
ಬಳ್ಳಾರಿ (ಜೂ. 11): ಅಕ್ರಮ ಗಣಿಗಾರಿಕೆ ಹಾಗೂ ಗಡಿ ಒತ್ತುವರಿ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಸಚಿವ ಹಾಗೂ ಗಂಗಾವತಿಯ ಶಾಸಕ ಜಿ. ಜನಾರ್ದನ ರೆಡ್ಡಿ ಅವರಿಗೆ ತೆಲಂಗಾಣ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಈ ಮೂಲಕ ಜನಾರ್ಧನ ರೆಡ್ಡಿ ಅವರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದ್ದು, ಅವರ ಶಾಸಕರ ಸ್ಥಾನ ಸದ್ಯಕ್ಕೆ ಉಳಿಯುವ ಸಾಧ್ಯತೆಯಿದೆ.
ಹೈದರಾಬಾದ್‌ನ ನಾಮಪಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಕಳೆದ ಮೇ 30ರಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಸೇರಿದಂತೆ 6 ಮಂದಿ ಆರೋಪಿಗಳಿಗೆ ಶಿಕ್ಷೆ ವಿಧಿಸಿತ್ತು. ಈ ತೀರ್ಪು 2011ರಲ್ಲಿ ನಡೆದ ಓಬಳಾಪುರಂ ಮೈನಿಂಗ್ ಕಂಪನಿ (OMC) ಮೂಲಕ ಗಡಿ ಮೀರಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊರಡಿಸಲಾಗಿತ್ತು. ಒಟ್ಟು 850 ಕೋಟಿ ರೂ. ಮೌಲ್ಯದ ಗಣಿಸಂಪತ್ತು ಲೂಟಿ ಆರೋಪದಡಿ, ಜನಾರ್ದನ ರೆಡ್ಡಿ 2011ರ ಸೆಪ್ಟೆಂಬರ್ 5ರಂದು ಸಿಬಿಐ ವಶಕ್ಕೆ ಸೇರುವ ಮೂಲಕ 3 ವರ್ಷ 9 ತಿಂಗಳು ಜೈಲುವಾಸ ಅನುಭವಿಸಿದ್ದರು.
ತೆಲಂಗಾಣ ಹೈಕೋರ್ಟ್ ತಡೆಯಾಜ್ಞೆ: ರಾಜಕೀಯ ಭವಿಷ್ಯಕ್ಕೆ ಉಸಿರಾಟ
ಸಿಬಿಐ ಕೋರ್ಟ್‌ನ ಆದೇಶದ ವಿರುದ್ಧ ಜನಾರ್ದನ ರೆಡ್ಡಿ ಹೈಕೋರ್ಟ್ ಮೆಟ್ಟಿಲೇರಿದ ಬಳಿಕ, ತೆಲಂಗಾಣ ಹೈಕೋರ್ಟ್ ಇದೀಗ ಸಿಬಿಐ ಕೋರ್ಟ್ ತೀರ್ಪಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಈ ತೀರ್ಪು ಅವರ ರಾಜಕೀಯ ಭವಿಷ್ಯಕ್ಕೆ ಉಸಿರಾಟ ನೀಡಿದ್ದು, ಶಾಸಕರ ಸ್ಥಾನ ಉಳಿಸಿಕೊಳ್ಳುವಲ್ಲಿ ಸಹಾಯಕವಾಗಿದೆ. ಸಿಬಿಐ ವಿಚಾರಣೆ ಬಳಿಕ ರಾಜಕೀಯದಿಂದ ದೂರವಿದ್ದ ಜನಾರ್ದನ ರೆಡ್ಡಿ, 2023ರಲ್ಲಿ ಹೊಸ ರಾಜಕೀಯ ಪಕ್ಷ 'ಕಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ)' ಸ್ಥಾಪಿಸಿ, ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸಿ ವಿಜೇತರಾಗಿದ್ದರು. ಈ ಮೂಲಕ ರಾಜ್ಯದ ರಾಜ್ಯ ರಾಜಕಾರಣಕ್ಕೆ ಸಕ್ರಿಯವಾಗಿ ಪಾಲ್ಗೊಂಡ ನಂತರ ಮಾತೃ ಪಕ್ಷವಾದ ಬಿಜೆಪಿಯೊಂದಿಗೆ ಕೆಆರ್‌ಪಿಪಿಯನ್ನು ವಿಲೀನ ಮಾಡಿದರು.
ಮತ್ತೆ ರಾಜಕೀಯ ಬಲದ ಪ್ರದರ್ಶನ?
ಈ ತಾತ್ಕಾಲಿಕ ತಡೆಯಾಜ್ಞೆಯ ಹಿನ್ನೆಲೆಯಲ್ಲಿ, ಜನಾರ್ದನ ರೆಡ್ಡಿ ಮತ್ತೊಮ್ಮೆ ರಾಜಕೀಯ ವೇದಿಕೆಯಲ್ಲಿ ಬಲವಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಈ ತೀರ್ಪು ಕೇವಲ ತಾತ್ಕಾಲಿಕ ತಡೆಯಾಜ್ಞೆಯಾಗಿದ್ದು, ಮುಂದಿನ ದಿನಗಳಲ್ಲಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ತೀರ್ಪು ನಿರ್ಣಾಯಕವಾಗಲಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಹಲವು ವರ್ಷಗಳ ಕಾಲ ನ್ಯಾಯಾಂಗ ಪ್ರಕ್ರಿಯೆ ನಡೆದು ಇದೀಗ ತಾತ್ಕಾಲಿಕ ತಡೆಯಾಜ್ಞೆ ಸಿಕ್ಕಿರುವುದು, ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ. ಇದೇ ಸಂದರ್ಭದಲ್ಲಿ, ಆರೋಪಿಗೆ ಮುಂದಿನ ದಿನಗಳಲ್ಲಿ ಶಿಕ್ಷೆ ಆಗಬಹುದೇ ಅಥವಾ ಕ್ಲೀನ್ ಚಿಟ್ ಸಿಗಬಹುದೇ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ