
ಗಿರೀಶ್ ಗರಗ
ಬೆಂಗಳೂರು (ಆ.8) : ಮೋಟಾರು ವಾಹನ ತೆರಿಗೆ ಪರಿಷ್ಕರಣೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ವಾಣಿಜ್ಯ ವಾಹನಗಳ ಮಾಲೀಕರ ಅನುಕೂಲಕ್ಕಾಗಿ ಕಂತುಗಳಲ್ಲಿ ತೆರಿಗೆ ಪಾವತಿಗೆ ಅವಕಾಶ ನೀಡುವ ವ್ಯವಸ್ಥೆ ಆರಂಭಿಸಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ.
ಬಜೆಟ್ ಅಧಿವೇಶನದಲ್ಲಿ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಮಸೂದೆ 2023ಕ್ಕೆ ಅನುಮೋದನೆ ನೀಡಿ, ಅದನ್ನು ಜಾರಿಗೊಳಿಸಲಾಗಿದೆ. ಈ ತಿಂಗಳಾಂತ್ಯಕ್ಕೆ ತೆರಿಗೆ ವಸೂಲಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನೂ ಸಾರಿಗೆ ಇಲಾಖೆ ಆರಂಭಿಸಲಿದೆ. ಆದರೆ, ಏಕಾಏಕಿ ತೆರಿಗೆ ಹೆಚ್ಚಳದಿಂದ ಸಾರಿಗೆ ಉದ್ಯಮಕ್ಕಾಗುತ್ತಿರುವ ಸಮಸ್ಯೆಗಳನ್ನು ನಿವಾರಿಸುವಂತೆ ಸಾರಿಗೆ ಸಂಘಟನೆಗಳು ಸರ್ಕಾರಕ್ಕೆ ಆಗ್ರಹಿಸುತ್ತಿವೆ. ಅಲ್ಲದೆ, ವಾಹನಗಳ ಮೇಲೆ ವಿಧಿಸಲಾಗಿರುವ ತೆರಿಗೆ ಮೊತ್ತವನ್ನು ಕನಿಷ್ಠ 6 ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡುವಂತೆ ಒತ್ತಾಯಿಸುತ್ತಿವೆ. ಅದಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಬಿಜೆಪಿ ಅವಧಿಯ ಬಿಬಿಎಂಪಿ ಕಾಮಗಾರಿ ತನಿಖೆಗೆ ಆದೇಶ; 30 ದಿನದೊಳಗೆ ವರದಿ ಸಲ್ಲಿಸಲು ಸೂಚನೆ
ಹಲವು ವಿಧದಲ್ಲಿ ತೆರಿಗೆ ಏರಿಕೆ:
ರಾಜ್ಯ ಸರ್ಕಾರವು ಈ ಬಾರಿ ಹಲವು ವಿಧದಲ್ಲಿ ತೆರಿಗೆ ಹೆಚ್ಚಳ ಮಾಡಿದೆ. ಶಾಲಾ-ಕಾಲೇಜು ವಾಹನಗಳು, ಅತಿ ಭಾರದ ಸರಕು ಸಾಗಣೆ ವಾಹನಗಳು, ಮೋಟಾರು ಕ್ಯಾಬ್‌ಗಳ ತೆರಿಗೆಯನ್ನು ಹೆಚ್ಚಳ ಮಾಡಲಾಗಿದೆ. ಶಾಲೆಗಳ ಒಡೆತನದಲ್ಲಿದ್ದು, ಶಾಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಸಂಚಾರಕ್ಕೆ ಬಳಸುವ ವಾಹನಗಳ ಪ್ರತಿ ಚದರ ಮೀಟರ್‌ಗೆ ತೆರಿಗೆಯನ್ನು 20 ರು.ನಿಂದ 100 ರು.ಗೆ ಹೆಚ್ಚಿಸಲಾಗಿದೆ. ಇತರ ಸಂಸ್ಥೆಗಳ ಒಡೆತನದಲ್ಲಿದ್ದು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಸಂಚಾರಕ್ಕೆ ಬಳಸುವ ವಾಹನಗಳ ಪ್ರತಿ ಚದರ ಮೀಟರ್ ವಿಸ್ತೀರ್ಣದ ತೆರಿಗೆಯನ್ನು 80ರಿಂದ 200 ರು.ಗೆ ಹೆಚ್ಚಿಸಲಾಗಿದೆ.
ಅದೇ ರೀತಿ ಹೊರುವ ಭಾರವೂ ಸೇರಿ ಒಟ್ಟು ತೂಕ 1.5 ಟನ್‌ನಿಂದ 5.5 ಟನ್‌ವರೆಗಿನ ವಾಹನಗಳಿಂದ ಪೂರ್ಣಾವಧಿ ತೆರಿಗೆ ಪಡೆಯಲಾಗುತ್ತಿತ್ತು. ಅದಕ್ಕಿಂತ ಹೆಚ್ಚಿನ ಭಾರದ ವಾಹನಗಳು ಪ್ರತಿ ಮೂರು ತಿಂಗಳಿಗೊಮ್ಮೆ ತೆರಿಗೆ ಪಾವತಿಸಬೇಕಿತ್ತು. ಈಗ 1.5 ಟನ್‌ನಿಂದ 12 ಟನ್‌ವರೆಗಿನ ತೂಕದ ವಾಹನಗಳಿಗೂ ಪೂರ್ಣಾವಧಿ ತೆರಿಗೆ ಸಂಗ್ರಹಿಸಲಾಗುತ್ತಿದೆ.
15 ಲಕ್ಷ ರು.ಗಿಂತ ಹೆಚ್ಚಿನ ಬೆಲೆಯ ಕ್ಯಾಬ್‌ಗಳಿಗೆ ಮಾತ್ರ ಆ ವಾಹನದ ಮೌಲ್ಯದ ಶೇ.15ರಷ್ಟುತೆರಿಗೆ ವಿಧಿಸಲಾಗುತ್ತಿತ್ತು. ಆದರೀಗ 10 ಲಕ್ಷ ರು.ನಿಂದ 15 ಲಕ್ಷ ರು.ವರೆಗಿನ ಕ್ಯಾಬ್‌ಗಳಿಗೆ ಅವುಗಳ ಮೌಲ್ಯದ ಶೇ.9ರಷ್ಟುತೆರಿಗೆ ಹಾಗೂ ಶೇ.1 ಸೆಸ್ ಸೇರಿ ಶೇ.10ರಷ್ಟುತೆರಿಗೆ ವಿಧಿಸಲಾಗುತ್ತಿದೆ. 15 ಲಕ್ಷ ರು.ಗಿಂತ ಹೆಚ್ಚಿನ ಬೆಲೆಯ ಕ್ಯಾಬ್‌ಗಳಿಗೆ ಈ ಹಿಂದಿನಂತೆಯೇ ಅವುಗಳ ಮೌಲ್ಯದ ಶೇ.15ರಷ್ಟುತೆರಿಗೆ ವಿಧಿಸಲಾಗುತ್ತದೆ.
ಒಂದು ವರ್ಷ ಮುಂದೂಡಿ, ಇಲ್ಲವೇ ಕಂತಿನ ಅವಕಾಶ ಕೊಡಿ:
ಕೊರೋನಾ ಸೇರಿದಂತೆ ಮತ್ತಿತರ ಕಾರಣಗಳಿಂದಾಗಿ ಕಳೆದ ನಾಲ್ಕೈದು ವರ್ಷಗಳಿಂದ ಸಾರಿಗೆ ಉದ್ಯಮ ಸಾಕಷ್ಟುನಷ್ಟದಲ್ಲಿದೆ. ಅದರ ಜತೆಗೆ ‘ಶಕ್ತಿ’ ಯೋಜನೆಯೂ ಸೇರಿ ಮತ್ತಷ್ಟುಆರ್ಥಿಕ ಹೊಡೆತ ಬಿದ್ದಿದೆ. ಹೀಗಿರುವಾಗಿ ಮೋಟಾರು ವಾಹನ ತೆರಿಗೆ ಹೆಚ್ಚಳದಂತಹ ಕ್ರಮದಿಂದಾಗಿ ಸಾರಿಗೆ ಉದ್ಯಮಕ್ಕೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ. ಹೀಗಾಗಿ ತೆರಿಗೆ ಹೆಚ್ಚಳ ಕ್ರಮವನ್ನು ಒಂದು ವರ್ಷ ಮುಂದೂಡುವಂತೆ ಸಾರಿಗೆ ಸಂಘಟನೆಗಳು ಆಗ್ರಹಿಸುತ್ತಿವೆ. ಅದಾಗದಿದ್ದರೆ ಎಲ್ಲ ಬಗೆಯ ಮೋಟಾರು ವಾಹನಗಳ ತೆರಿಗೆ ಪಾವತಿಗೆ ಕನಿಷ್ಠ 6 ಕಂತುಗಳ ಅವಕಾಶ ನೀಡುವಂತೆ ಕೋರಲಾಗುತ್ತಿದೆ.
ಶಾಸಕರ ಸಮಸ್ಯೆ ಇತ್ಯರ್ಥಕ್ಕೆ ಮುಖ್ಯಮಂತ್ರಿ 2 ಸ್ತರದ ಭರವಸೆ
ಸಾರಿಗೆ ಇಲಾಖೆಯಲ್ಲಿ ಚರ್ಚೆ:
ಸಾರಿಗೆ ಸಂಘಟನೆಗಳ ಕೋರಿಗೆ ಬಗ್ಗೆ ಗಂಭೀರ ಚಿಂತನೆ ನಡೆಸಿರುವ ಸಾರಿಗೆ ಇಲಾಖೆ ಈ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳಲು ಮುಂದಾಗಿದೆ. ಅದರಲ್ಲೂ ಮೋಟಾರು ವಾಹನ ತೆರಿಗೆ ಹೆಚ್ಚಳ ಮುಂದೂಡಲು ಸಾಧ್ಯವಿಲ್ಲ. ಸರ್ಕಾರದ ಆದೇಶವಿರುವ ಕಾರಣ ಅದರಿಂದ ಹಿಂದೆ ಸರಿಯಲಾಗದು. ಅದರ ಬದಲು ಕಂತುಗಳ ಆಧಾರದಲ್ಲಿ ತೆರಿಗೆ ಪಾವತಿಗೆ ಅವಕಾಶ ನೀಡಬಹುದು ಎಂದು ಚರ್ಚಿಸಲಾಗುತ್ತಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರೂ ಚಿಂತನೆ ನಡೆಸಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಕಂತುಗಳ ಆಧಾರದಲ್ಲಿ ತೆರಿಗೆ ಪಾವತಿಗೆ ಅವಕಾಶ ನೀಡುವುದರ ಸಾಧಕ-ಬಾಧಕ ತಿಳಿದು ನಿರ್ಧರಿಸುವುದಾಗಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ