ಉಪ ಚುನಾವಣೆಯಲ್ಲೂ ಕೈ-ದಳ ದೋಸ್ತಿ : ಅಭ್ಯರ್ಥಿಗಳು ಯಾರು..?

By Web DeskFirst Published Oct 7, 2018, 7:35 AM IST
Highlights

ಎರಡು ವಿಧಾನಸಭೆ ಹಾಗೂ ಮೂರು ಲೋಕಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಹುತೇಕ ಖಚಿತದ್ದು, ಕಣಕ್ಕಿಳಿಸುವ ಅಭ್ಯರ್ಥಿಗಳ ಬಗ್ಗೆ ಇದೀಗ ಪ್ಲಾನ್ ಮಾಡುತ್ತಿದೆ. 

ಬೆಂಗಳೂರು : ಎರಡು ವಿಧಾನಸಭೆ ಹಾಗೂ ಮೂರು ಲೋಕಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಹುತೇಕ ಖಚಿತ. ಶಿವಮೊಗ್ಗ ಲೋಕಸಭಾ ಕ್ಷೇತ್ರವೊಂದರ ಬಗ್ಗೆ ಚರ್ಚೆಯಾಗಬೇಕಿದೆ ಎಂಬುದನ್ನು ಬಿಟ್ಟರೆ ಉಳಿದ ಕ್ಷೇತ್ರಗಳ ಹಂಚಿಕೆ ಉಭಯ ಪಕ್ಷಗಳ ನಾಯಕರಲ್ಲಿ ಯಾವುದೇ ಗೊಂದಲವಿಲ್ಲ. 

ಹೀಗಾಗಿ ಮೈತ್ರಿ ಬಹುತೇಕ ಖಚಿತ ಎಂದೇ ಮೂಲಗಳು ಹೇಳುತ್ತವೆ. ಉಪ ಚುನಾವಣೆ ನಡೆಯಲಿರುವ ರಾಮನಗರ ಹಾಗೂ ಜಮಖಂಡಿ ವಿಧಾನಸಭಾ ಕ್ಷೇತ್ರಗಳ ಹಂಚಿಕೆ ಕುರಿತು ಉಭಯ ಪಕ್ಷದ ನಾಯಕರಲ್ಲಿ ಯಾವುದೇ ಗೊಂದಲವಿಲ್ಲ. ರಾಮನಗರ ಜೆಡಿಎಸ್ ಪಾಲಾಗಲಿದ್ದರೆ, ಜಮಖಂಡಿ ಕಾಂಗ್ರೆಸ್ ಪಡೆದುಕೊಳ್ಳಲಿದೆ. 

ಆದರೆ, ಮೂರು ಲೋಕಸಭಾ ಕ್ಷೇತ್ರಗಳ ಬಗ್ಗೆ ಈ ಸ್ಪಷ್ಟತೆ ಇಲ್ಲ. ಶಿವಮೊಗ್ಗ, ಮಂಡ್ಯ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರಗಳ ಪೈಕಿ ಮಂಡ್ಯ ಸಹಜವಾಗಿಯೇ ಜೆಡಿಎಸ್‌ಗೆ ಲಭಿಸಲಿದೆ. ಬಳ್ಳಾರಿಯಲ್ಲಿ ಕಾಂಗ್ರೆಸ್ ಪ್ರಭಾವ ವಿರುವುದರಿಂದ ಆ ಕ್ಷೇತ್ರ ಕಾಂಗ್ರೆಸ್‌ಗೆ ದೊರೆಯಲಿದೆ. ಶಿವಮೊಗ್ಗವು ತನಗೆ ಬೇಕು ಎಂಬುದು ಕಾಂಗ್ರೆಸ್ ವಾದ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಎರಡನೇ ಅತಿ ಹೆಚ್ಚು ಮತ ಪಡೆದಿದೆ. ಹೀಗಾಗಿ ಈ ಕ್ಷೇತ್ರವನ್ನು ಪಡೆಯುವ ಉದ್ದೇಶ ಕಾಂಗ್ರೆಸ್‌ಗೆ ಇದೆ.

ಆದರೆ, ಜೆಡಿಎಸ್ ಶಿವಮೊಗ್ಗದಲ್ಲಿ ಸ್ಪರ್ಧಿಸುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಶಿವಮೊಗ್ಗದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಜೆಡಿಎಸ್‌ಗೆ ಗೊಂದಲವಿದೆ. ಹೀಗಾಗಿ ಈ ಒಂದು ಕ್ಷೇತ್ರದ ಬಗ್ಗೆ ಉಭಯ ಪಕ್ಷಗಳ ನಾಯಕರ ನಡುವೆ ಚರ್ಚೆ ನಡೆದು ತೀರ್ಮಾನ ಹೊರಬಿದ್ದರೆ ಮೈತ್ರಿ ಸರಾಗ.

ಕಾಂಗ್ರೆಸ್ ಲೆಕ್ಕಾಚಾರ: ವಿಧಾನಸಭಾ ಕ್ಷೇತ್ರಗಳ ಪೈಕಿ ರಾಮನಗರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಚಿಂತನೆ ಇರುವುದರಿಂದ ಆ ಕ್ಷೇತ್ರಕ್ಕೆ ಯಾರನ್ನು ಕಣಕ್ಕೆ ಇಳಿಸಬೇಕು ಎಂಬ ಬಗ್ಗೆ ಕಾಂಗ್ರೆಸ್‌ನಲ್ಲಿ ಚರ್ಚೆಯೇ ನಡೆದಿಲ್ಲ. ಮೈತ್ರಿ ಸಂಭವಿಸದಿದ್ದರೆ ಮಾತ್ರ ಈ ಬಗ್ಗೆ ಕಾಂಗ್ರೆಸ್ ತಲೆಕೆಡಿಸಿಕೊಳ್ಳಬೇಕಿದೆ. ಸದ್ಯದ ಪ್ರಕಾರ ಇಂತಹ ಬೆಳವಣಿಗೆ ನಡೆಯುವ ಸಾಧ್ಯತೆ ಕಡಿಮೆ. ಹೀಗಾಗಿ ಜಮಖಂಡಿ ಕ್ಷೇತ್ರಕ್ಕೆ ಅಕಾಲಿಕ ನಿಧನಕ್ಕೆ
ಒಳಗಾದ ಆ ಕ್ಷೇತ್ರದ ಶಾಸಕರಾಗಿದ್ದ ಸಿದ್ದು ನ್ಯಾಮಗೌಡ ಅವರ ಪುತ್ರ ಆನಂದ ನ್ಯಾಮಗೌಡ ಅವರಿಗೆ ನೀಡಲು ತೀರ್ಮಾನಿಸಲಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ. 

ಆದರೆ, ಲೋಕಸಭಾ ಕ್ಷೇತ್ರಗಳ ವಿಚಾರದಲ್ಲಿ ಈ ಸ್ಪಷ್ಟತೆ ಕಾಂಗ್ರೆಸ್‌ನಲ್ಲಿ ಇಲ್ಲ. ಏಕೆಂದರೆ, ಲೋಕಸಭಾ ಉಪ ಚುನಾವಣೆಯನ್ನು ಕಾಂಗ್ರೆಸ್ ನಿರೀಕ್ಷಿಸಿರಲಿಲ್ಲ. ಆದಾಗ್ಯೂ, ಬಳ್ಳಾರಿ ಕ್ಷೇತ್ರಕ್ಕೆ ಶಾಸಕ ನಾಗೇಂದ್ರ ಅವರನ್ನು ಕಣಕ್ಕೆ ಇಳಿಸುವ ಚಿಂತನೆಯಿದೆ. ಇದಾಗದ ಪಕ್ಷದಲ್ಲಿ ಅವರ ಸಹೋದರ ಪ್ರಸಾದ್, ಸ್ಥಳೀಯ ನಾಯಕ ಲೋಕೇಶ್ ನಾಯಕ್ ಎಂಬುವರ ಹೆಸರು ಪರಿಗಣನೆಯಲ್ಲಿದೆ.  ಶಿವಮೊಗ್ಗ ಕ್ಷೇತ್ರ ಕಾಂಗ್ರೆಸ್‌ಗೆ ದೊರೆತರೆ ಆಗ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಮಂಜುನಾಥ್ ಭಂಡಾರಿ ಹಾಗೂ ಮಾಜಿ ಸಚಿವ ಕಿಮ್ಮನೆ  ರತ್ನಾಕರ ಅವರಿಬ್ಬರ ಪೈಕಿ ಒಬ್ಬರಿಗೆ ನೀಡಬಹುದು.

ಜೆಡಿಎಸ್ ಲೆಕ್ಕಾಚಾರ: ಇನ್ನು ಜೆಡಿಎಸ್‌ನಲ್ಲಿ ರಾಮ ನಗರ ಕ್ಷೇತ್ರಕ್ಕೆ ಅನಿತಾ ಕುಮಾರಸ್ವಾಮಿ ಅವರು ಕಣಕ್ಕಿಳಿ ಯುವುದು ಬಹುತೇಕ ಖಚಿತವಾಗಿದೆ. ಮಾರ್ಚ್ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿಯೇ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಪ್ರಯತ್ನ ನಡೆದಿತ್ತು. ಆದರೆ, ಕುಟುಂಬದಲ್ಲಿ ಭಿನ್ನಾಭಿ ಪ್ರಾಯ ಮೂಡುವ ಸಾಧ್ಯತೆಯಿಂದಾಗಿ ಕಾರ್ಯ ಕರ್ತರ ಒತ್ತಡ ಇದ್ದರೂ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲಿಲ್ಲ. ಜೆಡಿಎಸ್ ವರಿಷ್ಠ ಎಚ್. ಡಿ.ದೇವೇಗೌಡ ಕುಟುಂಬದಲ್ಲಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಸಹ ಚುನಾವಣಾ ಅಖಾಡಕ್ಕೆ ಇಳಿ ಯಲು ಆಸಕ್ತಿ ಹೊಂದಿದ್ದಾರೆ. 

ಅನಿತಾ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಿದರೆ ದೇವೇಗೌಡ ಕುಟುಂಬದಲ್ಲಿ ಅಸಮಾಧಾನ ಉಂಟಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಸಹ ಕೇಳಿಬಂದಿವೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷದ ಯುವನಾಯಕ ಮಧುಬಂಗಾರಪ್ಪ ಅವರನ್ನು ಕಣಕ್ಕಿಳಿಸುವ ಆಲೋಚನೆ ಇದೆ. ಅಲ್ಲದೇ, ನಟ ಶಿವರಾಜ್‌ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರಿಗೆ ಟಿಕೆಟ್ ನೀಡುವ ಬಗ್ಗೆಯೂ ಚಿಂತನೆ ಇದೆ. ಆದರೆ, ಲೋಕಸಭೆ ಚುನಾವಣೆಗೆ ಇಬ್ಬರು ಆಸಕ್ತಿ ಹೊಂದಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಕಾಂಗ್ರೆಸ್ ಗೆ ಬಿಟ್ಟು ಕೊಡುವ ಬಗ್ಗೆಯೂ ಚಿಂತನೆ ಇದೆ ಎಂದು ತಿಳಿದುಬಂದಿದ್ದು, ಚರ್ಚೆಯ ಬಳಿಕ ಅಂತಿಮವಾಗಲಿದೆ.

ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಒಂದು ಕುಟುಂಬದವರಿಗೆ ಟಿಕೆಟ್ ನೀಡದಿದ್ದರೆ ಸ್ವಯಂ ನಿವೃತ್ತಿ ಪಡೆದಿರುವ ಲಕ್ಷ್ಮೀ ಅಶ್ವಿನ್ ಗೌಡ ಅವರನ್ನು ಕಣಕ್ಕಿಳಿಸಬಹುದು ಎಂಬ ಮಾತುಗಳು ಕೇಳಿಬಂದಿವೆ. ವಿಧಾನಸಭಾ ಚುನಾವಣೆ ವೇಳೆ ಲಕ್ಷ್ಮೀ ಅಶ್ವಿನ್ ಗೌಡ ಅವರು ಪಕ್ಷದ ಪರವಾಗಿ ಕೆಲಸ ಮಾಡಿದ್ದರು. ಅಲ್ಲದೇ, ಹಲವು ವರ್ಷಗಳಿಂದ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದು,ಉತ್ತಮ ಸಂಪನ್ಮೂಲ ಹೊಂದಿರುವ ಕುಟುಂಬ ಎಂದು ಹೇಳಲಾಗಿದೆ. ಹೀಗಾಗಿ ಲಕ್ಷ್ಮೀ ಅಶ್ವಿನ್ ಗೌಡ ಅವರಿಗೆ ಟಿಕೆಟ್ ನೀಡಬಹುದು ಎಂದು ಹೇಳಲಾಗಿದೆ. ಇದಲ್ಲದೆ ಮಂಡ್ಯ ಜಿಲ್ಲೆಯ ಯುವ ನಾಯಕ ಅಶೋಕ್ ಜಯರಾಂ ಹೆಸರು ಸಹ ಪ್ರಚಲಿತದಲ್ಲಿದೆ. 

click me!