Breaking: ಅಕ್ರಮ ಗಣಿಗಾರಿಕೆ: ಜನಾರ್ಧನ ರೆಡ್ಡಿಗೆ 7 ವರ್ಷಗಳ ಜೈಲು ಶಿಕ್ಷೆ ಪ್ರಕಟ

Published : May 06, 2025, 04:16 PM ISTUpdated : May 06, 2025, 04:53 PM IST
Breaking: ಅಕ್ರಮ ಗಣಿಗಾರಿಕೆ: ಜನಾರ್ಧನ ರೆಡ್ಡಿಗೆ 7 ವರ್ಷಗಳ ಜೈಲು ಶಿಕ್ಷೆ ಪ್ರಕಟ

ಸಾರಾಂಶ

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಹೈದರಾಬಾದ್‌ನ ಸಿಬಿಐ ನ್ಯಾಯಾಲಯ ಈ ತೀರ್ಪು ನೀಡಿದೆ. ರೆಡ್ಡಿ ಸೇರಿದಂತೆ ನಾಲ್ವರನ್ನು ದೋಷಿಗಳೆಂದು ಘೋಷಿಸಲಾಗಿದೆ. ಗಡಿ ಒತ್ತುವರಿ, ಅರಣ್ಯ ಕಾಯ್ದೆ ಉಲ್ಲಂಘನೆ ಸೇರಿದಂತೆ ಹಲವು ಆರೋಪಗಳಿದ್ದವು. ರೆಡ್ಡಿ ಈಗಾಗಲೇ ಮೂರುವರೆ ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ.

ಬಳ್ಳಾರಿ: ಓಬಳಾಪುರಂ ಅಕ್ರಮ ಗಣಿಗಾರಿಕೆ  ಮತ್ತು ಗಡಿ ಒತ್ತುವರಿ ಪ್ರಕರಣದಲ್ಲಿ ಮಾಜಿ ಸಚಿವ, ಹಾಲಿ ಗಂಗಾವತಿ ಶಾಸಕ ಜನಾರ್ಧನ ರೆಡ್ಡಿಯನ್ನು ದೋಷಿ ಎಂದು ನ್ಯಾಯಾಲಯ ಘೋಷಿಸಿದ್ದು, 7 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿದೆ. ಹೈದರಾಬಾದ್ ನ ನಾಮಪಲ್ಲಿಯಲ್ಲಿರೋ ಸಿಬಿಐ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದ್ದು  ಹಾಲಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಸಹಿತ 5 ಮಂದಿ ಜೈಲು ಶಿಕ್ಷೆ ಅನುಭವಿಸಲಿದ್ದಾರೆ. ಈಗಾಗಲೇ ಜನಾರ್ಧನ ರೆಡ್ಡಿ ಮೂರುವರೆ ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಪ್ರಕರಣಲ್ಲಿ ಆರೋಪಿಗಳಾಗಿದ್ದ ಆಂಧ್ರಪ್ರದೇಶದ ಮಾಜಿ ಸಚಿವೆ ಸಬಿತಾ ಇಂದ್ರ ರೆಡ್ಡಿ ಮತ್ತು ಕೃಷ್ಣಾನಂದಗೆ ಬಿಗ್‌ ರಿಲೀಪ್‌ ಸಿಕ್ಕಿದೆ.

ನ್ಯಾಯಾಲಯದ ವಿಚಾರಣೆ ಹಿನ್ನೆಲೆಯಲ್ಲಿ ಜನಾರ್ಧನ ರೆಡ್ಡಿ ಸೋಮವಾರವೇ ಹೈದರಾಬಾದ್  ಗೆ ತೆರಳಿದ್ದರು ಇಂದು ವಿಚಾರಣೆ ನಡೆಸಿದ ನಾಮಪಲ್ಲಿಯಲ್ಲಿರೋ ಸಿಬಿಐ ಕೋರ್ಟ್    ಜನಾರ್ದನ ರೆಡ್ಡಿ ದೋಷಿ ಎಂದು ತೀರ್ಪು ಪ್ರಕಟಿಸಿ, ಶಿಕ್ಷೆಯ ಪ್ರಮಾಣವನ್ನು ಕೂಡ ಘೋಷಿಸಿದೆ. ಪ್ರಕರಣದಲ್ಲಿ  A1 ಓಎಂಸಿ ಎಂಡಿ ಶ್ರೀನಿವಾಸ ರೆಡ್ಡಿ, A2 ಜನಾರ್ದನ ರೆಡ್ಡಿ, A3 ರಾಜಗೋಪಾಲ್ ರೆಡ್ಡಿ, A4 ಅಲಿಖಾನ್ ಅಪರಾಧಿಗಳಾಗಿದ್ದಾರೆ. ಬೆಳಿಗ್ಗೆ ದಾಖಲಾತಿ ಪರಿಶೀಲಿಸಿದ ಕೋರ್ಟ್ ಮಧ್ಯಾಹ್ನದ ನಂತರ ತೀರ್ಪು ಪ್ರಕಟಿಸಿತು. ತೀರ್ಪು ಬಳಿಕ ರೆಡ್ಡಿ ಒಂದು ಕ್ಷಣ ಕುಸಿದು ಹೋದರು ಎಂದು ವರದಿ ತಿಳಿಸಿದೆ. 

ಶಾಸಕ ಸ್ಥಾನ ರದ್ದಾಗುತ್ತಾ?

ಹೈದರಾಬಾದ್‌ ಸಿಬಿಐ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಮತ್ತು ಜಾಮೀನು ಕೋರಿ ಜನಾರ್ಧನ ರೆಡ್ಡಿ  ಹೈಕೋರ್ಟ್ ಹೋಗುವ ಸಾಧ್ಯತೆ ಇದೆ. ಒಂದು ವೇಳೆ ಹೈಕೋರ್ಟ್ ನಿಂದ ರೆಡ್ಡಿ ಪರವಾಗಿ ತೀರ್ಪು ಬಂದರೆ ಯಾವುದೇ ಸಮಸ್ಯೆ ಇಲ್ಲ.  ಶಾಸಕ ಸ್ಥಾನ ಉಳಿಯಲಿದೆ. ಒಂದು ವೇಳೆ ರೆಡ್ಡಿ ವಿರುದ್ಧವಾಗಿ ತೀರ್ಪು ಬಂದರೆ ಶಾಸಕ ಸ್ಥಾನವೂ ರದ್ದಾಗಲಿದೆ. ಜೈಲೂಟವೂ ಫಿಕ್ಸ್ ಆಗಲಿದೆ.

ಕರ್ನಾಟಕ - ಆಂಧ್ರಪ್ರದೇಶದ ಗಡಿಯಲ್ಲಿರುವ ಓಬಳಾಪುರಂ ಗಣಿಯಲ್ಲಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಒಎಂಸಿಯಿಂದ ಅನುಮತಿ ನೀಡಿದ್ದಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಕಬ್ಬಿಣದ ಅದಿರನ್ನು ವಿವೇಚನಾರಹಿತವಾಗಿ ಗಣಿಗಾರಿಕೆ ನಡೆಸಿದೆ ಎಂಬ ಆರೋಪಗಳಿತ್ತು. ಅಕ್ರಮ ಸುಲಿಗೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ಆಂಧ್ರದಲ್ಲಿ ಪ್ರಕರಣ ದಾಖಲಾಗಿತ್ತು. ಜೊತೆಗೆ ಕರ್ನಾಟಕ ಮತ್ತು ಆಂಧ್ರದ ಗಡಿಯನ್ನು ವಿರೂಪಗೊಳಿಸಿದ ಆರೋಪ ಕೂಡ ರೆಡ್ಡಿ ಮತ್ತು ಆಂಧ್ರದ ಪ್ರಭಾವಿಗಳ ಮೇಲಿತ್ತು.

ಗಡಿ ಗುರುತು ನಾಶ ಮತ್ತು ಅರಣ್ಯ ಕಾಯಿದೆ ಉಲ್ಲಂಘನೆಯ ಆರೋಪದ ಮೇಲೆ ಸೆಕ್ಷನ್ 120 ಮತ್ತು 120ಬಿ ಅನ್ವಯ ಗಾಲಿ ರೆಡ್ಡಿ ಹಾಗೂ ಶ್ರೀನಿವಾಸ್ ರೆಡ್ಡಿ ಬಂಧನವಾಗಿತ್ತು. ಐಪಿಸಿ ಸೆಕ್ಷನ್ 120ಬಿ, 379, 411, 420, 422 ಮತ್ತು 447ರ ಅಡಿಯಲ್ಲಿ ಹಾಗೂ ಗಣಿಗಾರಿಕೆ ಮತ್ತು ಅರಣ್ಯ, ಖನೀಜ ಕಾಯ್ದೆಗಳ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಇವರ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಲಾಗಿತ್ತು.

ಈ ಪ್ರದೇಶದಲ್ಲಿ ಜಿ. ಜನಾರ್ದನರೆಡ್ಡಿ ಅವರ ವ್ಯವಸ್ಥಾಪಕ ನಿರ್ದೇಶಕತ್ವ, ಪಾಲುದಾರತ್ವ ಮತ್ತು ಗಣಿ ಕಂಪನಿಯಲ್ಲದೆ ಗಣಿ ಗುತ್ತಿಗೆ, ಗಡಿ ರೇಖೆ ತಿದ್ದಿರುವುದು, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಓಬಳಾಪುರಂ ಮೈನಿಂಗ್ ಕಾರ್ಪೊರೇಷನ್, ಅನಂತಪುರಂ ಮೈನಿಂಗ್ ಕಾರ್ಪೊರೇಷನ್, ಓಬಳಾಪುರಂ ಮೈನಿಂಗ್ ಕಂಪನಿ, ಅಂತರಗಂಗಮ್ಮ ಮೈನಿಂಗ್ ಕಂಪನಿ, ವೈ. ಮಹಾಬಲೇಶ್ವರಪ್ಪ ಅಂಡ್ ಸನ್ಸ್ ಹಾಗೂ ಬಳ್ಳಾರಿ ಐರನ್ ಓರ್ಸ್ ಪ್ರೈವೇಟ್ ಲಿಮಿಟೆಡ್‌ ಸಂಸ್ಥೆಗಳು ಸುದ್ದಿಯಲ್ಲಿದ್ದವು.

ಟಪಾಲ್ ಗಣೇಶ್ ಬೆಂಬಿಡದ ಹೋರಾಟ: 

2010ರಲ್ಲಿ ಸುಪ್ರಿಂಕೋರ್ಟ್ ಮುಖ್ಯನ್ಯಾಯಮೂರ್ತಿ ಡಾ ಕೆ ಜಿ ಬಾಲಕೃಷ್ಣನ್ ಹಾಗೂ ನ್ಯಾಯಮೂರ್ತಿ ದೀಪಕ್ ವರ್ಮಾ ನೇತೃತ್ವದ ವಿಭಾಗೀಯ ಪೀಠ ಓಬಳಾಪುರಂ ಮೈನಿಂಗ್ ಕಂಪನಿಯ ಗಣಿಗಾರಿಕೆಗೆ ಸಂಬಂಧಿಸಿದಂತೆ ಭಾರತೀಯ ಸರ್ವೆ ಇಲಾಖೆ ನೇತೃತ್ವದ ಸಮಿತಿ ರಚಿಸಿ ಸಮಗ್ರ ವರದಿ ನೀಡುವಂತೆ ಸೂಚಿಸಿತ್ತು. ಅದರಂತೆ ವರದಿಯನ್ನೂ ಸಲ್ಲಿಸಲಾಗಿತ್ತು. ಆದರೆ 2022ರಲ್ಲಿ ಸರ್ವೇ ಆಫ್‌ ಇಂಡಿಯಾದವರು ನಡೆಸಿರುವ ಗಡಿ ಗುರುತು ಕಾರ್ಯ ಸರಿಯಾಗಿಲ್ಲ ಎಂದು ಗಣಿ ಉದ್ಯಮಿ ಟಪಾಲ್‌ ಗಣೇಶ್‌ ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದರು. ಸರ್ವೇ ಆಫ್ ಇಂಡಿಯಾ  ಅಧಿಕಾರಿಗಳು ಪೂರಕ ದಾಖಲೆ ಇಲ್ಲದೇ, ಆಂಧ್ರ- ಕರ್ನಾಟಕ ಗಡಿ ರೇಖೆ ತಪ್ಪಾಗಿ ಗುರುತಿಸಿದ್ದಾರೆ ಎನ್ನುವುದು ಟಪಾಲ್ ಗಣೇಶ್ ಆರೋಪವಾಗಿದೆ.  ಕಾಂಟೂರ್‌ ಮೆಥಡಾಲಜಿಯನ್ನು ಅನುಸರಿಸದೇ ಕಾಲ್ಪನಿಕ‌ ನಕ್ಷೆ ಇಟ್ಟುಕೊಂಡು ಸರ್ವೆ ಮಾಡಿದ್ದಾರೆ. ಜನಾರ್ದನ ರೆಡ್ಡಿ ಸಂರಕ್ಷಣೆ ಮಾಡೋ ರೀತಿಯಲ್ಲಿ ಸರ್ವೇ ಮಾಡುತ್ತಿದ್ದಾರೆಂದು ಟಪಾಲ್ ಆರೋಪಿಸಿ ಪ್ರಧಾನಿ ಕಚೇರಿಗೆ ಪತ್ರ ಕೂಡ ಬರೆದ್ದಿದ್ದರು. ಈ ಹಿನ್ನೆಲೆಯಲ್ಲಿ  ಪ್ರಧಾನ ಮಂತ್ರಿ ಕಚೇರಿ ಪರಿಶೀಲಿಸಿ ಕ್ರಮ ವಹಿಸುವಂತೆ ಬಳ್ಳಾರಿ ಜಿಲ್ಲಾಧಿಕಾರಿ, ಜಿಲ್ಲಾ ಅರಣ್ಯ ಉಪಸಂರಕ್ಷಣಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌