
ಬೆಂಗಳೂರು (ಜು.01): ಭೂಮಿ ಮೇಲೆ ಅಪರೂಪವಾಗಿ ಸಿಗುವ ಟರ್ಬಿಯಂ ಎಂಬ ಲೋಹ ಬಳಸಿ ಮನುಷ್ಯನ ಕಿಣ್ವಗಳ (ಎನ್ಜೈಂ) ಮೇಲೆ ಬೆಳಕಿನ ಕಿರಣಗಳನ್ನು ಬಿಟ್ಟು ಸರಳವಾಗಿ ಯಕೃತ್ತು (ಲಿವರ್) ಕ್ಯಾನ್ಸರ್ ಪತ್ತೆ ಹಚ್ಚಬಹುದಾದ ಸಂಶೋಧನೆಯನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸಂಶೋಧಕರ ತಂಡ ಮಾಡಿದೆ.
ಬದಲಾದ ಜೀವನ ಶೈಲಿಯಿಂದ ಸಕ್ಕರೆ ಕಾಯಿಲೆ ಮತ್ತು ಸಂಬಂಧಿಸಿದ ಕಾಯಿಲೆಗಳ ಹೆಚ್ಚಳದಿಂದ ಯಕೃತ್ತು ಕ್ಯಾನ್ಸರ್ ಪತ್ತೆ ಪ್ರಮಾಣವೂ ಹೆಚ್ಚಾಗುತ್ತಿದೆ. ಅನೇಕ ಬಾರಿ ವಿಳಂಬವಾಗಿ ಪತ್ತೆಯಾಗುವುದರಿಂದ ಪ್ರಾಣಾಪಾಯ ಸಾಧ್ಯತೆಗಳು ಇರುತ್ತವೆ. ಹೀಗಾಗಿ, ಸಾಂಪ್ರದಾಯಿಕ ರೋಗ ಪತ್ತೆ ವಿಧಾನಕ್ಕಿಂತಲೂ ಸರಳವಾಗಿ, ತ್ವರಿತವಾಗಿ ಯಕೃತ್ತು ಕ್ಯಾನ್ಸರ್ ಪತ್ತೆ ಮಾಡುವುದರಿಂದ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಐಐಎಸ್ಸಿ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಬಿ-ಗ್ಲುಕ್ಯುರಾನಿಡೇಸ್ ಎಂಬ ಕಿಣ್ವಗಳು ಸಾಮಾನ್ಯವಾಗಿ ಎಲ್ಲಾ ಜೀವಿಗಳಲ್ಲಿ ಇರುತ್ತವೆ. ದೇಹದಲ್ಲಿನ ಗ್ಲುಕ್ಯುರೋನಿಕ್ ಆ್ಯಸಿಡ್ (ಶುಗರ್ ಆ್ಯಸಿಡ್) ಅನ್ನು ಕರಗಿಸುವುದು ಈ ಕಿಣ್ವಗಳ ಪ್ರಮುಖ ಕೆಲಸ. ಅಲ್ಲದೆ, ಯಕೃತ್ತು ಕ್ಯಾನ್ಸರ್ ಪತ್ತೆಗೂ ಈ ಕಿಣ್ವಗಳು ನೆರವಾಗುತ್ತವೆ. ದೇಹದಲ್ಲಿ ಬಿ-ಗ್ಲುಕ್ಯುರಾನಿಡೇಸ್ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುವುದರಿಂದ ಸ್ತನ ಕ್ಯಾನ್ಸರ್, ಕರುಳು ಕ್ಯಾನ್ಸರ್, ಮೂತ್ರಪಿಂಡ ಕ್ಯಾನ್ಸರ್ ಸೇರಿದಂತೆ ಇನ್ನಿತರ ಕ್ಯಾನ್ಸರ್ ಮತ್ತು ರೋಗಗಳ ಪತ್ತೆ ಹಚ್ಚಲು ಕೂಡ ಸಾಧ್ಯವಾಗುತ್ತದೆ. ಇದೇ ಕಿಣ್ವಗಳನ್ನು ಬೆಳಕಿನ ಕಿರಣಗಳನ್ನು ಬಳಸಿ ಪತ್ತೆ ಹಚ್ಚುವ ಸಂಶೋಧನೆ ಮಾಡಲಾಗಿದೆ ಎಂದು ಐಐಎಸ್ಸಿಯ ಸಾವಯವ ರಸಾಯನ ಶಾಸ್ತ್ರ ವಿಭಾಗ ಹೇಳಿದೆ.
ಐಐಎಸ್ಸಿ ಸಂಶೋಧಕರ ತಂಡ ಕಳೆದ ಒಂದು ದಶಕದಿಂದ ಈ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದೆ. ವರ್ಷದಿಂದ ವರ್ಷಕ್ಕೆ ಯಕೃತ್ತು ಕ್ಯಾನ್ಸರ್‌ಗೆ ಬಲಿಯಾಗುವವರ ಸಂಖ್ಯೆ ಏರುತ್ತಿದೆ. ಹೀಗಾಗಿ, ನೂತನ ತಂತ್ರಜ್ಞಾನದ ಅಭಿವೃದ್ಧಿ ಆರೋಗ್ಯ ಕ್ಷೇತ್ರಕ್ಕೆ ಆಶಾದಾಯಕವಾಗಿದೆ. ಐಐಎಸ್ಸಿಯ ರೋಗಪತ್ತೆಯ ನೂತನ ವಿಧಾನ ಮಹತ್ವದ್ದಾಗಿದೆ. ಕ್ಯಾನ್ಸರ್ ಪತ್ತೆ ವೆಚ್ಚವನ್ನು ಕಡಿಮೆಗೊಳಿಸುವ ಈ ಸಂಶೋಧನೆ ಕುರಿತು ಇನ್ನಷ್ಟು ಕ್ಲಿನಿಕಲ್ ಅಧ್ಯಯನಗಳು ನಡೆಯಬೇಕಿದೆ ಎಂದು ಐಐಎಸ್ಸಿಯ ಸಂಶೋಧಕಿ ಅನನ್ಯಾ ಬಿಸ್ವಾಸ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ