ರೈತರ ಕಬ್ಬಿನ ಬಾಕಿ ಹಣದ ಮಾಹಿತಿ ಕೊಡಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

By Web DeskFirst Published Nov 28, 2018, 8:53 AM IST
Highlights

2017-18ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆ ಮಾಲಿಕರಿಂದ ಕಬ್ಬು ಬೆಳೆಗಾರರಿಗೆ ಬರಬೇಕಾದ ಬಾಕಿ ಹಣದ ಕುರಿತು ಮಾಹಿತಿ ನೀಡುವಂತೆ ಹೈಕೋರ್ಟ್‌ ಮಂಗಳವಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಬೆಂಗಳೂರು[ನ.28]: ಕಳೆದ 2017-18ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆ ಮಾಲಿಕರಿಂದ ಕಬ್ಬು ಬೆಳೆಗಾರರಿಗೆ ಬರಬೇಕಾದ ಬಾಕಿ ಹಣದ ಕುರಿತು ಮಾಹಿತಿ ನೀಡುವಂತೆ ಹೈಕೋರ್ಟ್‌ ಮಂಗಳವಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಸಕ್ಕರೆ ಕಾರ್ಖಾನೆಗಳು ಮುಕ್ತ ಮಾರುಕಟ್ಟೆಯಲ್ಲಿ ಸಕ್ಕರೆ ಮಾರಾಟಕ್ಕೆ ಪ್ರತಿ ಕೆ.ಜಿ.ಗೆ ಕನಿಷ್ಠ ದರ ನಿಗದಿಪಡಿಸಿದ ಹಾಗೂ ಮಾಸಿಕ ಸಕ್ಕರೆ ಮಾರಾಟ ಮತ್ತು ದಾಸ್ತಾನಿಗೆ ಮಿತಿ ಹೇರಿ 2018ರ ಜೂ.7ರಂದು ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಮೆಸರ್ಸ್‌ ಎನ್‌ಎಸ್‌ಎಲ್‌ ಷುಗ​ರ್‍ಸ್ ಲಿಮಿಟೆಡ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, 2017-18ನೇ ಸಾಲಿನಲ್ಲಿ ರಾಜ್ಯದಲ್ಲಿ ಎಷ್ಟುಕಬ್ಬು ಬೆಳೆಯಲಾಗಿದೆ? ಅದರಲ್ಲಿ ಎಷ್ಟುಪ್ರಮಾಣದಲ್ಲಿ ರೈತರು ಕಬ್ಬು ಕಾರ್ಖಾನೆಗಳಿಗೆ ಮಾರಾಟ ಮಾಡಿದ್ದಾರೆ? ಎಷ್ಟುಪ್ರಮಾಣದ ಕಬ್ಬನ್ನು ಅರೆಯಲಾಗಿದೆ? ಕಾರ್ಖಾನೆ ಮಾಲೀಕರಿಂದ ಕಬ್ಬು ಬೆಳೆಗಾರರಿಗೆ ಬರಬೇಕಾದ ಬಾಕಿ ಒಟ್ಟು ಮೊತ್ತ ಎಷ್ಟುಎಂಬುದರ ಕುರಿತು ವಿವರಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತು.

ವಿಚಾರಣೆ ವೇಳೆ ಎನ್‌ಎಸ್‌ಎಲ್‌ ಶುಗ​ರ್ ಕಾರ್ಖಾನೆ ಪರ ವಕೀಲರು ವಾದ ಮಂಡಿಸಿ, ಕಬ್ಬು ಖರೀದಿಸಿದ 14 ದಿನಗಳಲ್ಲಿ ಕಡ್ಡಾಯವಾಗಿ ರೈತರಿಗೆ ಹಣ ಪಾವತಿಸಬೇಕೆಂದು ರಾಜ್ಯ ಸರ್ಕಾರ ಹೇಳುತ್ತದೆ. ಆದರೆ, ಕೇಂದ್ರ ಸರ್ಕಾರ ಕಾರ್ಖಾನೆಗಳು ತಿಂಗಳಲ್ಲಿ ಉತ್ಪಾದನೆ ಒಟ್ಟು ಸಕ್ಕರೆ ಪ್ರಮಾಣದಲ್ಲಿ ಶೇ.10ರಷ್ಟನ್ನು ಮಾತ್ರ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕು ಎಂದು ನಿರ್ಬಂಧ ಹೇರಿದೆ, ಮತ್ತೊಂದಡೆ 2017-18ನೇ ಸಾಲಿನಲ್ಲಿ ಕಬ್ಬು ಬೆಳೆ ಮತ್ತು ಸಕ್ಕರೆ ಉತ್ಪಾದನೆ ಪ್ರಮಾಣ ನಿರೀಕ್ಷೆಗಿಂತ ಹೆಚ್ಚಾಗಿ, ಕಾರ್ಖಾನೆಗಳಲ್ಲಿ ಸಕ್ಕರೆಯ ಹೆಚ್ಚುವರಿ ದಾಸ್ತಾನು ಉಳಿದಿದೆ ಎಂದು ತಿಳಿಸಿದರು.

ಅಲ್ಲದೆ, ಕೇಂದ್ರ ಸರ್ಕಾರದ ಮಿತಿ ಹೇರಿರುವುದರಿಂದ ಕಾರ್ಖಾನೆಗಳಿಗೆ ತೊಂದರೆಯಾಗುತ್ತದೆ. ದಾಸ್ತಾನು ಇರುವ ಸಕ್ಕರೆಯನ್ನು ಮಾರಾಟಕ್ಕೆ ಅವಕಾಶ ಮಾಡಿಕೊಟ್ಟರೆ, ಸಕ್ಕರೆ ಮಾರಿ ರೈತರಿಗೆ ಹಣ ಪಾವತಿಸಲು ಅನುವಾಗುತ್ತದೆ. ಆಗ ರೈತರು ಆರ್ಥಿಕವಾಗಿ ಚೇತರಿಕೆ ಕಾಣುತ್ತಾರೆ ಎಂದು ಕೋರ್ಟ್‌ಗೆ ತಿಳಿಸಿದರು.

click me!