ಲೋಕಸಭೆ ಚುನಾವಣೆಗೆ ಸ್ಪರ್ಧಿಸ್ತಾರ ಎಸ್ಸೆಂ ಕೃಷ್ಣ..?

By Web DeskFirst Published Feb 10, 2019, 11:17 AM IST
Highlights

ಮಾಜಿ ಕಾಂಗ್ರೆಸ್ ಮುಖಂಡ ಹಾಲಿ ಬಿಜೆಪಿ ನಾಯಕ ಎಸ್.ಎಂ. ಕೃಷ್ಣ ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆ ಪ್ರತಿಕ್ರಿಯಿಸಿದ್ದು ತಾವಾಗಲಿ ತಮ್ಮ ಕುಟುಂಬಸ್ಥರಾಗಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದಿದ್ದಾರೆ. 

ಮದ್ದೂರು :  ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ನಾನಾಗಲೀ ಅಥವಾ ನನ್ನ ಕುಟುಂಬದವರಾಗಲೀ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಕೇಂದ್ರ ಮಾಜಿ ಸಚಿವ ಎಸ್‌.ಎಂ. ಕೃಷ್ಣ ಶನಿವಾರ ಸ್ಪಷ್ಟಪಡಿಸಿದ್ದಾರೆ.

ತಾಲೂಕಿನ ಗಡಿ ಭಾಗ ನಿಡಘಟ್ಟದಲ್ಲಿ ಬಿಜೆಪಿ ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಬರುವ ನಿರೀಕ್ಷೆ ಇದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಬಿಜೆಪಿ ಪ್ರಬಲವಾಗುತ್ತಿದೆ. ಈ ಮಾತಿಗೆ ಸಾಕ್ಷಿಯಾಗಿ ಹಿಂದಿನ ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಪಡೆದಿರುವ ಮತಗಳು ದಾಖಲಾಗಿವೆ. ರಾಜ್ಯದಲ್ಲಿರುವ ನನ್ನ ಬೆಂಬಲಿಗರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುವಂತೆ ತಿಳಿಸಲಾಗಿದೆ. ಈ ಬಗ್ಗೆ ನಿರಂತರವಾಗಿ ಬೆಂಬಲಿಗರ ಜೊತೆ ಮಾತನಾಡುತ್ತಿದ್ದೇನೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಇಂದಿನಿಂದ ಲೋಕಸಭಾ ಚುನಾವಣೆಗೆ ಸಜ್ಜಾಗುವಂತೆ ಕಾರ್ಯಕರ್ತರಿಗೆ ಕರೆ ನೀಡಲಾಗುವುದು. ಇವತ್ತು ಪ್ರಚಲಿತ ದೇಶದ ಪರಿಸ್ಥಿತಿ ವಿನಿಮಯ ಮಾಡುವ ಸಭೆಯಾಗಿ ಇದಾಗಿದೆ. ನಮ್ಮ ಗಮನವೆಲ್ಲಾ ಲೋಕಸಭಾ ಚುನಾವಣೆ ಮೇಲೆ ಕೇಂದ್ರೀಕೃತವಾಗಿದೆ ಬಿಜೆಪಿಗೆ ದೊಡ್ಡ ಬೆಂಬಲ ಸಿಗುವ ನಿರೀಕ್ಷೆ ಇದೆ ಎಂದರು.

ಸುಮಲತಾ ವಿಚಾರ ಗೊತ್ತಿಲ್ಲ:

ಸುಮಲತಾ ಅಂಬರೀಶ್‌ ಬಿಜೆಪಿಗೆ ಬರುವ ವಿಚಾರ ನನಗೆ ಗೊತ್ತಿಲ್ಲ. ಅದು ಸ್ಥಳೀಯ ನಾಯಕರು ಕಾರ್ಯಕರ್ತರಿಗೆ ಬಿಟ್ಟವಿಚಾರ ಎಂದು ಹೇಳಿ ಜಾರಿಕೆ ಉತ್ತರ ನೀಡಿದ ಕೃಷ್ಣ, ಈಗ ನಮ್ಮ ಗಮನ ಲೋಕಸಭಾ ಚುನಾವಣೆ ಮೇಲೆ ಕೇಂದ್ರೀಕೃತವಾಗಿದೆ. ಬಿಜೆಪಿಗೆ ದೊಡ್ಡ ಬೆಂಬಲ ಸಿಗುವ ನಿರೀಕ್ಷೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

click me!