ಮೋದಿ ಜತೆಗಿನ ನೀತಿ ಆಯೋಗದ ಸಭೆಯಲ್ಲಿ ಬಿಎಸ್ ವೈ ಭಾಷಣದ ಮುಖ್ಯಾಂಶಗಳು

By Suvarna NewsFirst Published Feb 20, 2021, 6:00 PM IST
Highlights

ಪ್ರಧಾನಮಂತ್ರಿ ನೇತೃತ್ವದಲ್ಲಿ ಇಂದು (ಶನಿವಾರ) ನೀತಿ ಆಯೋಗದ ಆಡಳಿತ ಮಂಡಳಿಯ ಸಭೆ ನಡೆಯಿತು.  ಇನ್ನು ನೀತಿ ಆಯೋಗದ ಸಭೆಯದಲ್ಲಿ ಸಿಎಂ ಬಿಎಸ್ ವೈ ಅವರ ಭಾಷಣದ ಮುಖ್ಯಾಂಶಗಳು ಈ ಕೆಳಗಿನಂತಿದೆ.

ಬೆಂಗಳೂರು, (ಫೆ.20): ಪ್ರಧಾನಮಂತ್ರಿ ನೇತೃತ್ವದಲ್ಲಿ ಇಂದು (ಶನಿವಾರ) ನೀತಿ ಆಯೋಗದ ಆಡಳಿತ ಮಂಡಳಿಯ ಸಭೆ ನಡೆಯಿತು. ಈ ಸಭೆಯಲ್ಲಿ ಕರ್ನಾಟಕದ ಪರವಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪಾಲ್ಗೊಂಡಿದ್ದರು.

 ಅಲ್ಲದೇ ಇವರ ಜೊತೆ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಹ ಭಾಗಹಿಸಿದ್ದರು. ಇನ್ನು ನೀತಿ ಆಯೋಗದ ಸಭೆಯದಲ್ಲಿ ಸಿಎಂ ಬಿಎಸ್ ವೈ ಅವರ ಭಾಷಣದ ಮುಖ್ಯಾಂಶಗಳು ಈ ಕೆಳಗಿನಂತಿದೆ.

ಸಿಎಂ ಭಾಷಣದ ಮುಖ್ಯಾಂಶಗಳು

*ಕೋವಿಡ್ 19 ಸಾಂಕ್ರಾಮಿಕದ ಹೊರತಾಗಿಯೂ ರಾಜ್ಯದ ಹಣಕಾಸು ಪರಿಸ್ಥಿತಿ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆ 2002  ರಲ್ಲಿ ನಿಗದಿಪಡಿಸಿದ ಮಾನದಂಡದ ಮಿತಿಯಲ್ಲಿಯೇ ಇದೆ.

* ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಕೈಗೊಂಡಿರುವ ಕ್ರಮಗಳಲ್ಲಿ ಮುಖ್ಯವಾಗಿ ನೂತನ ಕೈಗಾರಿಕಾ ನೀತಿ 2020-25, ಅಫೀಡವಿಟ್ ಆಧಾರಿತ ಅನುಮೋದನಾ ವ್ಯವಸ್ಥೆ, ರಫ್ತು ಉತ್ತೇಜನಕ್ಕೆ ಕೈಗೊಂಡಿರುವ ಕ್ರಮಗಳು, ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸುವ ಕುರಿತು ಅಮೇಜಾನ್ ಹಾಗೂ ಫ್ಲಿಪ್ ಕಾರ್ಟ್ ಇ-ಕಾಮರ್ಸ್ ಸಂಸ್ಥೆಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದ ಮೊದಲಾದ ಉಪಕ್ರಮಗಳ ಕುರಿತು ವಿವರಿಸಲಾಯಿತು.

* ಕೌಶಲ್ಯ ಅಭಿವೃದ್ಧಿಗೆ ಉತ್ತೇಜನ ನೀಡಲು ಕೈಗಾರಿಕೋದ್ಯಮಿಗಳ ಸಹಯೋಗದೊಂದಿಗೆ ತರಬೇತಿ ವ್ಯವಸ್ಥೆಯ ಉನ್ನತೀಕರಣದ ಮೂಲಕ ನೂತನ ತಂತ್ರಜ್ಞಾನ, ಕೌಶಲ್ಯಗಳ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗಿದೆ.

* ರಾಜ್ಯದಲ್ಲಿ ನಿರುದ್ಯೋಗ ದೇಶದಲ್ಲೇ ಅತ್ಯಂತ ಕನಿಷ್ಠ ಪ್ರಮಾಣ ಅಂದರೆ ಸುಮಾರು ಶೇ. 3.6 ರಷ್ಟಿದೆ.

* ಸಮಗ್ರ ಕೃಷಿ ಪದ್ಧತಿ ಅಳವಡಿಸುವ ಕುರಿತು ಕಾರ್ಯಪಡೆ ರಚಿಸಲಾಗಿದ್ದು, ಪೌಷ್ಟಿಕತೆಯ ಮಟ್ಟ ಹೆಚ್ಚಿಸಲು ಸಿರಿ ಧಾನ್ಯಗಳ ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ.

* ಆಯಾ ಪ್ರಾದೇಶಿಕ ಸಂಪನ್ಮೂಲಗಳಿಗೆ ಅನುಗುಣವಾಗಿ ರೈತರಿಗೆ ಬೆಳೆ ಬೆಳೆಯಲು ರೈತ ಸಂಪರ್ಕ ಕೇಂದ್ರಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ...

* ಸ್ಥಳೀಯ ಜಾನುವಾರು ತಳಿಗಳನ್ನು ಸಂರಕ್ಷಿಸಲು ಸಹ ಉದ್ದೇಶಿಸಲಾಗಿದೆ...

* ವೈಜ್ಞಾನಿಕ ಮಾರುಕಟ್ಟೆ ಮಾಹಿತಿ ಕೋಶವನ್ನು ಸ್ಥಾಪಿಸುವ ಮೂಲಕ ರೈತರ ಆದಾಯ ಹೆಚ್ಚಿಸಲು ಆದಾಯ ಆಧಾರಿತ ಸಿದ್ಧಾಂತದೆಡೆಗೆ ಗಮನ ಕೇಂದ್ರೀಕರಿಸಲು ಉದ್ದೇಶಿಸಲಾಗಿದೆ.

* ಆತ್ಮನಿರ್ಭರ್ ಯೋಜನೆಯಡಿ ಹೆಚ್ಚುವರಿಯಾಗಿ ಬೆಳೆದ ಹಣ್ಣು ಮತ್ತು ತರಕಾರಿಗಳಿಗೆ ಆನ್ ಲೈನ್ ಮಾರುಕಟ್ಟೆ ಹಾಗೂ ಪೂರಕ ಮೂಲಸೌಕರ್ಯ ಒದಗಿಸಲು ಉದ್ದೇಶಿಸಲಾಗಿದೆ.

* ಅಟಲ್ ಭೂ ಜಲ ಯೋಜನೆಯಡಿ ಅಂತರ್ಜಲ ಕೊರತೆ ಇರುವ 41 ತಾಲ್ಲೂಕುಗಳಲ್ಲಿ ಜಲ ಸಂರಕ್ಷಣೆ ಯೋಜನೆ ಅನುಷ್ಠಾನ

* ರಾಜ್ಯದ 114 ಹಿಂದುಳಿದ ತಾಲ್ಲೂಕುಗಳ ಸಮಗ್ರ ಅಭಿವೃದ್ಧಿಯನ್ನು ನೀತಿ ಆಯೋಗದ 49 ಮಹತ್ವಾಕಾಂಕ್ಷೆಯ ಮಾನದಂಡಗಳ ಅನ್ವಯ ಕೈಗೊಳ್ಳಲಾಗುತ್ತಿದೆ.

* ಹಿಂದುಳಿದ ತಾಲ್ಲೂಕುಗಳು ಹಾಗೂ ವಲಯಗಳ ಅಭಿವೃದ್ಧಿಗೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯ ನೆರವು ಪಡೆಯಲು ಆಕಾಂಕ್ಷಾ ಎಂಬ ಪೋರ್ಟಲ್ ಪ್ರಾರಂಭಿಸಲಾಗಿದೆ.

* ಸೇವಾ ಸಿಂಧು ಯೋಜನೆಯಡಿ ಜನತೆಗೆ 750 ಸೇವೆಗಳನ್ನು ಕಾಗದರಹಿತವಾಗಿ ಒದಗಿಸಲಾಗುತ್ತಿದೆ.

* ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನಾ ದಡಿ 3409 ಆಸ್ಪತ್ರೆಗಳು ನೋಂದಾಯಿಸಿಕೊಂಡಿದ್ದು, ಇದು ದೇಶದಲ್ಲಿಯೇ ಅತಿ ಹೆಚ್ಚು. ಆಯುಷ್ಮಾನ್ ಭಾರತ್ ಯೋಜನೆಯಡಿ 2753 ಕೋಟಿ ರೂ. ವೆಚ್ಚದಲ್ಲಿ 13 ಲಕ್ಷ ಜನರಿಗೆ ಚಿಕಿತ್ಸಾ ಸೌಲಭ್ಯ ಒದಗಿಸಲಾಗಿದೆ.

* ರಾಜ್ಯದಲ್ಲಿ 4607 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಕಾರ್ಯಾರಂಭ ಮಾಡಿವೆ. ಆತ್ಮನಿರ್ಭರ್ ಯೋಜನೆಯಡಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಪರ್-ಸ್ಪೆಷಾಲಿಟಿ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲು ಪ್ರಸ್ತಾಪಿಸಲಾಗಿದೆ...

 * ಆಯುಷ್ ಪದ್ಧತಿಗೆ ಉತ್ತೇಜನ ನೀಡುವ ಸಮಗ್ರ ಸಾರ್ವಜನಿಕ ಆರೋಗ್ಯ ನೀತಿಯನ್ನು ಜಾರಿಗೆ ತರಲಾಗಿದೆ.

* ಪೌಷ್ಟಿಕತೆ ಕಡಿಮೆ ಇರುವ ರಾಜ್ಯದ 16 ಜಿಲ್ಲೆಗಳ 67 ತಾಲ್ಲೂಕುಗಳಲ್ಲಿ ಪೌಷ್ಟಿಕತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು.

 * ಈ ಎಲ್ಲ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸುವಂತೆ ಮನವಿ ಮಾಡಲಾಯಿತು.

click me!