ಬಾಗಲಕೋಟೆಯಲ್ಲಿ ಈ ಬಾರಿ ‘ಟಗರು’ಗಳ ಕಾಳಗ: ಗೆದ್ದವರಿಗೆ ಕ್ಷೇತ್ರ!

By Web DeskFirst Published Feb 7, 2019, 12:17 PM IST
Highlights

ಸಿದ್ದರಾಮಯ್ಯ ವರ್ಸಸ್ ಈಶ್ವರಪ್ಪ ಪ್ರತಿಷ್ಠೆ ಅಖಾಡವಾಗಿ ಪರಿವರ್ತನೆಗೊಂಡ ಬಾಗಲಕೋಟೆ ಲೋಕಸಭೆ ಕ್ಷೇತ್ರ| ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪಗೆ ಬಾಗಲಕೋಟೆ ಲೋಕಸಭೆ ಉಸ್ತುವಾರಿ| ಕಾಂಗ್ರೆಸ್‌ನಲ್ಲಿ ಬಾಗಲಕೋಟೆ ಲೋಕಸಭೆ ಜವಾಬ್ದಾರಿ ಮಾಜಿ ಸಿಎಂ ಸಿದ್ದರಾಮಯ್ಯ ಹೆಗಲಿಗೆ| ಜಾತಿ ಲೆಕ್ಕಾಚಾರದಲ್ಲಿ ಮತಬೇಟೆಗೆ ಮುಂದಾಗಿರೋ ಬಿಜೆಪಿ ಮತ್ತು ಕಾಂಗ್ರೆಸ್| ಉಸ್ತುವಾರಿ ನೀಡಿದ ಬೆನ್ನಲ್ಲೆ ಬೆಂಗಳೂರಲ್ಲಿ ಜಿಲ್ಲೆ ಬಿಜೆಪಿ ನಾಯಕರಿಗೆ ಸಭೆ ಕರೆದ ಈಶ್ವರಪ್ಪ| ಟಗರುಗಳ ಪ್ರತಿಷ್ಠೆಯ ಕಾಳಗವಾಗಲಿರೋ ಬಾಗಲಕೋಟೆ ಲೋಕಸಭಾ ಮತಕ್ಷೇತ್ರ

ಮಲ್ಲಿಕಾರ್ಜುನ ಹೊಸಮನಿ

ಬಾಗಲಕೋಟೆ(ಫೆ.07): ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಾವು ಜೋರಾಗುತ್ತಿರೋ ಬೆನ್ನಲ್ಲೆ ಉತ್ತರ ಕರ್ನಾಟಕದ ಬಾಗಲಕೋಟೆ ಲೋಕಸಭಾ ಮತಕ್ಷೇತ್ರ ಇದೀಗ ಈ ಬಾರಿ ಮತ್ತೇ ಪ್ರತಿಷ್ಠೆಯ ಕಣವಾಗಿ ಹೊರಹೊಮ್ಮಲಿದೆ. 

ಒಂದೆಡೆ ಸ್ವಕ್ಷೇತ್ರದ ಜಿಲ್ಲೆಯಲ್ಲಿ ಕಾಂಗ್ರೆಸ್ ಅರಳಿಸಲು ಮುಂದಾಗಿರೋ ಮಾಜಿ ಸಿದ್ದರಾಮಯ್ಯಗೆ ಟಾಂಗ್ ಕೊಡಲು ಬಿಜೆಪಿ ಹೈಕಮಾಂಡ್ ಸಜ್ಜಾಗಿದ್ದು ಜಾತಿ ಅಸ್ತ್ರ ಪ್ರಯೋಗಿಸಿದೆ. 

ಹೀಗಾಗಿ ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಉಸ್ತುವಾರಿ ಹೊಣೆಯನ್ನ ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪಗೆ ವಹಿಸಿದ್ದೇ ತಡ ಈ ಮೂಲಕ ಬಾಗಲಕೋಟೆ ಮತಕ್ಷೇತ್ರ ಸಿದ್ದರಾಮಯ್ಯ ಮತ್ತು ಈಶ್ವರಪ್ಪನವರಿಗೆ ಪ್ರತಿಷ್ಠೆಯ ಕಣವಾಗಿ ರಾಜ್ಯದಲ್ಲಿ ಗಮನ ಸೆಳೆಯಲಿದೆ ಅನ್ನೋ ಲೆಕ್ಕಾಚಾರ ಶುರುವಾಗಿದೆ.

"

ಉತ್ತರ ಕರ್ನಾಟಕದಲ್ಲಿ ಬಿಜೆಪಿಯ ಭದ್ರಕೋಟೆಯಾಗಿರೋ ಬಾಗಲಕೋಟೆ ಲೋಕಸಭಾ ಮತಕ್ಷೇತ್ರ ಈ ಬಾರಿ ಮತ್ತಷ್ಟು ಸುದ್ದಿ ಮಾಡಲಿದೆ. ಈ ಬಾರಿ ಚಾಮುಂಡೇಶ್ವರಿಯಲ್ಲಿ ಸೋತು ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ ಆಯ್ಕೆಯಾಗಿರೋ ಮಾಜಿ ಸಿಎಂ ಸಿದ್ದರಾಮಯ್ಯ, ಶತಾಯಗತಾಯ ತಮ್ಮ ಸ್ವಕ್ಷೇತ್ರದ ಜಿಲ್ಲೆ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸೋಕೆ ಇನ್ನಿಲ್ಲದ ತಂತ್ರ ಹೆಣೆಯುತ್ತಿದ್ದಾರೆ. 

ಈಗಾಗಲೇ ಸಮ್ಮಿಶ್ರ ಸರ್ಕಾರದಲ್ಲೂ ಜಿಲ್ಲೆಗೆ ಯಥೇಚ್ಚವಾಗಿ ಅನುದಾನ ತರುವ ಮೂಲಕ ಜನ್ರನ್ನ ಮೆಚ್ಚಿಸೋ ಕೆಲ್ಸ ಮಾಡ್ತಿದ್ದಾರೆ. ಆದ್ರೆ ಇದಕ್ಕೆ ಪ್ರತಿಯಾಗಿ ಬಿಜೆಪಿ ಹೈಕಮಾಂಡ್ ಜಾತಿ ಅಸ್ತ್ರವನ್ನೇ ದಾಳವನ್ನಾಗಿ ಉರುಳಿಸಿ ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಉಸ್ತುವಾರಿಯನ್ನ ಇದೀಗ ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪಗೆ ವಹಿಸಿಕೊಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಈ ಬಾರಿ ಬಾಗಲಕೋಟೆ ಲೋಕಸಭಾ ಮತಕ್ಷೇತ್ರ ಕೇವಲ ಅಭ್ಯರ್ಥಿಗಳ ಕಾದಾಟಕ್ಕೆ ವೇದಿಕೆಯಾಗಿರದೇ ಸಿದ್ದರಾಮಯ್ಯ ವರ್ಸಸ್ ಈಶ್ವರಪ್ಪ ಎನ್ನುವಂತಾಗಿ ಪ್ರತಿಷ್ಠೆಯ ಕಾಳಗವಾಗಿ ಪರಿಣಮಿಸಲಿದೆ. ಮೇಲಾಗಿ ಜಿಲ್ಲಾ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದೇ ತಡ ಈಶ್ವರಪ್ಪ ನಾಳೆ ಬೆಂಗಳೂರಿನಲ್ಲಿ ಬಾಗಲಕೋಟೆ ಜಿಲ್ಲೆಯ ಶಾಸಕರ, ಮಾಜಿ ಸಚಿವರ, ಪ್ರಮುಖ ಮುಖಂಡರ ಸಭೆ ಕರೆದು ರಣತಂತ್ರ ಹೆಣೆಯೋಕೆ ಸಜ್ಜಾಗಿದ್ದಾರೆ.

"

ಇನ್ನು ಬಾಗಲಕೋಟೆ ಲೋಕಸಭಾ ಮತಕ್ಷೇತ್ರದಲ್ಲಿ ಕಳೆದ 3 ಬಾರಿಯಿಂದ ಬಿಜೆಪಿಯ ಪಿ.ಸಿ.ಗದ್ದಿಗೌಡರ ಸಂಸದರಾಗಿ ಆಯ್ಕೆಯಾಗುತ್ತಾ ಬರುತ್ತಿದ್ದು, ಈ ಬಾರಿ ಅಭ್ಯರ್ಥಿ ಬೇರೆಯಾಗಬಹುದೆನ್ನುವ ಲೆಕ್ಕಾಚಾರವೂ ಇದೆ. ಆದ್ರೆ ಈ ಬಾರಿ ಜಿಲ್ಲೆಯಿಂದಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಯ್ಕೆಯಾಗಿರೋದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಇನ್ನಷ್ಟು ಹುರುಪು ಹುಮ್ಮಸ್ಸು ನೀಡಿದೆ. 

ಹೀಗಾಗಿ ಅಭ್ಯರ್ಥಿಯನ್ನ ಆಯ್ಕೆ ಮಾಡೋ ವಿಚಾರ ಹಿಡಿದು ಚುನಾವಣೆ ಮುಗಿಯೋವರೆಗೂ ಸಿದ್ದರಾಮಯ್ಯನವರ ಉಸ್ತುವಾರಿಯಲ್ಲೇ ಬಾಗಲಕೋಟೆ ಲೋಕಸಭೆ ಚುನಾವಣೆ ನಡೆಯಲಿದೆ ಎನ್ನಲಾಗುತ್ತಿದೆ. 

ಈ ಮಧ್ಯೆ ಜಿಲ್ಲೆಗೆ ಯಾರೇ ಬಂದ್ರೂ ಸಿದ್ದರಾಮಯ್ಯನವರ ಲೆಕ್ಕಾಚಾರ ತಪ್ಪಿಸೋಕೆ ಆಗೋಲ್ಲ. ಹೀಗಾಗಿ ಈ ಬಾರಿ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತೇ ಅನ್ನೋ ಲೆಕ್ಕಾಚಾರದಲ್ಲಿ ಕಾರ್ಯಕರ್ತರು ಹುರುಪು ಹುಮ್ಮಸ್ಸಿನಲ್ಲಿದ್ದಾರೆ.

"

ಒಟ್ಟಿನಲ್ಲಿ ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಚುನಾವಣೆ ಈ ಬಾರಿ ಅಬ್ಯರ್ಥಿಗಳಿಗಿಂತಲೂ ರಾಜ್ಯ ಮಟ್ಟದ ನಾಯಕರಾದ ಸಿದ್ದರಾಮಯ್ಯ ಮತ್ತು ಈಶ್ವರಪ್ಪನವರ ಪ್ರತಿಷ್ಠೆಯ ಕಣವಾಗಿ ರೂಪಗೊಳ್ಳೋದಂತು ಗ್ಯಾರಂಟಿ. 

ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತು ರಾಮುಲು ಅವರ ಸ್ಪರ್ಧೆಯಿಂದ ಗಮನಸೆಳೆದಿದ್ದ ಬಾಗಲಕೋಟೆ ಈ ಬಾರಿ ಉಭಯ ನಾಯಕರ ಉಸ್ತುವಾರಿಯಿಂದ ಪ್ರತಿಷ್ಠೆ ಕಣವಾಗಿ ಗಮನಸೆಳೆಯುತ್ತಿರೋದಂತು ಸುಳ್ಳಲ್ಲ.

click me!