Anti-Drug Campaign: ವಿದ್ಯಾರ್ಥಿಗಳು ಡ್ರಗ್ಸ್‌ ಜಾಲಕ್ಕೆ ಬಲಿಯಾಗಬಾರದು: ಗೃಹ ಸಚಿವ ಪರಮೇಶ್ವರ್

Kannadaprabha News   | Kannada Prabha
Published : Jun 27, 2025, 06:48 AM ISTUpdated : Jun 27, 2025, 10:39 AM IST
Dr G Parameshwar

ಸಾರಾಂಶ

ವಿದ್ಯಾರ್ಥಿಗಳಲ್ಲಿ ಮಾದಕ ವಸ್ತು ವ್ಯಸನ ತಡೆಗಟ್ಟಲು ಕಾಲೇಜುಗಳಲ್ಲಿ ಡ್ರಗ್ಸ್ ನಿಗ್ರಹ ಸಮಿತಿ ರಚಿಸಲು ಸೂಚಿಸಲಾಗಿದೆ. ಡ್ರಗ್ಸ್ ದುಷ್ಪರಿಣಾಮಗಳ ಕುರಿತು 6.5 ಲಕ್ಷ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗಿದೆ. ಡ್ರಗ್ಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವರು ಎಚ್ಚರಿಸಿದ್ದಾರೆ.

ಬೆಂಗಳೂರು (ಜೂ.27): ವಿದ್ಯಾರ್ಥಿಗಳಲ್ಲಿ ಮಾದಕ ವಸ್ತು ವ್ಯಸನ ತಡಗೆಟ್ಟುವ ಸಲುವಾಗಿ ಕಾಲೇಜುಗಳಲ್ಲಿ ಡ್ರಗ್ಸ್ ನಿಗ್ರಹ ಸಮಿತಿ ರಚಿಸುವಂತೆ ಸೂಚಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಗುರುವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಾದಕ ವಸ್ತು ವ್ಯಸನಕ್ಕೆ ಸಿಲುಕಿ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ಹಾಳು ಮಾಡಿಕೊಳ್ಳಬಾರದು. ರಾಜ್ಯದ ಸರಿ ಸುಮಾರು 6.5 ಲಕ್ಷ ವಿದ್ಯಾರ್ಥಿಗಳಿಗೆ ಡ್ರಗ್ಸ್ ದುಷ್ಪರಿಣಾಮ ಕುರಿತು ಅರಿವು ಮೂಡಿಸಲಾಗಿದೆ. ಪ್ರತಿ ತಿಂಗಳು ತಮ್ಮ ಠಾಣಾ ಸರಹದ್ದಿನ ಶಾಲಾ-ಕಾಲೇಜುಗಳಿಗೆ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆಯಬೇಕು. ಅಲ್ಲದೆ ಡ್ರಗ್ಸ್ ಮಾರಾಟ ಜಾಲಕ್ಕೆ ವಿದ್ಯಾರ್ಥಿಗಳು ಸಿಲುಕದಂತೆ ತಡೆಗಟ್ಟಲು ಕಾಲೇಜು ಮಟ್ಟದಲ್ಲಿ ಮಾದಕ ವಸ್ತು ನಿಗ್ರಹ ಸಮಿತಿ ರಚಿಸುವಂತೆ ಸೂಚಿಸಲಾಗಿದೆ ಎಂದರು.

ಡ್ರಗ್ಸ್ ವಿಚಾರದಲ್ಲಿ ರಾಜ್ಯ ಪೊಲೀಸ್ ಇಲಾಖೆ ಯಾವುದೇ ಕಾರಣಕ್ಕೂ ರಾಜೀ ಮಾಡಿಕೊಳ್ಳುವುದಿಲ್ಲ. ಡ್ರಗ್ಸ್ ಚಟುವಟಿಕೆಯ ಬಗ್ಗೆ ಗೊತ್ತಾದ ಕೂಡಲೇ ಸಾರ್ವಜನಿಕರು ಕ್ಯೂಆರ್ ಕೋಡ್ ಮೂಲಕ ಪೊಲೀಸರಿಗೆ ಮಾಹಿತಿ ನೀಡಬೇಕು. ತಮ್ಮ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕಾನೂನುಬಾಹಿರ ಕೃತ್ಯಗಳಿಗೆ ನಾಗರಿಕರು ಆಸ್ಪದ ಕೊಡಬಾರದು ಎಂದು ಹೇಳಿದರು.

ಜಾಗತಿಕ ಮಟ್ಟದಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಆಂದೋಲನ ನಡೆದಿದೆ. ಡ್ರಗ್ಸ್‌ನಿಂದಾಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಡ್ರಗ್ಸ್ ದಂಧೆಯನ್ನು ಮಟ್ಟ ಹಾಕಲು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಆದರೆ ಈ ಜಾಲವನ್ನು ಕೇವಲ ಕಾನೂನು ಮೂಲಕ ನಿಯಂತ್ರಿಸಲು ಸಾಧ್ಯವಿಲ್ಲ. ಜನರು ಜಾಗೃತರಾಗಬೇಕು ಎಂದು ತಿಳಿಸಿದರು.

ಈಗಾಗಲೇ ಡ್ರಗ್ಸ್ ಪೆಡ್ಲರ್‌ಗಳ ವಿರುದ್ಧ ಆಸ್ತಿ ಮುಟ್ಟುಗೋಲು ಹಾಗೂ ಗೂಂಡಾ ಕಾಯ್ದೆಯಡಿ ಪ್ರಕರಣದಂಥ ಕಠಿಣ ಕ್ರಮ ಜರುಗಿಸಲಾಗಿದೆ. ಕಳೆದ ವಿಧಾನಸಭಾ ಅಧಿವೇಶನದಲ್ಲೇ ಮಾದಕ ವ್ಯಸನ ಮುಕ್ತ ಕರ್ನಾಟಕ ಮಾಡುವುದಾಗಿ ಮುಖ್ಯಮಂತ್ರಿ ಅವರು ಘೋಷಿಸಿದ್ದಾರೆ. ಪಂಜಾಬ್‌ನಲ್ಲಿ ಡ್ರಗ್ಸ್ ಪರಿಣಾಮದಿಂದ ಉಡ್ತಾ ಪಂಜಾಬ್ ಎಂದು ಕರೆಯುತ್ತಿದ್ದರು. ಇದಕ್ಕೆ ರಾಜ್ಯದಲ್ಲಿ ಆಸ್ಪದ ನೀಡುವುದಿಲ್ಲ. ಡ್ರಗ್ಸ್ ಚಟುವಟಿಕೆಯನ್ನು ಮಟ್ಟಹಾಕಲು ಮತ್ತಷ್ಟು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವರು ಗುಡುಗಿದರು.

ಈ ಕಾರ್ಯಕ್ರಮದಲ್ಲಿ ಶಾಸಕ ರಿಜ್ವಾನ್ ಅರ್ಷದ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ.ಸಲೀಂ, ಸೈಬರ್ ಹಾಗೂ ಮಾದಕ ವಸ್ತು ವಿಭಾಗದ ಡಿಜಿಪಿ ಪ್ರಣವ್ ಮೊಹಂತಿ ಹಾಗೂ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಉಪಸ್ಥಿತರಿದ್ದರು.

50 ಕೋಟಿ ರು. ಡ್ರಗ್ಸ್ ಜಪ್ತಿ:

ಕಳೆದ ಒಂದು ವರ್ಷದಲ್ಲಿ ನಾಲ್ಕು ಟನ್‌ ಗಾಂಜಾ ಸೇರಿ 50 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಬೆಂಗಳೂರು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ 200ಕ್ಕೂ ಹೆಚ್ಚು ವಿದೇಶಿಯರನ್ನು ಗಡಿಪಾರು ಮಾಡಲಾಗಿದೆ ಎಂದು ಸಚಿವರು ಹೇಳಿದರು. ಇದೇ ವೇಳೆ ಅವರು ಜಪ್ತಿಯಾದ ಡ್ರಗ್ಸ್‌ ಅನ್ನು ನಾಶಗೊಳಿಸುವ ಕಾರ್ಯಕ್ಕೆ ಗೃಹ ಸಚಿವರು ಆನ್‌ಲೈನ್‌ ಮೂಲಕ ಚಾಲನೆ ನೀಡಿದರು. ಅಲ್ಲದೆ ಡ್ರಗ್ಸ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲು ಸಾರ್ವಜನಿಕರಿಗೆ ಕ್ಯೂ ಆರ್ ಕೋಡ್‌ ಅನಾವರಣಗೊಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ರಾಜ್ಯ ಮೊದಲ ಸ್ಥಾನ: ಗೃಹಸಚಿವ ಪರಮೇಶ್ವರ್
ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ