದಾನ ನೀಡಿದೆ.

ಕಳೆದ 30 ವರ್ಷಗಳಿಂದ ಜೈಲಿನಲ್ಲಿರುವ ಅಪರಾಧಿ ಸಾಯಿಬಣ್ಣನಿಗೆ ಸದ್ಯ 70 ವರ್ಷ ವಯಸ್ಸಾಗಿರುವುದು ಮತ್ತು ಕ್ಷಮಾದಾನ ಅರ್ಜಿ ವಿಲೇವಾರಿ ಮಾಡುವಲ್ಲಿ ಏಳು ವರ್ಷ ಮತ್ತು ಎಂಟು ತಿಂಗಳ ಕಾಲ ಸರ್ಕಾರಿ ಪ್ರಾಧಿಕಾರಗಳು ಮಾಡಿರುವ ವಿಳಂಬ ಪರಿಗಣಿಸಿರುವ ಹೈಕೋರ್ಟ್, ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿ ಆದೇಶಿಸಿದೆ.

ಜಗಳವಾಡಿ ಹೋಗಿದ್ದಕ್ಕೆ ಪತ್ನಿಯ ತವರು ಮನೆಗೇ ಮಾಟ ಮಾಡಿಸಿದ ಪತಿರಾಯ!

ಕಳೆದ 20 ವರ್ಷಗಳಿಂದಲೂ ಏಕಾಂಗಿ ಸೆರೆವಾಸ ಅನುಭವಿಸುತ್ತಿರುವ ಸಾಯಿಬಣ್ಣ ಕ್ಷಮಾದಾನ ಕೋರಿ ರಾಜ್ಯ ಸರ್ಕಾರಕ್ಕೆ ಸೂಕ್ತ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಿದರೆ, ಮೆರಿಟ್‌ ಆಧಾರದ ಮೇಲೆ ಆ ಅರ್ಜಿಯನ್ನು ರಾಜ್ಯ ಸರ್ಕಾರ ಪರಿಗಣಿಸಿ ವಿಲೇವಾರಿ ಮಾಡಬಹುದು ಎಂದು ಹೈಕೋರ್ಟ್ ಇದೇ ವೇಳೆ ನಿರ್ದೇಶಿಸಿದೆ.

ಪ್ರಕರಣದ ವಿವರ:

ಅನೈತಿಕ ಸಂಬಂಧ ಶಂಕೆ ವ್ಯಕ್ತಪಡಿಸಿ ಸಾಯಿಬಣ್ಣ 1988ರ ಜ.9ರಂದು ಪತ್ನಿ ಮಾಲಕವ್ವಳನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದನು. ನಂತರ ಜೈಲಿನಲ್ಲಿರುವಾಗ ಸಹಕೈದಿ ದತ್ತು ಎಂಬಾತನೊಂದಿಗೆ ಸ್ನೇಹ ಬೆಳೆದಿತ್ತು. ಜಾಮೀನು ಪಡೆದು ಜೈಲಿನಿಂದ ಹೊರಬಂದ ಆತ, ಸಹಕೈದಿ ದತ್ತುವಿನ ಪುತ್ರಿ ನಾಗಮ್ಮಳನ್ನು ವಿವಾಹವಾಗಿದ್ದ. ಎರಡನೇ ಪತ್ನಿ ನಾಗಮ್ಮಗೆ ವಿಜಯಲಕ್ಷ್ಮಿ ಎಂಬ ಮಗು ಜನಿಸಿತ್ತು.

ಈ ಮಧ್ಯೆ ಮೊದಲ ಪತ್ನಿ ಕೊಲೆ ಪ್ರಕರಣದಲ್ಲಿ ಸಾಯಿಬಣ್ಣನಿಗೆ ಜೀವಾವಧಿ ಶಿಕ್ಷೆಯಾಗಿತ್ತು. 1994ರಲ್ಲಿ ಪೆರೋಲ್‌ ಪಡೆದು ಹೊರಬಂದಿದ್ದ ಸಾಯಿಬಣ್ಣ ಎರಡನೇ ಪತ್ನಿ ಹಾಗೂ ಮಗುವನ್ನು ಕೊಲೆ ಮಾಡಿ ಮತ್ತೆ ಜೈಲು ಸೇರಿದ್ದ. ಕಲಬುರಗಿ ಸೆಷನ್ಸ್‌ ಕೋರ್ಚ್‌, ಸಾಯಿಬಣ್ಣಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ನಂತರ 2003ರಲ್ಲಿ ಹೈಕೋರ್ಚ್‌ ಮತ್ತು 2005ರಲ್ಲಿ ಸುಪ್ರೀಂಕೋರ್ಚ್‌ ಸಹ ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. ಇದರಿಂದ ಗಲ್ಲು ಶಿಕ್ಷೆಯಿಂದ ಕ್ಷಮಾದಾನ ಕೋರಿ 2005ರಲ್ಲಿ ಅರ್ಜಿ ಸಲ್ಲಿಸಿದ್ದ. ಆ ಅರ್ಜಿಯನ್ನು 2013ರ ಜನವರಿಯಲ್ಲಿ ರಾಷ್ಟ್ರಪತಿಗಳು ವಜಾಗೊಳಿಸಿದ್ದರು. ಇದರಿಂದ 2013ರಲ್ಲಿ ಹೈಕೋರ್ಚ್‌ಗೆ ಅರ್ಜಿ ಸಲ್ಲಿಸಿದ್ದ ಸಾಯಿಬಣ್ಣ, ಕ್ಷಮಾದಾನ ಅರ್ಜಿ ವಿಲೇವಾರಿಯಲ್ಲಿ 7 ವರ್ಷ 8 ತಿಂಗಳು ವಿಳಂಬವಾಗಿದೆ. ಹೀಗಾಗಿ ಗಲ್ಲು ಶಿಕ್ಷೆಯಿಂದ ವಿನಾಯ್ತಿ ನೀಡಬೇಕು ಎಂದು ಕೋರಿದ್ದ.

Bengaluru terrorist: ಶಂಕಿತ ಉಗ್ರ ಜುನೈದ್ ಸಹಚರ ಬಂಧನ - ಕೊಲೆ ಕೇಸ್ ಶಂಕಿತರ ಸಂಪರ್ಕ ಶಂಕೆ

ಪ್ರಕರಣದ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ಹೈಕೋರ್ಟ್, ಅರ್ಜಿದಾರ ಬೇರೆ ಬೇರೆ ಅವಧಿಯಲ್ಲಿ ಸಲ್ಲಿಸಿದ್ದ ಕ್ಷಮಾದಾನದ ಅರ್ಜಿ ಪರಿಗಣಿಸುವಲ್ಲಿ ಒಟ್ಟು 7 ವರ್ಷ 8 ತಿಂಗಳು ವಿಳಂಬವಾಗಿದ್ದು, ಅದಕ್ಕೆ ಯಾವುದೇ ಕಾರಣ ನೀಡಿಲ್ಲ. ಅಲ್ಲದೆ, ಸಾಯಿಬಣ್ಣಯನ್ನು 2003ರ ಜ.10ರಿಂದ 2019ರ ಮೇ 20ರವರೆಗೆ ಬೆಳಗಾವಿಯ ಒಂದೇ ಕೋಣೆಯಲ್ಲಿ ಏಕಾಂತ ಸೆರೆಮನೆವಾಸದಲ್ಲಿ ಇರಿಸಲಾಗಿದ್ದು, 16 ವರ್ಷ ಏಕಾಂಗಿ ಸೆರೆವಾಸ ಅನುಭವಿಸಿದಂತಾಗಿದೆ. ಆತ ಈಗಾಗಲೇ 30 ವರ್ಷಕ್ಕೂ ಅಧಿಕ ಸಮಯದಿಂದ ಜೈಲಿನಲ್ಲಿದ್ದಾನೆ. ಹಾಗಾಗಿ, ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿ, ಕ್ಷಮಾದಾನ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಲು ಸ್ವಾತಂತ್ರ್ಯನೀಡಿದರೆ ನ್ಯಾಯ ಸಂದಾಯವಾದಂತಾಗುತ್ತದೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ