
ಬೆಂಗಳೂರು (ಸೆ.04): ಮುಸ್ಲಿಂ ಯುವತಿಯರನ್ನು ಮದುವೆಯಾಗುವ ಹಿಂದೂ ಯುವಕರಿಗೆ ಐದು ಲಕ್ಷ ರು. ನೀಡುವುದಾಗಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ನಡೆ ತೀವ್ರವಾಗಿ ಆಕ್ಷೇಪಿಸಿರುವ ಹೈಕೋರ್ಟ್, ರಾಜಕಾರಣಿಗಳು ವಿವಿಧ ಧರ್ಮೀಯರ ಮಧ್ಯೆ ಸಹಬಾಳ್ವೆ ಮೂಡಿಸುವಂಥ ಕ್ರಾಂತಿಕಾರಕ ಕೆಲಸ ಮಾಡಬೇಕೇ ಹೊರತು ಸಮಾಜಕ್ಕೆ ಉಪಯೋಗವಿಲ್ಲದ ದ್ವೇಷ ಭಾವನೆ ಮೂಡಿಸುವ ಕೆಲಸವನ್ನಲ್ಲ ಎಂದು ಕಟುವಾಗಿ ಹೇಳಿದೆ. ಕೋಮು ಸಂಘರ್ಷಕ್ಕೆ ಪ್ರೇರಣೆ ನೀಡಿದ ಆರೋಪದ ಮೇಲೆ ಕೊಪ್ಪಳ ಟೌನ್ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಯತ್ನಾಳ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರ ಪೀಠ ಹೀಗೆ ನುಡಿಯಿತು.
ಇದೇ ವೇಳೆ ಪೊಲೀಸರು ಯತ್ನಾಳ್ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸಬಾರದು. ತನಿಖೆಗೆ ಯತ್ನಾಳ್ ಸಹಕಾರ ನೀಡಬೇಕು ಎಂದು ಪೀಠ ಮಧ್ಯಂತರ ಆದೇಶ ನೀಡಿತು. ಹಾಗೆಯೇ, ಅರ್ಜಿ ಸಂಬಂಧ ಕೊಪ್ಪಳ ಟೌನ್ ಠಾಣೆ ಪೊಲೀಸರು, ಪ್ರಕರಣದ ದೂರುದಾರರಾದ ಖಮರ್ ಜುನೈದ್ ಖುರೇಷಿ, ಮೈನುದ್ದೀನ್ ಬೀಳಗಿ ಹಾಗೂ ಅಬ್ದುಲ್ ಕಲಾಂ ಎಂಬುವವರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು. ಇದಕ್ಕೂ ಮುನ್ನ ಯತ್ನಾಳ್ ಪರ ವಕೀಲರು, ಕಾನೂನಿನಲ್ಲಿ ಅಂತರ್ ಧರ್ಮೀಯ ವಿವಾಹಗಳಿಗೆ ನಿಷೇಧವಿಲ್ಲ. ಭಾರತ ಜಾತ್ಯತೀತ ದೇಶವಾಗಿದೆ. ಹೀಗಿರುವಾಗ, ಅರ್ಜಿದಾರರ ಹೇಳಿಕೆ ಯಾರಿಗೋ ಇಷ್ಟವಾಗಿಲ್ಲ ಎಂದ ಮಾತ್ರಕ್ಕೆ ಅದು ಅಪರಾಧ ಹೇಗಾಗುತ್ತದೆ? ಎಂದು ಆಕ್ಷೇಪಿಸಿದರು.
ಮಧ್ಯಂತರ ಆದೇಶ ಹೊರಡಿಸಿದ ಬಳಿಕ ಯತ್ನಾಳ್ ಪರ ವಕೀಲರನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿಗಳು, ಭಾರತವು ವೈವಿಧ್ಯಮಯ ದೇಶ. ನೂರಾರು ವರ್ಷಗಳ ಹಿಂದೆ ಕಾರಣಾಂತರಗಳಿಂದ ಒಂದು ಧರ್ಮದವರು, ಮತ್ತೊಂದು ಧರ್ಮದ ಜನ ಬದುಕಲೇಬಾರದು ಎಂದು ಭಾವಿಸುತ್ತಿದ್ದರು. ಒಂದು ಸಮುದಾಯದವರು ಮತ್ತೊಂದು ಸಮುದಾಯದ ವಿರುದ್ಧ ಹೋರಾಡುತ್ತಿದ್ದರು. ಆದರೆ, ಆ ಕಾರಣಗಳು ಈಗ ಪ್ರಸ್ತುತವಲ್ಲ. ಅಂದಿನ ಕಾರಣಗಳನ್ನು ಈಗ ಅನ್ವಯಸಲಾಗದು ಎಂದು ತೀಕ್ಷ್ಣವಾಗಿ ಹೇಳಿದರು. ರಾಜಕಾರಣಿಗಳು ಜಾತಿ ತಾರತಮ್ಯ, ಮಹಿಳೆಯರ ಶೋಷಣೆ ತೊಡೆದು ಹಾಕಲು ಕಾರ್ಯೋನ್ಮುಖವಾಗಬೇಕು. ಸಾಮರಸ್ಯಕ್ಕೆ ಧಕ್ಕೆ ತರುವಂಥ ಕೆಲಸಗಳಿಗೆ ಮಹತ್ವ ನೀಡಬಾರದು. ಈ ಕುರಿತು ನಿಮ್ಮ ಕಕ್ಷಿದಾರರಿಗೆ ಸಲಹೆ ನೀಡಬೇಕು ಎಂದು ಯತ್ನಾಳ್ ಪರ ವಕೀಲರಿಗೆ ನ್ಯಾಯಮೂರ್ತಿಗಳು ಮೌಖಿಕವಾಗಿ ಹೇಳಿದರು.
ಪ್ರಕರಣದ ಹಿನ್ನೆಲೆ: ಕೊಪ್ಪಳದಲ್ಲಿ ಗವಿಸಿದ್ದಪ್ಪ ಎನ್ನುವ ಯುವಕ ಅನ್ಯಕೋಮಿನ ಯುವಕರಿಂದ ಆ.3ರಂದು ಕೊಲೆಯಾಗಿದ್ದರು ಎಂದು ಆರೋಪಿಸಲಾಗಿತ್ತು. ಕೊಲೆಯಾದ ಯುವಕನ ಕುಟುಂಬದವರಿಗೆ ಸಾಂತ್ವನ ಹೇಳಲು ಆ.10ರಂದು ಯತ್ನಾಳ್ ಕೊಪ್ಪಳಕ್ಕೆ ಬಂದ ವೇಳೆ ಮಾತನಾಡಿದ್ದ ಅವರು, ಹಿಂದು ಯುವಕರು ಮುಸ್ಲಿಂ ಯುವತಿಯನ್ನು ಮದುವೆಯಾದರೆ 5 ಲಕ್ಷ ರು. ಕೊಡುತ್ತೇನೆ. ಕೊಲೆ ಮಾಡುವ ಮುಸ್ಲಿಮರಿಗೆ ಉತ್ತರ ನೀಡಬೇಕಿದೆ ಎಂದು ಹೇಳುವ ಮೂಲಕ ಹಿಂದು ಮತ್ತು ಮುಸ್ಲಿಮರ ನಡುವೆ ದ್ವೇಷ ಹರಡುವಂತಹ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಅಬ್ದುಲ್ ಕಲಾಂ ಮತ್ತಿತರರು ದೂರು ನೀಡಿದ್ದರು. ದೂರು ಆಧರಿಸಿ ಕೊಪ್ಪಳ ಟೌನ್ ಠಾಣೆ ಪೊಲೀಸರು ಯತ್ನಾಳ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ