
ವೆಂಕಟೇಶ್ ಕಲಿಪಿ
ಬೆಂಗಳೂರು (ನ.3): ಮದುವೆಯಾಗುವುದಾಗಿ ನಂಬಿಸಿ ಅತ್ಯಾ೧ಚಾರ ನಡೆಸಿದ ಆರೋಪ ಸಂಬಂಧ ಪೊಲೀಸ್ ಪೇದೆ ವಿರುದ್ಧ 3 ಮಕ್ಕಳಿರುವ ಮಹಿಳೆ ದಾಖಲಿಸಿದ್ದ ದೂರನ್ನು ರದ್ದುಪಡಿಸಿಸಿರುವ ಹೈಕೋರ್ಟ್, ‘ದೂರುದಾರೆಯ ವೈವಾಹಿಕ ಸ್ಥಿತಿಗತಿಯು ಮದುವೆಯ ಭರವಸೆ ಕಲ್ಪನೆಯನ್ನು ಅಸಂಭವವಾಗಿಸಲಿದೆ. ಪ್ರತಿಯೊಂದು ಮುರಿದ ಭರವಸೆಯೂ ಸುಳ್ಳು ಭರವಸೆಯಲ್ಲ, ಪ್ರತಿಯೊಂದು ವಿಫಲ ಸಂಬಂಧವನ್ನು ಅತ್ಯಾಚಾರವೆಂದು ಅಪರಾಧೀಕರಿಸಲೂ ಆಗುವುದಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಕರಣ ಸಂಬಂಧ ಆರೋಪಿ ವಿರುದ್ಧದ ದೋಷಾರೋಪ ಪಟ್ಟಿ ಹಾಗೂ ನಗರದ 53ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ವಿಚಾರಣೆ ರದ್ದುಪಡಿಸುವಂತೆ ಕೋರಿ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿದ್ದ ಫಕೀರಪ್ಪ ಹಟ್ಟಿ (30) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
ಇಂತಹ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಮತ್ತು ಇದೇ ಹೈಕೋರ್ಟ್ ಹಲವು ತೀರ್ಪು ನೀಡಿವೆ. ಅತ್ಯಾ೧ಚಾರ ಮತ್ತು ಸಮ್ಮತಿಯ ಲೈಂಗಿಕ ಸಂಬಂಧ, ಮದುವೆಯ ಸುಳ್ಳು ಭರವಸೆ ಮತ್ತು ಮದುವೆಯ ಭರವಸೆ ನಡುವಿನ ಅಂತರ/ವ್ಯತ್ಯಾಸವನ್ನು ಸುಪ್ರೀಂ ಕೋರ್ಟ್ ಕೂಲಂಕುಷವಾಗಿ ವಿವರಿಸಿದೆ. ವಿವಾಹದ ಭರವಸೆಯ ಉಲ್ಲಂಘನೆ ಅದರಲ್ಲೂ ಇಬ್ಬರ ನಡುವಿನ ಸಂಬಂಧ ಸಮ್ಮತಿಯದ್ದಾಗಿದ್ದರೆ ಅದು ಅತ್ಯಾ೧ಚಾರ ಅಪರಾಧಕ್ಕೆ ಕಾರಣವಾಗುವುದಿಲ್ಲ ಎಂಬುದಾಗಿ ನ್ಯಾಯಾಲಯಗಳು ಸ್ಪಷ್ಟವಾಗಿ ತೀರ್ಪು ನೀಡಿವೆ ಎಂದು ಪೀಠ ಇದೇ ವೇಳೆ ನುಡಿದಿದೆ.
3 ವರ್ಷಗಳ ಕಾಲ ದೂರುದಾರೆ ಮತ್ತು ಆರೋಪಿ ಜೊತೆಯಾಗಿದ್ದದ್ದು, ನಿರಂತರ ಒಡನಾಟ ಹಾಗೂ ಪ್ರೀತಿಯ ಬಂಧ ಮತ್ತು ಒಪ್ಪಿಗೆಯ ಲೈಂಗಿಕ ಸಂಬಂಧ ಹೊಂದಿದ್ದನ್ನು ಪ್ರಕರಣದ ದಾಖಲೆಗಳೇ ಹೇಳುತ್ತವೆ. ಆರೋಪಿಯು ಮದುವೆಯ ಭರವಸೆ ಉಲ್ಲಂಘಿಸಿದ್ದಾರೆಂದು ದೂರುದಾರೆ ಆರೋಪಿಸುತ್ತಿದ್ದಾರೆ. ಆದರೆ, ಆಕೆ 2012ರಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿ ಮೂವರು ಮಕ್ಕಳನ್ನು ಹೊಂದಿದ್ದರು. ಸಂಸಾರದಲ್ಲಿ ಅನ್ಯೋನ್ಯತೆ ಇಲ್ಲದ್ದಕ್ಕೆ ಪತಿಯನ್ನು ಬಿಟ್ಟು ಮಕ್ಕಳೊಂದಿಗೆ ದೂರುದಾರೆ ಪ್ರತ್ಯೇಕವಾಗಿ ವಾಸವಾಗಿದ್ದರು ಎಂಬ ಸಂಗತಿ ಇಲ್ಲಿ ಮರೆಯಬಾರದು. ದೂರುದಾರೆಯ ವೈವಾಹಿಕ ಸ್ಥಿತಿಗತಿಯು ‘ಮದುವೆಯಾಗುವ ಭರವಸೆ’ ಎಂಬ ಕಲ್ಪನೆಯನ್ನು ಅಸಂಭವವಾಗಿಸುತ್ತದೆ ಎಂದು ಪೀಠ ಹೇಳಿದೆ.
ಅಲ್ಲದೆ, ಪ್ರತಿಯೊಂದು ಮುರಿದ ಭರವಸೆಯೂ ಸುಳ್ಳು ಭರವಸೆಯಲ್ಲ ಅಥವಾ ಪ್ರತಿಯೊಂದು ವಿಫಲ ಸಂಬಂಧವನ್ನು ಅತ್ಯಾ೧ಚಾರ ಎಂದು ಅಪರಾಧೀಕರಿಸಲು ಆಗುವುದಿಲ್ಲ. ಏಕೆಂದರೆ ವರ್ಷಗಳ ಕಾಲ ನೀಡಿದ ಮತ್ತು ಉಳಿಸಿಕೊಂಡ ಒಪ್ಪಿಗೆಯನ್ನು ಆರೋಪವಾಗಿ ಪರಿವರ್ತಿಸಲಾಗುವುದಿಲ್ಲ ಎಂಬುದಾಗಿ ನಯೀಮ್ ಅಹ್ಮದ್ ಮತ್ತು ಅಮೋಲ್ ಭಗವಾನ್ ನೇಹುಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ತೀರ್ಪು ನೀಡಿದೆ. ಆದ್ದರಿಂದ ಅರ್ಜಿದಾರನ ವಿರುದ್ಧ ವಿಚಾರಣಾ ಪ್ರಕ್ರಿಯೆ ಮುಂದುವರಿಸಲು ಅನುಮತಿ ನೀಡಿದರೆ, ಅದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಲಿದೆ ಎಂದು ತಿಳಿಸಿದ
ಹೈಕೋರ್ಟ್, ಫಕೀರಪ್ಪ ವಿರುದ್ಧದ ದೋಷಾರೋಪ ಪಟ್ಟಿ ಮತ್ತು ಸೆಷನ್ಸ್ ನ್ಯಾಯಾಲಯದ ವಿಚಾರಣೆ ರದ್ದುಪಡಿಸಿದೆ.
ಪ್ರಕರಣದ ದೂರುದಾರೆ ಮತ್ತು ಆಕೆ ನೆಲೆಸಿದ್ದ ಮನೆ ಮಾಲೀಕರ ಮಧ್ಯೆ ಮುಂಗಡವಾಗಿ ನೀಡಲಾಗಿದ್ದ ಭೋಗ್ಯದ ಹಣ ಹಿಂದಿರುಗಿಸುವ ವಿಚಾರವಾಗಿ 2019ರ ಅಕ್ಟೋಬರ್‌ನಲ್ಲಿ ವಿವಾದ ಉಂಟಾಗಿತ್ತು. ಈ ಕುರಿತು ದೂರು ದಾಖಲಿಸಲು ಆಕೆ, ಮಹದೇವಪುರ ಪೊಲೀಸ್ ಠಾಣೆಗೆ ಹೋಗಿದ್ದರು. ಆಗ ದೂರುದಾರೆಯ ಮೊಬೈಲ್ ನಂಬರ್ ಅನ್ನು ಫಕೀರಪ್ಪ ಪಡೆದುಕೊಂಡಿದ್ದರು. ನಂತರ ಇಬ್ಬರ ನಡುವೆ ಸಂದೇಶಗಳು ವಿನಿಮಯಗೊಂಡು ಸಲುಗೆ ಬೆಳೆದು ದೈಹಿಕ ಸಂಬಂಧವೂ ಏರ್ಪಟ್ಟಿತ್ತು. ಅದು ಎರಡೂವರೆ ವರ್ಷ ಮುಂದುವರೆದಿತ್ತು. 2022ರ ಅ.15ರಂದು ಪೇದೆ ವಿರುದ್ಧ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ ದೂರುದಾರೆ, ಫಕೀರಪ್ಪ ನನ್ನನ್ನು ಮದುವೆಯಾಗುತ್ತೇನೆಂದು ಭರವಸೆ ನೀಡಿ ಲೈಂಗಿಕ ಸಂಭೋಗ ನಡೆಸಿದ್ದಾನೆ ಎಂದು ಆರೋಪಿಸಿದ್ದರು.
ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣದ ತನಿಖೆ ನಡೆಸಿದ್ದ ಮಹದೇವಪುರ ಠಾಣಾ ಪೊಲೀಸರು, ‘ಫಕೀರಪ್ಪ ದೂರುದಾರೆಯನ್ನು ಪರಿಚಯಮಾಡಿಕೊಂಡು ಮದುವೆಯಾಗುವುದಾಗಿ ನಂಬಿಸಿ ಸಲುಗೆ ಬೆಳೆಸಿ, ಲೈಂಗಿಕ ದೌರ್ಜನ್ಯ ನಡೆಸಿರುವುದು ದೃಢಪಟ್ಟಿದೆ’ ಎಂದು ತಿಳಿಸಿದ್ದರು. ಹಾಗೆಯೇ, ಭಾರತೀಯ ದಂಡ ಸಂಹಿತೆ ಸೆಕ್ಷನ್ 376 ಸೆಕ್ಷನ್ 323 (ಮತ್ತೊಬ್ಬರಿಗೆ ಸ್ವಯಂಪ್ರೇರಣೆಯಿಂದ ನೋವುಂಟು ಮಾಡಿದ), ಸೆಕ್ಷನ್ 417 (ವಂಚನೆ) ಮತ್ತು 506 (ಜೀವ ಬೆದರಿಕೆ) ಅಪರಾಧದಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅದರ ರದ್ದತಿಗಾಗಿ ಫಕೀರಪ್ಪ ಹೈಕೋರ್ಟ್ ಮೊರೆ ಹೋಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ