ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲು ಈ ಹಿಂದಿನ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಲು ಕಾರಣಗಳೇನು ಎಂಬುದನ್ನು ಸೂಚಿಸಲು ರಾಜ್ಯ ಸರ್ಕಾರಕ್ಕೆ ಹೈ ಕೋರ್ಟ್ ಸೂಚನೆ ನೀಡಿದೆ.
ಬೆಂಗಳೂರು [ನ.06]: ಸರ್ಕಾರದಿಂದಲೇ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲು ಈ ಹಿಂದಿನ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಲು ಕಾರಣಗಳೇನು ಎಂಬುದನ್ನು ಬುಧವಾರ ವಿವರಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ರಾಜ್ಯ ಸರ್ಕಾರದ ಆದೇಶ ರದ್ದುಪಡಿಸುವಂತೆ ಕೋರಿ ಉತ್ತರ ಪ್ರದೇಶದ ಲಖೌನ ನಿವಾಸಿ ಬಿಲಾಲ್ ಆಲಿ ಷಾ, ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರಂಟ್ ಮತ್ತು ಟಿಪ್ಪು ರಾಷ್ಟ್ರೀಯ ಸೇವಾ ಸಂಘ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ. ಎಸ್.ಓಕ ಅವರ ನೇತೃತ್ವದ ವಿಭಾಗೀಯಪೀಠ ಸರ್ಕಾರಕ್ಕೆ ಈ ಸೂಚನೆ ನೀಡಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.
undefined
ವಿಚಾರಣೆ ವೇಳೆ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದಿಸಿ, 2015ಕ್ಕೂ ಮುನ್ನ ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ಇರಲಿಲ್ಲ. ಆಗಿನ ಸರ್ಕಾರ ರಾಜ್ಯಾದ್ಯಂತ ಟಿಪ್ಪು ಜಯಂತಿ ಆಚರಿಸಲು ಆದೇಶ ಹೊರಡಿಸಿತ್ತು. ಆ ಆದೇಶವನ್ನು ಈಗಿನ ರಾಜ್ಯ ಸರ್ಕಾರ ರದ್ದುಪಡಿಸಿದೆ. ಅದು ಸರ್ಕಾರದ ನೀತಿ ನಿರ್ಧಾರದ ವಿಷಯವಾಗಿದೆ ಎಂದು ತಿಳಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸರ್ಕಾರದ ನೀತಿ ನಿರ್ಧಾರದ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವುದಿಲ್ಲ. ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಟಿಪ್ಪು ಜಯಂತಿ ನಡೆಲಾಗುತ್ತಿತ್ತು. ಆದರೆ, ಆ ನಿರ್ಧಾರವನ್ನು ಸರ್ಕಾರ ಏಕೆ ಬದಲಿಸಿತು. ಸರ್ಕಾರದ ಆ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯನ್ನು ಪರಾಮರ್ಶೆ ನಡೆಸಲಾಗುವುದು ಎಂದು ಹೇಳಿತು.
ಅಡ್ವೋಕೇಟ್ ಜನರಲ್ ಉತ್ತರಿಸಿ, ಟಿಪ್ಪು ಜಯಂತಿ ಆಚರಣೆ ರದ್ದು ಮಾಡಿರುವ ವಿಚಾರ ಸದ್ಯ ತಿಳಿಯಾಗಿದೆ. ಮತ್ತೆ ಅದನ್ನು ಕೆದಕುವುದು ಬೇಡ ಎಂದು ಕೋರಿದರು.
ಅದಕ್ಕೆ ಅರ್ಜಿದಾರರ ಪರ ವಕೀಲರು, 2015ರಿಂದ ಪ್ರತಿ ವರ್ಷ ನ.10ರಂದು ಟಿಪ್ಪು ಜಯಂತಿಯನ್ನು ಸರ್ಕಾರವೇ ಆಚರಿಸಲಾಗುತ್ತಿತ್ತು. ಆದರೆ, ಸರ್ಕಾರ ಯಾವುದೇ ಕಾರಣ ನೀಡದೇ ಜಯಂತಿ ಆಚರಣೆಯನ್ನು ರದ್ದುಪಡಿಸಿತು ಎಂದು ದೂರಿದರು.
ಅದನ್ನು ಪರಿಗಣಿಸಿದ ನ್ಯಾಯಪೀಠ, ಟಿಪ್ಪುಜಯಂತಿ ಆಚರಣೆ ರದ್ದುಪಡಿಸಲು ಕಾರಣಗಳೇನು ಎಂಬ ಬಗ್ಗೆ ತಿಳಿಸುವಂತೆ ಸರ್ಕಾರಕ್ಕೆ ಸೂಚಿಸಿತು.
ಸರ್ಕಾರದಿಂದಲೇ ಪ್ರತಿ ವರ್ಷ ನ.10ರಂದು ರಾಜ್ಯದಾದ್ಯಂತ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲು 2015ರಲ್ಲಿ ಅಂದಿನ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಆ ಅಧಿಸೂಚನೆಯನ್ನು ರದ್ದುಪಡಿಸಿ, ಹಾಲಿ ಸರ್ಕಾರ 2019ರ ಜು.30ರಂದು ಆ ಆದೇಶಿಸಿತ್ತು. ಅದನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.