Monsoon ಮೇ ಅಂತ್ಯಕ್ಕೇ ರಾಜ್ಯಕ್ಕೆ ಮುಂಗಾರು ಪ್ರವೇಶ ಸಾಧ್ಯತೆ, ಇನ್ನೂ ಮೂರ್ನಾಲ್ಕು ದಿನ ಮಳೆ ಸಾಧ್ಯತೆ!

Published : May 14, 2022, 04:20 AM IST
Monsoon ಮೇ ಅಂತ್ಯಕ್ಕೇ ರಾಜ್ಯಕ್ಕೆ ಮುಂಗಾರು ಪ್ರವೇಶ ಸಾಧ್ಯತೆ, ಇನ್ನೂ ಮೂರ್ನಾಲ್ಕು ದಿನ ಮಳೆ ಸಾಧ್ಯತೆ!

ಸಾರಾಂಶ

- ಮೇ 27ಕ್ಕೆ ಕೇರಳಕ್ಕೆ, ಬಳಿಕ 3 ದಿನದಲ್ಲಿ ರಾಜ್ಯಕ್ಕೆ - ಉತ್ತಮ ಮಳೆ ಮುನ್ಸೂಚನೆ ನೀಡಿದ ಐಎಂಡಿ - ರಾಜ್ಯಕ್ಕೆ ಚಳಿ ಹಿಡಿಸಿದ ಚಂಡಮಾರುತ

ಬೆಂಗಳೂರು(ಮೇ.14): ಪ್ರತಿ ವರ್ಷದ ವಾಡಿಕೆಯಂತೆ ಜೂನ್‌ ತಿಂಗಳಲ್ಲಿ ರಾಜ್ಯಕ್ಕೆ ಪ್ರವೇಶಿಸುತ್ತಿದ್ದ ಮುಂಗಾರು ಮಳೆ ಈ ಬಾರಿ ಮೇ ತಿಂಗಳ್ಯಾಂತಕ್ಕೇ ರಾಜ್ಯಕ್ಕೆ ಕಾಲಿಡಲಿದೆ. ಜತೆಗೆ ಈ ಬಾರಿ ಮುಂಗಾರು ರಾಜ್ಯದಲ್ಲಿ ಉತ್ತಮ ಮಳೆ ಸುರಿಸಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ. ಪ್ರತಿ ವರ್ಷ ಜೂನ್‌ 1 ಅಥವಾ ಅದರ ಬಳಿಕ ಕೇರಳದ ಕರಾವಳಿಗೆ ಮುಂಗಾರು ಪ್ರವೇಶವಾಗುತ್ತಿತ್ತು. ಈ ಬಾರಿ ಮೇ 27 ರಂದೇ ಕೇರಳದ ಕರಾವಳಿಗೆ ಮಾನ್ಸೂನ್‌ ಮಾರುತ ಅಪ್ಪಳಿಸಲಿದೆ. ಪರಿಣಾಮ ಮುಂದಿನ 3-4 ದಿನದ ಒಳಗಾಗಿ ರಾಜ್ಯದ ಕರಾವಳಿ ಪ್ರದೇಶವಾದ ಮಂಗಳೂರನ್ನು ಮಾನ್ಸೂನ್‌ ಮಾರುತ ಪ್ರವೇಶಿಸಲಿದೆ ಎಂದು ಹಾವಾಮಾನ ಕೇಂದ್ರದ ಅಧಿಕಾರಿ ಸದಾನಂದ ಅಡಿಗ ತಿಳಿಸಿದ್ದಾರೆ. ರಾಜ್ಯದ ಕರಾವಳಿಗೆ ತಲುಪಿದ ಬಳಿಕ ಸುಮಾರು 3 ದಿನಗಳಲ್ಲಿ ದಕ್ಷಿಣ ಹಾಗೂ ಉತ್ತರ ಒಳನಾಡನ್ನು ಮಾನ್ಸೂನ್‌ ಆವರಿಸಲಿದೆ. ಇದರಿಂದ ರಾಜ್ಯದಲ್ಲಿ ವಾಡಿಕೆಗಿಂತ ಮೊದಲೇ ಈ ಬಾರಿಯ ಮಾನ್ಸೂನ್‌ ಮಳೆ ಸುರಿಯಲಿದೆ ಎಂದು ಹೇಳಿದರು.

ಲಾ ನಿನಾ ಪರಿಣಾಮ, ಉತ್ತಮ ಮಳೆ ನಿರೀಕ್ಷೆ:
ಸಮುದ್ರದ ಮೇಲೆ ಬೀಸುವ ಗಾಳಿಯ ಆಧಾರದ ಮೇಲೆ ಯಾವ ರೀತಿಯ ಮಳೆಯಾಗಲಿದೆ ಎಂಬ ಅಂದಾಜು ಮಾಡಲಾಗುತ್ತದೆ. ಈ ಬಾರಿ ಭಾರತದ ಹವಾಮಾನದ ಮೇಲೆ ಲಾ ನಿನಾ (ಸಮುದ್ರಗಳಿಂದ ತಣ್ಣನೆಯ ಮಾರುತ ಬೀಸಲಿದೆ) ಪ್ರಭಾವವಿದೆ. ಲಾ ನಿನಾ ಪ್ರಭಾವ ಇದ್ದಾಗ ಉತ್ತಮ ಮಳೆಯಾಗುವುದು ವಾಡಿಕೆ. ಎಲ್‌ ನಿನೊ ಎಂಬುದು ಸಮುದ್ರಗಳ ಮೇಲೆ ಬಿಸಿ ಗಾಳಿ ಬೀಸುತ್ತದೆಯಾದ್ದರಿಂದ ಆ ವರ್ಷ ಮಳೆ ಕಡಿಮೆಯಾಗಲಿದೆ ಎಂಬುದು ವಾದ. ಪ್ರಸ್ತುತ ಲಾ ನಿನಾ ಪರಿಣಾಮವಿರುವುದರಿಂದ ಮುಂಗಾರು ಮಳೆ ಉತ್ತಮವಾಗಿರುವ ಸಾಧ್ಯತೆಯಿದ್ದು, ಭಾರತೀಯ ಹವಾಮಾನ ಕೇಂದ್ರ ಕೂಡ ಇಂತಹದ್ದೇ ಮುನ್ಸೂಚನೆ ನೀಡಿದೆ ಎಂದು ಹವಾಮಾನ ಕೇಂದ್ರದ ವಿಜ್ಞಾನಿ ಎ. ಪ್ರಸಾದ್‌ ಮಾಹಿತಿ ನೀಡಿದ್ದಾರೆ.

ಅಸಾನಿ ಎಫೆಕ್ಟ್, ಊಟಿಯಂತಾದ ಚಿತ್ರದುರ್ಗದ ಜೋಗಿಮಟ್ಟಿ ವನ್ಯಧಾಮ

ಇನ್ನೂ ಮೂರ್ನಾಲ್ಕು ದಿನ ಮಳೆ ಸಾಧ್ಯತೆ:
ಅಸಾನಿ ಚಂಡಮಾರುತ ದುರ್ಬಲಗೊಂಡಿದ್ದರೂ ಅದೇ ಜಾಗದಲ್ಲಿ ಮೇಲ್ಮೈ ಸುಳಿಗಾಳಿಯೊಂದು ರೂಪುಗೊಂಡಿದೆ. ಇದರ ಪ್ರಭಾವ ರಾಜ್ಯದ ಮೇಲೆ ಇದ್ದು ಇನ್ನೂ ಮೂರ್ನಾಲ್ಕು ದಿನ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಆ ಬಳಿಕವೂ ಮಳೆಗೆ ಪೂರಕವಾದ ಹವಾಮಾನ ವ್ಯವಸ್ಥೆಗಳು ರೂಪುಗೊಳ್ಳುವ ಸಂಭವ ಹೆಚ್ಚಿದ್ದು, ಮುಂಗಾರು ಪೂರ್ವ ಮಳೆ ಮುಂಗಾರು ಪ್ರವೇಶಿಸುವ ತನಕವೂ ಮುಂದುವರಿಯುವ ಸಾಧ್ಯತೆ ಇದೆ ಎಂದು ಪ್ರಸಾದ್‌ ವಿವರಿಸಿದ್ದಾರೆ.

ರಾಜ್ಯಕ್ಕೆ ಚಳಿ ಹಿಡಿಸಿದ ಚಂಡಮಾರುತ:
ಅಸನಿ ಚಂಡಮಾರುತದ ಪ್ರಭಾವದಿಂದ ಮಳೆ ಮತ್ತು ಮೋಡ ಕವಿದ ವಾತಾವರಣ ಉಂಟಾಗಿರುವ ಕಾರಣ ರಾಜ್ಯದ ಬೇಸಿಗೆ ಕಾಲ ಅಕಾಲಿಕವಾಗಿ ಕೊನೆಗೊಂಡಂತೆ ಆಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿನ ತಾಪಮಾನ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಬಿರು ಬೇಸಿಗೆಯ ಮೇ ತಿಂಗಳಲ್ಲೇ ಚಳಿಯ ವಾತಾವರಣ ಉಂಟಾಗಿದೆ.

ಶುಕ್ರವಾರ ಬೆಳಗ್ಗೆ 9.30ವರೆಗಿನ ಕಳೆದ 24 ಗಂಟೆ ಅವಧಿಯಲ್ಲಿ ರಾಜ್ಯದ ಶೇ. 42 ಭೂಭಾಗದಲ್ಲಿ ಕಾಲು ಸೆಂ.ಮೀ ಗಿಂತ ಹೆಚ್ಚು ಮಳೆಯಾಗಿದೆ. ಚಾಮರಾಜನಗರದ ಯರಗಂಬಳ್ಳಿಯಲ್ಲಿ 10.6 ಸೆಂ.ಮೀ, ಬಾಗಲಕೋಟೆಯ ಕಡ್ಲಿಮಟ್ಟಿಯಲ್ಲಿ 10.5 ಸೆಂ.ಮೀ, ಚಾಮರಾಜನಗರದ ಪುನಜನೂರುನಲ್ಲಿ 10. 3 ಸೆಂ.ಮೀ. ಮಳೆಯಾಗಿದೆ.

ಆಸಾನಿ’ಯಿಂದಾಗಿ ಪೂರ್ವ ಕರಾವಳಿಗೆ ಭಾರಿ ಮಳೆ ಭೀತಿ!

ರಾಜ್ಯದ ಶೇ. 72ರಷ್ಟುಭೂಭಾಗದಲ್ಲಿ 20 ರಿಂದ 24 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದೆ. ಚಾಮರಾಜನಗರದಲ್ಲಿ ಕನಿಷ್ಠ 17 ಡಿಗ್ರಿ ಸೆಲ್ಸಿಯಸ್‌ ಉಷ್ಣತೆ ದಾಖಲಾಗಿದೆ. ಕಲಬುರಗಿ ಮತ್ತು ಬೀದರ್‌ ಜಿಲ್ಲೆಯಲ್ಲಿ ಮಾತ್ರ 40 ಡಿಗ್ರಿ ಮೀರಿದ ಉಷ್ಣತೆ ವರದಿಯಾಗಿದೆ.

ಹವಾಮಾನ ಇಲಾಖೆಯು 2005 ರಿಂದ ಪ್ರತಿ ವರ್ಷ ಮುಂಗಾರು ಮಾರುತದ ಮುನ್ಸೂಚನೆ ನೀಡುತ್ತಿದೆ. ಕಳೆದ 17 ವರ್ಷದಲ್ಲಿ 2015ನೇ ಇಸವಿ ಹೊರತು ಪಡಿಸಿ ಉಳಿದೆಲ್ಲ ವರ್ಷವು ನಿಖರ ಮುನ್ಸೂಚನೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಮಳೆ
ಮೇ 14ಕ್ಕೆ ಬೀದರ್‌ ಮತ್ತು ಕಲಬುರಗಿ ಜಿಲ್ಲೆ ಹೊರತು ಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದ್ದು ಹಳದಿ ಅಲರ್ಚ್‌ ಘೋಷಿಸಲಾಗಿದೆ. ಮೇ 15 ರಿಂದ ಮೇ 17ರವರೆಗೆ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ
ಬೆಳಗಾವಿ ಅಧಿವೇಶನ: 89 ಸಂಘಟನೆಗಳಿಂದ ಪ್ರತಿಭಟನೆಗೆ ಕರೆ, 6000ಕ್ಕೂ ಹೆಚ್ಚು ಪೊಲೀಸರಿಂದ ಸರ್ಪಗಾವಲು