
ಬೆಂಗಳೂರು (ಮೇ.29): ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಕಾಂಗ್ರೆಸ್ ನಾಯಕ ಯೂಸೂಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ಅವರಿಗೆ ಸೇರಿದ ಮನೆ, ಕಚೇರಿ ಸೇರಿದಂತೆ ಏಳು ಕಡೆ ಜಾರಿ ನಿರ್ದೇಶನಾಲಯ (ಇ.ಡಿ.)ದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶನಿವಾರ ಬೆಳಗ್ಗೆ 6.30ರ ಸುಮಾರಿಗೆ ಇ.ಡಿ. ಅಧಿಕಾರಿಗಳ ತಂಡವು ಕೆಜಿಎಫ್ ಬಾಬು ಒಡೆತನದ ಬಂಗಲೆ, ಕಚೇರಿಗಳಿಗೆ ತೆರಳಿ ಶೋಧ ಕಾರ್ಯ ನಡೆಸಿದೆ. ವಸಂತನಗರದಲ್ಲಿನ ರುಕ್ಸಾನಾ ಪ್ಯಾಲೇಸ್ ನಿವಾಸ, ಉಮ್ರಾ ಡೆವಲಪರ್ಸ್, ಉಮ್ರಾ ರಿಯಲ್ ಎಸ್ಟೇಟ್ ಕಂಪನಿ ಸೇರಿದಂತೆ ಏಳು ಕಡೆ ಕಾರ್ಯಾಚರಣೆ ನಡೆಸಿ ಶೋಧ ನಡೆಸಿತು.
ತಡರಾತ್ರಿವರೆಗೆ ಶೋಧ ಕಾರ್ಯ ಕೈಗೊಂಡ ಅಧಿಕಾರಿಗಳು ಹಲವು ದಾಖಲೆಗಳನ್ನು ಕೊಂಡೊಯ್ದಿದ್ದಾರೆ. ಕೆಲವೆಡೆ ದಾಳಿಯನ್ನು ಮುಗಿಸಿ ಸೀಲ್ ಮಾಡಿದ್ದಾರೆ. ಇನ್ನು ಕೆಲವೆಡೆ ದಾಳಿ ಮುಂದುವರಿದಿದ್ದು, ಭಾನುವಾರವೂ ಮುಂದುವರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕೆಜಿಎಫ್ ಬಾಬು ಹಲವೆಡೆ ನೂರಾರು ಕೋಟಿ ರು. ಮೌಲ್ಯದ ಜಮೀನು, ನಿವೇಶನ, ಕಟ್ಟಡಗಳನ್ನು ಹೊಂದಿರುವುದಕ್ಕೆ ಸಂಬಂಧಿಸಿದಂತೆ ದಾಖಲೆಗಳು ಲಭ್ಯವಾಗಿದೆ ಎಂದು ತಿಳಿದುಬಂದಿದೆ. ಬ್ಯಾಂಕ್ ವ್ಯವಹಾರದ ಕುರಿತು ದಾಖಲೆಗಳನ್ನು ಇ.ಡಿ. ವಶಕ್ಕೆ ಪಡೆದುಕೊಂಡಿದೆ.
ಕೋಲಾರದಲ್ಲಿ ಕೆಜಿಎಫ್ ಬಾಬು ಪ್ರತ್ಯಕ್ಷ, ಜನರಿಗೆ ರಂಜಾನ್ ಗಿಫ್ಟ್
ಮೊದಲ ಪತ್ನಿ ರುಕ್ಸಾನ, ಎರಡನೇ ಪತ್ನಿ ಶಾಜಿಯಾ, ಮಗಳು ಉಮ್ರಾ ಷರೀಫ್, ಮಗ ಅಫ್ನಾನ್ ಸೇರಿದಂತೆ ಕುಟುಂಬಸ್ಥರ ಹೆಸರಲ್ಲಿ 23 ಬ್ಯಾಂಕ್ ಖಾತೆಗಳನ್ನು ಹೊಂದಿರುವುದು ಪತ್ತೆಯಾಗಿದೆ. ಇನ್ನು ಬಾಬು ತನ್ನ ಹೆಸರಲ್ಲಿ 12 ಬ್ಯಾಂಕ್ ಖಾತೆಗಳನ್ನು ಹೊಂದಿರುವುದು ಗೊತ್ತಾಗಿದೆ. ಈ ಎಲ್ಲಾ ಖಾತೆಗಳ ವ್ಯವಹಾರದ ಬಗ್ಗೆ ತನಿಖೆ ಕೈಗೊಂಡಿದೆ. ಎಲ್ಲರ ಹೆಸರಲ್ಲಿನ ಖಾತೆಯಲ್ಲಿ 70 ಕೋಟಿ ರು.ಗಿಂತ ಅಧಿಕ ಹಣ ಇರುವುದು ಕಾರ್ಯಾಚರಣೆ ವೇಳೆ ಗೊತ್ತಾಗಿದೆ. ತನಿಖೆ ಮುಗಿದ ಬಳಿಕ ನಿಖರವಾದ ಮೊತ್ತ ತಿಳಿದು ಬರಲಿದೆ ಎಂದು ತಿಳಿದುಬಂದಿದೆ.
ನನ್ನ ಗೌಪ್ಯ ದಾಖಲೆಗಳನ್ನು ಸಿಬಿಐ ವಶಪಡಿಸಿಕೊಂಡಿದೆ ಎಂದು ಆರೋಪಿಸಿದ ಕಾರ್ತಿ ಚಿದಂಬರಂ!
ಬಾಬು ಅವರು ಕಾಂಗ್ರೆಸ್‌ನಿಂದ ವಿಧಾನಪರಿಷತ್ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆ ವೇಳೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಅವರು ಘೋಷಿಸಿಕೊಂಡ ಆಸ್ತಿ ಮೊತ್ತ 1743 ಕೋಟಿ ರು. ಇನ್ನು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಆರು ಕೋಟಿ ರು.ಮೌಲ್ಯದ ಐಷಾರಾಮಿ ರೋಲ್ಸ್ ರಾಯ್ಸ್ ಕಾರನ್ನು ಮಧ್ಯವರ್ತಿ ಮೂಲಕ ಖರೀದಿಸಿದ್ದರು. ನಂತರ ಸೂಕ್ತ ದಾಖಲೆ ಇಲ್ಲದ ಕಾರಣ ಯುಬಿ ಸಿಟಿ ಬಳಿ ಆ ಕಾರನ್ನು ಆರ್‌ಟಿಒ ಅಧಿಕಾರಿಗಳು ಜಪ್ತಿ ಮಾಡಿದ್ದರು. ಆಗ ಬಾಬು ರಾಜ್ಯಾದ್ಯಂತ ಸುದ್ದಿಯಾಗಿದ್ದರು. ದಾಳಿಯಲ್ಲಿ ಸಿಕ್ಕ ದಾಖಲೆಗಳ ಆಧಾರದ ಮೇಲೆ ಇ.ಡಿ. ಅಧಿಕಾರಿಗಳು ವಿಚಾರಣೆಗೆ ಕರೆಯಲಿದ್ದು, ಸ್ಪಷ್ಟನೆ ಕೇಳಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ