ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಲಿಮಿಟೆಡ್‌ಗೆ ವಿವಿಧ ರಸ್ತೆಗಳ ಅಭಿವೃದ್ಧಿ ಯೋಜನೆಗಳಿಗಾಗಿ 91 ಬೃಹತ್ ಮರಗಳನ್ನು ಕತ್ತರಿಸಿದ್ದಕ್ಕೆ ಬದಲಾಗಿ 2,693 ಸಸಿಗಳನ್ನು ನೆಡುವ ನೆಡುತೋಪು ಯೋಜನೆ ಜಾರಿಗೊಳಿಸಬೇಕೆಂದು ಹೈಕೋರ್ಟ್ ಹೇಳಿದೆ.
ಬೆಂಗಳೂರು(ಜು.14): ವಿವಿಧ ರಸ್ತೆಗಳ ಅಭಿವೃದ್ಧಿ ಯೋಜನೆಗಳಿಗಾಗಿ 91 ಬೃಹತ್ ಮರಗಳನ್ನು ಕತ್ತರಿಸಿದ್ದಕ್ಕೆ ಬದಲಾಗಿ 2,693 ಸಸಿಗಳನ್ನು ನೆಡುವ ಪರಿಹಾರದ ನೆಡುತೋಪು ಯೋಜನೆಗಳನ್ನು ಮುಂದಿನ ಆರು ವಾರಗಳಲ್ಲಿ ಜಾರಿಗೊಳಿಸಬೇಕು ಎಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಲಿಮಿಟೆಡ್‌ಗೆ (ಕೆಆರ್‌ಡಿಸಿಎಲ್) ಹೈಕೋರ್ಟ್ ನಿರ್ದೇಶಿಸಿದೆ.
ಮೆಟ್ರೋ ರೈಲು ಯೋಜನೆಗೆ ಮರ ಕಡಿಯುವುದನ್ನು ಪ್ರಶ್ನಿಸಿ ಪರಿಸರವಾದಿ ಟಿ.ದತ್ತಾತ್ರೇಯ ದೇವರೆ ಮತ್ತಿತರರು ಸಲ್ಲಿಸಿರುವ ಪಿಐಎಲ್ ವಿಚಾರಣೆ ವೇಳೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ವಿಭಾಗೀಯ ಪೀಠ, ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ(ಯುಎಎಸ್) ಶಿಫಾರಸು ಮಾಡಿದಂತೆ ಕೆಆರ್‌ಡಿಸಿಎಲ್ ಪರ್ಯಾಯ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡು ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿತು.
ಜತೆಗೆ, ಮೆಟ್ರೊ ರೈಲು ಯೋಜನೆಗಾಗಿ ಕತ್ತರಿಸಿರುವ ಮರಗಳ ಬದಲಿಗೆ ಬೆಂಗಳೂರಿನ ಕೃಷಿ ವಿಜ್ಞಾನಗಳ ಸಂಸ್ಥೆಯ ನಿರ್ದೇಶನದಂತೆ ಪರಿಹಾರ ರೂಪದಲ್ಲಿ ನೆಡುತ್ತಿರುವ ಸಸಿಗಳ ವಿವರ ಹಾಗೂ ಸ್ಥಳಾಂತರ ಮಾಡಿರುವ ವಿವರಗಳ ತ್ರೈಮಾಸಿಕ ವರದಿಯನ್ನು ಬಿಎಂಆರ್‌ಸಿಎಲ್ ನೀಡಬೇಕು. ಈ ವರದಿಯನ್ನು ಬಿಬಿಎಂಪಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ಹೆದ್ದಾರಿಯಲ್ಲಿ ಮರ ಕಡಿವ ಬದಲು ಸ್ಥಳಾಂತರ: ಸಚಿವ ಸಿ.ಸಿ.ಪಾಟೀಲ್ ಸೂಚನೆ
ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆ ಹಾಗೂ ಹೆದ್ದಾರಿಗಳನ್ನು ಅಗಲೀಕರಣಗೊಳಿಸುವಾಗ ಅಡ್ಡಿಯಾಗಿರುವ ಮರಗಳನ್ನು ಕಡಿಯದೆ ಬೇರೆಡೆ ಸ್ಥಳಾಂತರಿಸುವ ಮೂಲಕ ಹಸಿರು ಸಂರಕ್ಷಿಸುವ ಮಹತ್ವದ ಯೋಜನೆಯನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿದೆ.
ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಅವರ ಸೂಚನೆಯಂತೆ ಬೆಂಗಳೂರಿನ ಸುತ್ತಮುತ್ತ ಈಗಾಗಲೇ 1,500ಕ್ಕೂ ಹೆಚ್ಚು ಬೆಳೆದು ನಿಂತಿದ್ದ ಮರಗಳನ್ನು ಕಡಿಯದೆ ಬೇರೆಡೆಗೆ ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ. ಯೋಜನೆಯನ್ನು ರಾಜ್ಯದ ಇತರೆಡೆಯೂ ವಿಸ್ತರಿಸಲೂ ಸಹ ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯದೆಲ್ಲೆಡೆ ವಿಸ್ತರಣೆ-ಸಿಸಿಪಾ: ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಸಿ.ಸಿ. ಪಾಟೀಲ್, ‘ರಸ್ತೆ ಅಗಲೀಕರಣ ವೇಳೆ ಮರಗಳನ್ನು ಕಡಿಯುವ ಬದಲು ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸಿ ನೆಟ್ಟು ಪೋಷಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ಸಂಸ್ಥೆಗೆ ಸೂಚಿಸಲಾಗಿತ್ತು. ಅದರಂತೆ ಬೆಂಗಳೂರು ಸುತ್ತಮುತ್ತ ಈಗಾಗಲೇ ಸುಮಾರು 1,500ಕ್ಕೂ ಹೆಚ್ಚು ಗಿಡ-ಮರಗಳನ್ನು ಯಶಸ್ವಿಯಾಗಿ ಉಳಿಸಲಾಗಿದೆ. ಈ ಯೋಜನೆಯನ್ನು ಹಂತ ಹಂತವಾಗಿ ರಾಜ್ಯದ ಇತರ ಕಡೆಗಳಲ್ಲೂ ವ್ಯವಸ್ಥಿತವಾಗಿ ಜಾರಿಗೊಳಿಸಲಾಗುವುದು’ ಎಂದು ಹೇಳಿದರು.
‘ರಸ್ತೆ ಮತ್ತು ಹೆದ್ದಾರಿಗಳ ವಿಸ್ತರಣೆ ಸಂದರ್ಭದಲ್ಲಿ ಮರಗಳನ್ನು ಕಡಿಯುವುದರ ಬದಲಾಗಿ ಅವುಗಳನ್ನು ಸಂರಕ್ಷಿಸಿ ಪುನಶ್ಚೇತನಗೊಳಿಸಲು ಸೂಕ್ತ ಸಲಹೆ ನೀಡಲು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ತಜ್ಞರ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ನೀಡಿದ ಸಲಹೆಯಂತೆ ಒಟ್ಟು 6 ರಸ್ತೆ ಮತ್ತು ಹೆದ್ದಾರಿ ಅಗಲೀಕರಣ ಯೋಜನೆಗಳಲ್ಲಿ 2100 ಮರಗಳನ್ನು ಗುರುತಿಸಿ ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇವುಗಳಲ್ಲಿ ಈಗಾಗಲೇ 1,500 ಕ್ಕೂ ಹೆಚ್ಚು ಮರಗಳನ್ನು ಸ್ಥಳಾಂತರಿಸಲಾಗಿದೆ’ ಎಂದರು.
ಯಾವ ಹೆದ್ದಾರಿಗಳಲ್ಲಿನ ಮರಗಳ ಸ್ಥಳಾಂತರ?:
‘ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಬೂದಿಗೆರೆ ಕ್ರಾಸ್, ಗೊಲ್ಲಹಳ್ಳಿ ಮೂಲಕ ನೆಲಮಂಗಲದಿಂದ ಮಧುರೈಗೆ ತೆರಳುವ ಹೆದ್ದಾರಿ, ರಾಜಾನುಕುಂಟೆ ಮೂಲಕ ದೇವನಹಳ್ಳಿಯಿಂದ ಮಧುರೈಗೆ ತೆರಳುವ ಹೆದ್ದಾರಿ, ಹಾರೋಹಳ್ಳಿ ಮೂಲಕ ಬಿಡದಿಯಿಂದ ಜಿಗಣಿಗೆ ತೆರಳುವ ಹೆದ್ದಾರಿ, ಜಿಗಣಿ ಮೂಲಕ ಬನ್ನೇರುಘಟ್ಟದಿಂದ ಆನೇಕಲ್‌ಗೆ ತೆರಳುವ ಹೆದ್ದಾರಿ, ಅತ್ತಿಬೆಲೆ ಮೂಲಕ ಆನೇಕಲ್ಲಿನಿಂದ ಕಾಟನಲ್ಲೂರ್ ಗೇಟ್ (ಎನ್.ಎಚ್.-4), ಹೀಗೆ ಒಟ್ಟು 155 ಕಿ.ಮೀ ಉದ್ದದ ರಸ್ತೆ ಅಗಲೀಕರಣ ಯೋಜನೆಯಲ್ಲಿ ಮರಗಳ ಪುನಶ್ಚೇತನ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಮುಖ್ಯವಾಗಿ ಹೊಂಗೆ, ಗುಲ… ಮೊಹರ್, ಸಿಸ್ಸೋ, ಅರಳಿ, ಬೇವು, ಬಸರಿ, ನೀಲಗಿರಿ ಮುಂತಾದ ಮರಗಳನ್ನು ಸ್ಥಳಾಂತರಿಸಿ ಪೋಷಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಸಚಿವರು ಹೇಳಿದರು.
ಅಕ್ಕಪಕ್ಕದ ಅರಣ್ಯದಲ್ಲಿ ನೆಡುವಿಕೆ:
ಹೆದ್ದಾರಿಗಳ ಪಕ್ಕದಿಂದ ಈ ರೀತಿ ಸ್ಥಳಾಂತರಿಸಿದ ಗಿಡಮರಗಳನ್ನು ಬೆಂಗಳೂರು ಸುತ್ತಮುತ್ತಲಿರುವ ಗ್ರಾಮಗಳ ಮತ್ತು ಕೆರೆಕಟ್ಟೆಗಳ ಅಕ್ಕಪಕ್ಕದ ಅರಣ್ಯಗಳಲ್ಲಿ, ಕಿರುತೋಪುಗಳಲ್ಲಿ ನೆಡಲಾಗಿದೆ. ಮಂಡೂರು, ಹೊಸಕೋಟೆ ಕೆರೆ, ಬೆಟ್ಟಕೊಟ್ಟೆಅರಣ್ಯ, ಮೈಲನಹಳ್ಳಿ, ಹೆಸರುಘಟ್ಟ, ಸೊಣ್ಣೇನಹಳ್ಳಿ, ದಿಬ್ಬೂರು, ಕೃಷ್ಣದೊಡ್ಡಿ, ಹಾರಗದ್ದೆಕೆರೆ, ಗುಂರ್ಜೂ ಕೆರೆಗಳಲ್ಲಿ ನೆಟ್ಟು ಪೋಷಿಸುತ್ತಿರುವುದಾಗಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಆರ್. ಶಿವಪ್ರಸಾದ್ ತಿಳಿಸಿದ್ದಾರೆ.
ಮರಗಳನ್ನು ವೈಜ್ಞಾನಿಕವಾಗಿ ಹಾನಿಯಾಗದಂತೆ ಸ್ಥಳಾಂತರಿಸಲಾಗುತ್ತಿದೆ. ಮಣ್ಣು ಪರೀಕ್ಷೆಯ ವರದಿ ಪಡೆದು ಆಯಾ ಜಾತಿಯ ಗಿಡಮರಗಳಿಗೆ ಹೊಂದಾಣಿಕೆಯಾಗುವ ಪರಿಸರದಲ್ಲೇ ನೆಡಲಾಗುತ್ತಿದೆ. ಈ ಗಿಡಮರಗಳಿಗೆ ನೀರು, ಗೊಬ್ಬರ ಕೊಟ್ಟು ಮೂರು ವರ್ಷಗಳವರೆಗೆ ಪೋಷಿಸಿ ರಕ್ಷಿಸಲು ಖಾಸಗಿ ಸಹಭಾಗಿತ್ವ ಪಡೆಯಲಾಗುತ್ತಿದೆ ಎಂದು ಹೇಳಿದರು.