ಬೆಳಗಾವಿ ಎಂಪಿ ಉಪಚುನಾವಣೆಗೆ ಶೆಟ್ಟರ್‌ ಅಭ್ಯರ್ಥಿ?

By Suvarna NewsFirst Published Dec 5, 2020, 7:57 AM IST
Highlights

ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಅವರು ರಾಷ್ಟ್ರ ರಾಜಕಾರಣಕ್ಕೆ| ಬೆಳಗಾವಿ ಎಂಪಿ ಉಪಚುನಾವಣೆಗೆ?| ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಪಕ್ಷದ ವರಿಷ್ಠರ ಗಂಭೀರ ಚಿಂತನೆ

ಬೆಂಗಳೂರು(ಡಿ.05): ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಅವರು ರಾಷ್ಟ್ರ ರಾಜಕಾರಣಕ್ಕೆ ಹೋಗುವ ಸಾಧ್ಯತೆ ಕಂಡು ಬರುತ್ತಿದ್ದು, ಸುರೇಶ್‌ ಅಂಗಡಿ ಸಾವಿನಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಪಕ್ಷದ ವರಿಷ್ಠರು ಗಂಭೀರ ಚಿಂತನೆ ನಡೆಸಿದ್ದಾರೆ.

ಒಂದು ವೇಳೆ ಅಭ್ಯರ್ಥಿಯಾಗಿ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದಲ್ಲಿ ಮುಂದೆ ಕೇಂದ್ರದ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ನೀಡುವ ಪ್ರಸ್ತಾಪವೂ ಇದೆ ಎನ್ನಲಾಗಿದೆ.

ಶನಿವಾರ ನಡೆಯುವ ಪಕ್ಷದ ರಾಜ್ಯ ಕಾರ್ಯಕಾರಿಣಿ ವೇಳೆ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆಯೂ ನಾಯಕರ ನಡುವೆ ಅನೌಪಚಾರಿಕವಾಗಿ ಸಮಾಲೋಚನೆ ನಡೆಯುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈಗಾಗಲೇ ಶೆಟ್ಟರ್‌ ಅವರೊಂದಿಗೆ ಹಿರಿಯ ನಾಯಕರು ಮಾತುಕತೆ ನಡೆಸಿದ್ದಾರೆ. ಶೆಟ್ಟರ್‌ ಅವರು ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲವಾದರೂ ತಮ್ಮ ಆಪ್ತರೊಂದಿಗೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಅಂತಿಮವಾಗಿ ಪಕ್ಷದ ವರಿಷ್ಠರು ಸೂಚಿಸಿದಲ್ಲಿ ಕಣಕ್ಕಿಳಿಯಲು ಒಪ್ಪುತ್ತಾರೆ ಎಂದು ತಿಳಿದು ಬಂದಿದೆ.

ಜಗದೀಶ್‌ ಶೆಟ್ಟರ್‌ ಅವರನ್ನು ಅಭ್ಯರ್ಥಿಯನ್ನಾಗಿಸುವ ಮೂಲಕ ಬಿಜೆಪಿ ವರಿಷ್ಠರು ಒಂದೇ ಕಲ್ಲಿನಿಂದ ಹಲವು ಹಕ್ಕಿಗಳನ್ನು ಹೊಡೆಯುವ ತಂತ್ರ ರೂಪಿಸಿದ್ದಾರೆ.

1.ರಾಜ್ಯ ಸಚಿವ ಸಂಪುಟದಲ್ಲಿ ಮತ್ತೊಂದು ಸಚಿವ ಸ್ಥಾನ ತೆರವಾದಂತಾಗುತ್ತದೆ. ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿನ ಬಣ ರಾಜಕೀಯದ ಹಿನ್ನೆಲೆಯಲ್ಲಿ ಶೆಟ್ಟರ್‌ ಅವರನ್ನು ಅಭ್ಯರ್ಥಿಯನ್ನಾಗಿಸಿದರೆ ಎಲ್ಲ ಬಣಗಳೂ ಸುಮ್ಮನೆ ಕೆಲಸ ಮಾಡಲಿವೆ.

2.ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿದಲ್ಲಿ ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯತ ನಾಯಕನೊಬ್ಬನಿಗೆ ಸ್ಥಾನ ಕೊಟ್ಟಂತಾಗುತ್ತದೆ.

3.ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಂಥ ಅನಿವಾರ್ಯ ಸನ್ನಿವೇಶ ಸೃಷ್ಟಿಯಾದಲ್ಲಿ ಆಕಾಂಕ್ಷಿಗಳ ರೇಸ್‌ನಿಂದ ಶೆಟ್ಟರ್‌ ಅವರನ್ನು ದೂರವಿರಿಸಿದಂತಾಗುತ್ತದೆ.

4.ಅಕಾಲಿಕವಾಗಿ ನಿಧನ ಹೊಂದಿದ ಕೇಂದ್ರದ ಸಚಿವರಾಗಿದ್ದ ಸುರೇಶ್‌ ಅಂಗಡಿ ಅವರ ಸಂಬಂಧಿಕರಿಗೇ (ಬೀಗರು) ಟಿಕೆಟ್‌ ನೀಡಿದಂತಾಗುತ್ತದೆ.

click me!