ಲಿಮಿಟೆಡ್‌ ಲಾಕ್‌ಡ್ಡೌನ್, ಲಸಿಕೆ ಸರ್ಟಿಫಿಕೆಟ್‌ ಕಡ್ಡಾಯ‌: ಕೇಂದ್ರಕ್ಕೆ ಐಎಂಎ ಸಲಹೆ

Published : Apr 07, 2021, 07:29 AM IST
ಲಿಮಿಟೆಡ್‌ ಲಾಕ್‌ಡ್ಡೌನ್, ಲಸಿಕೆ ಸರ್ಟಿಫಿಕೆಟ್‌ ಕಡ್ಡಾಯ‌: ಕೇಂದ್ರಕ್ಕೆ ಐಎಂಎ ಸಲಹೆ

ಸಾರಾಂಶ

ಲಿಮಿಟೆಡ್‌ ಲಾಕ್‌ಡ್ಡೌನ್‌: ಕೇಂದ್ರಕ್ಕೆ ಐಎಂಎ ಸಲಹೆ| ಸಿನಿಮಾ, ಸಾಂಸ್ಕೃತಿಕ, ಧಾರ್ಮಿಕ, ಕ್ರೀಡೆಗೆ ನಿರ್ಬಂಧ| ಸಾರ್ವಜನಿಕ ಸ್ಥಳಗಳಿಗೆ ಲಸಿಕೆ ಸರ್ಟಿಫಿಕೆಟ್‌ ಕಡ್ಡಾಯ

ನವದೆಹಲಿ(ಏ.07): ದೇಶದಲ್ಲಿ ಕೊರೋನಾ 2ನೇ ಅಲೆ ತೀವ್ರ ಪ್ರಮಾಣದಲ್ಲಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ತೀರಾ ಅತ್ಯಗತ್ಯವಲ್ಲದ ವಲಯಗಳ ಮೇಲೆ ಸೀಮಿತ ಲಾಕ್‌ಡೌನ್‌ ಹೇರಬೇಕು ಎಂದು ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ), ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದೆ. ಸೋಂಕಿನ ಸರಪಳಿ ಮುರಿಯಲು ಇಂಥ ಕ್ರಮ ಅಗತ್ಯ ಎಂದು ಅದು ಪ್ರತಿಪಾದಿಸಿದೆ.

ಈ ಕುರಿತು ಪ್ರಧಾನಿಗೆ ಪತ್ರ ಬರೆದಿರುವ ಸಂಸ್ಥೆ, ‘ದೇಶದಲ್ಲಿ ಹೆಚ್ಚುತ್ತಿರುವ ಪ್ರಕರಣಗಳನ್ನು ಗಮನಿಸಿದಾಗ ಸೋಂಕಿನ ಸರಪಳಿ ಮುರಿಯಲು ‘ಸೀಮಿತ ಅವಧಿಯ ನಿರಂತರ ಲಾಕ್‌ಡೌನ್‌’ ಜಾರಿ ಮಾಡಬೇಕು. ಅದರಲ್ಲೂ ವಿಶೇಷವಾಗಿ ತೀರಾ ಅತ್ಯಗತ್ಯವಲ್ಲದ ಸಿನಿಮಾ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು, ಕ್ರೀಡೆ ಮತ್ತಿತರೆ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಬೇಕು’ ಎಂದು ಸಲಹೆ ನೀಡಿದೆ.

18 ವರ್ಷ ಮೇಲ್ಪಟ್ಟವರಿಗೂ ಲಸಿಕೆ:

ಇದೇ ವೇಳೆ ಕೊರೋನಾ ಲಸಿಕೆ ಅಭಿಯಾನಕ್ಕೆ 18 ವರ್ಷ ಮೇಲ್ಪಟ್ಟಎಲ್ಲರನ್ನೂ ಸೇರ್ಪಡೆ ಮಾಡುವಂತೆ ಐಎಂಎ ಸಲಹೆ ನೀಡಿದೆ. ಪ್ರಸಕ್ತ ನಾವು 45 ವರ್ಷ ಮೇಲ್ಪಟ್ಟವರಿಗೆ ಮಾತ್ರವೇ ಲಸಿಕೆ ನೀಡುತ್ತಿದ್ದೇವೆ. ಆದರೆ 2ನೇ ಅಲೆಯ ವೇಗವನ್ನು ಗಮನಿಸಿದಾಗ, ಲಸಿಕೆ ಅಭಿಯಾನವನ್ನು ಇನ್ನಷ್ಟುಯುದ್ಧೋಪಾದಿಯಲ್ಲಿ ಕೈಗೊಳ್ಳಬೇಕು ಮತ್ತು 18 ವರ್ಷ ಮೇಲ್ಪಟ್ಟಎಲ್ಲರಿಗೂ ಲಸಿಕೆ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಬೇಕು. ಲಸಿಕೆ ಎಲ್ಲರಿಗೂ ಉಚಿತವಾಗಿರಬೇಕು. ಪ್ರತಿಯೊಬ್ಬರಿಗೂ ಅವರಿಗೆ ಸಮೀಪದ ಸ್ಥಳದಲ್ಲೇ ಲಸಿಕೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಜೊತೆಗೆ ಕೌಟುಂಬಿಕ ವೈದ್ಯರು ಮತ್ತು ಕ್ಲಿನಿಕ್‌ಗಳ ನೆರವನ್ನೂ ಲಸಿಕೆ ಅಭಿಯಾನಕ್ಕೆ ಪಡೆದುಕೊಳ್ಳಬೇಕು. ಇದು ಒಟ್ಟಾರೆ ಅಭಿಯಾನದ ಮೇಲೆ ಮಹತ್ವದ ಪರಿಣಾಮ ಬೀರಲಿದೆ’ ಎಂದು ಹೇಳಿದೆ.

ಇದೇ ವೇಳೆ ‘ಸಾರ್ವಜನಿಕ ಸ್ಥಳಗಳು ಮತ್ತು ಪಡಿತರ ಅಂಗಡಿಗೆ ತೆರಳಲು ಲಸಿಕೆ ಪ್ರಮಾಣ ಪತ್ರ ಕಡ್ಡಾಯ ಮಾಡಬೇಕು. ಸದ್ಯಕ್ಕೆ ಲಸಿಕೆ ಮಾತ್ರವೇ ಸೋಂಕು ನಿಯಂತ್ರಣಕ್ಕೆ ನಮ್ಮ ಮುಂದಿರುವ ಸಾಕ್ಷ್ಯಾಧಾರಿತ ಸಂಪನ್ಮೂಲ. ಹೀಗಾಗಿ ಲಸಿಕೆ ಅಭಿಯಾನ ತೀವ್ರಗೊಳಿಸಬೇಕು. ಜಿಲ್ಲಾ ಮಟ್ಟದಲ್ಲಿ ಸರ್ಕಾರಿ ಮತ್ತು ಖಾಸಗಿ ಪಾಲುದಾರಿಕೆಯಲ್ಲಿ ಲಸಿಕೆ ಕಾರ್ಯಪಡೆ ರಚಿಸುವ ಮೂಲಕ ಸಮೂಹ ಲಸಿಕೆ ಪಡೆವ, ಕಣ್ಗಾವಲು ಇಡುವ ಮತ್ತು ಲಸಿಕೆಯ ಅಡ್ಡಪರಿಣಾಮಗಳ ಮೇಲೆ ನಿಗಾ ಇಡುವ ಕೆಲಸ ಮಾಡಬೇಕು’ ಎಂದು ಹೇಳಿದೆ.

ಸತತ 3ನೇ ದಿನ 90000+ ಕೇಸು

ದೇಶದಲ್ಲಿ ಸತತ ಮೂರನೇ ದಿನವೂ 90000ಕ್ಕಿಂತ ಹೆಚ್ಚು (96,982) ಹೊಸ ಕೊರೋನಾ ಕೇಸುಗಳು ದೃಢಪಟ್ಟಿವೆ. ಮಂಗಳವಾರ 446 ಜನರು ಸಾವನ್ನಪ್ಪಿದ್ದಾರೆ. ಸೋಂಕು ಸತತ 27 ದಿನದಿಂದ ಏರಿಕೆ ಹಾದಿಯಲ್ಲಿದೆ. ಸಾವಿನ ದಾಖಲೆಯಲ್ಲಿ ಮಹಾರಾಷ್ಟ್ರ ನಂ.1, ಕರ್ನಾಟಕ ನಂ.4 ಸ್ಥಾನದಲ್ಲಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!