ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಒದಗಿಸಿರುವ ‘ಶಕ್ತಿ ಯೋಜನೆ’ಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸಲು ಹೈಕೋರ್ಟ್ ನಿರ್ದೇಶಿಸಿದೆ, ಅರ್ಜಿದಾರರ ಮನವಿಯನ್ನು ಕಾನೂನು ಪ್ರಕಾರ ಎರಡು ತಿಂಗಳಲ್ಲಿ ಪರಿಗಣಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.
ಬೆಂಗಳೂರು (ಜ.6): ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಒದಗಿಸಿರುವ ‘ಶಕ್ತಿ ಯೋಜನೆ’ಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿದ ಹೈಕೋರ್ಟ್, ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಕಾನೂನು ಪ್ರಕಾರ 2 ತಿಂಗಳಲ್ಲಿ ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
‘ಶಕ್ತಿ ಯೋಜನೆ’ಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಉಡುಪಿ ಜಿಲ್ಲೆ ಕಾರ್ಕಳದ ಖಾಸಗಿ ಬಸ್ ಆಪರೇಟರ್ ಶರತ್‌ಕುಮಾರ್ ಶೆಟ್ಟಿ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಎರಡು ತಿಂಗಳಲ್ಲಿ ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶಿಸಿತು. ಅರ್ಜಿದಾರರ ಪರ ಹಿರಿಯ ವಕೀಲ ಪುತ್ತಿಗೆ ರಮೇಶ್ ವಾದ ಮಂಡಿಸಿದರು.
undefined
ರಾಜ್ಯದಲ್ಲಿ ಖಾಸಗಿ ಬಸ್‌ಗಳ ಸಂಚಾರಕ್ಕೆ 65 ವರ್ಷಗಳ ಇತಿಹಾಸವಿದೆ. ಸುಮಾರು 16 ಜಿಲ್ಲೆಗಳಲ್ಲಿ 9 ಸಾವಿರಕ್ಕೂ ಅಧಿಕ ಖಾಸಗಿ ಬಸ್‌ಗಳು ಸೇವೆ ಒದಗಿಸುತ್ತಿವೆ. ರಾಜ್ಯದಲ್ಲಿ 75 ಸಾವಿರ ಕಾರ್ಮಿಕರು ಖಾಸಗಿ ಬಸ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಅಲ್ಲದೇ ಖಾಸಗಿ ಬಸ್ ಆಪರೇಟರ್‌ಗಳು ಅತಿ ಹೆಚ್ಚು ತೆರಿಗೆ ಪಾವತಿದಾರರಾಗಿದ್ದು, ವಾರ್ಷಿಕ 1,620 ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿದೆ.
ಆದರೆ, ಶಕ್ತಿ ಯೋಜನೆ ಜಾರಿಗೆ ಬಂದ ದಿನದಿಂದ ಖಾಸಗಿ ಬಸ್ ಆಪರೇಟರ್‌ಗಳ ಸಂಕಷ್ಟ ಪ್ರಾರಂಭವಾಗಿದೆ. ಹಾಗಾಗಿ, ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ಅನ್ವಯ ಮಾಡಬೇಕು. ಸರ್ಕಾರಿ ಬಸ್‌ಗಳಂತೆ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಪ್ರಯಾಣ ವೆಚ್ಚವನ್ನು ಸರ್ಕಾರ ಖಾಸಗಿ ಬಸ್ ಆಪರೇಟರ್‌ಗಳಿಗೆ ಮರು ಪಾವತಿ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಾರಿಗೆ ಇಲಾಖೆಗೆ 2023ರ ಜುಲೈ 26ರಂದು ಸಲ್ಲಿಸಿರುವ ಮನವಿಯನ್ನು ಪರಿಗಣಿಸಲು ಆದೇಶ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.