ಆರೋಗ್ಯ ಇಲಾಖೆ ಎಲ್ಲ ಹುದ್ದೆಗಳಿಗೆ ನೇಮಕ!

By Suvarna NewsFirst Published Jul 15, 2020, 5:22 PM IST
Highlights

ಆರೋಗ್ಯ ಇಲಾಖೆ ಎಲ್ಲ ಹುದ್ದೆಗಳಿಗೆ ನೇಮಕ| ಕೊರೋನಾ ಹೋರಾಟಕ್ಕಾಗಿ ಗುತ್ತಿಗೆ, ಹೊರಗುತ್ತಿಗೆ ನೇಮಕಾತಿ| ಜಿಲ್ಲಾಧಿಕಾರಿಗಳಿಗೆ ಅನುಮತಿ: ಸಚಿವ ಸುಧಾಕರ್‌|  1419 ನರ್ಸ್‌, 506 ಲ್ಯಾಬ್‌ ಟೆಕ್ನೀಶಿಯನ್‌, 916 ಫಾರ್ಮಾಸಿಸ್ಟ್‌ , ಡಿ ಗ್ರೂಪ್‌ ಹುದ್ದೆ ಖಾಲಿ

ಬೆಂಗಳೂರು(ಜು.15): ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು ಪ್ರಕರಣಗಳನ್ನು ಸಮರ್ಪಕವಾಗಿ ನಿಭಾಯಿಸುವ ದೃಷ್ಟಿಯಿಂದ ಶುಶ್ರೂಷಕರು, ಪ್ರಯೋಗಾಲಯ ತಂತ್ರಜ್ಞರು ಸೇರಿದಂತೆ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಎಲ್ಲಾ ಅರೆ ವೈದ್ಯಕೀಯ ಹುದ್ದೆಗಳಿಗೆ ಗುತ್ತಿಗೆ/ ಹೊರ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ನಿಯಂತ್ರಣ ಕಾರ್ಯದಲ್ಲಿ ಅರೆ ವೈದ್ಯಕೀಯ ಸಿಬ್ಬಂದಿಯ ಪಾತ್ರ ಮಹತ್ವದ್ದಾಗಿದ್ದು, ರಾಜ್ಯದಲ್ಲಿ 1419 ಶುಶ್ರೂಷಕರು, 506 ಪ್ರಯೋಗಾಲಯ ತಂತ್ರಜ್ಞರು, 916 ಫಾರ್ಮಾಸಿಸ್ಟ್‌ ಹಾಗೂ ಡಿ ಗ್ರೂಪ್‌ ಹುದ್ದೆಗಳು ಖಾಲಿ ಇವೆ. ಅವುಗಳನ್ನು ತುರ್ತಾಗಿ ಭರ್ತಿ ಮಾಡುವ ಅವಶ್ಯಕತೆ ಇದೆ. ಹಾಗಾಗಿ ಈ ಸಂಬಂಧ ಆಯಾ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮುಂದಿನ ಆರು ತಿಂಗಳ ಮಟ್ಟಿಗೆ ನೇರ ನೇಮಕಾತಿ ಅಥವಾ ಗುತ್ತಿಗೆ/ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಆಯಾ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಅನುಮತಿ ನೀಡಿದೆ ಎಂದು ತಿಳಿಸಿದರು.

ಕುತೂಹಲಕ್ಕಾಗಿ ಟೆಸ್ಟ್‌ ಮಾಡಿಸಿದ ಮಾಜಿ ಮೇಯರ್‌ ಕಟ್ಟೆ ಸತ್ಯನಾರಾಯಣಗೆ ಕೊರೋನಾ..!

ಈ ರೀತಿ ನೇಮಕ ಮಾಡಿಕೊಳ್ಳುವ ಸಿಬ್ಬಂದಿಗೆ ಶುಶ್ರೂಷಕರಿಗೆ ಮಾಸಿಕ 25 ಸಾವಿರ ರು., ಪ್ರಯೋಗಾಲಯ ತಂತ್ರಜ್ಞರಿಗೆ 20 ಸಾವಿರ ರು., ಫಾರ್ಮಾಸಿಸ್ಟ್‌ಗೆ 20 ಸಾವಿರ ರು., ಡಿ ಗ್ರೂಪ್‌ ನೌಕರರಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ವೇತನಕ್ಕೆ ಸರಿಸಮನಾಗಿ ವೇತನ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.

ಶೀಘ್ರ 25 ಪ್ರಯೋಗಾಲಯ:

ರಾಜ್ಯದಲ್ಲಿ ಶೀಘ್ರದಲ್ಲೇ ಇನ್ನೂ 25 ಕೋವಿಡ್‌ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು. ವೈದ್ಯಕೀಯ ಕಾಲೇಜುಗಳಲ್ಲಿ ಈ ಪ್ರಯೋಗಾಲಯಗಳನ್ನು ತೆರೆಯಲಾಗುವುದು. ಪ್ರಸ್ತುತ ಇರುವ 80ಕ್ಕೂ ಹೆಚ್ಚು ಪ್ರಯೋಗಾಲಯಗಳಲ್ಲಿ ನಿತ್ಯ 20 ಸಾವಿರಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಮಂಗಳವಾರ ಅತಿ ಹೆಚ್ಚು 23,674 ಪರೀಕ್ಷೆಗಳನ್ನು ನಡೆಸಲಾಗಿದೆ. ಇನ್ನಷ್ಟುಪ್ರಯೋಗಾಲಯಗಳ ಸ್ಥಾಪನೆಯಿಂದ ಪರೀಕ್ಷಾ ಸಾಮರ್ಥ್ಯ ಇನ್ನಷ್ಟುಹೆಚ್ಚಾಗಲಿದೆ ಎಂದರು.

ಹಾಸಿಗೆ ಸಿಗದಿದ್ದರೆ 1912ಗೆ ಕರೆ ಮಾಡಿ:

ರಾಜ್ಯದಲ್ಲಿ ಯಾವುದೇ ಕೋವಿಡ್‌ ಸೋಂಕಿತ ಹಾಗೂ ಕೊವಿಡ್‌ ಶಂಕಿತ ರೋಗಿಗಳು ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದಿದ್ದರೆ, ಯಾವುದೇ ಆಸ್ಪತ್ರೆಯವರು ದಾಖಲಾತಿ ನಿರಾಕರಿಸಿದರೆ ತಕ್ಷಣ ಸರ್ಕಾರದ 1912 ಸಹಾಯವಾಣಿಗೆ ಕರೆ ಮಾಡಿ. ಇದರಿಂದ ನಿಮಗೆ ಸಮೀಪದ ಹಾಸಿಗೆ ಖಾಲಿ ಇರುವ ಆಸ್ಪತ್ರೆಯಲ್ಲಿ ದಾಖಲಿಸಲು ಅಧಿಕಾರಿಗಳು ನೆರವಾಗಲಿದ್ದಾರೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.

ಒಂದು ವೇಳೆ ಸಹಾಯವಾಣಿಗೆ ಕರೆ ಮಾಡಿದಾಗ ದೂರವಾಣಿ ಕಾರ್ಯನಿರತವಾಗಿದ್ದಲ್ಲಿ ವಾಟ್ಸ್‌ಅಪ್‌ ಅಥವಾ ಎಸ್ಸೆಂಎಸ್‌ ಸಂದೇಶ ಕಳುಹಿಸಲೂ ಶೀಘ್ರದಲ್ಲೇ ಒಂದು ದೂರವಾಣಿ ಸಂಖ್ಯೆ ಬಿಡಗಡೆ ಮಾಡಲಾಗುವುದು. ಸಂದೇಶ ಕಳುಹಿಸಿದವರಿಗೆ ವಾಪಸ್‌ ನಮ್ಮ ಸಿಬ್ಬಂದಿ ಕರೆ ಮಾಡಿ 108 ಆರೋಗ್ಯ ಕವಚ ಸಿಬ್ಬಂದಿ ಜೊತೆ ಸಂವಹನ ನಡೆಸಿ ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡಲಿದ್ದಾರೆ ಎಂದರು.

ಕೊರೋನಾ ಕಾಟ: ಜಿಲ್ಲಾ ಕೇಂದ್ರದಲ್ಲೂ ಸಾವಿರಾರು ಬೆಡ್‌ ಆರೈಕೆ ಕೇಂದ್ರ, ಸಚಿವ ಸುಧಾಕರ್‌

ಆನ್‌ಲೈನ್‌ನಲ್ಲೇ ಹಾಸಿಗೆ ಮಾಹಿತಿ:

ರಾಜ್ಯದಲ್ಲಿ ಕೋವಿಡ್‌ ಚಿಕಿತ್ಸೆಗೆ ನಿಗದಿಪಡಿಸಿರುವ ಪ್ರತಿಯೊಂದು ಆಸ್ಪತ್ರೆಗಳಲ್ಲೂ ಎಷ್ಟುಹಾಸಿಗೆ ಭರ್ತಿಯಾಗಿದೆ, ಇನ್ನೆಷ್ಟುಲಭ್ಯವಿದೆ ಎಂಬ ಸಂಪೂರ್ಣ ದೈನಂದಿನ ಮಾಹಿತಿ ಶೀಘ್ರದಲ್ಲೇ ಆನ್‌ಲೈನ್‌ನಲ್ಲೇ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳ ರಿಯಲ್‌ ಟೈಮ್‌ ಮಾಹಿತಿಯನ್ನು ಡಿಜಿಟಲ್‌ ಟ್ಯಾಶ್‌ ಬೋರ್ಡ್‌ನಲ್ಲಿ ಶೀಘ್ರದಲ್ಲೇ ನೀಡಲಾಗುವುದು. ಇದರಿಂದ ಯಾವುದೇ ಆಸ್ಪತ್ರೆಗಳು ಹಾಸಿಗೆ ಇಲ್ಲ ಎಂದು ನಿರಾಕರಿಸಲು ಸಾಧ್ಯವಾಗುವುದಿಲ್ಲ ಎಂದರು.

ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 15 ಸಾವಿರ ಹಾಸಿಗೆಗಳಿವೆ. ಇವುಗಳಲ್ಲಿ ಕೋವಿಡ್‌ ಚಿಕಿತ್ಸೆಗೆ 4500 ಹಾಸಿಗೆಗಳನ್ನು ಮಾತ್ರ ನೀಡುವಂತೆ ಕೇಳಲಾಗಿದೆ. ಸರ್ಕಾರದ ಆದೇಶದಂತೆ ಶೇ.50ರಷ್ಟುಹಾಸಿಗೆಗಳನ್ನು ಕೋವಿಡ್‌ ಚಿಕಿತ್ಸೆಗೆ ಮೀಸಲಿಡದ ಆಸ್ಪತ್ರೆಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಈ ಸಂಬಂಧ ನೋಟಿಸ್‌ ನೀಡಿದರೂ ಉತ್ತರಿಸದ ಬೆಂಗಳೂರಿನ ಅಪೊಲೋ ಮತ್ತು ವಿಕ್ರಂ ಆಸ್ಪತ್ರೆಗಳ ಒಡಿಪಿಯನ್ನು 48 ಗಂಟೆ ಬಂದ್‌ ಮಾಡಲು ಆದೇಶಿಸಲಾಗಿದೆ. ಇದಕ್ಕೂ ಬಗ್ಗದಿದ್ದರೆ ಆಸ್ಪತ್ರೆಗಳ ಕೆಪಿಎಂಇ ಪರವಾನಗಿ ರದ್ದುಪಡಿಸುವುದು ಹಾಗೂ ಕ್ರಿಮಿನಲ್‌ ಕೇಸು ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

click me!