
ಬೆಂಗಳೂರು(ಫೆ.15): ನಿಯಮ ಜಾರಿಯಲ್ಲಿದ್ದರೂ ಎಸ್‌ಎಸ್‌ಎಲ್‌ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಹಾಗೂ ಕನ್ನಡವನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡಿದ ಆಧಾರದಲ್ಲಿ ಸರ್ಕಾರಿ ಶಾಲೆಯ ನಿವೃತ್ತ ಶಿಕ್ಷಕಿಗೆ ಒಂದು ಬಾರಿಯ ವೇತನ ಬಡ್ತಿ (ಇಂಕ್ರಿಮೆಂಟ್) ಪಾವತಿಸಲು ನಿರಾಕರಿಸಿದ ಸರ್ಕಾರದ ನಡೆಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಕುರಿತಂತೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಿವೃತ್ತ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಸೀತಾಲಕ್ಷ್ಮಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ, ನಿವೃತ್ತ ನೌಕರರನ್ನು ಸರ್ಕಾರ ಸಹಾನುಭೂತಿಯಿಂದ ನಡೆಸಿಕೊಳ್ಳಬೇಕು. ಹಾಗಾಗಿ, ಅರ್ಜಿದಾರರಿಗೆ ಮುಂದಿನ 3 ತಿಂಗಳೊಳಗೆ 2018ರ ಫೆಬ್ರವರಿಯಿಂದ ಜಾರಿಗೆ ಬರುವಂತೆ ಒಂದು ಬಾರಿಯ ವೇತನ ಬಡ್ತಿ ಹಾಗೂ ಹಿಂಬಾಕಿಯನ್ನು ಪಾವತಿಸುವಂತೆ ನಿರ್ದೇಶಿಸಿದೆ. ಸೀತಾಲಕ್ಷ್ಮಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ನೇಮಕಗೊಂಡು ಸುಮಾರು ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ 2019ರ ಅ.31ರಂದು ನಿವೃತ್ತರಾಗಿದ್ದರು.
ನಾಡಗೀತೆ ನಿಯಮ ಖಾಸಗಿ ಶಾಲೆಗೂ ಅನ್ವಯವೇ? ಸ್ಪಷ್ಟನೆ ಕೇಳಿದ ಹೈಕೋರ್ಟ್
ಅವರು ಎಸ್‌ಎಸ್‌ಎಲ್‌ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಕನ್ನಡವನ್ನು ಒಂದು ವಿಷಯವಾಗಿ ಅಧ್ಯಯನ ಮಾಡಿದ್ದರು. ಇದೇ ಆಧಾರದ ಮೇಲೆ ಒಂದು ಬಾರಿ ವೇತನದ ಬಡ್ತಿ ನೀಡಬೇಕಾಗಿದ್ದರೂ, ಈ ಕುರಿತ ಅರ್ಜಿದಾರರ ಮನವಿಯನ್ನು ಸರ್ಕಾರ ತಿರಸ್ಕರಿಸಿತ್ತು. ಇದರಿಂದ ಅವರು ಕೋರ್ಟ್ ಮೊರೆ ಹೋಗಿದ್ದರು.
ನ್ಯಾಯಾಲಯದ ಈ ಆದೇಶ ಜಾರಿಗೊಳಿಸುವಲ್ಲಿ ವಿಳಂಬ ಮಾಡಿದರೆ, ಪ್ರತಿ ತಿಂಗಳಿಗೆ ಶೇ.2ರಷ್ಟು ಬಡ್ಡಿ ಸಹ ಪಾವತಿಸಬೇಕು. ಆ ಬಡ್ಡಿಯನ್ನು ತಕ್ಷಣ ಸರ್ಕಾರ ಪಾವತಿಸಬೇಕು. ನಂತರ ಆ ಹಣವನ್ನು ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿರುವ ಅಧಿಕಾರಿಯಿಂದ ವಸೂಲಿ ಮಾಡಬೇಕು ಎಂದು ತಾಕೀತು ಮಾಡಿದೆ.
ಪ್ರಕರಣದ ವಿವರ
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಅರ್ಜಿದಾರರು 1980ರ ಸೆ.24ರಿಂದ 2109ರ ಅ.31ರವರಗೆ ಕಳಂಕ ರಹಿತ ಸೇವೆ ಸಲ್ಲಿಸಿದ್ದಾರೆ. ಹೀಗಿದ್ದರೂ ಅವರಿಗೆ ಒಂದು ಬಾರಿ ವೇತನ ಬಡ್ತಿ ನೀಡದ ಸರ್ಕಾರದ ಕ್ರಮ ನಿಜಕ್ಕೂ ಬೇಸರ ತರಿಸಿದೆ. ಜೀವನದ ಸಂಧ್ಯಾಕಾಲದಲ್ಲಿರುವ ಅವರಿಗೆ ಪರಿಹಾರ ನಿರಾಕರಿಸುವುದು ಅನ್ಯಾಯವಾಗಲಿದೆ ಎಂದು ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ