
ಮಂಗಳೂರು (ಜುಲೈ.10): ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿರುವ ಸುಳ್ಳು ಸುದ್ದಿ ಹಾಗೂ ದ್ವೇಷ ಭಾಷಣಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಇದೇ ಅಧಿವೇಶದಲ್ಲಿ ಹೊಸ ಕಾನೂನು ಜಾರಿಗೆ ತರಲಾಗುವುದು ಎಂದು ಬುಧವಾರ ಗೃಹ ಸಚಿವ ಡಾ.ಪರಮೇಶ್ವರ ಹೇಳಿದ್ದಾರೆ.
ಮಂಗಳೂರಿನ ನೇತ್ರಾವತಿ ಸಭಾಂಗಣದಲ್ಲಿ ಶಾಂತಿ ಸೌಹಾರ್ದ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ಕೆಲವು ಸಮಯದಿಂದ ಕರಾವಳಿಯಲ್ಲಿ ಶಾಂತಿ ಕದಡುವ ವಾತಾವರಣ ಕಂಡುಬಂದಿದ್ದು, ಅದನ್ನು ನಿಯಂತ್ರಣಕ್ಕೆ ತರಲಾಗಿದೆ. ಮುಂದೆ ಅಂತಹ ಘಟನೆಗಳು ಮರುಕಳಿಸದೆ, ಸೌಹಾರ್ದತೆಯ ವಾತಾವರಣ ಕಲ್ಪಿಸುವ ಉದ್ದೇಶದಿಂದ ಈ ಸಭೆ ಕರೆಯಲಾಗಿದೆ. ಇಲ್ಲಿ ಪ್ರಸ್ತಾಪಗೊಂಡ ವಿಚಾರಗಳನ್ನು ಮುಖ್ಯಮಂತ್ರಿ, ಸಂಬಂಧಿತ ಸಚಿವರೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಅಕ್ರಮ ಗೋ ಸಾಗಾಟ, ಗೋ ಹತ್ಯೆಗೆ ಸಂಬಂಧಿಸಿ ಈಗಾಗಲೇ ಇರುವ ಕಾನೂನನ್ನು ಅವಶ್ಯವಾದರೆ ಬಲಪಡಿಸಲಾಗುವುದು. ಕಾನೂನು ಪ್ರಕಾರ ಏನೇ ನಡೆದರೂ ನಾವು ಮಾತನಾಡುವುದಿಲ್ಲ. ಆದರೆ ಉಲ್ಲಂಘನೆ ಆದರೆ ಬಿಡುವುದಿಲ್ಲ. ಗೋ ಸಾಗಾಟದ ಹೆಸರಿನಲ್ಲಿ ಪೊಲೀಸ್‌ಗಿರಿ ಮಾಡಬಾರದು. ಅಕ್ರಮಗಳು ನಡೆಯುತ್ತಿದ್ದರೆ ಅದ್ನು ಪೊಲೀಸರಿಗೆ ತಿಳಿಸಿ. ಕಾನೂನು ಕೈಗೆತ್ತಿಕೊಳ್ಳಬೇಡಿ ಎಂದು ಅವರು ಸಲಹೆ ನೀಡಿದರು.
500 ಕೇಜಿಯಷ್ಟು ಮಾದಕ ದ್ರವ್ಯ ವಶ:
ಮುಂದಿನ ದಿನಗಳಲ್ಲಿ ಕರಾವಳಿಯ ಜನಪ್ರತಿನಿಧಿಗಳ ಜೊತೆ ಪ್ರತ್ಯೇಕ ಸಭೆ ನಡೆಸಲಾಗುವುದು. ಪಂಜಾಬ್ ರೀತಿ ಕರ್ನಾಟಕ ಆಗಬಾರದು ಎಂಬ ದಿಶೆಯಲ್ಲಿ ರಾಜ್ಯದಲ್ಲಿ ಡ್ರಗ್ಸ್ ವಿರುದ್ಧ ಸರ್ಕಾರ ಸಮರ ಸಾರಿದೆ. ದ.ಕ.ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 2.50 ಕೋಟಿ ರು.ಗಳ 500 ಕೇಜಿಯಷ್ಟು ಮಾದಕ ದ್ರವ್ಯಗಳನ್ನು ವಶಪಡಿಸಲಾಗಿದೆ. ಮಂಗಳೂರು ಪೊಲೀಸರು ಬೆಂಗಳೂರಲ್ಲಿ ₹80 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ ಮಾಡಿದ್ದಾರೆ.
ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಡ್ರಗ್ಸ್ ವಿರೋಧಿ ಸಮಿತಿ ರಚನೆಗೆ ಈಗಾಗಲೇ ಸೂಚನೆ ನೀಡಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಪೊಲೀಸರಿಗೂ ಸೂಚಿಸಲಾಗಿದೆ. ಆ್ಯಂಟಿ ರ್‍ಯಾಗಿಂಗ್ ಮಾದರಿಯಲ್ಲಿ ಆ್ಯಂಟಿ ಡ್ರಗ್ಸ್ ಸಮಿತಿ ರಚಿಸುವುದು ಕಡ್ಡಾಯ ಎಂದರು.
ಇನ್ನು, ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸುದ್ದಿಗಾರರ ಪ್ರಶ್ನೆಗೆ ಗೊತ್ತಿಲ್ಲ ಎಂದಷ್ಟೇ ಗೃಹ ಸಚಿವರು ಉತ್ತರಿಸಿದರು. ಸಿಎಂ, ಡಿಸಿಎಂ ದೆಹಲಿ ಭೇಟಿಯೂ ಗೊತ್ತಿಲ್ಲ, ಅವರನ್ನೇ ಕೇಳಿ ಎಂದರು. ಪಕ್ಷದಲ್ಲಿ ಸಿಎಂ ಬದಲಾವಣೆ ಕುರಿತ ಹೇಳಿಕೆ ಹಾಗೂ ಸಿಎಂ ಸ್ಥಾನಕ್ಕೆ ನಿಮ್ಮ ಹೆಸರು ಕೂಡ ಪ್ರಸ್ತಾಪವಾಗುತ್ತಿದೆ ಎಂಬ ಮಾತಿಗೂ ಡಾ.ಪರಮೇಶ್ವರ್ ಅವರ ಉತ್ತರ-ಗೊತ್ತಿಲ್ಲ ಎಂಬುದಾಗಿತ್ತು.
ತಮ್ಮ ಕ್ಷೇತ್ರಕ್ಕೆ ಹಣ ಬಿಡುಗಡೆ
ಮರಳು ಮತ್ತು ಕೆಂಪು ಕಲ್ಲಿನ ಕೊರತೆ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಿದ್ದಾರೆ ಎಂದು ಸಭೆ ಬಳಿಕ ಸುದ್ದಿಗಾರರ ಪ್ರಶ್ನೆಗೆ ಸಚಿವ ಡಾ.ಪರಮೇಶ್ವರ ಪ್ರತಿಕ್ರಿಯಿಸಿದರು. ಪಕ್ಷದ ಕೆಲವು ಶಾಸಕರ ಹೇಳಿಕೆಯ ಕುರಿತಂತೆ ಮಾತನಾಡಿ, ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಕೆಲವು ಶಾಸಕರು ಅವರ ಕ್ಷೇತ್ರದ ವಿಚಾರದಲ್ಲಿ ಮಾತ್ರ ಮಾತನಾಡಿದ್ದಾರೆ. ಕ್ಷೇತ್ರಕ್ಕೆ ಹಣ ಬಿಡುಗಡೆ ಆಗಿಲ್ಲ ಎಂಬ ಅವರ ಅನಿಸಿಕೆ ಹೇಳಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ