2 ಮತಗಳಿಂದ ಸೋತಿದ್ದರಿಂದ ಕೋಪಗೊಂಡ ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ
ಆಲಮೇಲ[ಜ.05]: ತಾಲೂಕು ಪಂಚಾಯತಿ ಉಪ ಚುನಾವಣೆಯಲ್ಲಿ ಕೇವಲ 2 ಮತಗಳಿಂದ ಸೋತಿದ್ದರಿಂದ ಕೋಪಗೊಂಡ ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ನಾಲ್ವರು ಯುವಕರು ಗಂಭೀರ ಗಾಯಗೊಂಡ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮಲಘಾಣ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ.
ಹಲ್ಲೆಯಿಂದಾಗಿ ಜೆಡಿಎಸ್ ಯುವ ಕಾರ್ಯಕರ್ತರಾದ ಶ್ರೀಶೈಲ ಬಿರಾದಾರ, ಬಸವರಾಜ ಬಿರಾದಾರ, ಮಲ್ಲಿನಾಥ ಬಿರಾದಾರ, ಶಾಂತರಾಯ ಬಿರಾದಾರ (24) ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಅವರನ್ನು ಸಿಂದಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.
undefined
ಈ ಮೊದಲು ಜೆಡಿಎಸ್ ಸದಸ್ಯನಾಗಿದ್ದ ಶಾಂತಗೌಡ ಬಿರಾದಾರ ಅವರ ನಿಧನದಿಂದಾಗಿ ಸಿಂದಗಿ ತಾಲೂಕಿನ ಮಲಘಾಣ ತಾಪಂ ಕ್ಷೇತ್ರ ತೆರವಾಗಿತ್ತು. ಹೀಗಾಗಿ ಕ್ಷೇತ್ರಕ್ಕೆ ಜ.2ರಂದು ಉಪಚುನಾವಣೆ ನಡೆದಿದ್ದು, ಶುಕ್ರವಾರ ಮತ ಎಣಿಕೆ ನಡೆಯಿತು. ಇದರಲ್ಲಿ ಕೇವಲ 2 ಮತಗಳ ಅಂತರದಿಂದ ಜೆಡಿಎಸ್-ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಈರಮ್ಮಗೌಡತಿ ಶಾಂತಗೌಡ ಬಿರಾದಾರ ಅವರು ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಶ್ರೀಮಂತ ಶರಣಪ್ಪ ರಾಮನಳ್ಳಿ ಗೆಲುವು ಸಾಧಿಸಿದರು.
ನಂತರ ಸ್ವಗ್ರಾಮ ಮಲಘಾಣದಲ್ಲಿ ಜೆಡಿಎಸ್ ಕಾರ್ಯಕರ್ತರು ವಿಜಯೋತ್ಸವ ಮಾಡಿ ಗ್ರಾಮದ ದೇವಾಲಯಗಳಿಗೆ ಅಭ್ಯರ್ಥಿಯೊಂದಿಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಸೋಲಿನಿಂದ ತೀವ್ರ ಹತಾಶೆಗೊಂಡ ಬಿಜೆಪಿ ಕಾರ್ಯಕರ್ತರು ಏಕಾಏಕಿಯಾಗಿ ಜೆಡಿಎಸ್ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ವೇಳೆ ಜೆಡಿಎಸ್ನ ನಾಲ್ವರು ಯುವ ಕಾರ್ಯಕರ್ತರಿಗೆ ಗಂಭೀರ ಗಾಯವಾಗಿದೆ.
ಬಿಜೆಪಿ ಅಭ್ಯರ್ಥಿ ಶ್ರೀಮಂತ ರಾಮನಳ್ಳಿ ಹಾಗೂ ಬಿಜೆಪಿ ಮುಖಂಡ ಯಶವಂತ್ರಾಯಗೌಡ ರೂಗಿ ಸಹೋದರರು ಏಕಾಏಕಿ ಹಲ್ಲೆ ಮಾಡಿದ್ದಾರೆ ಎಂದು ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ