ಪರಂ ಪಾಲಿಗೆ ಅಣ್ಣನ ಮಗ ಆನಂದ್‌ ವಿಲನ್‌?

By Web DeskFirst Published Oct 12, 2019, 7:52 AM IST
Highlights

ಪರಂ ಪಾಲಿಗೆ ಅಣ್ಣನ ಮಗ ಆನಂದ್‌ ವಿಲನ್‌?| ಪರಂ ಒಡೆತನದ ಮೆಡಿಕಲ್‌ ಕಾಲೇಜಿನ ಉಸ್ತುವಾರಿ ಆನಂದ್‌| ಸೀಟು ಬ್ಲಾಕಿಂಗ್‌ ದಂಧೆ ನಡೆಸಿದ್ದೂ ಇವರೇ?

ಬೆಂಗಳೂರು[ಅ.12]: ಐಟಿ ದಾಳಿ ಸುಳಿಗೆ ಸಿಲುಕಿದ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಪಾಲಿಗೆ ವಿಲನ್‌ ಆಗಿದ್ದು ಖುದ್ದು ಅವರ ಅಣ್ಣನ ಮಗನಾದ ಸ್ಯಾಂಡಲ್‌ವುಡ್‌ ಹೀರೋ ಆನಂದ್‌ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್‌ನ ಪ್ರಭಾವಿ ರಾಜಕಾರಣಿಗಳ ಪೈಕಿ ಒಬ್ಬರಾದ ಪರಮೇಶ್ವರ್‌ ಮೇಲೆ ಐಟಿ ಇಲಾಖೆ ಕಣ್ಣು ಬೀಳಲು ಆನಂದ್‌ ನಡೆಸುತ್ತಿದ್ದ ಮೆಡಿಕಲ್‌ ಸೀಟು ಬ್ಲಾಕಿಂಗ್‌ ದಂಧೆಯೇ ಕಾರಣ ಎನ್ನಲಾಗುತ್ತಿದೆ.

ಪರಮೇಶ್ವರ್‌ ಒಡೆತನದ ಕಾಲೇಜುಗಳಲ್ಲಿ ಮೆಡಿಕಲ್‌ ಮೆರಿಟ್‌ ಸೀಟುಗಳನ್ನು ಬ್ಲಾಕ್‌ ಮಾಡಿಸಿ ಬಳಿಕ ಆ ಸೀಟುಗಳನ್ನು ಮ್ಯಾನೇಜ್‌ಮೆಂಟ್‌ ಸೀಟುಗಳಾಗಿ ಪರಿವರ್ತಿಸಿ ಲಕ್ಷಾಂತರ ರು.ಗೆ ಮಾರಾಟ ಮಾಡುತ್ತಿರುವ ಬಗ್ಗೆ ಐಟಿ ಇಲಾಖೆಗೆ ಅನುಮಾನ ಬಂದಿದ್ದೇ ಐಟಿ ದಾಳಿಗೆ ಕಾರಣ ಹಾಗೂ ಈ ಬ್ಲಾಕಿಂಗ್‌ ದಂಧೆಯ ಉಸ್ತುವಾರಿ ಆನಂದ್‌ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಪರಮೇಶ್ವರ್ ಒಡೆತನದ ಕಾಲೇಜು ಒಮ್ಮೆಯೂ ತೆರಿಗೆ ಕಟ್ಟಿಲ್ಲ..! ಕೋಟಿ ಕೋಟಿ ವಂಚನೆ

ಏನಿದು ಸೀಟು ಬ್ಲಾಕ್‌ ದಂಧೆ:

ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಎರಡು ರೀತಿಯಲ್ಲಿ ಸೀಟುಗಳು ವಿದ್ಯಾರ್ಥಿಗಳಿಗೆ ಲಭ್ಯ ಇರುತ್ತದೆ. ನೀಟ್‌ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಸರ್ಕಾರಿ ಅಥವಾ ಮೆರಿಟ್‌ ಸೀಟ್‌ ಲಭ್ಯವಾಗುತ್ತದೆ. ಈ ಸೀಟುಗಳಿಗೆ ಶುಲ್ಕ ಕಡಿಮೆ ಇರುವುದರಿಂದ ವಿದ್ಯಾರ್ಥಿಗಳು ಈ ಸೀಟು ಪಡೆಯಲು ಕಷ್ಟಪಡುತ್ತಾರೆ. ಮತ್ತೊಂದು ಕಡೆ ನೀಟ್‌ ಪರೀಕ್ಷೆಯಲ್ಲಿ ಉತ್ತಮ ರಾರ‍ಯಂಕ್‌ ಪಡೆಯದವರು ಅಥವಾ ಪರೀಕ್ಷೆ ಬರೆಯದ ವಿದ್ಯಾರ್ಥಿಗಳು ಮ್ಯಾನೇಜ್‌ಮೆಂಟ್‌ ಕೋಟಾದ ಅಡಿ ಪ್ರವೇಶ ಪಡೆಯುತ್ತಾರೆ. ಈ ಮ್ಯಾನೇಜ್‌ಮೆಂಟ್‌ ಸೀಟುಗಳಿಗೆ ಲಕ್ಷಾಂತರ ರು. ಪಡೆಯಲಾಗುತ್ತದೆ. ಅದಕ್ಕೆ ಡೊನೇಶನ್‌ ಸೀಟು ಎಂದು ಕರೆಯಲಾಗುತ್ತದೆ.

ನೀಟ್‌ ಪರೀಕ್ಷೆಯಲ್ಲಿ ಉತ್ತಮ ರಾರ‍ಯಂಕ್‌ ಪಡೆದ ವಿದ್ಯಾರ್ಥಿಗಳನ್ನು ಖಾಸಗಿ ಕಾಲೇಜುಗಳಲ್ಲಿ ಈ ಸೀಟು ಬ್ಲಾಕ್‌ ಅವ್ಯವಹಾರಕ್ಕೆ ಬಳಸಲಾಗುತ್ತದೆ. ಉತ್ತಮ ರಾರ‍ಯಂಕ್‌ ಪಡೆದ ವಿದ್ಯಾರ್ಥಿಗೆ ರಾಜ್ಯದ ಖಾಸಗಿ ಕಾಲೇಜಿನಲ್ಲಿ ಸರ್ಕಾರಿ ಸೀಟು ಸಿಗುತ್ತದೆ. ಆದರೆ, ಆತ ಬೇರೆ ರಾಜ್ಯದ ಕಾಲೇಜು ಸೇರಲು ಬಯಸುತ್ತಾನೆ. ಸರ್ಕಾರದ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ವಿದ್ಯಾರ್ಥಿ ಯಾವುದೋ ಒಂದು ಕಾರಣ ಮುಂದಿಟ್ಟು ಸೀಟು ರದ್ದುಪಡಿಸುವುದಾಗಿ ಮಾಹಿತಿ ನೀಡುತ್ತಾನೆ.

ಈ ಹಂತದಲ್ಲಿ ಸರ್ಕಾರಕ್ಕೆ ಕೌನ್ಸೆಲಿಂಗ್‌ ನಡೆಸಿ ಮತ್ತೆ ಈ ಸೀಟು ಹಂಚಿಕೆ ಮಾಡೋದು ಕಷ್ಟಸಾಧ್ಯ. ಹಾಗಾಗಿ ಸರ್ಕಾರಿ ಕೋಟಾದ ಈ ಸೀಟು ಮ್ಯಾನೇಜ್‌ಮೆಂಟ್‌ ಪಾಲಾಗುತ್ತದೆ. ಈ ವೇಳೆ ಆ ಸೀಟನ್ನು ಒಂದು ಕೋಟಿ ರು.ವರೆಗೂ ಹಣ ಪಡೆದು ಬೇರೆ ವಿದ್ಯಾರ್ಥಿಗೆ ಮಾರಾಟ ಮಾಡಲಾಗುತ್ತದೆ. ಈ ಸೀಟ್‌ ಬ್ಲಾಕ್‌ ವ್ಯವಹಾರ ಪೂರ್ವ ನಿಗದಿಯಂತೆ ನಡೆಯುತ್ತದೆ. ಈ ವ್ಯವಹಾರದಲ್ಲಿ ವಿದ್ಯಾರ್ಥಿ, ದಲ್ಲಾಳಿ ಹಾಗೂ ಕಾಲೇಜಿನ ಆಡಳಿತ ಮಂಡಳಿ ತಮ್ಮ ಪಾಲು ಹಂಚಿಕೊಳ್ಳುತ್ತಾರೆ.

ರಾಜ್ಯದಲ್ಲಿ ಈ ಸೀಟ್‌ ಬ್ಲಾಕ್‌ ವ್ಯವಹಾರದ ಬಗ್ಗೆ ಈ ಹಿಂದೆ ಗುಸುಗುಸು ಕೇಳಿಬಂದಿತ್ತು. ಈಗ ಇಬ್ಬರು ವಿದ್ಯಾರ್ಥಿಗಳಿಂದ ಸೀಟ್‌ ಬ್ಲಾಕ್‌ ದಂಧೆ ಬಹಿರಂಗವಾಗಿದೆ. ಈ ವಿದ್ಯಾರ್ಥಿಗಳು ನೀಡಿದ ಮಾಹಿತಿ ಮೇರೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಮೇಶ್ವರ್‌ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ.

ಪರಮೇಶ್ವರ್ ಖಜಾನೆ ಜಾಲಾಡಿದ IT: 100 ಕೋಟಿ ಅಘೋಷಿತ ಆಸ್ತಿ ಪತ್ತೆ

ಈ ಹಿಂದೆ ನೀಟ್‌ ಪರೀಕ್ಷೆಯಲ್ಲಿ ತೇರ್ಗಡೆಯಾದ ಇಬ್ಬರು ವಿದ್ಯಾರ್ಥಿಗಳ ಸೀಟ್‌ಗಳನ್ನು ಬ್ಲಾಕ್‌ ಮಾಡಲಾಗಿತ್ತು. ಈ ವಿಚಾರವಾಗಿ ಆದಾಯ ತೆರಿಗೆ ಇಲಾಖೆಗೆ ದೂರು ದಾಖಲಾಗಿತ್ತು. ಈ ಸಂಬಂಧ ಆ ಇಬ್ಬರು ವಿದ್ಯಾರ್ಥಿಗಳನ್ನು ಐಟಿ ಇಲಾಖೆ ವಿಚಾರಣೆ ಮಾಡಿದ ಸಮಯದಲ್ಲಿ ವಿದ್ಯಾರ್ಥಿಗಳು ಸೀಟ್‌ ಬ್ಲಾಕ್‌ ಆಗಿದೆ ಎನ್ನುವುದನ್ನು ಒಪ್ಪಿಕೊಂಡಿದ್ದರು. ಈ ವೇಳೆ ಕೆಲ ದಲ್ಲಾಳಿಗಳ ಹೆಸರನ್ನು ಬಹಿರಂಗಪಡಿಸಿದ್ದರು. ಇದರ ಜಾಡು ಹಿಡಿದೇ ಐಟಿ ಅಧಿಕಾರಿಗಳು ಪರಮೇಶ್ವರ್‌ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ.

ಮ್ಯಾನೇಜ್‌ಮೆಂಟ್‌ ಕೋಟಾದ ಸೀಟುಗಳನ್ನು ನೀಡುವಾಗ ನಗದು ರೂಪದಲ್ಲಿ ಹಣ ಪಡೆಯಲಾಗುತ್ತದೆ. ಆಡಳಿತ ಮಂಡಳಿಯೇ ವಿದ್ಯಾರ್ಥಿಯ ಶುಲ್ಕ ಪಾವತಿ ಮಾಡುತ್ತದೆ. ಬ್ಯಾಂಕ್‌ ಮುಖಾಂತರ ಹಣ ಪಾವತಿಸಿದರೆ, ಐಟಿ ಇಲಾಖೆಗೆ ಲೆಕ್ಕ ಕೊಡಬೇಕು ಮತ್ತು ತೆರಿಗೆ ಕಟ್ಟಡಬೇಕು. ಹಾಗಾಗಿ ಈ ತೆರಿಗೆ ವಂಚಿಸಲು ಕಾಲೇಜಿನ ಆಡಳಿತ ಮಂಡಳಿ ನಗದು ವ್ಯವಹಾರ ನಡೆಸುತ್ತವೆ. ಪರಮೇಶ್ವರ್‌ ಒಡೆತನದ ಕಾಲೇಜಿನ ಮೇಲೂ ಈ ತೆರಿಗೆ ವಂಚನೆ ಆರೋಪ ಕೇಳಿ ಬಂದಿದ್ದು, ಈ ವ್ಯವಹಾರದ ಹಿಂದೆ ಪರಮೇಶ್ವರ್‌ ಅಣ್ಣನ ಮಗ ಆನಂದ್‌ ಪಾತ್ರವಿದೆ ಎನ್ನಲಾಗುತ್ತಿದೆ.

ಸಿನಿಮಾ ನಟ ಆನಂದ್‌

ಪರಮೇಶ್ವರ್‌ ಅವರ ಅಣ್ಣ ಶಿವಪ್ರಸಾದ್‌ ಅವರ ಪುತ್ರ ಆನಂದ್‌. ಇವರು ಕನ್ನಡ ಸಿನಿಮಾ ಎಕೆ-56 ಸಿನಿಮಾದಲ್ಲಿ ನಾಯಕ ನಟರಾಗಿಯೂ ನಟಿಸಿದ್ದರು.

ಆನಂದ್‌ ಅವರ ತಂದೆ ಡಾ.ಶಿವಪ್ರಸಾದ್‌ ಅವರು ಪರಮೇಶ್ವರ್‌ಗೆ ಕೇವಲ ಅಣ್ಣನಾಗದೇ ಗುರುವೂ ಆಗಿದ್ದರು. ಪರಮೇಶ್ವರ್‌ರ ಎಲ್ಲಾ ಏಳುಬೀಳುಗಳಲ್ಲಿ ಜತೆಗಿದ್ದು ಪ್ರೋತ್ಸಾಹ ನೀಡುತ್ತಿದ್ದರು. ರಾಜಕೀಯದಲ್ಲಿ ದೊಡ್ಡ ಮಟ್ಟದ ಹೆಸರು ಮಾಡದಿದ್ದರೂ ಸ್ಥಳೀಯ ಕಾಂಗ್ರೆಸ್‌ ಮುಖಂಡರಾಗಿದ್ದರು.

ಈಗ ಪರಮೇಶ್ವರ್‌ ಒಡೆತನದಲ್ಲಿರುವ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು ಅವರೇ. ಪರಮೇಶ್ವರ್‌ಗೆ ಗಾಡ್‌ ಫಾದರ್‌ ರೀತಿಯಲ್ಲಿದ್ದ ಶಿವಪ್ರಸಾದ್‌ ಅವರು 2018ರ ಜುಲೈ 26ರಂದು ಬಹುಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದರು. ಅನಂತರ ಸಿದ್ದಾರ್ಥ ಮೆಡಿಕಲ್‌ ಕಾಲೇಜಿನ ಉಸ್ತುವಾರಿಯನ್ನು ಆನಂದ್‌ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಮಾಜಿ ಡಿಸಿಎಂ ಪರಮೇಶ್ವರ್ ಒಡೆತನದ ಕಾಲೇಜ್‌ನಲ್ಲಿ ಸಿಕ್ತು ಕಂತೆ ಕಂತೆ ಹಣ..!

click me!